ಸ್ವಾರ್ಥ, ಪ್ರತಿಷ್ಠೆ, ಹಮ್ಮು ಬಿಮ್ಮು ಬಿಟ್ಟು ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವೀಗೊಳಿಸೋಣ.
ಧಾರವಾಡ
ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಐದು ತಿಂಗಳು ಬಾಕಿಯಿದೆ. ಇದನ್ನು ಒಂದು ಸರಕಾರಿ ಕಾರ್ಯಕ್ರಮದಂತೆ ಕಾಟಾಚಾರಕ್ಕೆ ನಡೆಸದೆ ಎಲ್ಲಾ ಜಿಲ್ಲೆಗಳಲ್ಲಿಯೂ ತಳ ಮಟ್ಟದಿಂದ ಬಸವ ಪ್ರಜ್ಞೆ ಮೂಡಿಸುವಂತಹ ಪ್ರಯತ್ನ ಮಾಡಬೇಕು.
ಈ ದೃಷ್ಟಿಯಿಂದ ನೋಡಿದರೆ ಹೆಚ್ಚಿನ ಸಮಯ ಉಳಿದಿಲ್ಲ. ಕೆಲಸ ತಕ್ಷಣ ಶುರುವಾಗಬೇಕು.
ಏಪ್ರಿಲ್ 1 ಧಾರವಾಡದಲ್ಲಿ ನಡೆಯಬೇಕಿದ್ದ ಅಭಿಯಾನದ ಸಭೆ ಮುಂದಕ್ಕೆ ಹೋಗಿದ್ದು ಓದಿ ಬೇಸರವಾಯಿತು. ಯಾವುದೇ ಸಭೆ ಮುಂದಕ್ಕೆ ಹಾಕುವುದು ಸಣ್ಣ ವಿಷಯವೇ. ಆದರೆ ಈ ನಿರ್ಧಾರದ ಹಿಂದಿನ ಕಾರಣಗಳು, ಒತ್ತಡಗಳು, ಭಿನ್ನಾಭಿಪ್ರಾಯಗಳು ಸಣ್ಣ ವಿಷಯವಲ್ಲ. ನಾನೀಗ ಧಾರವಾಡದಲ್ಲಿ ಇದ್ದೇನೆ. ಬೆಂಗಳೂರಿನಲ್ಲಿ ಚರ್ಚೆಯಾಗುತ್ತಿರುವಷ್ಟೇ ಅಭಿಯಾನ ಇಲ್ಲೂ ಚರ್ಚೆಯಾಗುತ್ತಿದೆ. ಇದು ಬಹಳ ಒಳ್ಳೆಯ ಬೆಳವಣಿಗೆ.
ರಾಜ್ಯದಲ್ಲಿ ಬಸವ ಸಂಘಟನಗಳು, ಬಸವನಿಷ್ಠರು ಸೇರಿ ಸಂಘಟಿಸುತ್ತಿರುವ ಮಹಾಭಿಯಾನ ಇದಾಗಿದೆ. ರಾಜ್ಯದಲ್ಲಿ ೨೦೧೭ರ ನಂತರ ಮತ್ತೊಮ್ಮೆ ಲಿಂಗಾಯತವು ವಿಜೃಂಭಿಸುವ ಒಂದು ಸುವರ್ಣಾವಕಾಶ.
ಮಠಗಳು, ಮಠಾಧೀಶರು, ಬಸವ ಸಂಘಟನೆಗಳು ಒಟ್ಟಿಗೆ ಸೇರಿ ನಡೆಸುತ್ತಿರುವ ಅಭಿಯಾನ ಇದು. ಬಸವ ಕ್ರಾಂತಿಗೆ ಎಲ್ಲ ಬಸವ ಸಂಘಟನೆಗಳು-ದಳಗಳು ಒಟ್ಟಿಗೆ ಸೇರುತ್ತಿರುವುದು ಒಂದು ಚಾರಿತ್ರಿಕ ಬೆಳವಣಿಗೆ. ನಾಡಿನ ಲಿಂಗಾಯತ ಸಮಾಜ, ಬಸವಣ್ಣನನ್ನು ನಂಬಿರುವ ಮಂದಿ, ಇದರ ಬಗೆಗೆ ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ‘ಕಾಲೆಳೆಯುವ’ ಕೆಲಸವನ್ನು ನಾವು ಯಾರೂ ಮಾಡಬಾರದು. ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಬಾರದು.
“ಕಬ್ಬಿಣ ಕೆಂಪಗೆ ಕಾದಾಗ ಅದನ್ನು ಬಡಿಯಬೇಕು” ಎನ್ನುತ್ತಾರೆ ಹಿರಿಯರು. ಲಿಂಗಾಯತದ ಪುನಶ್ಚೇತನಕ್ಕೆ ಕಾಲ ಪಕ್ವವಾಗಿದೆ. ಇದು ಕೈತಪ್ಪಿ ಹೋಗಬಾರದು.
ಕುವೆಂಪು ಹೇಳಿರುವಂತೆ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ಯಾವುದೂ ಯಕಶ್ಚಿತವಲ್ಲ. ಬಸವ ಸಂವಿಧಾನದಲ್ಲಿ ಎಲ್ಲರೂ ಸಮಾನರು. ಸಮಾನತೆಯು ಬಸವ ಸಂವಿಧಾನದ ಮೂಲದ್ರವ್ಯವಾಗಿದ್ದರೆ ಅಸಮಾನತೆಯು ಚಾತುರ್ವರ್ಣದ ಮೂಲವಾಗಿದೆ.
ಇಂತಹ ಅನಿವಾರ್ಯವಾದ ಮೌಲ್ಯವನ್ನು ಪ್ರತಿಪಾದಿಸುವ ಧರ್ಮ ಲಿಂಗಾಯತ ಧರ್ಮ. ವೀಣಾ ಬನ್ನಂಜೆಯಿರಲಿ, ಬಾಳೆಹೊನ್ನೂರ ಸ್ವಾಮಿಯಿರಲಿ, ಶ್ರೀವತ್ಸರಿರಲಿ, ಮಲ್ಲೇಪುರಂ ವೆಂಕಟೇಶ ಇರಲಿ, ವಚನ ದರ್ಶನದ ತಂಡವಿರಲಿ, ಸೇಡಂ ಇರಲಿ, ಆರ್‌ಎಸ್‌ಎಸ್ ಇರಲಿ ಎಲ್ಲರಿಗೂ ಲಿಂಗಾಯತ ಸವಾಲಾಗಿ ಬೆಳೆಯುತ್ತಿದೆ. ಬ್ರಾಹ್ಮಣ್ಯವನ್ನು ಅದರ ಜಾಗಕ್ಕೆ ತಳ್ಳುವುದಕ್ಕೆ ಇದು ಅವಕಾಶ.
ವೈಯಕ್ತಿಕ ಹಮ್ಮು ಬಿಮ್ಮುಗಳನ್ನು ಬದಿಗಿಟ್ಟು, ಸ್ವಾರ್ಥವನ್ನು ಕೈ ಬಿಟ್ಟು, ಪ್ರತಿಷ್ಠೆಯನ್ನು ದೊಡ್ಡದಾಗಿ ಮಾಡದೆ, ಅಭಿಯಾನವನ್ನು ಯಶಸ್ವೀಗೊಳಿಸೋಣ. ಈಗಾಗಲೆ ಹೇಳಿರುವಂತೆ ಇದೊಂದು ಚಾರಿತ್ರಿಕ ವಜ್ರಾವಕಾಶ. ಈ ಅವಕಾಶ ಕಳೆದುಕೊಂಡರೆ ಲಿಂಗಾಯತ ಸಮಾಜ ನಮ್ಮನ್ನು ಕ್ಷಮಿಸುವುದಿಲ್ಲ.
ಇದರ ಯಶಸ್ಸಿಗೆ ಪ್ರತಿಯೊಬ್ಬರೂ ಕೈ ಜೋಡಿಸಿ ನಿಸ್ವಾರ್ಥದಿಂದ ದುಡಿಯಬೇಕು. ಇದರ ಜವಾಬ್ದಾರಿ ಮಠಾಧೀಶರಿಗೆ ಮಾತ್ರ ಎಂದು ಹೇಳಿ ನಾವು ಸುಮ್ಮನೆ ಕೂತರೆ ಆಗುವುದಿಲ್ಲ. ಯಾರೂ ಯಾರ ಮೇಲೂ ಗೂಬೆ ಕೂರಿಸುವ ಕೆಲಸ ಬೇಡ. ತಪ್ಪಾಗಿದ್ದರೆ ತಿದ್ದಿಕೊಳ್ಳೋಣ. ಅದನ್ನೇ ದೊಡ್ಡದು ಮಾಡುವುದು ಬೇಡ. ಎನಗಿಂತ ಕಿರಿಯರಲ್ಲ ಎಂದು ಬಸವಣ್ಣನವರೇ ಅಪ್ಪಣೆ ಕೊಡಿಸಿದ್ದಾರೆ.
ಇಂದು ಬಸವಣ್ಣ ಬೆಂಕಿ ಎಂಬುದು ಸಮಾಜಕ್ಕೆ ಮನದಟ್ಟಾಗಿದೆ. ಆ ಬೆಂಕಿ ದುರುಳರನ್ನು ಸುಟ್ಟುಬಿಡುತ್ತದೆ.
ಜೈ ಅಭಿಯಾನ, ಜೈ ಮಠಾಧೀಶರ ಒಕ್ಕೂಟ. ಭಾರತ ದೇಶ-ಜೈ ಬಸವೇಶ.
ಜೈ ಬಸವ
ಲಿಂಗಾಯತರು ಒಗ್ಗಟ್ಟಾಗಿ ಬಸವ ಸಂಸ್ಕೃತಿ
ಅಭಿಯಾನ ನಡೆಸುವುದು ಇಂದಿನ ಕಾಲಘಟ್ಟದ
ಅತಿ ಜರೂರು ಕೆಲಸವಾಗಿದೆ. ಎಂಬ ಟಿ ಆರ್ ಚಂದ್ರಶೇಖರ್ ಸರ್ ಅವರ ಕಳಕಳಿ, ಸಲಹೆ
ಅರ್ಥಮಾಡಿಕೊಂಡು ಇದು ಪ್ರತಿಯೊಬ್ಬ ಬಸವ
ಅನುಯಾಯಿ, ಅಭಿಮಾನಿಯ ತನ್ನ ಕರ್ತವ್ಯವನ್ನು
ನಿಭಾಯಿಸಿ ನಾವುಗಳು ಬಸವ ಪರಂಪರೆಯ
ನಿಜ ವಾರಸುದಾರರು ಎಂದು ಹೆಮ್ಮೆಯಿಂದ
ದುಡಿಯುತ್ತಾ ಕನ್ನಡದ ಈ ಧರ್ಮವನ್ನು ಉಳಿಸುವಾ
ಬೆಳೆಸುವ, ಎಲ್ಲಾ ಬೇಧಗಳನ್ನು ಹಿಮ್ಮೆಟ್ಟಿಸುವ
ಬಸವಾದಿ ಶರಣರ ಮಕ್ಕಳ್ಳಾಗಿ ದುಡಿಯೋಣ
ಬನ್ನಿ ಶರಣ ಬಂಧುಗಳೇ 🙏🙏
ಬಸವ ಸಂಸ್ಕ್ರತಿ ಅಭಿಯಾನ ನಡೆದರೆ ,ಅದು ಲಿಂಗಾಯತ ಧರ್ಮದ ಪುನಶ್ಚೇತನವಾದಂತೆ , ಮಠಾಧೀಶರು ಎಲ್ಲ ಅಹಂ ಬಿಟ್ಟು ಧರ್ಮ ಪ್ರಸಾರದಲ್ಲಿ ಮುಂಚೂಣಿಯಲ್ಲಿರಬೇಕು.
ಮಠಾಧೀಶರು ತಮ್ಮ ಜಾತಿಯ ಸ್ವಾಮಿಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಇದು ಹೋಗಬೇಕು.
ಎಲ್ಲಾ ತರಹದ ಭಿನ್ನಾಭಿಪ್ರಾಯಗಳನ್ನು, ಹಮ್ಮು ಬಿಮ್ಮು ಬಿಟ್ಟು ಈ ಅಭಿಯಾನ ನಡೆಯಬೇಕು. ಒಂದೊಮ್ಮೆ ಅಂತಹ ಸಂದರ್ಭ ಬಂದರೆ ಅಂತಹವರು ತಾವಾಗಿಯೇ ಹೊರನಡೆಯಲಿ ಅಥವಾ ಅಂತಹವರನ್ನು ಬದಿಗೆ ಸರಿಸಿ ಅಭಿಯಾನ ಮೂನೆಡೆಯಲಿ.