ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ದೇವರ ದಾಸಿಮಯ್ಯ ವಚನ ಸಾಹಿತ್ಯ ರಚನೆಗೆ ಮುನ್ನುಡಿ ಹಾಕಿಕೊಟ್ಟರು. ಆದ್ಯ ವಚನಕಾರರು ಎಂದು ಕರೆಯಿಸಿಕೊಳ್ಳುವ ದಾಸಿಮಯ್ಯ ಅವರ ಜಯಂತಿಯನ್ನು ರಾಜ್ಯದಲ್ಲಿ ಆಚರಿಸಲಾಯಿತು. ಕೆಲವೆಡೆ ನಡೆದ ಕಾರ್ಯಕ್ರಮಗಳ ಪಕ್ಷಿ ನೋಟ.
ಮೈಸೂರು
ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರವಾದದ್ದು, ಅವರು ತಮ್ಮ ವಚನಗಳ ಮೂಲಕ ಗುರುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ. ಗುರುಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು ಎಂದು ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಎಸ್.ಲಕ್ಷ್ಮೀನಾರಾಯಣ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ದೇವರ ದಾಸಿಮಯ್ಯ ಅವರ 176 ವಚನಗಳು ನಮಗೆ ಲಭ್ಯವಾಗಿದೆ. ಆ ವಚನಗಳು ಸಿಹಿ ನುಡಿಯಿಂದ, ಒಳ್ಳೆಯ ಸಂದೇಶದಿಂದ, ಎಚ್ಚರಿಕೆಯ ಮಾತಿನಿಂದ ಹಾಗೂ ವ್ಯಂಗ್ಯದಿಂದ ಸಹ ಕೂಡಿದೆ. ಇವರು ಬಸವಣ್ಣನಿಗಿಂತ ಹಿರಿಯವರಾಗಿದ್ದರು ಎಂದು ಹೇಳಿದರು.
ಹಾಸನ
ದೇವರ ದಾಸಿಮಯ್ಯ ಅವರು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ಸಮಸ್ತ ಕುಲ ಕೋಟಿಗೆ ಸೇರಿದವರಾಗಿದ್ದಾರೆ, ಇವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ನಗರ ಸಭೆಯ ಅಧ್ಯಕ್ಷರಾದ ಚಂದ್ರೇಗೌಡ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಗರದ ಆರ್.ಸಿ ರಸ್ತೆಯಲ್ಲಿ ದೇವರ ದಾಸಿಮಯ್ಯ ಅವರ ಸರ್ಕಲ್ ನಿರ್ಮಿಸಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ. ಕ್ರಿಯೆ ಜ್ಞಾನದಿಂದ ಉತ್ತಮ ಮನುಷ್ಯರಾಗಬಲ್ಲಿರಿ ಎಂದು ದೇವರ ದಾಸಿಮಯ್ಯ ಅವರು ಹೇಳಿದ್ದಾರೆ. ಇವರು ದೇವರಿಗೆ ಪ್ರಶ್ನೆ ಮಾಡಿದ ಮಹಾನ್ ಮೇಧಾವಿ ಆಗಿದ್ದಾರೆ ಎಂದರು.
ಕೊಪ್ಪಳ
ನಮ್ಮದು ಡಾಂಬಿಕ ಭಕ್ತಿಯಾಗಿದ್ದಲ್ಲಿ ನಾವು ಮಾಡುವ ಕೆಲಸ ಅಪೂರ್ಣವಾಗುತ್ತವೆ ಎಂದು ದೇವಾಂಗ ಸಮುದಾಯ ಜಿಲ್ಲಾಧ್ಯಕ್ಷ ಶಿವಶಂಕರಪ್ಪ ಚಿನ್ನಿ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ದೇವರ ದಾಸಿಮಯ್ಯ ಜಯಂತಿ ಆಚರಿಸುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ದಾಸಿಮಯ್ಯ ಶ್ರೇಷ್ಠ ವಚನಕಾರ. ಅಂಥ ಮಹನೀಯ ನಮ್ಮ ಸಮುದಾಯದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ. ಪ್ರತಿ ವರ್ಷ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ನಡೆವಾಗ ಅವರ ಶಿಖರಕ್ಕೆ ದೇವರ ದಾಸಿಮಯ್ಯನವರು ಬಂದು ಬಟ್ಟೆ ಸುತ್ತುತ್ತಾರೆ ಎಂಬ ನಂಬಿಕೆ ಇಂದಿಗೂ ಜನರಲ್ಲಿ ಇದೆ. ಅದು ಎಲ್ಲರಿಗೂ ಕಾಣುವದಿಲ್ಲ. ಭಕ್ತಿ ಇದ್ದವರಿಗೆ ಗೋಚರಿಸುವುದಾಗಿ ಪ್ರತಿತಿ ಇದೆ ಎಂದರು.
ಕೊಳ್ಳೇಗಾಲ
ತಾಲೂಕು ಆಡಳಿತ ವತಿಯಿಂದ ಬುಧವಾರ ಪಟ್ಟಣದಲ್ಲಿ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ದೇವರ ದಾಸಿಮಯ್ಯ ಪುತ್ಥಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಪುಷ್ಪಮಾಲೆ ಅರ್ಪಿಸಿದರು. ನಂತರ ಮಾತನಾಡಿದ ಅವರು, ದೇವರ ದಾಸಿಮಯ್ಯ ಅವರ ಜೀವನವೇ ನಮಗೆ ಆದರ್ಶ. ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ತಹಸೀಲ್ದಾರ್ ಬಸವರಾಜು, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರು, ದೇವಾಂಗ ಸಮಾಜದ ಮುಖಂಡರಾದ ಅಚ್ಗಾಲ್ ನಾಗರಾಜಯ್ಯ, ವೇಣುಗೋಪಾಲ್, ದೇವರ ದಾಸಿಮಯ್ಯ ಪುತ್ಥಳಿ ನಿರ್ಮಾತೃ ಗಿರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ ಇದ್ದರು.
ಬೀದರ್
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಶ್ರೀ ದೇವರ ದಾಸಿಮಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ಅರಸೀಕೆರೆ
ತಾಲೂಕಿನ ಕಣಕಟ್ಟೆ ಹೋಬಳಿ ಚಿಕ್ಕಹಲಕೂರು ಗ್ರಾಮದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿ ಮಹೋತ್ಸವವನ್ನು ನೇಕಾರ ದೇವಾಂಗದವರು ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಭಜನಾ ಮಂಡಳಿ ವತಿಯಿಂದ ಸಡಗರ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.
ದೇವರ ದಾಸಿಮಯ್ಯ ಅವರ ಬೃಹತ್ತಾದ ಭಾವಚಿತ್ರವನ್ನು ಗ್ರಾಮದ ಬೇವಿನ ಮರದ ಕಟ್ಟೆಯ ಮೇಲೆ ವಿವಿಧ ಪುಷ್ಪ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮಲಿಂಗ ಚೌಡೇಶ್ವರಿ ಭಜನಾ ಸಂಘದ ವತಿಯಿಂದ ಅಖಂಡ ಭಜನೆ ಮಾಡುವುದರ ಜತೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಪಾನಕ, ಫಲಹಾರ ವಿತರಿಸಲಾಯಿತು.
ದೇವರ ದಾಸಿಮಯ್ಯ ಅಲ್ಲ ಶರಣರೆ ಅದು ಜೇಡರ ದಾಸಿಮಯ್ಯ.