ವಚನ ದರ್ಶನ: ಇದು ಉರಿಗೌಡ, ನಂಜೇಗೌಡ ಸೃಷ್ಟಿಕರ್ತರ ಹೊಸ ಪ್ರಯತ್ನ

ಆರ್ ಶಿವಕುಮಾರ್
ಆರ್ ಶಿವಕುಮಾರ್

ಕೆಲವು ದಿನಗಳಿಂದ ‘ವಚನ ದರ್ಶನ’ ಪುಸ್ತಕದ ಪುಟ ತಿರುಗಿಸುತ್ತಾ ಇದ್ದೀನಿ. ಓದುತ್ತಾ ಹೋದ ನನಗೆ ಕಾಣಿಸುತ್ತಿರುವ ಅದರಲ್ಲಿ ಹುದುಗಿರುವ ಆದರೆ ಗಮನಿಸಲೇಬೇಕಾದ ಕೆಲವು ಅಂಶಗಳು.

ಉರಿಗೌಡ-ನಂಜೇಗೌಡ

ಉರಿಗೌಡ-ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದ ವೀರ ಪುರುಷರೆಂದು ಭ್ರಮಿಸಿ ಒಂದು ನಿರ್ದಿಷ್ಟ ಸಮುದಾಯದ ಬೆಂಬಲ ಪಡೆಯುವಲ್ಲಿ ವಿಫಲರಾದ ಮನಸ್ಥಿತಿಯ ಮಹಾಪುರುಷರೇ ಈಗ “ವಚನ ದರ್ಶನ” ಎಂಬ ಕೃತಕ ಕೃತಿಯನ್ನು ರಚಿಸಿದ್ದಾರೆ. ಲಿಂಗಾಯತ ಸಮುದಾಯವನ್ನು ಸನಾತನೆಯತ್ತ ಸೆಳೆದು ವೈಚಾರಿಕತೆಯಿಂದ ವಿಮುಖವಾಗಿಸಿ ಸೈದ್ದಂತಿಕವಾಗಿ ಹೋಳಾಗಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಲೆ ಉರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಮ ಪ್ರಭುಗಳ ಮಾರ್ಗದರ್ಶನದಂತೆ ಲಿಂಗಾಯತರು ನಡೆಯಬೇಕು:

ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು
ಜಲಪ್ರಳಯವಾದಲ್ಲಿ ವಾಯುವಂತಿರಬೇಕು
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು

ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಒಪ್ಪದವರು

RSS ಅಂಗಸಂಸ್ಥೆ ಪ್ರಜ್ಞಾಪ್ರವಾಹ ಪ್ರಕಟಿಸಿರುವ “ವಚನ ದರ್ಶನ”ದಲ್ಲಿ ವಿವಿಧ 18 ಲೇಖಕರು ವಿಭಿನ್ನ ಕಾಲಘಟ್ಟದಲ್ಲಿ ಬರೆದಿರುವ ಬಿಡಿ ಲೇಖನಗಳಿವೆ. ಲೇಖನಗಳಲ್ಲಿ ಆಯಾ ಲೇಖಕರು ವಚನ ಸಾಹಿತ್ಯದ ಬಗ್ಗೆ ತಮ್ಮ ವ್ಯಕ್ತಿಗತ ಅಭಿಪ್ರಾಯ ಮಂಡಿಸಿರುವುದು ಸ್ವಾಗತಾರ್ಹ.

ಆದರೆ ಪುಸ್ತಕದ ಸಂಪಾದಕೀಯ ಮಂಡಳಿಯು ಈ ಲೇಖನಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಳಸಿದ ಮಾನದಂಡ, ವಸ್ತುವಿಷಯಗಳು ವೈದಿಕತೆಗೆ ಒಗ್ಗುವ ಶರಣ ಭಕ್ತಿಮಾರ್ಗಕ್ಕೆ ಮಾತ್ರ ಸೀಮಿತವಾಗಿದ್ದು ಒಟ್ಟಾರೆ ಶರಣ ದರ್ಶನವನ್ನು ಸಂಕುಚಿತಗೊಳಿಸುವ ಪ್ರಜ್ಞಾಪೂರ್ವಕ ಪ್ರಯತ್ನವಾಗಿದೆ.

ವಚನಗಳು ಹನ್ನೆರಡನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ನವಚಿಂತನೆಯ ನೆಲೆಯಲ್ಲಿ ಮೂಡಿಬಂದ ಅನನ್ಯ ಚಿಂತನೆಗಳಾಗಿದ್ದು ಅವುಗಳನ್ನು ಪಾರಂಪರಿಕ ವೇದಕಾಲದ ಯೋಚನಾಕ್ರಮದ ಮುಂದುವರಿದ ಭಕ್ತಿಭಾವದ ದರ್ಶನ ಎಂದು ಪ್ರತಿಪಾದಿಸಲು ಹವಣಿಸಿರುವುದು ಖಂಡನಾರ್ಹ. ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಒಪ್ಪದೆ ಇಡೀ ವಚನ ಸಾಹಿತ್ಯವನ್ನು ಇಷ್ಟೇ ಎಂದು ಮುಷ್ಟಿಕಟ್ಟಿ ಪ್ರದರ್ಶಿಸುವ ಹುನ್ನಾರದ ಪುಸ್ತಕ “ವಚನ ದರ್ಶನ” ಈ ಕಾರಣಕ್ಕಾಗಿ ವಿರೋಧಕ್ಕೊಳಗಾಗುತ್ತಿದೆ.

ಶರಣ ತತ್ವವನ್ನು ಸಂಕುಚಿತಗೊಳಿಸುವ ಪ್ರಯತ್ನ

ಹನ್ನೆರಡನೇ ಶತಮಾನದ ವಚನಕಾಲ ಭಾರತ ಚರಿತ್ರೆಯಲ್ಲಿ ಮಾತ್ರವಲ್ಲದೆ ವಿಶ್ವ ಮಾನವ ಇತಿಹಾಸದಲ್ಲಿ ಸ್ಥಿರಸ್ಥಾಯವಾಗಿ ನಿಂತಿರುವುದು ಈ ಕಾರಣಗಳಿಗಾಗಿ :

● ವರ್ಣಾಶ್ರಮ ವಿರೋಧ
● ವೇದ-ಶಾಸ್ತ್ರ ನಿರಾಕರಣೆ
● ಸಮಾಜದಲ್ಲಿ ಸಮಾನತೆ
● ಜಾತಿ ಪದ್ಧತಿಯ ವಿನಾಶ

ಇತ್ತೀಚೆಗೆ ಪ್ರಕಟವಾದ “ವಚನ ದರ್ಶನ” ಪುಸ್ತಕದಲ್ಲಿ ಇವುಗಳನ್ನು ಪರಿಗಣಿಸದೆ ಬರೀ ವೈದಿಕ ಆಚರಣೆಗಳಿಗೆ ಒಗ್ಗುನ ಶರಣರ ಭಕ್ತಿ ಚಿಂತನೆಯನ್ನು ಮಾತ್ರ ಮುಂಚೂಣಿಯಲ್ಲಿಟ್ಟು ಶರಣ ದರ್ಶನವನ್ನು ಸಂಕುಚಿತಗೊಳಿಸಲಾಗಿದೆ. “ಒಟ್ಟಿನಲ್ಲಿ ಶರಣರ ದರ್ಶನ ಅದು ಭಕ್ತಿ ದರ್ಶನ” ಎಂದಿರುವ ಸಂಪಾದಕೀಯ ಮಂಡಳಿ ವಚನ ಸಾಹಿತ್ಯ ಅಂದರೆ ಇಷ್ಟೇ ನೋಡಿ ಎಂದು ಅದರ ವಿಸ್ತಾರತೆಯನ್ನು ಮೊಟಕುಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಪ್ರಜ್ಞಾವಂತರು ವಚನ ದರ್ಶನ ಫುಸ್ತಕವನ್ನು ವಿರೋಧಿಸಬೇಕಾಗಿದೆ.

ವಚನಗಳನ್ನು ಅರ್ಥೈಸಿಕೊಳ್ಳುವಾಗ ಬ್ರಿಟೀಶರು ಹಾಕಿದ್ದ ಮಾನದಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ “ವಚನ ದರ್ಶನ” ಕೃತಿಯ ಸಂಪಾದಕೀಯ ಮಂಡಳಿ ವಚನಗಳನ್ನು ಉಪನಿಷತ್ತು ಭಗವದ್ಗೀತೆಯ ಹಿನ್ನಲೆಯಲ್ಲಿ ಭಕ್ತಿಮಾರ್ಗದಲ್ಲಿ ದರ್ಶಿಸಬೇಕೆಂದು ನಿರ್ದೇಶಿಸುತ್ತದೆ. ಹನ್ನೆರಡನೇ ಶತಮಾನದ ವಚನ ಕಾಲವನ್ನು ಒಂದು ವಿಭಿನ್ನ ಸಾಮಾಜಿಕ ಚಳುವಳಿ ಎಂದೂ, ನೆಲಮೂಲದ ಜನಾಂದೋಲನವೆಂದೂ, ಬಸವಣ್ಣ ಅದರ ನಾಯಕನೆಂದೂ ಇತಿಹಾಸದಲ್ಲಿ ದಾಖಲಾಗಿರುವುದನ್ನು ಎಲ್ಲೂ ನಮೂದಿಸದ “ವಚನ ದರ್ಶನ” ಕೃತಿಯ ಸಂಪಾದಕೀಯ ಮಂಡಳಿ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬುದನ್ನು ಇಡೀ ಪುಸ್ತಕದಿಂದ ಮರೆಮಾಚಿದೆ.

“ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಒಪ್ಪದೆ ಆತನ ವ್ಯಕ್ತಿತ್ವವನ್ನು ಕುಬ್ಜಗೊಳಿಸಿ ಜನರಿಗೆ ವಚನಗಳನ್ನು ಪರಿಚಯಮಾಡಲು ಹೊರಟಿರುವ “ವಚನ ದರ್ಶನ” ಪುಸ್ತಕ ಕನ್ನಡ ಮತ್ತು ಕನ್ನಡಿಗರಿಗೆ ಸ್ವೀಕಾರಾರ್ಹವಲ್ಲ.

ಸಿದ್ಧಲಿಂಗ ಶ್ರೀಗಳಿಂದ ಸ್ಪಷ್ಟನೆ ಬರಲಿ

ವಚನ ದರ್ಶನ ಪುಸ್ತಕಕ್ಕೆ ಶುಭಾಶಯ ಕೋರುವ ಮೊದಲ ಪುಟ “ಶುಭಾಂಶಸನಂ” ಎಂಬಲ್ಲಿ ತುಮಕೂರು ಶ್ರೀ ಸಿದ್ಧಲಿಂಗಸ್ವಾಮಿಗಳು “ಇಂದು ಅನೇಕರು ವಚನಗಳ ಅರ್ಥವನ್ನು ವಿಪರೀತವಾಗಿ ಗ್ರಹಿಸಿ ಮೂಲಾಶಯಕ್ಕೆ ವಿರುದ್ಧವಾಗಿ ಮನಸ್ವೀ ವ್ಯಾಖ್ಯಾನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಶ್ರೀಗಳ ಮಾತಿನಿಂದ ಬಸವ ತತ್ವ ಚಿಂತಕರಿಗೆ ಹಿನ್ನಡೆಯಾಗುತ್ತದೆ. ದಯವಿಟ್ಟು ಶ್ರೀಗಳು ಈ ವಿಷಯದಲ್ಲಿ ಸ್ಪಷ್ಟನೆ ನೀಡಿ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ವಿನಂತಿಸುತ್ತೇನೆ

ಮೊದಲ 15 ಪುಟಗಳು

“ವಚನ ದರ್ಶನ” ಪುಸ್ತಕದ ಬಾಹ್ಯ ರೂಪ ಇಂತಿದೆ.
● ಮುಖಪುಟ
● ಸಿದ್ದಗಂಗಾ ಶ್ರೀಗಳ “ಶುಭಾಂಶಸನಂ” ದಿನಾಂಕ 10.06.2024
● ಮಲ್ಲೇಪುರಂ ಜಿ ವೆಂಕಟೇಶ ಮುನ್ನುಡಿ (4 ಪುಟಗಳು) 12.06.2024
● ಗೌರವ ಸಂಪಾದಕರು ಜಗದ ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳ ಪರಿಚಯ
● ಸಂಪಾದಕರ ಪರಿಚಯ
ಸಂ (1) ಜನಮೇಜಯ ಉಮರ್ಜಿ
ಸಂ (2) ಡಾ. ನಿರಂಜನ ಪೂಜಾರ
ಸಂ (3) ಡಾ. ಸಂತೋಷ್ ಕುಮಾರ್
ಸಂ.(4) ಚಂದ್ರಪ್ಪ ಬಾರಂಗಿ
● ಸಂಪಾದಕೀಯ : 7 ಪುಟಗಳು
● 18 ಲೇಖಕರು ವಿವಿಧ ಕಾಲಘಟ್ಟದಲ್ಲಿ ವಚನ ಸಾಹಿತ್ಯದ ಬಗ್ಗೆ ಬರೆದಿರುವ ಲೇಖನಗಳು. : 200 ಪುಟಗಳು

ಇಡೀ ಪುಸ್ತಕದ ಆಶಯ, ಉದ್ದೇಶ ವ್ಯಕ್ತವಾಗಿರುವುದು ಮೊದಲ 15 ಪುಟಗಳಲ್ಲಿ.

Share This Article
3 Comments
  • ಶುಭಾಂಶಸನಂ ಎಂಬ ಶೀರ್ಷಿಕೆಯೇ ಜನಿವಾರ ಶಿವದಾರಕ್ಕೆ ಬರೆದುಕೊಟ್ಟಂತಿದೆ! ಇನ್ನಾದರೂ ಪುಸ್ತಕದ ಮುನ್ನುಡಿ ಯಾರೋ ಬರೆದು ಕೊಟ್ಟಿದ್ದನ್ನು ಚೆನ್ನಾಗಿದೆ ಎಂದು ಭಾವಿಸಿ ಸಹಿಯ ಮುದ್ರೆ ಒತ್ತುವ ಮೊದಲು ಅದರೊಳಗಿನ ದಾರದ ಎಳೆ ಶಿವಧಾರದ್ದೋ ಇಲ್ಲಾ ಜನಿವಾರದ್ದೋ ಎಂಬ ಸುಳಿಯನರಿಯಲೆತ್ನಿಸಿ ಶ್ರೀಗಳು ಸಹಿ ಮಾಡುವಂತಾಗಲಿ!

  • ಸಿದ್ದಗಂಗಾ ಶ್ರೀ ಗಳು ಸಂಘ ಪರಿವಾರದವರ ಕೈ ಗೊಂಬೆ ಅವರ ಮಾತಿನಂತೆ ಬರೆದು ಕೊಡುವವರು
    ಪಾಪ ಅವರಿಗೆ ವಚನ ಪಚನ ಆಗಿಲ್ಲ ಅನಿಸುತ್ತೆ

  • ಶಿವಕುಮಾರ ಸರ್
    ಸಿದ್ಧ ಗಂಗಾ ಶ್ರೀ ಗಳಿಂದ ಅವರ ಹೇಳಿಕೆ ಇಂದ ಹಿನ್ನೆಡೆ ಆಗಿಲ್ಲ ಮಲಗಿದ ಜಾಗತಿಕ ಲಿಂಗಾಯತ ಮಹಾಸಭೆಗೆ
    ಎಬ್ಬಿಸಿದ್ದಾರೆ ಶ್ರೀ ಸಿದ್ಧ ಲಿಂಗ ಸ್ವಾಮಿಗಳು ಸ್ವಂತ ಏನನ್ನೋ ಓದಿದವರಲ್ಲ
    ಕಾವಿ ಹಾಕಿದ ಯಾರೇ ಇರಲಿ ಈಗ ಅವರು
    ಕೇಶವ ಕೃಪಾ ಒತ್ತಡಕ್ಕೆ ಒಳಗಾದ ಶ್ರೀ ಗಳು

Leave a Reply

Your email address will not be published. Required fields are marked *

ಲೇಖಕರು ಬೆಂಗಳೂರಿನಲ್ಲಿರುವ ಹಿರಿಯ ಲೆಕ್ಕ ಪರಿಶೋಧಕರು