ಮಾಗಡಿ
ತಾಲ್ಲೂಕಿನ ವೀರೇಗೌಡನದೊಡ್ಡಿ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ 60ಕ್ಕೂ ಹೆಚ್ಚು ವಟುಗಳಿಗೆ ಲಿಂಗಧಾರಣೆ ನೆರವೇರಿಸಲಾಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಬೆಟ್ಟಹಳ್ಳಿ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಲಿಂಗಾಯತ ಸಮಾಜಕ್ಕೆ ಯಾವುದೇ ರೀತಿ ಸೂತಕ ಇಲ್ಲ. ಜನನ, ಮರಣ, ಹಾಗೂ ಜಾತಿ ಸೂತಕ ಇರುವುದಿಲ್ಲ ಎಂದು ಹೇಳಿದರು.
ಮಾದೇಶ್ವರ, ಸಿದ್ದಲಿಂಗೇಶ್ವರ, ವೀರಭದ್ರಸ್ವಾಮಿ ಎದೆ ಮೇಲೆ ಲಿಂಗಧಾರಣೆ ಮಾಡಿದ ಪರಿಣಾಮ ಅವರನ್ನು ಈಗ ಪೂಜೆ ಮಾಡುತ್ತಿದ್ದೇವೆ. ಇದರಿಂದ ಲಿಂಗಧಾರಣೆಗೆ ಎಷ್ಟು ಮಹತ್ವ ಇದೆ ಎಂಬುದು ತಿಳಿಯುತ್ತದೆ ಎಂದರು.
ಲಿಂಗಾಯತ ಧರ್ಮ ಜಾಗೃತಿಗಾಗಿ ಸಿದ್ದಲಿಂಗೇಶ್ವರ ಸ್ವಾಮೀಜಿ 701 ವಿರಕ್ತರ ಜತೆ ಪಟ್ಟಣಕ್ಕೆ ಪಂಚ ರಾತ್ರಿ, ಗ್ರಾಮಕ್ಕೆ ಏಕರಾತ್ರಿ ಸಂಕಲ್ಪದೊಂದಿಗೆ ಹಳ್ಳಿ -ಹಳ್ಳಿಗೆ ಹೋಗಿ ಲಿಂಗ ಸಂಸ್ಕಾರ ಮಾಡಿದರು ಎಂದರು.
ಚಕ್ರಬಾವಿ ಮರಳು ಸಿದ್ದೇಶ್ವರ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸುತ್ತೂರು ಮಠ ಲಿಂಗಾಯತ ಧರ್ಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ ಎಂದರು.
ಸೂತ್ತೂರು ಮಠದ ಪಂಚಾಕ್ಷರಿ, ಹಿತನಹಳ್ಳಿ ಮಠದ ಶ್ರೀ, ವೀರೇಗೌಡನದೊಡ್ಡಿ ಮುಖಂಡರಾದ ಪರಶಿವಮೂರ್ತಿ, ಬಸವರಾಜು, ನಾಗೇಶ್ ಇದ್ದರು.