ಬೀದರ
ಹನ್ನೆರಡನೆಯ ಶತಮಾನದ ಶರಣರು ಅನುಭಾವಿಗಳಾಗಿದ್ದರು. ಅನುಭವ ಮಂಟಪ ಅನುಭಾವಿಗಳ ಕೂಟವಾಗಿತ್ತು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಕಾಂತ ಪಟ್ನೆ ಹೇಳಿದರು.
ನಗರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಆರನೇ ದಿನವಾದ ಮಂಗಳವಾರ ನಡೆದ ಅನುಭವ ಮಂಟಪದ ಅನುಭಾವಿಗಳು ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅನುಭವ ಮಂಟಪದಲ್ಲಿ ಎಲ್ಲರೂ ಸಮಾನರೇ. ಗುರು-ಶಿಷ್ಯರೆಂಬ ಭೇದಕ್ಕೂ ಅವಕಾಶ ಇರಲಿಲ್ಲ. ಅಲ್ಲಿ ಲೋಕ ಕಲ್ಯಾಣಾರ್ಥ ಚರ್ಚೆಗಳು ನಡೆಯುತ್ತಿದ್ದವು ಎಂದು ತಿಳಿಸಿದರು. ಅನುಭವ ಮಂಟಪದ ಮಂಥನದಲ್ಲಿ ಮೂಡಿ ಬಂದ ನವನೀತವೇ ವಚನಗಳು.
ವಚನಗಳಲ್ಲಿ ಸಕಲ ಸಮಸ್ಯೆಗಳಿಗೂ ಪರಿಹಾರ ಇದೆ. ವಿಜ್ಞಾನವನ್ನು ಮೀರಿಸುವ ವಿಚಾರಗಳಿವೆ. ಜೀವ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು, ಸೃಷ್ಟಿ ರಚನೆ ಹೇಗಾಯಿತು ಎಂಬಿತ್ಯಾದಿಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ, ವಚನಗಳಲ್ಲಿ ಪ್ರತಿಯೊಂದಕ್ಕೂ ಸಮರ್ಪಕ ಉತ್ತರವಿದೆ ಎಂದು ವಚನಗಳನ್ನು ಉದಾಹರಿಸಿ ವಿವರಿಸಿದರು. ಶರಣರು ನುಡಿದಂತೆ ನಡೆದು ತೋರಿದ ಕಾರಣ ಅವರ ವಚನಗಳು ಹೃದಯಕ್ಕೆ ತಟ್ಟುತ್ತವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಸಮಯ ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ಆಯುಷ್ಯ ವ್ಯರ್ಥವಾಗಬಾರದೆಂದರೆ ಈಗಲೇ ಸಾಧನೆಯತ್ತ ಮುಖ ಮಾಡಬೇಕು ಎಂದು ತಿಳಿಸಿದರು.
ನಿಂದೆ, ಚಾಡಿ ಮಾತುಗಳಿಗೆ ಕಿವಿಗೊಟ್ಟರೆ ಅದು ಕಿವಿಯಾಗದೆ, ಕಸದ ತೊಟ್ಟಿಯಾಗುತ್ತದೆ. ಕಿವಿ ಪ್ರಸಾದಲಿಂಗವಾಗಬೇಕಾದರೆ ಶಿವಾನುಭವ ಕೇಳಬೇಕು. ಹೊತ್ತು ಹೋಗದ ಮುನ್ನ ಎಚ್ಚರರಾಗಿ ಶಿವಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಅನುಭಾವಿಗಳು, ಚಿಂತಕರು ಸೇರಿ ಸಾಮೂಹಿಕವಾಗಿ ಚಿಂತನ-ಮಂಥನಗೈಯಲು, ಬದುಕು ಸಾರ್ಥಕಪಡಿಸಿಕೊಳ್ಳಲು ಅನುಭಾವ ಮಂಟಪ ರೂಪಿಸಿದರು. ಅದೇ ಇಂದಿನ ಪ್ರಜಾಪ್ರಭುತ್ವಕ್ಕೆ ಮೂಲವಾಯಿತು ಎಂದು ಬಣ್ಣಿಸಿದರು.
ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಮಾತನಾಡಿ, ನವದೆಹಲಿಯಲ್ಲಿ ನಿರ್ಮಾಣವಾದ ಸಂಸತ್ ಭವನಕ್ಕೆ ಅನುಭವ ಮಂಟಪವೇ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ತಜ್ಞ ವಿ.ಆರ್. ಪಾಟೀಲ ಮಾತನಾಡಿ, ಮಹಿಳಾ ಸಬಲೀಕರಣ, ಕಾಯಕ, ದಾಸೋಹಗಳು ಬಸವಣ್ಣನವರ ನಾವೀನ್ಯತೆಗಳಾಗಿವೆ. ಅನುಭವ ಮಂಟಪದಲ್ಲಿ ಎಲ್ಲ ವಿಷಯಗಳ ವಿಮರ್ಶೆ ನಡೆಯುತ್ತಿತ್ತು ಎಂದು ಹೇಳಿದರು.
ನೀಲಮ್ಮ ಬಳಗದ ಅಶ್ವಿನಿ ಶ್ರೀಕಾಂತ ಅವರ ವಚನ ಗಾಯನ ಗಮನ ಸೆಳೆಯಿತು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕಲ್ಲಪ್ಪ ಡಿಗ್ಗೆ, ನಿವೃತ್ತ ಕೃಷಿ ಅಧಿಕಾರಿ ನಾಗನಾಥ ಬಸನಾಳೆ, ಉದ್ಯಮಿ ಚನ್ನಬಸಪ್ಪ ಹಂಗರಗಿ, ಸಾಹಿತಿ ರಮೇಶ ಮಠಪತಿ, ನೀಲಮ್ಮನ ಬಳಗದ ಶ್ರೀದೇವಿ ಶರಣಬಸವ ಮಠಪತಿ ಇದ್ದರು.
ಶಾಂತಕುಮಾರ ಮಠಪತಿ ವಚನ ಪಠಣ ಮಾಡಿದರು. ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ನಡೆಸಿಕೊಟ್ಟರು. ಶಿವಾನಿ ರೇವಣಸಿದ್ಧ ಗಣಾಚಾರಿ ಭಕ್ತಿ ದಾಸೋಹಗೈದರು. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ ಸ್ವಾಗತಿಸಿದರು. ಲಿಂಗಾಯತ ಸೇವಾ ದಳದ ಬಸವಪ್ರಸಾದ ಹಳ್ಳೇರ ನಿರೂಪಿಸಿದರು.

Fine.