ಬೆಳಗಾವಿಯಲ್ಲಿ ಸದ್ಯದಲ್ಲೇ ಬರಲಿದೆ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

“ವಿನೂತನ ಮಾದರಿಯಲ್ಲಿ ವಾಹನದ ಕವಚ ಕಟ್ಟಿಸುವ ಯೋಜನೆ ಹೊಂದಲಾಗಿದೆ. ಬಸವಣ್ಣನವರ ಐಕ್ಯಮಂಟಪ ಪರಿಕಲ್ಪನೆಯ ಉದ್ಧೇಶ ಇಟ್ಟುಕೊಂಡಿದ್ದೇವೆ.”

ಬೆಳಗಾವಿ

ನಗರದ ಬಸವ ಸಂಘಟನೆಗಳಿಂದ ಸದ್ಯದಲ್ಲೇ ಎಲ್ಲಾ ಸಮುದಾಯಗಳ ಬಳಕೆಗಾಗಿ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ ಬರಲಿದೆ.

ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ನೂತನ ವಾಹನದ ಚಾಸಿಸ್ ನ ಪೂಜಾ ಕಾರ್ಯಕ್ರಮವು ವಿಶ್ವಗುರು ಬಸವ ಮಂಟಪದಲ್ಲಿ ಸೋಮವಾರ ನೆರವೇರಿತು. ಯಾರಾದರೂ ಲಿಂಗೈಕ್ಯರಾದಾಗ ಅವರನ್ನು ಮನೆಯಿಂದ ಮಸಣಕ್ಕೆ ಸಾಗಿಸಲು ಅನುಕೂಲವಾಗುವ ಈ ವಾಹನ, ಬೆಳಗಾವಿ ಬಸವ ಕಾಯಕಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವದಳದ ಸಂಯುಕ್ತ ಸೇವಾ ಕಾಣಿಕೆ ಆಗಿದೆ.

ಐಷರ್ ಕಂಪನಿಯ ವಾಹನದ ಚಾಸಿಸ್ ಇದಾಗಿದ್ದು, 14 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಬಸವ ಕಾಯಕ ಜೀವಿಗಳ ಸಂಘಟನೆಯ ನಿರ್ದೇಶಕರು, ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಮತ್ತು ಸಮಾಜದ ಕೆಲವರಿಂದ ಇದಕ್ಕಾಗಿ ಕಾಣಿಕೆ ಪಡೆಯಲಾಗಿದೆ.

ವಿನೂತನ ಮಾದರಿಯಲ್ಲಿ ವಾಹನದ ಕವಚ ಕಟ್ಟಿಸುವ ಯೋಜನೆ ಹೊಂದಲಾಗಿದೆ. ಬಸವಣ್ಣನವರ ಐಕ್ಯಮಂಟಪ ಪರಿಕಲ್ಪನೆಯ ಉದ್ಧೇಶ ಇಟ್ಟುಕೊಂಡಿದ್ದೇವೆ. ಇದಕ್ಕೆ ಇನ್ನು 8 ರಿಂದ 10 ಲಕ್ಷ ರುಪಾಯಿ ಖರ್ಚು ಬರಬಹುದು, ಅದಕ್ಕೆಂದೇ ದಾಸೋಹಿಗಳು ಯಾರಾದರು ಮುಂದೆ ಬಂದಾರು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಕೆ. ಶರಣಪ್ರಸಾದ ಅವರು ಹೇಳುತ್ತಾರೆ.

ಪೂಜಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಅಶೋಕ ಬೆಂಡಿಗೇರಿ, ಸಮಾಜದ ಮುಖಂಡರಾದ ಶಂಕರ ಗುಡಸ, ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷರಾದ ಸೂರ್ಯಕಾಂತ ಭಾಂವಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕಳಸಣ್ಣವರ , ನಗರಸೇವಕರಾದ ರಾಜು ಡೋಣಿ, ಸಮಾಜ ಸೇವಕರಾದ ಮಹಾದೇವ ರಾಥೋಡ, ಸಿದ್ದೇಶ್ವರ ಕ್ರೇನ್ ಮಾಲೀಕರಾದ ಸುರೇಶ ಚಾಜಗೌಡ, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾದ ಅಧ್ಯಕ್ಷರಾದ ಮಹಾಂತೇಶ ಹಂಪಣ್ಣವರ, ಬಣಗಾರ ಸಮಾಜದ ಪ್ರಮುಖರಾದ ಸಂತೋಷ ಕೊಳಕಿ, ಚರಲಿಂಗಯ್ಯ ಚರಂತಿಮಠ ಮತ್ತೀತರರು ಉಪಸ್ಥಿತರಿದ್ದರು.

ಗುರು ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ನಂತರ ಗಣ್ಯರು ಈ ಕಾರ್ಯಕ್ಕೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘದ ಪದಾಧಿಕಾರಿಗಳು ಹಾಗೂ ಹಲವು ಸದಸ್ಯರು ಪಾಲ್ಗೊಂಡಿದ್ದರು.

Share This Article
1 Comment
  • ಅಪ್ಪ ಬಸವಣ್ಣ ಅಪ್ಪಟ ಸಂಸಾರಿಗಳು. ಅವರನ್ನು ವಿರಕ್ತರಂತೆ ಕಾವಿ ಪೋಷಾಕಿನಲ್ಲಿ ಪ್ರದರ್ಶಿಸಿ ಪ್ರಚಾರ ಮಾಡುವುದು ಶರಣರ ಸತ್ಯದ ಪ್ರತಿಪಾದನೆಗೆ ವ್ಯತಿರಿಕ್ತವಾದದ್ದು. ಹಾಗಾಗಿ ಶ್ವೇತ ವಸ್ತೃದಲ್ಲಿ ಪ್ರದರ್ಶನ ಮಾಡುವುದು ಶರಣರಿಗೆ ಸಲ್ಲಿಸುವ ಗೌರವವಾಗಿದೆ..

Leave a Reply

Your email address will not be published. Required fields are marked *