ಗದಗ
೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ಶರಣರ ಬಲಿದಾನ, ತ್ಯಾಗಗಳನ್ನು ಎಲ್ಲ ಲಿಂಗಾಯತರು ನೆನಪಿಡಬೇಕು. ಅತ್ಯಂತ ಸಂಕಟಮಯ ಸನ್ನಿವೇಶದಲ್ಲೂ ಜೀವದ ಹಂಗು ತೊರೆದು ಬಿಜ್ಜಳ ಹಾಗೂ ವೈದಿಕಶಾಹಿಗಳೊಂದಿಗೆ ಹೋರಾಟ ನಡೆಸುತ್ತಾ, ವಚನ ಸಾಹಿತ್ಯ ರಕ್ಷಿಸಿದ ಶರಣರನ್ನು ಸ್ಮರಿಸುವುದು ನಮಗೆ ಆದ್ಯತೆಯಾಗಬೇಕು ಹಾಗೂ ಶರಣರ ಮಾರ್ಗದಲ್ಲಿ ಸಾಗಬೇಕೆಂದು ಶರಣತತ್ವ ಚಿಂತಕಿ ಗೌರಕ್ಕ ಬಡಿಗಣ್ಣವರ ಹೇಳಿದರು.
ಈಚೆಗೆ ಬಸವ ಸಮುದಾಯ ಭವನದಲ್ಲಿ ನಡೆದ, ಬಸವದಳದ ೧೬೧೫ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಹರಳಯ್ಯ, ಮಧುವಯ್ಯ ಹುತಾತ್ಮರ ಸ್ಮರಣೆ’ ಕುರಿತು ಮಾತನಾಡಿದರು.
ಕಲ್ಯಾಣಕ್ರಾಂತಿಯನ್ನು ವಿಜಯೋತ್ಸವ ಅನ್ನಲು ತುಸು ಮುಜಗರವಾಗುತ್ತದೆ. ಹಾಗೆ ನೋಡಿದಲ್ಲಿ ಸತ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ ಶರಣರ ಬಲಿದಾನದ ದಿನವದು. ಆ ಶರಣರನ್ನು ಬಲಿಕೊಟ್ಟ ಪುರೋಹಿತಶಾಹಿಗಳ ಆ ರೀತಿಯೇ ಅತ್ಯಂತ ಅಮಾನುಷವಾದುದು.
ಮೂವರು ಶರಣರ ಕಣ್ಣು ಕೀಳಿಸಿ, ಆನೆಕಾಲಿಗೆ ಕಟ್ಟಿ ಇಡೀ ಕಲ್ಯಾಣದ ಬೀದಿಗಳಲ್ಲಿ ಎಳೆದೊಯ್ದು ಹತ್ಯೆ ಮಾಡುವ ಘಟನೆ ಅತ್ಯಂತ ಹೇಯವಾದುದಾಗಿದೆ. ಜೊತೆಗೆ ಅದೇ ಸಂದರ್ಭದಲ್ಲಿಯೆ ಬಹಳಷ್ಟು ಶರಣರ ಕಗ್ಗೊಲೆಗಳಾದವು. ಅಮೂಲ್ಯವಾದ ಕೋಟ್ಯಾಂತರ ವಚನಗಳನ್ನು ಸುಡಲಾಯಿತು.
ಆದರೆ ಶರಣರ ಪಾಲಿಗೆ ಮರಣವೇ ಮಹಾನವಮಿಯಾಗಿತ್ತು. ವಚನ ಸಾಹಿತ್ಯ ರಕ್ಷಣೆಗಾಗಿ ಅವರು ಕಲ್ಯಾಣವನ್ನು ತೊರೆದರು. ಆಗಲೂ ವೈದಿಕರ, ಸೈನಿಕರ ದಾಳಿಗೆ ಅವರು ಒಳಗಾದರು. ಶರಣರ ಆ ಮಹಾ ಬಲಿದಾನವನ್ನು ನಾವೆಂದೂ ಮರೆಯಬಾರದು.
ನಮ್ಮ ಇಂದಿನ ಪೀಳಿಗೆ, ಮುಖ್ಯವಾಗಿ ಬಸವಧರ್ಮಿಯರು ಕಲ್ಯಾಣದಲ್ಲಿ ಏಕೆ ಕ್ರಾಂತಿ ನಡೆಯಿತೆಂಬುದನ್ನು ಅರಿಯಬೇಕು. ಅಲ್ಲಿ ಶರಣರ ಕೊಲೆಗಳಾಗಿ ರಕ್ತಪಾತ ಆಯ್ತು. ಇದು ಜರುಗಲು ಕಾರಣ ಮುಖ್ಯವಾಗಿ ಶರಣರ ಸಮಸಮಾಜ ನಿರ್ಮಿತಿಯ ಕನಸು. ವರ್ಣಸಂಕರ, ಜಾತಿ ನಿರ್ಮೂಲನೆ, ಸಮಾನತೆಯಂತಹ ಆಶಯದ ಕಾರ್ಯಗಳು ವೈದಿಕರ ವಿರೋಧಕ್ಕೆ ಕಾರಣವಾದವು. ಬಿಜ್ಜಳ ರಾಜನನ್ನು ಶರಣರ ವಿರುದ್ಧ ಎತ್ತಿಕಟ್ಟಿ, ಎಳೆಹೂಟೆಯಂತಹ ಕ್ರೂರ ಶಿಕ್ಷೆ ಜಾರಿಗೊಳಿಸಿದರು. ಶರಣರ ಮಾರಣಹೋಮ ನಡೆಸಿದರು. ಅದರ ಮುಂದೆ ನಡೆದಿದ್ದೆಲ್ಲವು ನಮಗೆ ತಿಳಿದೆ ಇದೆ ಎಂದರು.
ಆದ್ದರಿಂದ ನಾವು ಅರಿಯಬೇಕಾದುದೇನೆಂದರೆ ಶರಣರ ತ್ಯಾಗ, ಬಲಿದಾನಗಳಿಂದ ರಕ್ಷಿತವಾದ, ಉಳಿದ ಅಮೂಲ್ಯ ವಚನ ಸಾಹಿತ್ಯವನ್ನು ನಾವೆಲ್ಲ ಅಧ್ಯಯನಿಸಬೇಕು. ವಚನ ಸಾಹಿತ್ಯ ಅಪೂರ್ವ ಅನುಭಾವ ಸಂಪತ್ತಾಗಿದೆ. ಶರಣರ ಸತ್ಯಮಾರ್ಗವೇ ನಮಗೆ ಬೆಳಕಾಗಬೇಕು. ಶರಣರ ಬಲಿದಾನ ಸದಾ ನಮ್ಮ ಸ್ಮರಣೆಯಲ್ಲಿರಬೇಕು. ಆ ಮೂಲಕ ಬಸವಾದಿ ಶರಣರ ಬಲಿದಾನ, ತ್ಯಾಗಗಳು ಸಾರ್ಥಕಗೊಳಿಸೋಣ ಎಂದು ಗೌರಕ್ಕ ಹೇಳಿದರು.
ಇದಕ್ಕೂ ಮೊದಲು ಮಂಜುಳಾ ಹಾಸಿಲಕರ ಅವರು ಅಮುಗೆ ರಾಯಮ್ಮನವರ ವಚನಗಳ ನಿರ್ವಚನೆಗೈದರು. ಇವೇ ವಚನಗಳ ಕುರಿತಾಗಿ ಎಸ್.ಎ. ಮುಗದರವರು ಚಿಂತನೆಗೈದರು.
ದಾಸೋಹಿ ಸಂತೋಷ ನರಗುಂದ ಅವರನ್ನು ಸತ್ಕರಿಸಲಾಯಿತು. ಶರಣ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶ ಅಸುಂಡಿ, ಸುವರ್ಣ ಗಾಳಪ್ಪನವರ, ಬಿ.ವಿ. ಕಾಮಣ್ಣವರ, ಎಂ.ಬಿ. ಲಿಂಗದಾಳ, ರೇಣುಕಾ ಹಾಸಿಲ್ಕರ, ನಾಗಭೂಷಣ ಬಡಿಗಣ್ಣವರ, ಮೃತ್ಯುಂಜಯ ಜಿನಗಾ ಮತ್ತೀತರ ಶರಣ, ಶರಣೆಯರು ಉಪಸ್ಥಿತರಿದ್ದರು.