ಬಸವ ಜಯಘೋಷದ ನಡುವೆ ಅಕ್ಕ ಅನ್ನಪೂರ್ಣತಾಯಿ ಐಕ್ಯ ಮಂಟಪ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್:

ಇಲ್ಲಿಯ ಬಸವಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಅಕ್ಕ ಅನ್ನಪೂರ್ಣತಾಯಿ ಅವರ ಸುಂದರ ಐಕ್ಯ ಮಂಟಪವನ್ನು ಸೋಮವಾರ ಸಂಜೆ ಭಕ್ತಸಮೂಹದ ಮಧ್ಯೆ ಅನಾವರಣಗೊಳಿಸಲಾಯಿತು.

ಅಕ್ಕ ಅವರ ಲಿಂಗೈಕ್ಯ ಗದ್ದುಗೆ ಮೇಲೆ ಲಿಂಗಾಯತ ಧರ್ಮಗ್ರಂಥ ಗುರುವಚನವನ್ನು ಇರಿಸಿ ಗೌರವ ಸಲ್ಲಿಸಲಾಯಿತು.

ಅನಂತರ ಅಕ್ಕನವರ ಯೋಗಾಂಗ ತ್ರಿವಿಧಿ ಪಠಿಸಿ, ವಚನಗಳನ್ನು ಸಾಮೂಹಿಕವಾಗಿ ಓದಿ, ಜ್ಯೋತಿ ಬೆಳಗಿಸಿ, ಬಸವ ಜಯ ಘೋಷ ಹಾಕಿ, ಮಂಟಪವನ್ನು ಶರಣ ಲೋಕಕ್ಕೆ ಸಮರ್ಪಿಸಲಾಯಿತು.

ನೆರೆದ ಶರಣ- ಶರಣೆಯರು ಭಕ್ತಿ ಮೇರೆ ಮೀರಿ ಕೆಲ ಕ್ಷಣ ಭಾವುಕರಾದರು.

ಐಕ್ಯ ಮಂಟಪದ ನಿರ್ಮಾಣ ಅದ್ಭುತವಾಗಿದೆ. ಉದ್ಘಾಟನೆ ವಿಧಿ-ವಿಧಾನಗಳನ್ನು ತಾತ್ವಿಕವಾಗಿ ಯೋಜಿಸಲಾಗಿದೆ ಎಂದು ಐಕ್ಯ ಮಂಟಪ ಅನಾವರಣ ಹಾಗೂ ಮಾಸಿಕ ಶರಣ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ ಬಣ್ಣಿಸಿದರು.

ಅಕ್ಕ ಅನ್ನಪೂರ್ಣತಾಯಿ ಬಸವ ಧರ್ಮದ ಮರೆಯಲಾಗದ ಮಾಣಿಕ್ಯ. ಬೀದರ್‍ನಲ್ಲೇ ಜನಿಸಿ, ಆಕಾಶದೆತ್ತರಕ್ಕೆ ಬೆಳೆದ ಪ್ರತಿಭೆ. ಅವರ ವಾಣಿಯಲ್ಲಿ ದೈವಿಶಕ್ತಿ ಇತ್ತು ಎಂದು ಸ್ಮರಿಸಿದರು.

ಅಕ್ಕ ಅವರು ಹೇಳಿಕೊಟ್ಟ ಬಸವ ತತ್ವದಂತೆ ನಡೆದರೆ ಅವರಿಗೆ ಶಾಂತಿ ಸಿಗುತ್ತದೆ. ಅಕ್ಕ ಎಲ್ಲಿಯೂ ಹೋಗಿಲ್ಲ. ನಮ್ಮ-ನಿಮ್ಮೆಲ್ಲರ ಹೃದಯದಲ್ಲಿ ಐಕ್ಯವಾಗಿದ್ದಾರೆ. ಪ್ರಭುದೇವ ಸ್ವಾಮೀಜಿ ಮೂಲಕ ಮತ್ತೆ ಮಾರ್ಗ ತೋರುತ್ತಿದ್ದಾರೆ ಎಂದು ಶಿವಾನಂದ ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.

ನಾವೆಲ್ಲ ಗುರು ಪುತ್ರರಾಗಬೇಕು. ಗುರು ಕರುಣೆಯಾದವರ ಉದ್ಧಾರದಲ್ಲಿ ಅನುಮಾನವೇ ಇಲ್ಲ. ಅಕ್ಕ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲೆಂದೇ 770 ಪ್ರವಚನಗಳ ಸಂಕಲ್ಪ ತೊಡಲಾಗಿದೆ ಎಂದು ಸಮಾರಂಭದ ನೇತೃತ್ವವಹಿಸಿದ್ದ ಪ್ರಭುದೇವ ಸ್ವಾಮೀಜಿ ಹೇಳಿದರು.

ಯುವಜನರು ಜನ ಕಲ್ಯಾಣ, ಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ಯುವಕರು ವಚನಗಳನ್ನು ಮೈಗೂಡಿಸಿಕೊಂಡರೆ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ ಎಂದು ಮುಖ್ಯ ಉಪನ್ಯಾಸ ನೀಡಿದ ಮೈಸೂರಿನ ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ಪ್ರತಿಪಾದಿಸಿದರು.

ಬೀದರ್‍ನ ಲಿಂಗಾಯತ ಮಹಾಮಠ ವಚನಗಳ ಸಾರ ಸಾರುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉರಿ ಬರಲಿ, ಸಿರಿ ಬರಲಿ ಹೆದರದೆ ಬಸವ ತತ್ವದ ಕಾರ್ಯ ಮಾಡಲೇಬೇಕು. ಅಕ್ಕನವರ ಕನಸು ನನಸಾಗಿಸುವ ದಿಸೆಯಲ್ಲಿ ದುಡಿಯಲು ಕಂಕಣ ಕಟ್ಟಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಹುಮನಾಬಾದ್‍ನ ಬಸವ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಎಸ್.ಆರ್. ಮಠಪತಿ ಹೇಳಿದರು.

ಚರಜಂಗಮ ಸಿದ್ರಾಮಪ್ಪ ಕಪಲಾಪುರೆ, ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದದ ಮನೋಹರ ಜೀವಣಗಿ, ಸಾಹಿತಿ ರಮೇಶ ಮಠಪತಿ ಅತಿಥಿಗಳಾಗಿದ್ದರು.

ನೀಲಮ್ಮನ ಬಳಗದ ಸಹೋದರಿಯರು ಪಾರ್ಥನೆ ನಡೆಸಿಕೊಟ್ಟರು. ನಿರ್ಮಲಾ ಚಂದ್ರಶೇಖರ ಹಂಗರಗಿ ಗುರುಪೂಜೆ ನೆರವೇರಿಸಿದರು.
ಪರುಷಕಟ್ಟೆಯ ಚನ್ನಬಸವಣ್ಣ ಹಾಗೂ ರೇವಣಪ್ಪ ಮೂಲಗೆ ವಚನ ಗಾಯನ ಮಾಡಿದರು. ಕದಳಿಶ್ರೀ ಪ್ರದರ್ಶಿಸಿದ ಆಕರ್ಷಕ ವಚನ ನೃತ್ಯ ಸಭಿಕರ ಮನ ಸೆಳೆಯಿತು.

ಅಲ್ಪಾವಧಿಯಲ್ಲೇ ಆಕರ್ಷಕ ಐಕ್ಯಮಂಟಪ ನಿರ್ಮಿಸಿದ ಎಂಜಿನಿಯರ್‍ಗಳಾದ ಪ್ರಕಾಶ ಮಠಪತಿ ಹಾಗೂ ಆನಂದ ವಡ್ಡನಕೇರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಆಹಾರ ಇಲಾಖೆಯ ಉಪ ನಿರ್ದೇಶಕರಾಗಿ ವರ್ಗವಾಗಿ ಬೀದರ್‍ಗೆ ಬಂದಿರುವ ಪ್ರವೀಣ್ ಬರಗಲ್ ಅವರನ್ನು ಸತ್ಕರಿಸಿ, ಬರಮಾಡಿಕೊಳ್ಳಲಾಯಿತು.

ಚನ್ನಬಸವ ಹಂಗರಗಿ ಸ್ವಾಗತಿಸಿದರು. ಲಾವಣ್ಯ ಚನ್ನಬಸವ ಹಂಗರಗಿ ಪ್ರಸಾದ ದಾಸೋಹಗೈದರು.

Share This Article
1 Comment
  • ಶರಣು ಶರಣಾರ್ಥಿ ಅಣ್ಣಾಜಿ ಈ ಸುದ್ದಿಯ ಮೂಲಕ ಮನಕ್ಕೆ ಮುದ ನೀಡಿದ್ದೀರಿ

Leave a Reply

Your email address will not be published. Required fields are marked *