ಬೆಳಗಾವಿ
ಸಪ್ಟೆಂಬರ್ 11ರಂದು ಬೆಳಗಾವಿಗೆ ನಗರಕ್ಕೆ ಬಸವ ಸಂಸ್ಕೃತಿ ಅಭಿಯಾನ ಆಗಮಿಸಲಿದ್ದು, ಜಿಲ್ಲೆಯ ಬಸವಭಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕೆಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕರೆ ನೀಡಿದರು.

ಅವರು ಇಂದು ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ನಾಗನೂರು ರುದ್ರಾಕ್ಷಿ ಮಠದ ಸಹಯೋಗದಲ್ಲಿ ಪ್ರಭುದೇವ ಸಭಾಗ್ರಹದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಚಾರಿ ಗುರು ಬಸವ ಬಳಗದ ಜಿಲ್ಲಾ ಸಂಚಾಲಕ ಮಹಾಂತೇಶ ತೋರಣಗಟ್ಟಿ, ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ನೆರವೇರಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಖಜಾಂಚಿ ಮುರುಗೆಪ್ಪ ಬಾಳಿ, ನಗರ ಕಾರ್ಯದರ್ಶಿ ಸಿ. ಎಮ್. ಬೂದಿಹಾಳ, ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಶರಣರು ಉಪಸ್ಥಿತರಿದ್ದರು.