ಬೆಳಗಾವಿ
‘ಬಸವ ಸಂಸ್ಕೃತಿ ಅಭಿಯಾನ’ವನ್ನು ಯಶಸ್ವಿಗೊಳಿಸಲು ಬಸವಭಕ್ತರು ದಾಸೋಹ ಸೇವೆ ಕಲ್ಪಿಸಬೇಕೆಂದು ನಾಗನೂರ ರುದ್ರಾಕ್ಷಿ ಮಠದ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಅವರು ರವಿವಾರ ನಗರದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಾದಿ ಶಿವಶರಣರ ಆಶಯದಂತೆ ಇಂದು ನಾಡಿನಲ್ಲಿ ಕಾಯಕ ಸಂಸ್ಕೃತಿ ಅಚ್ಚುಗೊಂಡಿದ್ದು, ಸಮಾಜದಲ್ಲಿ ಸ್ವಯಂಪ್ರೇರಿತ ದಾಸೋಹ ಸಂಸ್ಕೃತಿಯನ್ನು ಬೆಳೆಸುವ ಅನಿವಾರ್ಯತೆ ಇದೆಯೆಂದರು.
ಸಭೆಯ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ವಿಶ್ವಗುರು ಬಸವಣ್ಣನವರನ್ನು ಸರ್ಕಾರ “ರಾಜ್ಯದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮುಂದಾಳತ್ವದಲ್ಲಿ ನಾಡಿನ ಎಲ್ಲ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 11ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಭಿಯಾನದಲ್ಲಿ ಶರಣರ ವೇಷಭೂಷಣ ಸ್ಪರ್ಧೆ, ಮೆರವಣಿಗೆ, ಜಾನಪದ ಕಲಾಪ್ರದರ್ಶನ, ನಾಟಕ, ಸಂವಾದ ಸೇರಿದಂತೆ ವೇದಿಕೆ ಕಾರ್ಯಕ್ರಮಗಳಿರುತ್ತವೆ. ಜಿಲ್ಲೆಯ ಬಸವ ಭಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು, ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕರಪತ್ರವನ್ನು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯಣ್ಣವರ, ಬಿ. ಜಿ. ವಾಲಿಇಟಗಿ, ರಮೇಶ ಕಳಸಣ್ಣವರ, ಅಶೋಕ ಮಳಗಲಿ, ಡಾ. ಎಸ್. ಎಮ್. ದೊಡಮನಿ, ಸಿ. ಎಂ. ಬೂದಿಹಾಳ, ಎಂ.ಜಿ. ಗುಂಡ್ಲೂರ, ಸುಜಾತ ಮತ್ತಿಕಟ್ಟಿ, ರತ್ನಾ ಬೆಂಚನಮರ್ಡಿ
ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡು ಅಭಿಯಾನ ಸಂಘಟನೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಶರಣ ಸಿ. ಎಮ್. ಬೂದಿಹಾಳ ಸ್ವಾಗತಿಸಿದರು. ನಯನಾ ಗಿರಿಗೌಡರ ಪ್ರಾರ್ಥಿಸಿದರು. ಪ್ರಾಧ್ಯಾಪಕ ಎ.ಕೆ. ಪಾಟೀಲ ನಿರೂಪಿಸಿ ವಂದಿಸಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಲಿಂಗಾಯತ ಸಂಘಟನೆ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಲಿಂಗಾಯತ ಸೇವಾ ಸಮಿತಿ, ಲಿಂಗಾಯತ ಮಹಿಳಾ ಸಮಾಜ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಬಸವ ಸಮಿತಿ ಮತ್ತಿತರ ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು.