ಅಫಜಲಪುರ, ಬೆಂಗಳೂರು, ಚಿಕ್ಕಮಗಳೂರು
ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವ ಯತ್ನಾಳ್ ಅವರ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ಮುಂದುವರೆದಿದೆ.
ಚಿಕ್ಕಮಗಳೂರು: ಯತ್ನಾಳರದು ಕೀಳುಮಟ್ಟದ, ವಿವೇಕರಹಿತ ಅಸಂಬದ್ದ ಹೇಳಿಕೆ
ಈಚೆಗೆ ಬೀದರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರವರು ಬಸವಣ್ಣರವರ ಬಗ್ಗೆ ನೀಡಿರುವ ಹೇಳಿಕೆ ಖಂಡನಾರ್ಹ. ಕೂಡಲೇ ಅವರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಗಂಗಾಧರಪ್ಪ ತೀವ್ರವಾಗಿ ಆಗ್ರಹಿಸಿದ್ದಾರೆ.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ, ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಜಗಜ್ಯೋತಿ ಬಸವೇಶ್ವರರು, ಲಿಂಗಾಯತ ಧರ್ಮ ಸಂಸ್ಥಾಪಕರು, ಅವರ ಬಗ್ಗೆ ಅತ್ಯಂತ ಕೀಳುಮಟ್ಟದ ವಿವೇಕರಹಿತ ಅಸಂಬದ್ದ ಹೇಳಿಕೆಯನ್ನು ಯತ್ನಾಳರು ನೀಡಿರುತ್ತಾರೆ.
ಎಲ್ಲಾ ಜಾತಿ ವರ್ಗದವರನ್ನು ಸಮಾನವಾಗಿ ಕಂಡು ಸಮಾನತೆ ಸಾರಿದ ಮೇರು ಪರ್ವತವೇ ಆದ ವಿಶ್ವಗುರು
ಬಸವಣ್ಣನವರು ಯತ್ನಾಳರು ಹೇಳಿದಂತೆ ಹೊಳೆ ಹಾರಿದರೆಂಬ ಮಾತು ಸತ್ಯವಲ್ಲ.
ಯತ್ನಾಳರು ಯಾರನ್ನೋ ಓಲೈಸಲು, ಅಧಿಕಾರ ಲಾಲಸೆಗಾಗಿ ಯಾರನ್ನೋ ಮೆಚ್ಚಿಸಲು ತಮ್ಮ ಧರ್ಮ ಗುರುವನ್ನೇ ಅವಮಾನಿಸಿದ್ದಾರೆ. ಯತ್ನಾಳರ ಈ ಹೇಳಿಕೆ ನಡವಳಿಕೆ ಗಮನಿಸಿದಾಗ ಅವರಿಗೆ ಗುರುವಿನ ಅರಿವಾಗಲಿ, ಲಿಂಗಾಯತರಿಗೆ ಇರಬೇಕಾದ ಆಚಾರವಾಗಲಿ, ಸಂಸ್ಕಾರವಾಗಲಿ ಇಲ್ಲದಿರುವುದು ದುರದೃಷ್ಟಕರ.
ಅವರು ಅಗ್ಗದ ಪ್ರಚಾರಕ್ಕಾಗಿ ರಾಜಕೀಯ ತೆವಲಿಗಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಯಾವ
ಧರ್ಮದವರು ಅವರ ಧರ್ಮಗುರುವಿಗೆ ಅವಹೇಳನಕಾರಿ ಹೇಳಿಕೆ ನೀಡುವುದಿಲ್ಲ ಎಂಬ ಕನಿಷ್ಟ ಜ್ಞಾನ ಶಾಸಕ
ಯತ್ನಾಳರಲ್ಲಿ ಕಂಡು ಬರುತ್ತಿಲ್ಲ. ಇದರಿಂದ ಬಸವ ಭಕ್ತರಿಗೆ ಅವಮಾನಿಸಿದಂತಾಗಿದೆ.
ಇದರ ಬಗ್ಗೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಹೇಳಿಕೆಯನ್ನು ಹಿಂಪಡೆಯಬೇಕೆಂದು ಕೇಳುತ್ತಾ, ಅವರು ಕ್ಷಮೆಯಾಚಿಸದಿದ್ದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ದೊಡ್ಡಮಟ್ಟದ ಹೋರಾಟ ಮಾಡಬೇಕಾದೀತೆಂದು ಎಚ್ಚರಿಕೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲೆ ಕಾರ್ಯದರ್ಶಿ ಎಮ್ ಟಿ ಜಯಕುಮಾರ, ಶರಣೆ ಗಾಯಿತ್ರಮ್ಮ ಎಸ್. ಮಹಿಳಾ ಜಿಲ್ಲಾ ಅಧ್ಯಕ್ಷರು, ಬಾಣೂರು ಚನ್ನಪ್ಪ ಉಪಾಧ್ಯಕ್ಷರು, ಚಂದ್ರಶೇಖರಪ್ಪ ಅಧ್ಯಕ್ಷರು ತರೀಕೆರೆ ತಾಲ್ಲೂಕು, ಅಂಜೀ ಗಣೇಶ್ ಹೊಗರೇಹಳ್ಳಿ ಅಧ್ಯಕ್ಷರು ಕಡೂರು ತಾಲ್ಲೂಕು ಉಪಸ್ಥಿತರಿದ್ದರು.
ಬೆಂಗಳೂರು: ಬಸವಣ್ಣನವರ ಬಗ್ಗೆ ಹಗುರ ಮಾತು
‘ವಿಶ್ವಗುರು ಬಸವಣ್ಣನವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕ್ಷಮೆಯಾಚಿಸಬೇಕು’ ಎಂದು ರಾಷ್ಟ್ರೀಯ ಬಸವ ದಳ ಆಗ್ರಹಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷ ಬಸವಯೋಗಿ ಸ್ವಾಮೀಜಿ, ‘ಬಸನಗೌಡ ಪಾಟೀಲ ಅವರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಕೂಡಲೇ ಬಸವಾದಿ ಶರಣರು ಮತ್ತು ಅವರ ಅನುಯಾಯಿಗಳಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ರಾಷ್ಟ್ರೀಯ ಬಸವ ದಳದ ರಾಜ್ಯ ಘಟಕದ ಅಧ್ಯಕ್ಷ ಕೆ. ವೀರೇಶ, ಲಿಂಗಾಯತ ಧರ್ಮ ಮಹಾಸಭಾದ ಈಶ್ವರ ಲಿಂಗಾಯತ, ಎನ್. ಚಂದ್ರಮೌಳಿ, ಶಿವಯೋಗಿ ಸ್ವಾಮೀಜಿ, ಕೆ.ಆರ್. ಜಗದೀಶ, ಪ್ರವೀಣ ಕೊಚ್ಚಾಕಿ, ಶಿವಪ್ರಸಾದ ಪಟ್ಟೆ, ಪ್ರಕಾಶ ಜಿರ್ಗೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ಅಫಜಲಪುರ: ಯತ್ನಾಳ್ ವಿರುದ್ಧ ಕ್ರಮಕ್ಕೆ ಅಗ್ರಹ
ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಅವರು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಒತ್ತಾಯಿಸಿದೆ.
ಇತ್ತೀಚೆಗೆ ಬೀದರನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಬಸವಣ್ಣನವರು ಹೊಳಗೆ ಹಾರಿ ಪ್ರಾಣ ಬಿಟ್ಟರು ಎಂದು ಆಧಾರರಹಿತ ಅವಿವೇಕಿತನದ ಹೇಳಿಕೆ ನೀಡಿದ್ದಾರೆ, ಇದು ಅತ್ಯಂತ ಖಂಡನಾರ್ಹವಾಗಿದೆ.
ಯತ್ನಾಳ್ ಅವರು ಕೂಡಲೇ ಬೇಷರತ್ತಾಗಿ ಲಿಂಗಾಯತರಲ್ಲಿ, ಬಸವಾನುಯಾಯಿಗಳಲ್ಲಿ ಕ್ಷಮೆಯಾಚಿಸಬೇಕು.
ಬಸವಣ್ಣನವರು ಹೊಳೆಗೆ ಹಾರಿಲ್ಲ, ಜ್ಞಾನದ ಹೊಳೆ ಹರಿಸಿದ್ದಾರೆ. ಹರಕುಬಾಯಿ ಯತ್ನಾಳರು ನಾಲಿಗೆ ಹರಿಬಿಡುವ ಮೂಲಕ ತಮ್ಮ ವ್ಯಕ್ತಿತ್ವ ಏನೆಂಬುದ ತೋರಿಸಿದ್ದಾರೆ.
ಯತ್ನಾಳ್ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಬಸಣ್ಣ ಎಂ. ಗುಣಾರಿ, ತಾಲೂಕು ಅದ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಮುಖಂಡರಾದ ಅಮೃತರಾವ ಪಾಟೀಲ, ಸದಾಶಿವ ಮೇತ್ರಿ, ಶರಣಪ್ಪ ಮೇತ್ರಿ, ಸಿದ್ದನಗೌಡ ಪಾಟೀಲ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.