ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮ

ರವಿಕುಮಾರ. ಸಿ.ಕೆ
ರವಿಕುಮಾರ. ಸಿ.ಕೆ

ಧಾರವಾಡ :

ಯುವಜನತೆ ಹಾಗೂ ಮಕ್ಕಳಲ್ಲಿ ಶರಣಧರ್ಮ ಸಂಸ್ಕಾರದ ತಿಳುವಳಿಕೆ ಜಾಗೃತಿ ಮೂಡಿಸಿ ಸಮಾಜದ ಸ್ವಾಸ್ಥ್ಯ ಹಾಗೂ ಕುಟುಂಬದ ಸೌಖ್ಯ ಕಾಪಾಡಿಕೊಳ್ಳಲು ಪ್ರವಚನಗಳು ಸಹಕಾರಿಯಾಗಲಿವೆ ಎಂದು ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀ ವಿರುಪಾಕ್ಷ ಸ್ವಾಮಿಜಿ ಹೇಳಿದರು.

ಶಹರದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ ಸಂಸ್ಥೆಯು ಶ್ರಾವಣ ಮಾಸದ ನಿಮಿತ್ಯ ಏರ್ಪಡಿಸಿದ ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಬಸವಾದಿ ಶರಣರ ಚಿಂಥನ, ಅನುಭಾವ, ಪ್ರವಚನಗಳು ಆತ್ಮ ಪರಮಾತ್ಮ ಆತ್ಮ ಪರಮಾನಂದವಾಗುವಂತೆ ಮಾಡುತ್ತವೆ. ಶರಣ ಸಾಹಿತ್ಯದ ಸಾತ್ವಿಕ ಸದ್ವಿಚಾರ ಮಾರ್ಗದ ಗುಣಗಳನ್ನು ಪ್ರಸಾರ ಮಾಡುತ್ತಿದ್ದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾದ್ಯ. ಸಮಾಜದ ಏಳ್ಗೆಗಾಗಿ ನಾವು ಮಠಾಧೀಶರು ಕೇವಲ ಶ್ರಾವಣ ಮಾಸವಷ್ಟೇ ಅಲ್ಲದೆ ನಿರಂತರವಾಗಿ ಪ್ರವಚನ ಮಾಡುತ್ತಾ ಜನರಿಗೆ ಅರಿವು, ಆಚಾರ, ಅನುಭಾವ ನೀಡುತ್ತಿದ್ದೇವೆ. ಇಂಥಹ ವಿಚಾರ ಧಾರೆಯನ್ನು ಜನರು ತಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಂಡರೆ ಅವರ ಬದುಕು ಸಾರ್ಥಕವಾಗುತ್ತದೆ ಎಂದರು.

ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಸಮ್ಮುಖ ವಹಿಸಿ ಮಾತನಾಡಿ, ಮಾನವೀಯತೆಗೆ ಮಹತ್ವ ನೀಡಿದ್ದ ಅಕ್ಕಮಹಾದೇವಿ ಜನಮನ ಪರಿವರ್ತನೆ ಸಲುವಾಗಿ ವಚನಗಳನ್ನು ರಚಿಸಿದರೆ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಹೆತ್ತ ತಾಯಿ ಮಗುವನ್ನು ಪೊಷಿಸಿ ಬೆಳೆಸಿ ಯೋಗ್ಯ ಮನುಷ್ಯನನ್ನಾಗಿ ಮಾಡುವ ಹಾಗೆ ಭಕ್ತರ ಜೀವನದ ಭಾವಗಳಲ್ಲಿ ಕ್ರಿಯಾ ಜ್ಞಾನ ಭಾವ ರೂಪದಿಂದ ಲಿಂಗಸ್ವರೂಪಗೊಳಿಸುವ ಕೆಲಸ ಮಠಾಧೀಶರದ್ದಾಗಿದೆ. ಮನುಜರ ಹೃದಯದಲ್ಲಿ ಮೂಡುವ ಲೋಪ ದೋಷಗಳನ್ನು ಕಳೆದು ಅಂತರಂಗದ ಅರಿವಿನ ಕಣ್ಣು ತೆರೆಸಿ ಕರುಣೆ ವಿನಯ ಸಮತೆಗಳನ್ನು ಸ್ಪುರಿಸುವ ಪ್ರವಚನಗಳು ಹೆಚ್ಚಾಗಬೇಕಿದೆ. ಕಳೆದ ಒಂದು ತಿಂಗಳಿನಿಂದ ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನ ಮಾಡಿದ್ದೇನೆ, ಅದರಲ್ಲಿ ಬರುವ ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡು ಅತ್ಯುತ್ತಮ ಪ್ರಜೆಯಾಗಬೇಕು ಎಂದರು.

ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ ಸಂಸ್ಥೆ ಅಧ್ಯಕ್ಷ ಡಾ.ಎಸ್.ಆರ್. ರಾಮನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಅಷ್ಟೆ ಅಲ್ಲದೆ ನಿತ್ಯವೂ ಬಸವಾದಿ ಶರಣರ ವಚನ ಪಠಣ ಮಾಡಿದರೆ ಅವರಂತೆ ನಮ್ಮ ಬದುಕು ಸಾಗುತ್ತದೆ. ಈ ನಿಟ್ಟಿನಲ್ಲಿ ಶರಣರ ತತ್ವ, ಚಿಂಥನ, ಅನುಭಾವ, ಪ್ರವಚನಗಳನ್ನು ನಾವು ಏರ್ಪಡಿಸಲು ಸಿದ್ದ ಎಂದರು.

ಕಾರ್ಯಾಧ್ಯಕ್ಷ ಡಾ. ಕೆ.ಎಂ. ಗೌಡರ, ಗೌರವ ಕಾರ್ಯದರ್ಶಿ ಆರ್.ವೈ.ಸುಳ್ಳದ ಹಾಗೂ ಧರ್ಮದರ್ಶಿಗಳಾದ ಟಿ.ಎಸ್. ಪಾಟೀಲ, ಬಸವರಾಜ ಸೂರಗೊಂಡ, ಜಿ.ಬಿ. ಅಳಗವಾಡಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ಸುರೇಶ ಹೆಗ್ಗೇರಿ, ವಿಜಯೇಂದ್ರ ಪಾಟೀಲ, ರಾಜು ಕೋಟಿ, ವಿ.ಎಫ್.ಉಳ್ಳಾಗಡ್ಡಿ ಇದ್ದರು. ಸಮಾರಂಭದಲ್ಲಿ ಮಾತೆ ಬಸವೇಶ್ವರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share This Article
Leave a comment

Leave a Reply

Your email address will not be published. Required fields are marked *