ಹಿಂದೆ ಹಿಂಸೆ, ಗಲಭೆಯಾಗಿರುವ ಹಳ್ಳಿಕೇರಿ ಗ್ರಾಮ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.
ಅಣ್ಣಿಗೇರಿ
ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಅಣ್ಣಿಗೇರಿ ತಾಲೂಕನ್ನು ಪ್ರವೇಶಿಸದಂತೆ ಪ್ರತಿಬಂಧಕ ಆಜ್ಞೆಯನ್ನು ಜಾರಿ ಮಾಡಬೇಕೆಂದು, ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಮತ್ತು ಬಸವಪರ ಸಂಘಟನೆಗಳು ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿ ತೀವ್ರವಾಗಿ ಒತ್ತಾಯಿಸಿವೆ.
ಗುರುವಾರ ಧಾರವಾಡದಲ್ಲಿ ಬಸವ ಸಂಘಟನೆಗಳು ಕನ್ನೇರಿ ಸ್ವಾಮಿಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದ ಬೆನ್ನಲ್ಲೇ ಅಣ್ಣಿಗೇರಿಯಲ್ಲಿಯೂ ಬಸವ ಸಂಘಟನೆಗಳು ತಾಲೂಕಿನ ಅಧಿಕಾರಿಗಳನ್ನು ಭೇಟಿ ಮಾಡಿವೆ.

ಲಿಂಗಾಯತ ಮಠಾಧೀಶರ ಒಕ್ಕೂಟ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನ ರಾಜ್ಯದಲ್ಲೆಡೆ ಯಶಸ್ವಿಯಾಗಿ ನಡೆದಿದ್ದು, ಬಸವ ಸಂಸ್ಕೃತಿ ಅಭಿಯಾನ ಕುರಿತು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಟೀಕಿಸುತ್ತ, ಇದು ಮುಖ್ಯಮಂತ್ರಿ ಕೃಪಾಪೋಷಿತ ನಾಟಕ ಮಂಡಳಿಯಾಗಿದೆ.
ಅಭಿಯಾನ ಆಯೋಜಿಸಿದ್ದ ಲಿಂಗಾಯತ ಮಠಾಧಿಪತಿಗಳ ಕುರಿತು ಈ ಸೂ…. ಮಕ್ಕಳಿಗೆ ನಾನ ಹೇಳಿದ್ರ ಹೇಳಬೇಕು. ಈ ಮಕ್ಕಳಿಗೆ ….ನಿಂದ ಹೊಡೆಯಬೇಕು ಎಂದು ಅಸಭ್ಯ, ಅಶ್ಲೀಲ, ಅವ್ಯಾಚ್ಯ, ಕೀಳುಮಟ್ಟದ ಭಾಷೆಯಲ್ಲಿ ನಿಂದಿಸಿದ್ದು ಇಡೀ ನಾಡಿನ ಬಸವಭಕ್ತರಿಗೆ ತೀವ್ರ ನೋವನ್ನುಂಟು ಮಾಡಿದೆ, ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಈಗಾಗಲೇ ಸ್ವಾಮೀಜಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದ್ದನ್ನು ರಾಜ್ಯ ಉಚ್ಚ ನ್ಯಾಯಾಲಯ ಎತ್ತಿ ಹಿಡಿದರೆ, ದೇಶದ ಸರ್ವೋಚ್ಚ ನ್ಯಾಯಾಲಯ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕುರಿತು ಈ ಕೆಳಗಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ:
“ಕನ್ನೇರಿ ಮಠದ ಸ್ವಾಮೀಜಿ ಕೀಳು ಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ. ಪ್ರಚೋದನಕಾರಿ ಹೇಳಿಕೆ ನೀಡಿರುವುದು ನಿಮ್ಮ ಘನತೆಗೆ ತಕ್ಕದಲ್ಲ. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ಅದು ವಾಕ್ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿಲ್ಲ. ನೀವು ಮಾತನಾಡುವುದನ್ನು ನಿಲ್ಲಿಸಿ. ಮೌನವಾಗಿ ಯಾವುದಾದರು ಮಠದಲ್ಲಿ ಧ್ಯಾನ ಮಾಡಿ.”

ಈ ರೀತಿ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಶ್ರೀ ಸಹಜಾನಂದ ಮಹಾರಾಜರ ಸಪ್ತಾಹದ ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲು ನವಂಬರ್ 7, 2025 ರಂದು ಆಗಮಿಸಲಿದ್ದಾರೆ. ಆ ಸಮಾರಂಭದ ಬಗ್ಗೆ ನಮ್ಮ ಯಾವುದೇ ತಂಟೆ ತಕರಾರುಗಳಿಲ್ಲ. ಅದು ಅತ್ಯಂತ ಯಶಸ್ವಿಯಾಗಿ ಜರುಗಲು ನಮ್ಮ ತುಂಬು ಹಾರೈಕೆ ಇದೆ. ಆದರೆ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಇಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಲು ಹಾಗೂ ಅಣ್ಣಿಗೇರಿ ತಾಲೂಕನ್ನು ಪ್ರವೇಶಿಸಲು ನಮ್ಮ ತೀವ್ರ ವಿರೋಧವಿದೆ.
ಕೆಲವು ವರ್ಷಗಳ ಹಿಂದೆ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕರನ್ನು ತಾಲೂಕಿನ ಹಳ್ಳಿಕೇರಿ ಗ್ರಾಮಕ್ಕೆ ಕರೆಯಿಸಿದಾಗ ಅಶಾಂತಿ, ಗಲಾಟೆ ಉಂಟಾಗಿ ಮೂರು ಕೊಲೆಗಳಾಗಿದ್ದು ಈಗಾಗಲೇ ಗೊತ್ತಿರುವ ವಿಷಯ. ಈ ಕಾರಣದಿಂದ ತಾಲೂಕಿನಲ್ಲಿ ಹಳ್ಳಿಕೇರಿ ಗ್ರಾಮ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.

ಸಮುದಾಯದ ಅಶಾಂತಿಗೆ ಕಾರಣರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಈ ಗ್ರಾಮಕ್ಕೆ ಬರುತ್ತಿರುವುದು ತೀವ್ರ ಆಘಾತಕಾರಿಯಾಗಿದೆ. ಈ ಸ್ವಾಮೀಜಿ ಆಕ್ರೋಶಗೊಂಡ ಬಸವಪರ ಸಂಘಟನೆಗಳ ಪ್ರತಿರೋಧ ಎದುರಿಸಬೇಕಾಗುತ್ತದೆ.
ಕಾರಣ ಮುನ್ನೆಚ್ಚರಿಕೆ ಕ್ರಮಗಳು ಅತ್ಯವಶ್ಯವಾಗಿದ್ದು ಈ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಅಣ್ಣಿಗೇರಿ ತಾಲೂಕಿಗೆ ಪ್ರವೇಶಿಸಬಾರದು ಎಂದು ನಿರ್ಬಂಧಿಸಿ ಶಾಶ್ವತವಾಗಿ ಆದೇಶ ಮಾಡಲು ವಿನಂತಿಸುತ್ತೇವೆ. ತಾವು ಈ ಕೂಡಲೇ ಆದೇಶ ಮಾಡದಿದ್ದರೆ ಮುಂದೆ ನಡೆಯುವ ಘಟನೆಗಳಿಗೆ ಸರಕಾರವೇ ಜವಾಬ್ದಾರಿಯಾಗುತ್ತದೆ. ತಾವು ಅವರ ಪ್ರವೇಶವನ್ನು ತಾಲೂಕಿಗೆ ನಿರ್ಬಂಧಿಸಿ ಮುಂದಾಗುವ ಸಂಭವನೀಯ ಅನಾಹುತಗಳನ್ನು ತಡೆಗಟ್ಟಲು ಆದೇಶ ಹೊರಡಿಸುತ್ತೀರೆಂದು ಅದಮ್ಯ ವಿಶ್ವಾಸ ಹೊಂದಿದ್ದೇವೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಮನವಿಪತ್ರ ಸಲ್ಲಿಸುವ ಮುಂಚೆ ಜಾ.ಲಿಂ. ಮಹಾಸಭಾ ತಾಲ್ಲೂಕು ಅಧ್ಯಕ್ಷ ಚಂಬಣ್ಣ ಹಾಳದೋಟರ ಹಾಗೂ ಜಿಲ್ಲಾ ಉಪಾಧ್ಯಕ್ಷ ಪ್ರೊ. ಎಸ್.ಎಸ್. ಹರ್ಲಾಪುರ ಮಾತನಾಡಿದರು. ಮನವಿಪತ್ರ ಸ್ವೀಕರಿಸಿದ ತಹಶೀಲ್ದಾರ ಮಾತನಾಡುತ್ತ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ವೀರೇಶ ಶಾನುಭೋಗರ, ಕಿರಣ ಬೂದಿಹಾಳ, ಎ.ವಿ. ಶೆಟ್ಟರ, ಸುಹಾಸ ನವಲಗುಂದ, ಚಂದ್ರಶೇಖರ ಕೊಟ್ಟೂರು, ಮಲ್ಲಿಕಾರ್ಜುನ ಸುರಕೋಡ, ನಿಂಗಪ್ಪ ಯಳವತ್ತಿ, ಶೇಖಣ್ಣ ಉಪ್ಪಿನ, ಎಂ. ಆರ್. ಕುರಹಟ್ಟಿ, ಶಿವಯೋಗಿ ಲಿಂಬಿಕಾಯಿ, ಯತೀಶ ಹಾಳದೋಟರ, ಚಂದ್ರಶೇಖರ ಮುಂಡರಗಿ, ಮುರುಗೇಶ್ ಬಳೆಗಾರ, ಹನುಮಂತಪ್ಪ ಡಬರಿ, ಬಿ.ಆರ್. ದಿವಟರ, ಎನ್.ಬಿ. ಬೀರಣ್ಣವರ, ರಾಜು ಮುಂಡರಗಿ, ನಾಗರಾಜ ಬಣಗಾರ, ದೇವಪ್ಪ ರಾಯನಾಳ, ಲಕ್ಷ್ಮಣ ಹೊಸಳ್ಳಿ, ಡಾ. ಶಶಿಧರ ಹರ್ಲಾಪುರ, ಬಸವರಾಜ ಕುರಹಟ್ಟಿ, ಸಿ.ಎಸ್. ಹೊಳೆಯಣ್ಣವರ, ಮಂಜುನಾಥ ಹಡಪದ, ಶಿವಪ್ಪ ಕುರಹಟ್ಟಿ, ಸಿದ್ದಲಿಂಗೇಶ ತುರಕಾಣಿ, ಬಸವರಾಜ ಬಂಗಾರಶೆಟ್ಟಿ, ಕೆ.ಡಿ. ಬಡಿಗೇರ, ಎಸ್.ವಿ. ಪಾಟೀಲ, ಭಗವಂತಪ್ಪ ಪುಟ್ಟಣ್ಣವರ ಮತ್ತಿತರರು ಹಾಜರಿದ್ದರು.
 
							 
			     
			
 
                                