ಅಧಿಕಾರಕ್ಕೆ ಬಿದರಿ ಸ್ವಾಭಿಮಾನ ಗಿರವಿ ಇಡಬಾರದು: ಮಂಡ್ಯ ಲಿಂಗಾಯತ ಮಹಾಸಭಾ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ವಿಶ್ವಗುರು ಬಸವಣ್ಣನವರ ಜಯಂತಿ ಮತ್ತು ಕಾಲ್ಪನಿಕ ವ್ಯಕ್ತಿ ರೇಣುಕರ ಜಯಂತಿಯನ್ನು ಒಂದೇ ದಿನ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಆದೇಶ ಮಾಡಿರುವುದು ಖಂಡನೀಯ ಎಂದು ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ಬೆಟ್ಟಹಳ್ಳಿ ಎಂ.ಎಸ್. ಮಂಜುನಾಥ ಅಕ್ರೋಶ ವ್ಯಕ್ತಪಡಿಸಿದ್ದಾರೆ.

12ನೇ ಶತಮಾನದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದ ಸಮಾನತೆಯ ಹರಿಕಾರ, ದೀನ ದಲಿತರ, ಶೋಷಿತರ ಬದುಕಿಗೆ ಆಸರೆಯಾಗಿ ಬಂದ, ಇಷ್ಟಲಿಂಗ ಜನಕ, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರ ಜಯಂತಿ ಜೊತೆ ಬಹುದೇವರ ಆಚರಣೆ, ಮೂಢನಂಬಿಕೆ-ಕಂದಾಚಾರ, ಹೋಮ, ಶಾಸ್ತ್ರ ಹೇಳುವ ರೇಣುಕರ ಆರಾಧನೆ ಮಾಡುವುದು ಸಲ್ಲದು ಎಂದು ತಿಳಿಸಿದ್ದಾರೆ.

ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳದ ಪರಂಪರೆಯವರ ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರ ಜೊತೆ ಯಾವುದೇ ಕಾರಣಕ್ಕೂ ಬಸವಣ್ಣನವರ ಜಯಂತಿ ನಡೆಯಬಾರದು.

ಬಸವಣ್ಣನವರ ವಿಚಾರ, ವ್ಯಕ್ತಿತ್ವವನ್ನು ಮರೆಮಾಚುವ ಕೆಲಸ ಮನುವಾದಿಗಳಿಂದ ನಡೆಯುತ್ತಿದೆ. ಬಸವ ಜಯಂತಿ ದಿನ ಎರಡು ಕೊಂಬು, ನಾಲ್ಕು ಕಾಲಿನ ಎತ್ತು ತಂದು ಬಸವ ಜಯಂತಿ ಆಚರಿಸುವಂತೆ ಷಡ್ಯಂತ್ರ-ಕುತಂತ್ರ ಮಾಡುತ್ತಿದ್ದವರು ಈಗ ಬಸವಣ್ಣನವರ ವಿಚಾರಗಳನ್ನು ವಿಶ್ವ ಒಪ್ಪಿಕೊಳ್ಳುತ್ತಿದೆ, ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯವಾಗಿ ಭಾವಚಿತ್ರವನ್ನು ಇಡುವಂತೆ ಆದೇಶಿಸಿದೆ.

ಬಸವ ಜಯಂತಿಯನ್ನು ಸರ್ಕಾರದ ರಜೆ ಜೊತೆ ಎಲ್ಲಾ ಕಚೇರಿಗಳನ್ನು ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ಅರ್ಥಪೂರ್ಣವಾಗಿ ಆಚರಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ, ಇದನ್ನು ಸಹಿಸದ ಪಟಭದ್ರ ಹಿತಾಸಕ್ತಿಗಳು ಬಸವಣ್ಣ, ಬಸವಾದಿ ಶರಣರ ತತ್ವಾದರ್ಶಗಳಿಗೆ ತಳುಕು ಹಾಕುವ, ದಿಕ್ಕು ತಪ್ಪಿಸುವ ಅವಿವೇಕದ ಕೆಲಸವನ್ನು ಮಾಡದಿರಲಿ.

ಶಂಕರ್ ಬಿದರಿಯವರು ಬಸವಣ್ಣನವರ ತತ್ವ ಆದರ್ಶಗಳಿಗೆ ಒತ್ತು ಕೊಡುತ್ತಿದ್ದವರು, ಅಧಿಕಾರದ ಆಸೆಗಾಗಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳ್ಳುವ, ತಮ್ಮ ಸ್ವಾಭಿಮಾನವನ್ನು ಗಿರವಿ ಇಡುವ ಕೆಲಸವನ್ನು ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಹೀಗೆ ಮುಂದುವರೆದರೆ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಬಸವಣ್ಣನವರ ಅನುಯಾಯಿಗಳು, ಲಿಂಗಾಯತ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ. ನಿರ್ಧಾರದಿಂದ ಅವರು ಹೊರಕ್ಕೆ ಬರಲಿ. ತತ್ವಾದರ್ಶಗಳಿಗೆ ಭಿನ್ನವಾಗಿರುವವರ ಜೊತೆಯಲ್ಲಿ ಆಚರಣೆ ಬೇಡ ಎಂದು ಎಂ.ಎಸ್. ಮಂಜುನಾಥ ಒತ್ತಾಯಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
1 Comment

Leave a Reply

Your email address will not be published. Required fields are marked *