ಅಭಿಯಾನ ಅನುಭವ: ಉತ್ತರಕನ್ನಡ ಜಿಲ್ಲೆಯಲ್ಲಿಯೂ ಸಾಗರದಂತೆ ಬಂದ ಬಸವಭಕ್ತರು

ಸಿರ್ಸಿ

ಲಿಂಗಾಯತ ಸಮಾಜ ಕಡಿಮೆಯಿರುವ ಉತ್ತರಕನ್ನಡ ಜಿಲ್ಲೆಯಲ್ಲಿಯೂ ರಾಜ್ಯದ ಗಮನ ಸೆಳೆಯುವಂತೆ ಬಸವ ಸಂಸ್ಕೃತಿ ಅಭಿಯಾನ ಮುಂಡಗೋಡದಲ್ಲಿ ಸೆಪ್ಟೆಂಬರ್ 13 ನಡೆಯಿತು.

ಜಿಲ್ಲಾ ಅಭಿಯಾನ ಸಮಿತಿಯ ಗೌರವಾಧ್ಯಕ್ಷೆ ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿ ತಮ್ಮ ಅನುಭವವನ್ನು ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.

1) ಉತ್ತರಕನ್ನಡ ಜಿಲ್ಲೆಯಲ್ಲಿ ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ? ಜನರನ್ನು ಸಂಘಟಿಸಿದ್ದು ಹೇಗೆ?

ಬಸವ ಸಂಸ್ಕೃತಿ ಅಭಿಯಾನ ಬಸವಾಭಿಮಾನಿಗಳ ಯುಗಯುಗದ ಉತ್ಸಾಹದ ಉತ್ಸವ. ಸಿರ್ಸಿಯಲ್ಲಿ ಜುಲೈ 20 ರಂದು ಬಸವಾಭಿಮಾನಿಗಳ ಹಾಗೂ ಬಸವಪರ ಸಂಘಟನೆಗಳ ಸಭೆಯನ್ನು ಪೂಜ್ಯ ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಇವರ ಸಾನಿಧ್ಯದಲ್ಲಿ, ಪೂಜ್ಯ ನಾಗಭೂಷಣ ಸ್ವಾಮಿಗಳು ಹೊಳೆಮಠ ಬನವಾಸಿ, ಪೂಜ್ಯ ಬಸವೇಶ್ವರಿ ಮಾತಾಜಿ ಬಸವಧಾಮ ಅತ್ತಿವೇರಿ ಹಾಗೂ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ರುದ್ರದೇವರಮಠ ಸಿರಸಿ ಇವರುಗಳ ನೇತೃತ್ವದಲ್ಲಿ ಸಭೆ ನಡೆಸಿ ಮುಂಡಗೋಡದಲ್ಲಿ ಅಭಿಯಾನ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಯಿತು.

ಇದರ ಜೊತೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಶಾಸಕರಾದ ವಿ.ಎಸ್. ಪಾಟೀಲ ಅವರನ್ನು, ಬಸವಧಾಮದ ಬಸವೇಶ್ವರಿ ಮಾತಾಜಿ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ತರುವಾಯ ಅಭಿಯಾನದ ಕುರಿತಾದ ಕರಪತ್ರಗಳನ್ನು ಎಲ್ಲಾ ಗ್ರಾಮಗಳಿಗೆ ಹಾಗೂ ಪ್ರತಿ ಮನೆಗೂ ತಲುಪಿಸುವಂತೆ ಕ್ರಮ ಕೈಗೊಳ್ಳಲಾಯಿತು. ಜಿಲ್ಲೆಯ ಮೂಲೆ ಮೂಲೆಗೂ ಮಾಜಿ ಶಾಸಕರು ಹಾಗೂ ಮಾತಾಜಿ ಅವರು ಭೇಟಿ ನೀಡಿ ಅಭಿಯಾನದ ಕುರಿತು ಜಾಗೃತಿಯನ್ನು ಮೂಡಿಸಿದರು.

ವಿಶೇಷವಾಗಿ ಎಲ್ಲ ಸಮಾಜದ ಮುಖಂಡರುಗಳನ್ನು ಹಾಗೂ ಜನರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಇಂತಹ ಸುವರ್ಣ ಅವಕಾಶಕ್ಕಾಗಿ ಕಾಯುತ್ತಿರುವ ಜನರು ಸಾಗರೋಪಾದಿಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು.

2) ಜನರ ಸ್ಪಂದನೆ ಹೇಗಿತ್ತು?

ಲಿಂಗಾಯತ ಸಮುದಾಯದ ಜನರು ಕಡಿಮೆ ಪ್ರಮಾಣದಲ್ಲಿ ಇರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು. ಆದರೆ ಅಭಿಯಾನದ ಬಹುತೇಕ ಜನರು ಸ್ವಯಂಪ್ರೇರಣೆಯಿಂದ ತನು ಮನ ಧನದೊಂದಿಗೆ ಭಾಗಿಯಾಗಿದ್ದು ಅಭಿಯಾನದ ಯಶಸ್ಸಿಗೆ ಕಾರಣ.

ಬಸವಪರ ಸಂಘಟನೆಗಳು, ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಮಾಜ ಸಂಘಟನೆಗಳ ಸ್ಪಂದನೆ ಉತ್ತಮವಾಗಿತ್ತು.

3) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

ಕಳೆದ 30 ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪೂಜ್ಯರು ಅಭಿಯಾನ ಹಾಗೂ ಸಮಾರಂಭದಲ್ಲಿ ಭಾಗಿಯಾಗಿದ್ದು ಇತಿಹಾಸವಾಗಿದೆ. ವಚನ ಸಾಹಿತ್ಯ ಹೊತ್ತ ಮಹಿಳೆಯರಿಂದ ಜಿಲ್ಲೆಯಲ್ಲಿ ಲಿಂಗಾಯತ ಧರ್ಮ ಗ್ರಂಥದ ಅನಾವರಣವಾಗಿದೆ.

ಬಸವಪ್ರಜ್ಞೆ ಅಬಾಲ ವೃದ್ಧರಲ್ಲಿ ಚಿಗುರಿದೆ, ಸಮಾಜ ಬಾಂಧವರಲ್ಲಿ ಒಗ್ಗಟ್ಟಿನ ಮಂತ್ರಪಠಿಸಿದೆ, ಇಂದಲ್ಲ ನಾಳೆ ಬಸವ ಭಾರತವಾಗಲು ಅಡಿಪಾಯ ಇಟ್ಟಂತಾಗಿದೆ.

4) ಅಭಿಯಾನ ಜನರ ಮೇಲೆ ಮತ್ತು ಬಸವ ಸಂಘಟನೆಗಳ ಮೇಲೆ ಮಾಡಿದ ಪರಿಣಾಮವೇನು?

ಅಭಿಯಾನದಿಂದ ಇತಿಹಾಸ ನಿರ್ಮಾಣವಾಗಿದೆ. ಜನರಲ್ಲಿ ಜಾಗೃತಿ ಮೂಡಿದೆ, ಬಸವಪರ ಸಂಘಟನೆಗಳಿಗೆ ತಮ್ಮ ಮುಖ್ಯ ಗುರಿಗಳನ್ನು ಮುಟ್ಟಲು ಶಕ್ತಿ, ಧೈರ್ಯ, ಮತ್ತಷ್ಟು ಹುಮ್ಮಸ್ಸು ತುಂಬಿದೆ.

5) ಅಭಿಯಾನದಲ್ಲಿ ಮಠಾಧೀಶರ ಒಕ್ಕೊಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?

ಮಠಾಧೀಶರ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಒಂದು ಶಿಸ್ತುಬದ್ಧ ಚೌಕಟ್ಟಿನ ಯೋಜನೆಯ ಕಾರ್ಯರೂಪವೇ ಈ ಅಭಿಯಾನ. ಅವರುಗಳು ಹಾಕಿಕೊಟ್ಟ ದಿಕ್ಸೂಚಿಯಂತೆ ಹಾಗೂ ಅವರ ಅವಿರತ ಶ್ರಮದ ಫಲವಾಗಿ ಅಭಿಯಾನ ಯಶಸ್ವಿಯಾಗಲು ಕಾರಣವಾಯಿತು.

6) ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?

ಕಲ್ಯಾಣದಲ್ಲಿ ಬಾಳಿ ಬದುಕಿದ ಬಸವಾದಿ ಶರಣರ ಸಮುದಾಯವನ್ನು ಒಟ್ಟುಗೂಡಿಸುವ ಕೆಲಸವಾಗಬೇಕಿದೆ, ಹೀಗಾಗಿ ಅಭಿಯಾನದಲ್ಲಿ ಎಲ್ಲಾ ಶರಣ ಸಮಾಜದವರು ಭಾಗಿಯಾಗುವಂತೆ ನೋಡಿಕೊಳ್ಳುವುದು ಉಚಿತ.

ಅರಿವು, ಆಚಾರ, ಅನುಭಾವಗಳಿಗೆ ಪ್ರಾಮುಖ್ಯತೆ ನೀಡಿದ ಶರಣರ ಸದಾಶಯದಂತೆ ಜನರಲ್ಲಿ ಜಾಗೃತಿ ಮೂಡಿಸುವುದು.

ಈಗಾಗಲೇ ತಾವು ಹಮ್ಮಿಕೊಂಡಂತೆ, ರೂಪಕ, ಕಿರುಚಿತ್ರ, ವಚನ ಸಂಗೀತ, ನಾಟಕ, ಉಪನ್ಯಾಸ ಮುಂತಾದವುಗಳಲ್ಲಿ ಸ್ಥಳೀಯರು ಭಾಗಿಯಾಗುವಂತೆ ಪ್ರೇರೇಪಿಸುವುದು. ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಲು ಅನುಭವ ಮಂಟಪದ ಧರ್ಮ ಸಂಸತ್ತನ್ನು ಕಾಲಕಾಲಕ್ಕೆ ಏರ್ಪಡಿಸುವುದು.

ವಚನ ವಾಂಗ್ಮಯ ಮತ್ತು ಭಾರತೀಯ ಸಂವಿಧಾನದ ನಡುವಿನ ತುಲನಾತ್ಮಕತೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪಸರಿಸುವುದು. ಭರವಸೆಯ ಬೆಳಕಾಗಿ ಅಭಿಯಾನವನ್ನು ಬಸವ ಭಾರತವಾಗಿಸಲು ಶ್ರಮಿಸುವುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *