ಅಥಣಿ ಶ್ರೀ, ಬಸವ ಸೈನ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಲು ವಿತರಣೆ

ಮಂಜು ಕಲಾಲ
ಮಂಜು ಕಲಾಲ

ಬಸವನಬಾಗೇವಾಡಿ

‘ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ಬಸವ ಪಂಚಮಿಯಂದು ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ’ ಎಂದು ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬಸವ ಪಂಚಮಿ ಹಬ್ಬದ ನಿಮಿತ್ತ ಬಡ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾದ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕು’ ಎಂದರು.

‘ಬಡ ಮಕ್ಕಳು, ಅನಾಥರು ಹಾಗೂ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಾಲು ಹಂಚುವ ಮೂಲಕ ರಾಷ್ಟ್ರೀಯ ಬಸವಸೈನ್ಯ ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೊರಬರಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ವಿಶ್ವಗುರು ಬಸವಣ್ಣನವರು ಶ್ರಾವಣ ಪಂಚಮಿಯ ದಿನದಂದು ಲಿಂಗ್ಯಾಕ್ಯರಾದ ದಿನವನ್ನು ಬಸವ ಪಂಚಮಿ ದಿನವನ್ನಾಗಿ ಸುಮಾರು ಇಪ್ಪತೈದು ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ, ಜನರಲ್ಲಿ ಕಂದಾಚಾರ ಮೌಢ್ಯದ ವಿರುದ್ಧ ಜಾಗೃತಿ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ತಾಲೂಕ ಅಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಸಂಗಮೇಶ ಓಲೇಕಾರ, ಶ್ರೀಕಾಂತ ಕೊಟ್ರಶೆಟ್ಟಿ, ರವಿ ರಾಠೋಡ, ಸುನೀಲ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ಲಾಲು ಕೊರಬು, ಮಹೇಶ ಹಿರೇಕುರಬರ, ಸಂಗಮೇಶ ಜಾಲಗೇರಿ, ನಂದೀಶ ಪಾಟೀಲ, ಮಂಜು ಜಾಲಗೇರಿ, ಅರುಣ ಗೊಳಸಂಗಿ, ಮುತ್ತು ಮಿಣಜಗಿ, ಡಾ. ಸಾಕಿರ್ ಪಟೇಲ್, ಡಾ. ಬಸವರಾಜ ಮುತ್ತತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *