ಬೆಂಗಳೂರಿನ ಆರ್ಎಸ್ಎಸ್ ಕಚೇರಿಯಲ್ಲಿ ಸಂಧಾನದ ಸಭೆ ನಡೆದ ನಂತರವೂ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಯುದ್ಧ ತಾರಕಕ್ಕೇರುತ್ತಿದೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. “ವಿಜಯೇಂದ್ರ ಬಿಜೆಪಿ ಪಕ್ಷದಲ್ಲಿ ಇನ್ನೂ ಜೂನಿಯರ್, ಅವನಿಗೆ ಏನೂ ಐಡಿಯಾಲಜಿ ಇಲ್ಲ. ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನಾನೆಂದೂ ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು,” ಎಂದು ಹೇಳಿದರು.
15ರಿಂದ 20 ಜನರ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಸಲಿ ಎಂದು ಆರ್ಎಸ್ಎಸ್ ಪ್ರಮುಖರ ಸಭೆಯಲ್ಲಿ ಮನವಿ ಮಾಡಿದ್ದೇವೆ. ಒಬ್ಬರ ಕೈಗೆ ಪಕ್ಷ ಸಿಕ್ಕರೆ, ಸರ್ವಾಧಿಕಾರ ಧೋರಣೆ ಬರುತ್ತದೆ. ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಯಡಿಯೂರಪ್ಪಗೆ ವಯಸ್ಸಾಗಿದೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ನಮಗೆ ಯಡಿಯೂರಪ್ಪನವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ವಿಜಯೇಂದ್ರ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಯಾರು ಏನೇ ಮಾತನಾಡಿದರೂ ವಿಜಯೇಂದ್ರನಾದ ನಾನೇ ರಾಜ್ಯಾಧ್ಯಕ್ಷ ಎಂಬುದಂತೂ ಸತ್ಯ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಎಂದು ಘೋಷಿಸಿದವರು ಎಂದು ಹೇಳಿದರು.
“ನನ್ನನ್ನು ನಾನೇ ನಾಯಕ ಎಂದು ಎಲ್ಲಿಯೂ ಬಿಂಬಿಸಿಕೊಂಡಿಲ್ಲ. ಬದಲಿಗೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ವಹಿಸಿರುವ ಕೆಲಸ ಮಾಡುತ್ತಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಸರ್ಕಾರದ ವಿರುದ್ಧ ಕಳೆದ 3 ತಿಂಗಳಿಂದ ಹೋರಾಟ ಮಾಡಿ ಇಡೀ ಆಡಳಿತ ಯಂತ್ರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸಿದ್ದೇನೆ. ಅದು ನನಗೆ ತೃಪ್ತಿ ಕೊಟ್ಟಿದೆ. ರಾಜ್ಯದಲ್ಲಿ ಅಕ್ಟೋಬರ್ 1ರಿಂದ 15ರವರೆಗೆ 2ನೇ ಹಂತದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ. ನಂತರ ಪಾದಯಾತ್ರೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.