ಸ್ವಾತಂತ್ರ್ಯವನ್ನು ಬೆಳೆಸಿಕೊಂಡು ಹೋಗುವ ಪ್ರಜಾಪ್ರತಿನಿಧಿಗಳ ಕೊರತೆ: ಸಾಣೇಹಳ್ಳಿ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಸಾಣೇಹಳ್ಳಿ

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳು ಅಪಾರವಾಗಿವೆ. ಹೀಗೆ ಪಡೆದುಕೊಂಡ ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳುವ ಪ್ರಜಾಪ್ರತಿನಿಧಿಗಳು ಹಾಗೂ ಪ್ರಜಾಪ್ರಭುಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ವಿಷಾದ ವ್ಯಕ್ತಪಡಿಸಿದರು.

ಶ್ರೀ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ, ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.

ನಮ್ಮ ಹಿರಿಯರು ಸ್ವಾರ್ಥ ಜೀವಿಗಳಾಗಿ ಬದುಕಿದವರಲ್ಲ. ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಗಂಧದ ಕೊರಡಿನ ಹಾಗೆ ತೀಡಿಕೊಂಡಂಥವರು. ಸ್ವಾತಂತ್ರ್ಯದ ಬಗ್ಗೆ ಸ್ವೇಚ್ಛೆಯ ಭಾವನೆ ಅವರಿಗಿರಲಿಲ್ಲ. ಅದೊಂದು ಜವಾಬ್ದಾರಿಯೆಂದು ಅರ್ಥ ಮಾಡಿಕೊಂಡಿದ್ದರು. ಹಕ್ಕು ಮತ್ತು ಜವಾಬ್ದಾರಿಯನ್ನು ಮರೆತು ಮನಬಂದಂತೆ ನಡೆದುಕೊಳ್ಳದೇ ಅರಿತು ಹೆಜ್ಜೆಯನ್ನಿಡುತ್ತಿದ್ದರು.

ಇವತ್ತಿನ ವಿದ್ಯಾರ್ಥಿಗಳೇ ನಾಳೆ ನಾಡಿನ ಸತ್ಪ್ರೆಜೆಗಳಾಗುವ ಅವಕಾಶಗಳಿವೆ. ನಾಳೆ ನೀವೇ ಆಡಳಿತ ಕ್ಷೇತ್ರದಲ್ಲಿ ಬೇರೆ ಬೇರೆ ಹುದ್ದೆಗಳನ್ನು ಪಡೆಯಬಹುದು. ಆ ಹುದ್ದೆಗಳನ್ನು ಪಡೆದಾಗ ನಿಮ್ಮ ವರ್ತನೆ ಹೇಗಿರಬೇಕೆಂಬುದರ ಬಗ್ಗೆ ಈಗಿನಿಂದಲೇ ಚಿಂತನೆ ಮಾಡಬೇಕೆಂದು ಶ್ರೀಗಳು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎ ಸಿ ಚಂದ್ರಪ್ಪ ಇವತ್ತು ನಮಗೆ ಅನೇಕ ಮಹಾತ್ಮರು ಅಹಿಂಸೆ ಮತ್ತು ಬಲಿದಾನದ ಮೂಲಕ ಸ್ವಾತಂತ್ರ್ಯ ವನ್ನು ತಂದುಕೊಟ್ಟರು. ಅಂಥವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು. ಅಧ್ಯಾಪಕ ವಿ ಬಿ ಚಳಗೇರಿ ಸಹ ಮಾತನಾಡಿದರು.

ವಿದ್ಯಾರ್ಥಿಗಳು ಸ್ವಾತಂತ್ರ್ಯ ಕುರಿತು ಭಾಷಣ, ದೇಶಭಕ್ತಿ ಗೀತೆಗಳನ್ನು ಹಾಡಿದರು. ಗ್ರಾಮದ ಬೀದಿಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಪ್ರಭಾತ್ ಫೇರಿ ನಡೆಸಿದರು.ದೇಶಭಕ್ತಿ ಗೀತೆಗೆ ಆಕರ್ಷಕ ನೃತ್ಯ ಮಾಡಿದರು.

ವೈ.ಡಿ.ಬದಾಮಿ ನಿರ್ದೇಶನದ ಸ್ವಾತಂತ್ರ್ಯ ಹೋರಾಟಗಾರ ಸುರಪುರದ ವೆಂಕಟಪ್ಪ ನಾಯಕ ರೂಪಕವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ‘ಕಳರಿ’ ಸಮರ ಕಲೆಯನ್ನು ಪ್ರದರ್ಶಿಸಿದರು. ಬೆಂಗಳೂರಿನ ಲಹರಿ ಭಾರಿಘಾಟ್ ತಂಡವರಿಂದ ‘ಶಾಂತಿ ಮತ್ತು ಪ್ರೀತಿಗಾಗಿ’ ನೃತ್ಯ ಪ್ರದರ್ಶನ ನಡೆಯಿತು.

ಶಾಲೆಗಳ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಸದಸ್ಯರು, ಶಿವಸಂಚಾರದ ಕಲಾವಿದರು, ಗ್ರಾಮಸ್ಥರು ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೂ ಸಿಹಿ ತಿಂಡಿಯನ್ನು ನೀಡಲಾಯಿತು.

Share This Article
Leave a comment

Leave a Reply

Your email address will not be published. Required fields are marked *