ಅಭಿಯಾನ ಅನುಭವ: ರಾಜಕಾರಣಿಗಳಿಗೆ ಅಚ್ಚರಿ ಮೂಡಿಸಿದ ಜನ ಬೆಂಬಲ

ರಾಯಚೂರಿನಲ್ಲಿ ಬಸವತತ್ವ ವಿಸ್ತರಿಸಿದ ಬಸವ ಸಂಸ್ಕೃತಿ ಅಭಿಯಾನ

ರಾಯಚೂರು

(ವಿವಿಧ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ. ರಾಯಚೂರು ಜಾಗತಿಕ ಲಿಂಗಾಯತ ಮಹಾಸಭಾದ ಪಿ. ರುದ್ರಪ್ಪ ತಮ್ಮ ಅನುಭವ ಹಂಚಿಕೊಂಡಿದ್ದಾರೆ.)

1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ?

ಬಸವ ಸಂಸ್ಕೃತಿ ಅಭಿಯಾನ ಮಾಡುವ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯ ತಿಳಿಸಿದಾಗ ನಮ್ಮೆಲ್ಲರಿಗೆ ಒಂದು ಆತಂಕ ಕಾಡಿತ್ತು. ಇದು ಮಠಾಧೀಶರ ಅಭಿಯಾನ, ಅದರಲ್ಲಿ ಜಾಗತಿಕ ಲಿಂಗಾಯತ ಮಹಸಭಾ ಅಧ್ಯಕ್ಷರ ಜವಾಬ್ದಾರಿ ಏನು, ಇದಕ್ಕೆ ಹಣಕಾಸಿನ ವ್ಯವಸ್ಥೆ ಯಾರು ಮಾಡುತ್ತಾರೆ, ಮುಂತಾದ ಪ್ರಶ್ನೆಗಳು ಕಾಡಿದ್ದವು.

ಆದರೂ ಇಷ್ಟು ಜನ ಸ್ವಾಮೀಜಿಗಳು ಒಂದೆಡೆ ಕೂಡಿ ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡದ್ದು ಖುಷಿ ನೀಡಿತ್ತು. ಎಷ್ಟೋ ವಿರಕ್ತ ಮಾಠಾಧೀಶರು ಸಂಪೂರ್ಣವಾಗಿ ವಿರಕ್ತ ಪರಂಪರೆಯ ಕಡೆಗೆ ನಿಂತದ್ದನ್ನು ನಾವು ನೋಡಿರಲಿಲ್ಲ. ಈ ಕಾರ್ಯಕ್ಕೆ ಕೆಲಸ ಮಾಡುವದು ಅನಿವಾರ್ಯ ಎಂದು ಎಲ್ಲರೂ ಅಲ್ಲಿ ಒಪ್ಪಿಕೊಂಡೆವು.

ಈ ಬಗ್ಗೆ ಚರ್ಚಿಸಲು ರಾಯಚೂರಿನ ಬಸವ ಕೇಂದ್ರದಲ್ಲಿ ಜುಲೈ 6 ರಂದು ಸಭೆ ಮಾಡಲು ನಿರ್ಧಾರ ಮಾಡಿದೆವು. ಆದರೆ ಮಠಾಧೀಶರು ಇದರ ನೇತೃತ್ವ ವಹಿಸಬೇಕಾಗಿರುವದರಿಂದ ಅವರೇ ಸಭೆ ಮಾಡಬೇಕು, ಎಂದು ಕೆಲವರು ತಿಳಿಸಿದ ಪ್ರಯುಕ್ತ ಆ ಸಭೆಯನ್ನು ಮುಂದೂಡಲಾಯಿತು.

ಎಷ್ಟೋ ವಿರಕ್ತ ಮಾಠಾಧೀಶರು ಸಂಪೂರ್ಣವಾಗಿ ವಿರಕ್ತ ಪರಂಪರೆಯ ಕಡೆಗೆ ನಿಂತದ್ದನ್ನು ನಾವು ನೋಡಿರಲಿಲ್ಲ.

ನಂತರದಲ್ಲಿ ಬೀದರಿನಿಂದ ಭಾಲ್ಕಿ ಪೂಜ್ಯರ ದೂರವಾಣಿ ಕರೆ ಬಂದಿತು. ಅವರ ನಿರ್ದೇಶದಂತೆ ಜೂಲೈ 27ರ ಸಂಜೆ ರಾಯಚೂರಿನಲ್ಲಿ ಪೂರ್ವಭಾವಿ ಸಭೆ ಮಾಡಲು ತೀರ್ಮಾನ ಮಾಡಲಾಯಿತು.

ಈ ಕಾರ್ಯಕ್ರಮ ಲಿಂಗಾಯತ ಮಠಾಧೀಶರ ಕಾರ್ಯಕ್ರಮ ಆಗಿದ್ದರೂ ಜಿಲ್ಲೆಯ ಎಲ್ಲ ವಿರಕ್ತ ಮಠಾಧೀಶರನ್ನು ಒಗ್ಗೂಡಿಸುವ ಕೆಲಸ ಆಗಬೇಕಿತ್ತು. ಅದೇ ರೀತಿ ಎಲ್ಲರಿಗೂ ದೂರವಾಣಿ ಮಾಡಿ ಜೂಲೈ 27ರ ಪೂರ್ವಭಾವಿ ಸಭೆಗೆ ಬರಲು ಆಹ್ವಾನಿಸಲಾಯಿತು.

ಅದರಂತೆ ಎಲ್ಲ ವಿರಕ್ತಮಠದ ಪೂಜ್ಯರು ಭಾಗವಹಿಸಿದರು. ಎಲ್ಲ ಕಾಯಕ ವರ್ಗದ ಅಧ್ಯಕ್ಷರು ಸಹ ಭಾಗವಹಿಸಿದರು. ಮಾದರ ಚನ್ನಯ್ಯನ ಸಮಾಜದ ಅಧ್ಯಕ್ಷ ಶರಣ ವಿರೂಪಾಕ್ಷಿ ಅವರಂತೂ ತುಂಬಾ ಭಾವುಕರಾಗಿ ಮಾತನಾಡಿ, ಹಿಂಡನಗಲಿದ ಕರುವಂತೆ ಆಗಿದ್ದೆವು. ಈಗ ತಾಯಿಯ ಮಡಿಲಲ್ಲಿ ಸೇರಿಕೊಂಡ ಅನುಭವ ಆಗಿದೆ ಎಂದು ಹೇಳಿದ್ದು ಎಲ್ಲರ ಮನಮುಟ್ಟಿತು.

ಸಭೆಗೆ ಆರ್ಯವೈಶ್ಯ ಸಮಾಜ ಸೇರಿದಂತೆ ಎಲ್ಲ ಮುಖಂಡರು ಭಾಗವಹಿಸಿ ತಮ್ಮ ಸಹಕಾರ ಕೊಡುವದಾಗಿ ತಿಳಿಸಿದರು. ಸಭೆ ನಿರೀಕ್ಷೆ ಮೀರಿ ಯಶಸ್ವಿ ಆಯಿತು. ಆ ಸಭೆಯಲ್ಲಿ ಒಂದು ಅನುಷ್ಠಾನ ಸಮಿತಿಯನ್ನು ರಚಿಸಲಾಯಿತು. ಅದರಲ್ಲಿ ಎಲ್ಲ ವರ್ಗದ ನಾಯಕರಿಗೆ ಜವಾಬ್ದಾರಿ ನೀಡಲಾಯಿತು.

ನಂತರದಲ್ಲಿ ಪ್ರತಿ ತಾಲೂಕಿನಲ್ಲಿ ಪೂರ್ವಭಾವಿ ಸಭೆಗಳನ್ನು ಮಾಡಿ ಇದು ಎಲ್ಲ ಬಸವ ಸಂಘಟನೆಗಳ ಸಹಯೋಗದಲ್ಲಿ ನಡೆಯಬೇಕಾದ ಕೆಲಸ ಎಂದು ಮನವರಿಕೆ ಮಾಡಿಕೊಡಲಾಯಿತು.

2) ಜನರಿಂದ ನೆರವು, ಸ್ಪಂದನೆ ಹೇಗಿತ್ತು?

ರಾಯಚೂರಿನ ಶಾಸಕ ಡಾ. ಶಿವರಾಜ ಪಾಟೀಲರು ಅವರನ್ನು ಒಳಗೊಂಡಂತೆ, ಸಚಿವ ಎನ್. ಎಸ್. ಭೋಸರಾಜು, ಮಾಜಿ ಶಾಸಕ ಪಾಪಾರೆಡ್ಡಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ. ಶಾಂತಪ್ಪ, ಮಾಜಿ ಎಮ್ಮೆಲ್ಸಿ ಎನ್. ಶಂಕ್ರಪ್ಪ ಅವರನ್ನು ಮತ್ತು ಎಲ್ಲ ಪಕ್ಷದ ಹಿರಿಯ ನಾಯಕರನ್ನು ಮೊದಲು ಭೇಟಿ ಮಾಡಿದೆವು. ಅವರೆಲ್ಲರೋ ತಮ್ಮ ತುಂಬು ಹೃದಯದ ಸಹಕಾರ ನೀಡುವದಾಗಿ ತಿಳಿಸಿದರು.

ಶಾಸಕರಾದ ಡಾ. ಶಿವರಾಜ ಪಾಟೀಲರು ವೀರಶೈವ ಲಿಂಗಾಯತ ಮಹಾಸಭೆ, ರಾಯಚೂರಿನ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರನ್ನು ಕರೆಸಿ ಪ್ರಸಾದದ ಜವಾಬ್ದಾರಿಯನ್ನು ವಹಿಸಿದರು. ಮಾಜಿ ಶಾಸಕ ಪಾಪಾರೆಡ್ಡಿ ಅವರು, ನಮ್ಮೆದುರಿಗೇ ಗಂಜ್ ಕಲ್ಯಾಣ ಮಂಟಪದ ಅಧ್ಯಕ್ಷರಿಗೆ ದೂರವಾಣಿ ಮಾಡಿ, ಗಂಜ್ ಕಲ್ಯಾಣ ಮಂಟಪವನ್ನು ಈ ಮಹಾನ್ ಕಾರ್ಯಕ್ಕೆ ಯಾವುದೇ ಶುಲ್ಕ ಇಲ್ಲದೆ ನೀಡಬೇಕೆಂದು ವಿನಂತಿಸಿದರು.

ಜನರನ್ನು ಸೇರಿಸುವ ಕೆಲಸ ಬಹಳ ದೊಡ್ಡದೆಂದು ಶಾಸಕರು ಕಿವಿ ಮಾತು ಹೇಳಿದರು.

ಇಷ್ಟೆಲ್ಲ ಆದರೂ ಜನರನ್ನು ಸೇರಿಸುವ ಕೆಲಸ ಬಹಳ ದೊಡ್ಡದೆಂದು ಶಾಸಕರು ಕಿವಿ ಮಾತು ಹೇಳಿದರು. ನೀವು ಇಷ್ಟೆಲ್ಲ ಖರ್ಚು ಮಾಡಿ ಜನರನ್ನು ಹೇಗೆ ಕೂಡಿಸುತ್ತಿರಿ ಎನ್ನುವದೇ ಈಗಿರುವ ಪ್ರಶ್ನೆ ಎಂದರು. ಅವರ ಮಾತನ್ನು ನಾವು ಒಪ್ಪಲೇ ಬೇಕಾಗಿತ್ತು. ಆ ದೆಸೆಯಲ್ಲಿ ಕೆಲಸ ಮಾಡುವದು ಅನಿವಾರ್ಯವಾಗಿತ್ತು.

ರಾಯಚೂರಿನ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಕೆ. ಶಾಂತಪ್ಪ ಅವರು, ಹಿಂದುಳಿದ ವರ್ಗಗಳ ಸಭೆ ಕರೆದು ಅಲ್ಲಿ ಬಸವ ಸಂಸ್ಕೃತಿ ಬಗ್ಗೆ ತಿಳಿಸಲು ಆಹ್ವಾನ ನೀಡಿದರು. ಹಿಂದುಳಿದ ವರ್ಗಗಳ ಏಳ್ಗೆಗಾಗಿ ಬಸವಾದಿ ಶರಣರು ಮಾಡಿದ ತ್ಯಾಗದ ಬಗ್ಗೆ ತಿಳಿಸಿದಾಗ, ಅಲ್ಲಿದ್ದವರಿಗೆ ನಿಜವಾಗಿ ಲಿಂಗಾಯತ ತತ್ವಗಳ ಬಗ್ಗೆ ಅವರ ಅಭಿಮಾನ ದ್ವಿಗುಣವಾಗಿದ್ದು ಅವರ ಮಾತಿನಿಂದ ತಿಳಿದು ಬಂದಿತು.

ಇನ್ನು ಅಷ್ಟು ಜನರ ಸ್ವಾಮಿಜಿಗಳಿಗೆ, ಕಲಾವಿದರಿಗೆ, ಬರುವ ಜನರಿಗೆ ವಸತಿ, ಪ್ರಸಾದ, ಪ್ರಚಾರ, ವಾದ್ಯ ಮೇಳಗಳು ಇವೆಲ್ಲ ಖರ್ಚುಗಳು ಇದ್ದವು. ಅದನ್ನ ಹೇಗೋ ಬಸವ ತಂದೆ ನಡೆಸುತ್ತಾನೆ ಎಂದು ಮನದಲ್ಲಿ ನಿಶ್ಚಯ ಮಾಡಿಕೊಂಡು, ಎಲ್ಲ ತಾಲೂಕು ಘಟಕಗಳಿಗೆ, ಹೋಬಳಿ ಘಟಕಗಳಿಗೆ, ದೊಡ್ಡ ಊರುಗಳಿಗೆ ಭೇಟಿ ನೀಡಿ ಎರಡನೇ ಸುತ್ತಿನ ಸಭೆಗಳನ್ನ ಆಯೋಜಿಸಿದೆವು.

ಬಸವರ ತತ್ವದ ಹಿರಿಮೆಯನ್ನು ತಿಳಿಸಲು ಇದೊಂದು ಅವಕಾಶವೆಂದು ತಿಳಿದು ಎಲ್ಲಿಯೂ ಹಣ ಸಂಗ್ರಹದ ಮಾತುಗಳಿಗೆ ಒತ್ತು ಕೊಡದೆ , ಸೇರಿದ ಜನರಿಗೆ ಬಸವ ಸಂಸ್ಕೃತಿ ಬಗ್ಗೆ, ಬಸವಣ್ಣನವರ ಧರ್ಮದ ಅವಶ್ಯಕತೆ, ಇಂದಿನ ದಿನಮಾನದಲ್ಲಿ ಅಳಿಸಿ ಹೋದ ಲಿಂಗಾಯತ ಸಂಸ್ಕಾರಗಳು, ಕುಸಿಯುತ್ತಿರುವ ನೈತಿಕ ಮೌಲ್ಯಗಳು, ಚಟಗಳಿಗೆ ಬಲಿಯಾಗಿ ಕೆಡುತ್ತಿರುವ ಯುವಕರನ್ನು ಸರಿದಾರಿಗೆ ಹೇಗೆ ತರುವದು?, ಇದಕ್ಕೆ ಬಸವ ಧರ್ಮವೇ ಔಷಧ ಎನ್ನುವುದನ್ನು ಹೃದಯ ಮುಟ್ಟುವಂತೆ ತಿಳಿಸುವ ಪ್ರಯತ್ನ ಮಾಡಲಾಯಿತು.

ಈ ಕಾರ್ಯದಲ್ಲಿ ಸಂತೆಕೆಲೂರು ಘನಮಠದ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಯದ್ದಳದೊಡ್ಡಿ ವಿರಕ್ತಮಠದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು, ನಮಗೆ ಜೊತೆಯಾಗಿ ಎಲ್ಲಿ ಸಭೆ ಆಯೋಜಿಸಿ ಕರೆದರೂ ಬಂದು, ಇಂದಿನ ಸಂಸ್ಕಾರದ ಅವಶ್ಯಕತೆಗಳ ಬಗ್ಗೆ ತಿಳಿಸುತ್ತಿದ್ದರು. ಅವರ ಬೆಂಬಲವಂತೂ ಮರೆಯಲಾಗದ್ದು.

ಅದೇ ರೀತಿ ಲಿಂಗಸೂಗೂರಿನ ಸಿದ್ಧಲಿಂಗ ಸ್ವಾಮೀಜಿ, ಬಳಗನೂರಿನ ಸಿದ್ಧಬಸವ ಸ್ವಾಮೀಜಿ, ಕವಿತಾಳದ ವಿರಕ್ತ ಮಠದ ಸ್ವಾಮೀಜಿ, ಚಿಕ್ಲಪರ್ವಿಯ ಪೂಜ್ಯರು, ಮಾನವಿಯ ಕಲ್ಮಟದ ಪೂಜ್ಯರು, ಅಡವಿ ಅಮರೇಶ್ವರದ ಪೂಜ್ಯರು ಸಹ ಕೆಲವು ಸಭೆಗಳಿಗೆ ಆಗಮಿಸಿ ಜನರಿಗೆ ತಿಳುವಳಿಕೆ ನೀಡಿದರು.

ಚಿಕ್ಕಸುಗುರಿನ ಪೂಜ್ಯರು ಅಭಿಯಾನದ ವಾಹನವನ್ನು ತಮ್ಮ ಮಠದಲ್ಲಿಯೇ ಇರಿಸಿಕೊಂಡು ಬೆಳಿಗ್ಗೆ 300 ಯುವಕರ ಬೈಕ್ ರ್ಯಾಲಿಯೊಂದಿಗೆ ರಾಯಚೂರಿಗೆ ಕರೆತಂದದ್ದು ವಿಶೇಷ ಆಕರ್ಷಣೆ ಎನಿಸಿತು.

ಜನರೇ ಈ ಕಾರ್ಯಕ್ರಮಕ್ಜೆ ಹಣ ಕೂಡಿಸಿ ಸಮಿತಿಗೆ ನೀಡಿದರು

ಅಭಿಯಾನದ ಉದ್ದೇಶ ಈ ಮಟ್ಟಿಗಾದರೂ ಜನರ ಮೇಲೆ ಪ್ರಭಾವ ಬೀರಿದ್ದು ಸಂತೋಷ ನೀಡಿತು. ಬಹಳಷ್ಟು ಹಳ್ಳಿಗಳಿಂದ ಜನರು ಈ ಕಾರ್ಯಕ್ರಮಕ್ಜೆ ಹಣ ಕೂಡಿಸಿ ಸಮಿತಿಗೆ ನೀಡಿದ್ದು ಕಾರ್ಯಕ್ರಮದ ವಿಶೇಷತೆ ಎನಿಸಿತು.

ಕೆಲ ಊರುಗಳಲ್ಲಿ ಜನರು ಹಣ ನೀಡಲು ವಾಗ್ದಾನ ಮಾಡಿದ್ದರೂ ಅದನ್ನು ಸಂಗ್ರಹಿಸದೆ ಹಾಗೆಯೇ ಬಿಟ್ಟ ಮಾಹಿತಿಗಳು ಸಮಿತಿಗೆ ಮುಟ್ಟಿದವು. ಅಭಿಯಾನದ ಉದ್ದೇಶ ಹಣ ಸಂಗ್ರಹ ಅಲ್ಲ, ಅದು ಬಸವ ತತ್ವಗಳ ವಿಸ್ತರಣೆ ಎನ್ನುವ ಸಮಿತಿಯ ಧೋರಣೆ ಬಹುದೊಡ್ಡ ಸಂದೇಶವನ್ನು ನೀಡಿತು.

ಲೆಕ್ಕಪತ್ರಗಳೆಲ್ಲ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸಂಚಾಲಕರು ಮತ್ತು ಖಜಾಂಚಿಗಳ ಜಾಯಿಂಟ್ ಅಕೌಂಟನಲ್ಲಿ ಇಟ್ಟು ಪ್ರತಿಯೊಂದಕ್ಕೆ ರಸೀದಿ ನೀಡಿ, ಪಾವತಿಗಳ ಮೇಲೆ ನಿಗಾ ವಹಿಸಲಾಯಿತು.

ಜನ ಎಷ್ಟು ಹಣ ನೀಡಿದರು ಎನ್ನುವುದಕ್ಕಿಂತ ಕಾರ್ಯಕ್ರಮದಲ್ಲಿ ಜನರ ಭಾವನಾತ್ಮಕ ಭಾಗವಹಿಸುವಿಕೆ ಎಲ್ಲರಿಗೂ ತೃಪ್ತಿ ತಂದ ವಿಷಯವಾಗಿತ್ತು.

3) ಅಭಿಯಾನದ ಬಗ್ಗೆ ನಿರೀಕ್ಷೆ ಏನಿತ್ತು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ಈ ಅಭಿಯಾನದ ಕೆಲಸ ಪ್ರಾರಂಭ ಆದಕೂಡಲೇ ನೆನಪಿಗೆ ಬಂದದ್ದು ಮತ್ತೆ ಕಲ್ಯಾಣ ಕಾರ್ಯಕ್ರಮ. ಆದರೆ ವ್ಯತ್ಯಾಸ ಇಷ್ಟೇ ಇದರಲ್ಲಿ ವಿರಕ್ತ ಮಠದ ಪೂಜ್ಯರೆಲ್ಲಾ ಭಾಗವಹಿಸಿದ್ದು.

ಸ್ವಾಮೀಜಿಯವರ ತಾತ್ವಿಕ ನಿಲುವುಗಳಲ್ಲಿ ಭೇದ ಇದ್ದರೂ ಎಲ್ಲರೂ ಒಂದಾಗಿ ಬಸವಪ್ರಣೀತ ತತ್ವಗಳ ಅನುಷ್ಠಾನಕ್ಕಾಗಿ ಕಾರ್ಯ ಮಾಡಿದ್ದು ಒಂದು ಸಾಧನೆ ಎನ್ನಬಹುದು.

ಜನರಲ್ಲಿ ಸ್ವಂತ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೆಲವರಿಗಷ್ಟೇ ಇರುತ್ತದೆ, ಬಹುತೇಕರು ಸ್ವಾಮೀಜಿಗಳ ಮಾತುಗಳನ್ನು ನಂಬುತ್ತಾರೆ. ಹಾಗಾಗಿ ವಿರಕ್ತಮಠದ ಸ್ವಾಮೀಜಿಗಳೆಲ್ಲ ತಮ್ಮ ಹುಟ್ಟಿನ ಮನೆಯ (ಪೂರ್ವಆಶ್ರಮ) ನೆನಪನ್ನು ಮರೆತು ವಿಶಾಲ ಬಸವ ತತ್ವಗಳಿಗೆ ತಮ್ಮನ್ನು ಒಡ್ಡಿಕೊಂಡು ಬಹುದೊಡ್ಡ ಸಂದೇಶವನ್ನು ನೀಡಿದ್ದು ಅಭಿಯಾನದ ಸಾರ್ಥಕತೆ ಎನಿಸಿತು. ಆ ಮಟ್ಟಿಗೆ ತೃಪ್ತಿ ಇದೆ.

ನೀರಿಕ್ಷೆಗೆ ಮೀರಿ ಸ್ಪಂದಿಸಿದ ಶರಣ ಸಮೂಹದ ನಡೆ ತೃಪ್ತಿ ನೀಡಿತು.

ಅದೇ ರೀತಿ ಸ್ವಾಮೀಜಿಗಳು ಅಭಿಯಾನ ಮುಗಿದ ಮೇಲೆ ತಮ್ಮ ತಮ್ಮ ಭಾಗದಲ್ಲಿ ಬಸವ ಸಂಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅವಶ್ಯಕತೆ ಇದೆ.

ಅಭಿಯಾನದಲ್ಲಿ ಕೆಲವರ ನಡವಳಿಕೆಗಳು ಬೇಸರ ತರಿಸುವಂತೆ ಇದ್ದರೂ ಸಮಷ್ಟಿಯ ದೃಷ್ಟಿಯಿಂದ ಸುಮ್ಮನಿರುವಂತೆ ಮಾಡಿತು. ಅವರುಗಳಿಗೆ ಇದನ್ನು ಹೇಳುವವರಾರು?.

ನೀರಿಕ್ಷೆಗೆ ಮೀರಿ ಸ್ಪಂದಿಸಿದ ಶರಣ ಸಮೂಹದ ನಡೆ ತೃಪ್ತಿ ನೀಡಿತು. ಬದಲಾವಣೆ ಆಗಬೇಕಾಗಿದ್ದು ಕೈಂಕರ್ಯ ಹೊತ್ತುಕೊಂಡ ಬಸವಭಕ್ತರಲ್ಲಿ ಮತ್ತು ಬಸವ ಪ್ರಣೀತ ಸ್ವಾಮೀಜಿಗಳಲ್ಲಿ ಎನ್ನುವದು ಮನವರಿಕೆ ಆಯಿತು. ಆ ಬದಲಾವಣೆಗಳು ಬಸವ ತಂದೆಯ ಕೃಪೆಯಿಂದ ನಮಗೆ ಸಿಗಲಿ.

4) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಅಭಿಯಾನದಲ್ಲಿ ಜನರ ಮಾನಸಿಕ ಸ್ಥಿತಿಯನ್ನು ಅವಲೋಕಿಸುವ ಅವಕಾಶ ಸಿಕ್ಕಿತು. ಜನರನ್ನು ಸೇರಿಸಿದರೆ ರಾಜಕಾರಿಣಿಗಳು ಸ್ವಪ್ರೇರಣೆಯಿಂದ ಬರುತ್ತಾರೆ ಎನ್ನುವದು ತಿಳಿಯಿತು. ಬಸವತತ್ವ ಪ್ರಸಾರಕ್ಕೆ ಅಡ್ಡಿ ಎಲ್ಲಿದೆ ಎನ್ನುವದು ತಿಳಿಯಿತು. ಸರ್ವ ಜನಾಂಗದ ಜನರು ಬಸವಣ್ಣನವರ, ಶರಣರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿರುವದು ಹೋದಲ್ಲೆಲ್ಲ ಕಂಡುಬಂತು.

ಅಭಿಯಾನದ ಮೆರವಣಿಗೆ ಕಾರ್ಯಕ್ರಮದ ದಿನವೇ ಈದ್ ಮಿಲಾದ ಹಬ್ಬ ಇತ್ತು. ಗೋಶಾಲಾ ರಸ್ತೆಯಲ್ಲಿ ಸಾಮರಸ್ಯ ಪಾದಯಾತ್ರೆಗೆ ಬಂದ ಸಾವಿರಾರು ಜನರಿಗೆ ದಾರಿಯುದ್ಧಕ್ಕೂ ಮುಸ್ಲಿಂ ಸಮುದಾಯದವರು ನೀರು, ಬಿಸ್ಕತ್ ನೀಡಿ ಸಾಮರಸ್ಯ ಮೆರೆದರು.

ಜನರನ್ನು ಸೇರಿಸಿದರೆ ರಾಜಕಾರಿಣಿಗಳು ಸ್ವಪ್ರೇರಣೆಯಿಂದ ಬರುತ್ತಾರೆ ಎನ್ನುವದು ತಿಳಿಯಿತು.

5) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

ಸಮಾಜ ಒಂದು ಅಳುವ ಕೂಸು. ಸಾಮಾನ್ಯರ ಬದುಕು ಜಂಜಾಟದಲ್ಲಿ ನಲುಗಿ ಹೋಗಿರುತ್ತದೆ. ಶ್ರೀಮಂತರು ಬದುಕಿನಲ್ಲಿನ ಕಷ್ಟಗಳಿಗಾಗಿ ತತ್ವದ ಆಶ್ರಯ ಬಯಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಈ ಅಭಿಯಾನ ಯಾಕೆ ಎನ್ನುವ ಜಿಜ್ಞಾಸೆ ಕೆಲವರಿಗೆ ಆದರೆ, ಹಿಂದುಳಿದ ದಲಿತ ಪಂಗಡಗಳು ರಾಯಚೂರಿನಲ್ಲಂತೂ ಲಿಂಗಾಯತ ತತ್ವದ ಬಗ್ಗೆ, ಬಸವಣ್ಣನವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿಕೊಂಡದ್ದು ತಿಳಿಯಿತು.

ಕೆಲವು ಸಭೆಯಲ್ಲಿಯೇ ಹಿಂದುಳಿದ ವರ್ಗದವರು ನಮಗೂ ಲಿಂಗದೀಕ್ಷೆ ಕೊಡುವಿರಾ? ಎನ್ನುವ ಪ್ರಶ್ನೆ ಎತ್ತಿದರು. ಯಾರ್ಯಾರು ಇಷ್ಟಲಿಂಗದೀಕ್ಷೆ ಪಡೆಯಲು ಇಚ್ಛೆಸುವಿರೋ ಅವರಿಗೆಲ್ಲ ಮುಕ್ತವಾಗಿ ಯಾವದೇ ತಾರತಮ್ಯ ಇಲ್ಲದೆ ದೀಕ್ಷೆ ಕೊಡುವದಾಗಿ ತಿಳಿಸಲಾಯಿತು.

ಕೆಲವು ಸಭೆಯಲ್ಲಿಯೇ ಹಿಂದುಳಿದ ವರ್ಗದವರು ನಮಗೂ ಲಿಂಗದೀಕ್ಷೆ ಕೊಡುವಿರಾ ಎನ್ನುವ ಪ್ರಶ್ನೆ ಎತ್ತಿದರು.

ಇಲ್ಲಿಯವರೆಗೆ ಲಿಂಗಾಯತವನ್ನು ಜಾತಿಯಾಗಿ ಮಾಡಿಕೊಂಡು ಮಡಿವಂತಿಕೆಯಲ್ಲಿ ಇಟ್ಟುಕೊಂಡದನ್ನು ಅವರು ಪ್ರಶ್ನೆ ಮಾಡಿದಂತಿತ್ತು. ಇನ್ನು ಮುಂದೆ ಜಾತಿಯಿಂದ ಲಿಂಗಾಯತರಾಗಿ ಹುಟ್ಟಿದವರು ವಿಶಾಲ ಮನೋಭಾವ ಬೆಳೆಸಿಕೊಂಡು ಎಲ್ಲರನ್ನು ಧರ್ಮದ ಚೌಕಟ್ಟಿಗೆ ಬರಲು ಅನುವು ಮಾಡಿಕೊಡಬೇಕಾದ ವಾತಾವರಣ ಸೃಷ್ಟಿಯಾಗಿತ್ತು.

6) ಅಭಿಯಾನ ಜನರ ಮೇಲೆ, ಬಸವ ಸಂಘಟನೆಗಳ ಮೇಲೆ ಮಾಡಿರುವ ಪರಿಣಾಮವೇನು?

ಅಭಿಯಾನದಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ, ಬಸವಕೇಂದ್ರ ಎಲ್ಲ ಬಸವಪರ ಸಂಘಟನೆಗಳು ಜಾತಿ ಭೇದ ಮರೆತು ಒಗ್ಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಎಲ್ಲ ತಾಲೂಕುಗಳಿಂದ ಸಾವಿರಾರು ಜನ ಟೆಂಪೋ ಟ್ರಾಕ್ಸ್, ಕಾರು ಬೈಕುಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ಬಂದದ್ದು ರಾಜಕಾರಣಿಗಳಿಗೆ ಆಶ್ಚರ್ಯ ತರಿಸಿತು.

ಕಾರ್ಯಕ್ರಮದ ಸಂಜೆ ರಾಯಚೂರಿನ ಒಬ್ಬ ರಾಜಕಾರಿಣಿಯಂತೂ ನನ್ನ ಬಳಿ ಬಂದು ಅಭಿಯಾನದ ಯಶಸ್ಸಿಗೆ ಅಭಿನಂದನೆ ಹೇಳುತ್ತಾ, ಒಂದು ಮಾತು ಹೇಳಿದ್ದು ವಿಶೇಷವಾಗಿತ್ತು:

ನಾವು ಪಕ್ಷದ ಕಾರ್ಯಕ್ರಮಗಳಿಗೆ ಗಾಡಿಗಳನ್ನು ಊರೂರಿಗೆ ಕಳುಹಿಸಿರುತ್ತೇವೆ, ಆದರೂ ಜನ ಬರುವದಿಲ್ಲ. ಅಂತಹುದರಲ್ಲಿ ಜನ ತಮ್ಮ ಖರ್ಚಿನಲ್ಲೇ ಬಂದು, ಮತ್ತೆ ಇಲ್ಲಿ ಕಾಣಿಕೆ ಬರೆಸಿ ರಸೀದಿ ಪಡೆಯಲು ಸಾಲಿನಲ್ಲಿ ನಿಂತದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದರು.

ನಾವು ಪಕ್ಷದ ಕಾರ್ಯಕ್ರಮಗಳಿಗೆ ಗಾಡಿಗಳನ್ನು ಊರೂರಿಗೆ ಕಳುಹಿಸಿರುತ್ತೇವೆ, ಆದರೂ ಜನ ಬರುವದಿಲ್ಲ.

ಬಸವ ಸಂಘಟನೆಗಳ ಕಾರ್ಯಕರ್ತರು ಪ್ರತಿದಿನ ತಮ್ಮ ಮನೆಕೆಲಸ ಬಿಟ್ಟು ಹಳ್ಳಿ ಹಳ್ಳಿಗೆ, ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಧನ್ಯತೆ ಅನುಭವಿಸಿದರು.

ನಾವು ಪ್ರತಿ ದಿನವೂ ಅಪ್ಪ ಬಸವಣ್ಣನವರ ವಚನದ ಸಾಲುಗಳನ್ನು ನೆನಪಿಸುತ್ತಿದ್ದೆವು, “ಮಾಡುವಾತ ನಾನಲ್ಲವಯ್ಯ, ನೀಡುವಾತ ನಾನಲ್ಲವಯ್ಯ, ಬೇಡುವಾತ ನಾನಲ್ಲವಯ್ಯ, ನಿಮ್ಮ ಕಾರುಣ್ಯವಲ್ಲದೆ ಎಲೆ ದೇವಾ.——– ನಿನಗೆ ನೀ ಮಾಡಿಕೊ”ಎಂದು.

7) ಅಭಿಯಾನದಲ್ಲಿ ಮಠಾಧೀಶರ ಒಕ್ಕೂಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?

ಮಠಾಧೀಶರ ಒಕ್ಕೂಟಕ್ಕೆ ನಾವೇ ಪ್ರಾರಂಭದಲ್ಲಿ ಕೇಳಿ ಕೇಳಿ ಮಾಡಬೇಕಿತ್ತು, ನಂತರ ಅವರು ಚುರುಕಾದರು. ಅವರಿಂದ ಇನ್ನು ಹೆಚ್ಚಿನ ಬೆಂಬಲ ಅಗತ್ಯವಾಗಿತ್ತು ಎನಿಸಿತು.

ಬಸವ ಸಂಘಟನೆಗಳು ಪ್ರಾಂಜಲ ಮನಸ್ಸಿನಿಂದ ಕೆಲಸ ಮಾಡಿದವು. ಸಂಘಟನೆಗಳ ಅಲ್ಲೊಬ್ಬ ಇಲ್ಲೊಬ್ಬರು ಕೀರ್ತಿ, ಪ್ರತಿಷ್ಠೆ, ಖುರ್ಚಿ, ಮೇಲ್ಮೆ, ಅಸೂಯೆಗಾಗಿ ದೂರ ನಿಂತವರು ಕೊನೆ ಕೊನೆಗೆ ಸಹಕರಿಸಿದರು. ಅದೆಲ್ಲ ಮಾಯೆ ಸ್ವರೂಪದ ಆಟ ಎಂದು ಪರಿಗಣಿಸಿ ಬಸವ ಪಾದಕ್ಕೆ ಸಮರ್ಪಣೆ ಮಾಡಿದೆವು.

8) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?

ಪ್ರತಿ ವರ್ಷ ಈ ರೀತಿ ಮಾಡಲು ಆಗುವುದಿಲ್ಲ. ತುಂಬಾ ಹಣ ಖರ್ಚು ಬರುತ್ತದೆ, ತುಂಬಾ ಶ್ರಮ ಹಾಕಬೇಕಾಗುತ್ತದೆ. ಒಂದು ತಿಂಗಳಿಂದ ಸುಮಾರು ಬಸವಭಕ್ತರು ಸ್ವಂತ ಖರ್ಚಿನಲ್ಲಿ ಊರುಗಳಿಗೆ ತಿರುಗಿದ್ದಾರೆ.

ನಾಟಕದ ಖರ್ಚು ಭಾರ ಎನಿಸಿತು. ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಕೊಡಬೇಕಿತ್ತು.

ಮಠಾಧೀಶರ ಒಕ್ಕೂಟದವರು ಜಿಲ್ಲೆಗಳಲ್ಲಿ ಹಣಕಾಸಿನ ತೊಂದರೆ ನೋಡಿಕೊಂಡು ಕಾರ್ಯಕ್ರಮ ರೂಪಿಸಬೇಕು ಎನಿಸಿತು. ನಾಟಕದ ಖರ್ಚು ಭಾರ ಎನಿಸಿತು. ನಾಟಕಗಳ ಬದಲಾಗಿ ಆಯಾಯ ಜಿಲ್ಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟು ಮುಗಿಸಬೇಕಾಗಿತ್ತು. ಸ್ಥಳೀಯರಿಗೆ ಬೆಂಬಲ ನೀಡಿದಂತೆ ಆಗುತ್ತಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
1 Comment
  • ನಮ್ಮ ಉದ್ದೇಶ ಬಸವ ತತ್ವ ಪ್ರಚಾರ. ಇದು ಪ್ರತಿ ವರುಷ ನಡೆಯ ಬೇಕು, ಜಿಲ್ಲೆಯ ಮತ್ತೊಂದು ಸ್ಥಳಕ್ಕೆ ಹೆಡೆಮಾಡಿ ಕೊಡ ಬೇಕು. ನಮಗೆ ವೆಚ್ಚ ಇತಿಮಿತಿಯೊಳಗೆ ಇರ ಬೇಕು. ತತ್ವ ಪ್ರಸಾರ ಹೆಚ್ಚಾಗಿರ ಬೇಕು. ಕೆಲವೆ ಲಕ್ಷಗಳಲ್ಲಿ ಕಾರ್ಯಕ್ರಮ ಮುಗಿಯ ಬೇಕು. ಯಾರಿಗೂ ಭಾರವೆನ್ನಿಸ ಬಾರದು.

Leave a Reply

Your email address will not be published. Required fields are marked *