ಇದು ಕ್ರಾಂತಿಯಲ್ಲ, ಚಳುವಳಿಯೂ ಅಲ್ಲ: ವಚನ ದರ್ಶನದ ವೈರಲ್ ಭಾಷಣ (ಆಡಿಯೋ)

ಎಂ. ಎ. ಅರುಣ್
ಎಂ. ಎ. ಅರುಣ್

ವಿವಾದಿತ ವಚನ ದರ್ಶನ ಪುಸ್ತಕ ಇತ್ತೀಚೆಗೆ ವಿಜಯಪುರದಲ್ಲಿ ಸುಮಾರು ಎಂಟನೂರು ಜನ ಸೇರಿಸಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಯಿತು.

ಅದರಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಸಂಘ ಪರಿವಾರದ ಬಿ ಆರ್ ಶಂಕರಾನಂದರ ಮಾತಿನ ತುಣುಕುಗಳು ಪೋಸ್ಟರ್ ರೂಪದಲ್ಲಿ ವೈರಲ್ ಆಗಿವೆ.

ವಚನ ದರ್ಶನ ಪುಸ್ತಕದ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಇವರ ಭಾಷಣವನ್ನು ಕೇಳಬೇಕು.

ಇವರು ಹೇಳುವ ಎರಡು ಮುಖ್ಯ ಅಂಶಗಳು:

1) ವಚನ ಪರಂಪರೆ ಕ್ರಾಂತಿಯಲ್ಲ, ಚಳುವಳಿಯೂ ಅಲ್ಲ. ಚಳುವಳಿ ಅನ್ನೋ ಶಬ್ದವೇ ಭಾರತದಲ್ಲ.

2) ವಚನಗಳು ಮಾನವ ರಚನೆಯಲ್ಲ. ಅವು ಪವಿತ್ರ ಭಾರತ ಮಣ್ಣಿನಲ್ಲಿ ಇರುವ ದಿವ್ಯ ಶಕ್ತಿಯಿಂದ ತಾವಾಗೇ ತಾವೇ ಪ್ರಕಟವಾಗಿವೆ, ಸ್ವಯಂ ಉದ್ಭವಿಸಿವೆ (ಇದನ್ನು ನಂಬದಿದ್ದರೆ ಕೆಳಗಿರುವ ಆಡಿಯೋ ಕೇಳಿ).

ಈ ಭಾಷಣ ಕೇಳಿದರೆ ಅಲ್ಪಸ್ವಲ್ಪ ಓದಿರುವ ಸಂಘ ಪರಿವಾರದಲ್ಲಿ ನಿಷ್ಠೆಯಿಂದ ಇರುವ ಲಿಂಗಾಯತ ಹುಡುಗರಿಗೂ ಇದು ಅಸಂಬದ್ಧ ಅನ್ನಿಸಬಹುದು.

12ನೇ ಶತಮಾನದ ದಂಗೆಯ ಕಾವು ವಚನಗಳಲ್ಲಿ ಜೀವಂತವಾಗಿದೆ. ಕಳೆದ ಕೆಲವು ವರ್ಷಗಳಿಂದ ವಚನಗಳು, ಬಸವಣ್ಣನವರ ಪ್ರಭಾವ ಲಿಂಗಾಯತರ ರಾಜಕೀಯ ಪ್ರಜ್ಞೆಯನ್ನು ರೂಪಿಸಲಾರಂಭಿಸಿವೆ. ನಾವು ಹಿಂದೂಗಳಲ್ಲ ಎನ್ನುವ ಲಿಂಗಾಯತರ ಸಂಖ್ಯೆ ಕ್ರಮೇಣವಾಗಿಯಾದರೂ ಗಣನೀಯವಾಗಿ ಹೆಚ್ಚುತ್ತಿದೆ.

ಅಖಂಡ ಹಿಂದೂ ಸಮಾಜದಲ್ಲಿ ಅಚಲವಾದ ನಂಬಿಕೆಯಿಟ್ಟಿರುವ ಸಂಘ ಪರಿವಾರದವರಿಗೆ ಇದು ನುಂಗಲಾಗದ ಗುಳಿಗೆ.

ಇದರ ವಿರುದ್ಧ ಅವರು ಬಿಡುತ್ತಿರುವ ಹಲವಾರು ಅಸ್ತ್ರಗಳಲ್ಲಿ ಒಂದು ವಚನ ದರ್ಶನ. (ಮಿಕ್ಕ ಅಸ್ತ್ರಗಳು ಯಾವುವು ನೀವೇ ಪಟ್ಟಿ ಮಾಡಿ ಕಾಮೆಂಟ್ ನಲ್ಲಿ ಹಾಕಿ.)

ಕಲ್ಯಾಣದಲ್ಲಿ ಯಾವುದೇ ಕ್ರಾಂತಿ ನಡೆದಿಲ್ಲ, ವಚನಗಳನ್ನು ವಿಶ್ಲೇಷಿಸಬೇಡಿ, ಸಂಸ್ಕೃತ ಮಂತ್ರಗಳಂತೆ ಓದಿ ಮುಕ್ತಿ ಪಡೆಯಿರಿ ಎಂದು ಜನರನ್ನು ಒಪ್ಪಿಸಲು ರಾಜ್ಯವೆಲ್ಲ ಓಡಾಡುತ್ತಿದ್ದಾರೆ. ಲಿಂಗಾಯತರಿಗೆ ಕಲ್ಯಾಣದ ನೆನಪು ಅಳಿಸಿಬಿಟ್ಟರೆ ಸ್ವತಂತ್ರ ಧರ್ಮದ ಹೋರಾಟ ನಿಲ್ಲಬಹುದು ಎಂಬ ಆಶಯವೂ ಇರಬಹುದು.

ದುರದೃಷ್ಟದಿಂದ ಶಂಕರಾನಂದರ ಪೂರ್ಣ ಭಾಷಣ ಎಲ್ಲೂ ಲಭ್ಯವಿಲ್ಲ. ಕಲಬುರ್ಗಿಯಲ್ಲಿ ಬಿ ಎಲ್ ಸಂತೋಷ್, ಬೆಂಗಳೂರಿನಲ್ಲಿ ಮುಕುಂದ, ಮಲ್ಲೇಪುರಂ ವೆಂಕಟೇಶ ಮುಂತಾದವರು ಮಾಡಿದ ಭಾಷಣಗಳು ಯುಟ್ಯೂಬ್, ಫೇಸ್ಬುಕ್ ಗಳಲ್ಲಿವೆ. ಆದರೆ ಶಂಕರಾನಂದರ ಭಾಷಣ ಲೋಕಾರ್ಪಣೆಯಾಗಿಲ್ಲ.

ವಿಜಯಪುರದ ಕಾರ್ಯಕ್ರಮಕ್ಕೆ ಬಸವ ಮೀಡಿಯಾದ ಪರವಾಗಿ ಹೋಗಿದ್ದ ಪತ್ರಕರ್ತ ಶಿವಕುಮಾರ್ ಉಪ್ಪಿನ ಶಂಕರಾನಂದರ ಭಾಷಣವನ್ನು ಕೇಳಿ ಬೆಚ್ಚಿ ಸಾಧ್ಯವಾದಷ್ಟೂ ತಮ್ಮ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಅದರ ಆಯ್ದ ಭಾಗಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಕೆಲವು ಕಡೆ ಧ್ವನಿ ಅಸ್ಪಷ್ಟವಾಗಿದೆ, ಆದರೆ ಗಮನವಿಟ್ಟು ಕೇಳಿದರೆ ಅರ್ಥವಾಗುತ್ತದೆ.

ಶಂಕರಾನಂದರು ನಾಟಕೀಯವಾಗಿ ಮಾತನಾಡುತ್ತಾರೆ. ಒಂದು ವಾಕ್ಯ ಮೆಲ್ಲನೆ ಕಿವಿಯಲ್ಲಿ ಉಸಿರು ಬಿಟ್ಟ ಹಾಗೆ ಕೇಳಿಸುತ್ತದೆ. ಅದನ್ನು ಶ್ರಮಬಿದ್ದು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿದ್ದಾಗ, ಅದರ ಮುಂದಿನ ವಾಕ್ಯವನ್ನು ಅದೇ ಕಿವಿ ಗುಂಯ್ ಅನ್ನುವಷ್ಟು ಜೋರಾಗಿ ಕಿರಚುತ್ತಾರೆ.

ಅವರ ಭಾಷಣ ವೈರಲ್ ಆಗಿರುವುದು ಈ ವಿಶಿಷ್ಟ ಶೈಲಿಯಿಂದಲ್ಲ. ಅವರು ಆಡಿರುವ ಮಾತುಗಳಿಂದ.

ಆಡಿಯೋ

ವಚನ ಪರಂಪರೆ ಕ್ರಾಂತಿಯಲ್ಲ, ಚಳುವಳಿಯೂ ಅಲ್ಲ, ಚಳುವಳಿ ಶಬ್ದವೇ ನಮ್ಮ ದೇಶದಲ್ಲ


ವಚನಗಳು ಬರೆದಿದ್ದಲ್ಲ, ದೈವ ಶಕ್ತಿಯಿಂದ ಸೃಷ್ಟಿಯಾದವು


ಸಂಖ್ಯಾ ದರ್ಶನ, ಯೋಗ ದರ್ಶನ, ವೇದಾಂತ ದರ್ಶನ, ವಚನ ದರ್ಶನ


Share This Article
1 Comment

Leave a Reply

Your email address will not be published. Required fields are marked *