ಬೆಂಗಳೂರು
ಬಸವಣ್ಣನವರ ಮೇಲೆ ಅವಹೇಳನಕಾರಿ ಭಾಷೆ ಪ್ರಯೋಗ… ಬಲಗೈನಲ್ಲಿ ಇಷ್ಟಲಿಂಗ… ಅಕ್ಕ ನಾಗಮ್ಮನವರ ಗರ್ಭದಿಂದಲೇ ಚನ್ನಬಸವಣ್ಣನವರು ಜಾತವೇದ ಮುನಿಗಳ ಜೊತೆ ಮಾತನಾಡುವುದು…ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ಒಂದು ದೇವತೆ ಬಂದು ಕೈಲಾಸಕ್ಕೆ ಬಾ ಎಂದು ಕರೆಯುವುದು….
ಅಕ್ಟೋಬರ್ 7ರಂದು ಬೆಂಗಳೂರಿನಲ್ಲಿ ‘ಶರಣರ ಶಕ್ತಿ’ ವೀಕ್ಷಿಸಿದ ಲಿಂಗಾಯತ ಸ್ವಾಮೀಜಿಗಳ ಮತ್ತು ವಿವಿಧ ಸಂಘಟನೆಗಳ ಮುಖಂಡರ ತಂಡ ಚಿತ್ರದಲ್ಲಿ ಒಟ್ಟು 15 ಗಂಭೀರ ಪ್ರಮಾದಗಳನ್ನು ಗುರುತಿಸಿದೆ.
ಅವರೆಲ್ಲರ ಪರವಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಚಿತ್ರ ನಿರ್ದೇಶಕ ದಿಲೀಪ ಶರ್ಮಾ ಮತ್ತು ಅವರ ನಿರ್ಮಾಪಕ ಪತ್ನಿ ಆರಾಧನಾ ಕುಲಕರ್ಣಿ ಅವರಿಗೆ ನೋಟೀಸ್ ಬುಧವಾರ ಕಳಿಸಿದ್ದಾರೆ.
ನೋಟೀಸಿನಲ್ಲಿ ಪಟ್ಟಿ ಮಾಡಿರುವ ಗಂಭೀರ ಪ್ರಮಾದ ಗಳನ್ನು ಸರಿಪಡಿಸಿ ಬಿಡುಗಡೆ ಮುನ್ನ ಚಿತ್ರವನ್ನು ಮತ್ತೆ ತೋರಿಸುವಂತೆ ಆಗ್ರಹ ಪಡಿಸಿದ್ದಾರೆ. ನೋಟೀಸಿಗೆ ಸ್ಪಂದಿಸದೆ ತಂಡದವರು ಚಿತ್ರ ಬಿಡುಗಡೆ ಮಾಡಿದರೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಎಚ್ಚರಿಕೆ ಕೂಡ ನೀಡಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಕಳಿಸಿರುವ ನೋಟೀಸಿನಲ್ಲಿ ಪಟ್ಟಿಯಾಗಿರುವ 15 ಪ್ರಮಾದಗಳು:
1) ಬಲಗೈಯಲ್ಲಿ ಇಷ್ಟಲಿಂಗವನ್ನು ಪೂಜಿಸುವುದು ತಪ್ಪು.
2) ಆಕಳುಗಳ ಸ್ವಭಾವದ ಚಿತ್ರ ಹಾಗೂ ಒಬ್ಬ ಶರಣರ ಬಟ್ಟೆಯ ಮೇಲಿರುವ ನಂದಿ ಚಿತ್ರ ಸಮಂಜಸ ಎನಿಸುವುದಿಲ್ಲ.
3) ಮೂರುಸಾವಿರ ಮಠದ ಪ್ರಕರಣವನ್ನು ತೆಗೆದು ಹಾಕುವುದು.
4) ಬಸವಣ್ಣ ಎಂದು ಏಕವಚನದಲ್ಲಿ ಹೇಳುವುದು ಹಾಗೂ ಬಸವಣ್ಣನವರನ್ನು ಕೇವಲ ಭಕ್ತ ಎಂದು ಮಾತ್ರ ಬೋಧಿಸುವುದು ಸರಿಯಲ್ಲ. ಗುರು ಎಂದು ಭೋದಿಸಬೇಕು (ಪೂಜ್ಯ ಅಲ್ಲಮಪ್ರಭು ಸ್ವಾಮಿಗಳು ಬಂದಾಗ) ದಾರ್ಶನಿಕ ಬಸವಣ್ಣನವರ ಕುರಿತಾಗಿ ಗೌರವ ಸಂಭೋದನೆ ಇರಲಿ.
5) ಪೂಜ್ಯ ಚೆನ್ನಬಸವೇಶ್ವರರಿಗೆ ಕೈಲಾಸಕ್ಕೆ ಬಾ ಎಂದು ಒಬ್ಬ ದೇವತೆಯ ಚಿತ್ರವನ್ನು ತೋರಿಸುವದು ಲಿಂಗಾಯತ ತತ್ವಕ್ಕೆ ವಿರುದ್ಧವಾದದ್ದು.
6) ಶರಣ ಗೊಲ್ಲಾಳೇಶ್ವರರು ತಂದೆಯನ್ನು ಕೊಲ್ಲುವದು ಶರಣ ಸಂಸ್ಕೃತಿಗೆ ವಿರುದ್ಧವಾದುದು. ಭಕ್ತಿಯ ಈ ಅತಿರೇಕವನ್ನು ಶರಣರು ಒಪ್ಪುವದಿಲ್ಲ. ಈ ಭಾಗವನ್ನು ಸಾತ್ವಿಕವಾಗಿ ತೋರಿಸಬೇಕು. ಇಲ್ಲವೇ ಈ ಭಾಗವನ್ನು ಕೈ ಬಿಡಬಹುದು ಈ ಸಂದರ್ಭದಲ್ಲಿ “ಆತ್ಮಲಿಂಗ” ಎನ್ನುವ ಶಬ್ದದ ಬದಲಾಗಿ ಇಷ್ಟಲಿಂಗ ಶಬ್ದ ಬರಬೇಕು.
7) (ಅ) ಶೀಲವಂತ+ಲಾವಣ್ಯರ ಸನ್ನಿವೇಶಗಳಲ್ಲಿ ಬಂದಿರುವ ವೇದಗಳು, ನವಗ್ರಹಗಳ ಶಬ್ದಗಳನ್ನು ಉಪಯೋಗಿಸಬಾರದು.
(ಆ) ಶ್ರೀಗುರು ಬಸವಣ್ಣನವರು ಹರಳಯ್ಯ ಹಾಗೂ ಮಧುವರಸರಿಗೆ ಲಿಂಗದೀಕ್ಷೆ ಕೊಟ್ಟ ನಂತರ ಅವರಿಬ್ಬರ ಒಪ್ಪಿಗೆ ಪಡೆದದ್ದನ್ನು ತಿಳಿದುಕೊಂಡು ಶೀಲವಂತ ಹಾಗೂ ಲಾವಣ್ಯರ ಸನ್ನಿವೇಶಗಳನ್ನು ಸೇರಿಸಬಹುದಲ್ಲವೇ
8) ಒಂದು ಸಂಭಾಷಣೆಯಲ್ಲಿ ಇರುವ “ಕಕ್ಕಯ್ಯನ ಪ್ರಸಾದ” ಎನ್ನುವ ಬದಲಾಗಿ “ಅನುಭಾವ ಪ್ರಸಾದ ಎನ್ನಬಹುದಾಗಿದೆ.
9) ಗುಡಿಯಿಂದ ಇಷ್ಟಲಿಂಗ ತಂದಿದ್ದಾರೆ ಎನ್ನುವುದು ಸಮಂಜಸವಲ್ಲ. ಗುಡಿಯ ಲಿಂಗವೇ ಕರಸ್ಥಳದಲ್ಲಿ ಎದೆಯ ಮೇಲೆ ಇಷ್ಟಲಿಂಗವಾಗಿ ಬಂದಿದೆ ಎನ್ನುವ ಮಾತುಗಳು ಮೂರು ನಾಲ್ಕು ಸರಿ ಬಂದಿದ್ದನ್ನು ತೆಗೆದುಹಾಕಬೇಕು. ಅದರ ಬದಲಾಗಿ ಪರಾತ್ಪರ ಪರ ವಸ್ತುವು ಚುಳುಕಾಗಿ ಕರಸ್ಥಳದಲ್ಲಿ ಇಷ್ಟಲಿಂಗವಾಗಿ ಬಂದಿದೆ ಎಂದು ಹೇಳಬೇಕು.
10) ಶ್ರೀ ಚೆನ್ನಬಸವಣ್ಣನವರು ಹುಟ್ಟಿದಾಗ ದೀಕ್ಷಾ ಪ್ರಸಂಗ, ಜಾತವೇದ ಸ್ವಾಮಿಗಳು ಎಂದು ಹೇಳುವುದು ಐತಿಹಾಸಿಕವಲ್ಲ. ಕಲ್ಕಿ ಮಹಾತ್ಮ ಎನ್ನುವ ವಿವರಣೆ ಸರಿಯಲ್ಲ ತೆಗೆದುಹಾಕಬೇಕು.
11) “ಕಳ್ಳ ಬಸವಣ್ಣ” ಎಂದು ಪ್ರಾರಂಬಿಸುವುದನ್ನು ತೆಗೆದು ಸೂಕ್ತ ಶಬ್ದವನ್ನು ಉಪಯೋಗಿಸಬೇಕು.
12) ಕೊನೆಯ 5-6 ನಿಮಿಷಗಳ ಚಿತ್ರದ ಭಾಗವನ್ನು ಮರುಪರಿಷ್ಕರಣೆ ಮಾಡಬೇಕು. ಪೌರಾಣಿಕವಾಗಿರಬಾರದು.
13) ಅಕ್ಕ ನಾಗಮ್ಮನ ಹೊಟ್ಟೆಯಲ್ಲಿ ಇರುವ ಶ್ರೀ ಚೆನ್ನಬಸವಣ್ಣನವರ ಚಿತ್ರದ ಭಾಗವನ್ನು ತೆಗೆದು ಹಾಕಬೇಕು.
14) ಉರಿಲಿಂಗ ಪೆದ್ದಿ ಶರಣರ ಪ್ರಸಂಗದಲ್ಲಿ “ ಜಾ ತಗಡಜಾ” ಎನ್ನುವ ಶಬ್ದದ ಬದಲಾಗಿ “ಘೇ ದಘಡ ಜಾ” ಶಬ್ದ ಸೇರಿಸಬೇಕು.
15) ನೆಗೆ ಮಾರಿ ಮಲ್ಲಯ್ಯ ಶರಣರ ವ್ಯಕ್ತಿತ್ವ ಹಾಸ್ಯಗಾರನಾಗಿ ಮೂಡಿ ಬಂದಿದೆ. ಉತ್ತಮ ವಚನಗಳನ್ನು ನೀಡಿದ ಈ ಶರಣರ ಚರಿತ್ರೆಯನ್ನು ಗಾಂಭೀರ್ಯದಿಂದ ಒಡಗೂಡಿದ ಹಾಸ್ಯದ ಮೂಲಕ ತೋರಿಸಲು ಪ್ರಯತ್ನಿಸುವುದು.
ಅಕ್ಟೋಬರ್ 8ರಂದು ಚಿತ್ರವನ್ನು ನೋಡಿದ ಮುಖಂಡರೊಬ್ಬರು ಟ್ರೈಲರ್ ನಲ್ಲಿ ಇದ್ದ ಸಮಸ್ಯೆಗಳನ್ನೆಲ್ಲಾ ಚಿತ್ರದಿಂದ ತೆಗೆದಿದ್ದಾರೆ ಎಂದು ಹೇಳಿದ್ದರು.
“ಆದರೆ ಚಿತ್ರದಲ್ಲಿ ಇನ್ನೂ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಬಹಳ ಸಮಸ್ಯೆಗಳಿವೆ. ಅಧ್ಯಯನದ ಕೊರತೆಯಿದೆ ಮತ್ತು ಉದ್ದೇಶಪೂರ್ವಕವಾಗಿ ಶರಣರ ಇತಿಹಾಸ ಕೈಬಿಟ್ಟು ಪುರಾಣ ತುಂಬುವ ಪ್ರಯತ್ನವಿದೆ. ಇಷ್ಟೊಂದು ಸಮಸ್ಯೆಗಳನ್ನು ತಿದ್ದಿ ಅಕ್ಟೋಬರ್ 18 ಬಿಡುಗಡೆ ಮಾಡುತ್ತಾರೆಯೇ ನೋಡಬೇಕು,” ಎಂದು ಹೇಳಿದ್ದರು.
ಅಕ್ಟೋಬರ್ 7 ಬೆಂಗಳೂರಿನಲ್ಲಿ ಲಿಂಗಾಯತ ಹಿರಿಯರನ್ನು ಉದ್ದೇಶಿಸಿ ಮಾತನಾಡಿದ ಶರಣರ ಶಕ್ತಿ ನಿರ್ದೇಶಕ ದಿಲೀಪ್ ಶರ್ಮ
ಒಳ್ಳೆಯ ವಾತಾವರಣದಲ್ಲಿ, ಧರ್ಮ ಹಾಗು ಇತಿಹಾಸಕ್ಕೆ ವಿರುದ್ದವಾಗಿರುವ ಪ್ರಕರಣಗಳನ್ನು ಸರಿಪಡಿಸಿ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರಧರ್ಶನ ಕಾಣಲಿ.
ತಾವು ಒಂದು ಒಳ್ಳೆಯ ಚಿತ್ರ ಕೊಡಬೇಕೆಂದು ಮಾಡಿದ ಪ್ರಯತ್ನ ವ್ಯರ್ಥ ವಾಗಬಾರದು. ತಮಗೆ ತಿಳಿಯದೆ ಆದ
ತಪ್ಪುಗಳಿಗೆ ಕ್ಷಮೆ ಇದೆ. ಆದ ಪ್ರಮಾದಗಳನ್ನೂ ಸರಿ ಪಡಿಸಿ ಬಸವಾಬಿ ಮಾನಿಗಳ ಮನಸ್ಸಿಗೆ ನೋವಾಗದಂತೆ ಚಿತ್ರ ಬಿಡುಗಡೆ ಮಾಡಿ, ನಿಮ್ಮ ಪ್ರಯತ್ನಕ್ಕೆ ಖಂಡಿತ ಯಶಸ್ಸು ದೊರೆಯುತ್ತದೆ.