ವೈದಿಕತೆ ನಿರಾಕರಿಸಿದ ಶರಣರು: ಕಾಡಸಿದ್ದೇಶ್ವರರ ವಚನಗಳು

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.

ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ಶರಣ ಕಾಡಸಿದ್ದೇಶ್ವರ ಅವರ ಕೆಲವು ವಚನಗಳು:

ವೇದ, ಶಾಸ್ತ್ರ, ಪುರಾಣ, ಆಗಮಗಳನ್ನು ಓದಿದವರು ಅಯೋಗ್ಯರು

ವೇದವನೋದುವರೆಲ್ಲ ಬಂಜೆಯ ಮಕ್ಕಳು.
ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು.
ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು.
ಆಗಮವ ನೋಡುವರೆಲ್ಲ ಹಾರುತಿಯ ಮಕ್ಕಳು.
ತರ್ಕತಂತ್ರಗಳ ನೋಡಿ ಹೇಳುವರೆಲ್ಲ
ವೈದ್ಯಗಾರತಿಯ ಮಕ್ಕಳು.
ಇಂತೀ ವೇದಾಗಮಶಾಸ್ತ್ರಪುರಾಣ
ತರ್ಕತಂತ್ರಂಗಳೆಲ್ಲ ಕೇಳಿ ಆಚರಿಸುವವರೆಲ್ಲ
ಡೊಂಬಜಾತಕಾರ್ತಿಯ ಮಕ್ಕಳು.
ಇಂತಪ್ಪ ಜಡಮತಿ ವ್ರತಭ್ರಷ್ಟ ಮೂಳಹೊಲೆಯರಿಗೆ
ಭವಬಂಧನ ಎಂದೂ ಹಿಂಗದು, ಮುಕ್ತಿದೋರದು.
ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ ವಿಷ್ಣು ರುದ್ರ
ಮೊದಲಾದ ದೇವತೆಗಳಿಗೆ ಮುನ್ನವೇ ಭವಹಿಂಗದು,
ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಅನ್ಯ ದೇವರಿಗೆ ನಿಷ್ಠೆಯಿಂದ ಇರುವುದು ಎಂದರೆ ಹಾದರ ಮಾಡಿದಂತೆ

ಬ್ರಹ್ಮಂಗೆ ಕಾಲಕೊಟ್ಟು, ವಿಷ್ಣುವಿಂಗೆ ಕೈಯಕೊಟ್ಟು,
ರುದ್ರಂಗೆ ತಲೆಯಕೊಟ್ಟು,
ಉಳಿದ ಪರುಷರಿಗೆ ಸರ್ವಾಂಗವನು ಕೊಟ್ಟು,
ಹಾದರ ಮಾಡಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಇಷ್ಟಲಿಂಗ ದೀಕ್ಷೆ ಪಡೆದು ತೀರ್ಥಯಾತ್ರೆಗೆ ಹೋಗುವುದು ತಪ್ಪು

ಪುಣ್ಯಕ್ಷೇತ್ರಯಾತ್ರೆ ಪುಣ್ಯತೀರ್ಥಸ್ನಾನವ ಮಾಡಬೇಕೆಂಬಿರಿ.
ಮರ್ತ್ಯಲೋಕದ ಮಹಾಗಣಂಗಳು
ನೀವು ಬಲ್ಲಾದರೆ ಪೇಳಿ, ಅರಿಯದಿದ್ದರೆ ಕೇಳಿರಯ್ಯ.
ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ
ಸರ್ವಾಂಗಲಿಂಗಮಯವಾದ
ಒಬ್ಬ ಶಿವಭಕ್ತನ ದರ್ಶನವಾದವರಿಗೆ
ಅನಂತಕೋಟಿ ಪುಣ್ಯ ಫಲದೊರಕೊಂಬುವದು.
ಅದೆಂತೆಂದೊಡೆ :
ಆತನ ಮಂದಿರವೇ ಶಿವಲೋಕ.
ಆತನ ಕಾಯವೇ ಸತ್ಯಲೋಕ.
ಆತನ ಅಂಗದ ಮೇಲೆ ಇರುವ ಲಿಂಗವೇ
ಅನಾದಿಪರಶಿವಲಿಂಗ,
ಆತನ ಅಂಗಳವೇ ವಾರಣಾಸಿ.
ಅಲ್ಲಿ ಮುನ್ನೂರಾ ಅರುವತ್ತುಕೋಟಿ ಕ್ಷೇತ್ರಂಗಳಿರುವವು.
ಆತನ ಬಚ್ಚಲವೇ ಗಂಗಾತೀರ.
ಅಲ್ಲಿ ಮುನ್ನೂರರುವತ್ತುಕೋಟಿ ತೀರ್ಥಂಗಳಿರ್ಪವು.
ಇಂತಪ್ಪ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು,
ವಿಚಾರಿಸಿ ಕೊಳ್ಳಲರಿಯದೆ ತೀರ್ಥಕ್ಷೇತ್ರವೆಂದು
ತಿರುಗುವ ವ್ರತಭ್ರಷ್ಟ ಅನಾಚಾರಿ
ಮೂಳಹೊಲೆಯರಿಗೆ ನಾನೇನೆಂಬೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಸನಾತನ ಧರ್ಮದಲ್ಲಿರುವ ವಾರ, ತಿಥಿ, ವ್ರತ ಆಚರಣೆಗಳನ್ನೂ ತಿರಸ್ಕರಿಸಿ

ದಿನಚರಿ ಮಾಸದೊಳಗೆ ಏಳು ವಾರದೊಳಗೆ
ಸೋಮವಾರ ಉಪವಾಸ ಮಾಡಬೇಕೆಂಬಿರಿ.
ದ್ವಾದಶಮಾಸದೊಳಗೆ ಶ್ರಾವಣಸೋಮವಾರ
ಉಪವಾಸಮಾಡಬೇಕೆಂಬಿರಿ.
ಮಾಘಮಾಸದ ಚತುರ್ದಶಿ ಉಪವಾಸ
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂಬಿರಿ.
ಇಂತೀ ವಾರ, ಮಾಸ, ತಿಥಿಯಲ್ಲಿ
ಅನ್ನ ಉದಕವ ತೊರೆದು, ಉಪವಾಸ ಮಾಡಿ,
ಆತ್ಮವ ಬಳಲಿಸಿ, ತನುವನೊಣಗಿಸಿ,
ನೀವು ವ್ರತವನಾಚರಿಸಿದಡೆ
ನಿಮ್ಮ ಆತ್ಮದ್ರೋಹವು ಆ ದೇವತೆಗಳಿಗೆ ತಾಕಿ
ಭವಭವದಲ್ಲಿ ಬೀಳುವರು.
ಇದು ಕಾರಣವಾಗಿ ಉಪವಾಸ ಮಾಡಲಾಗದು.
ಉಪವಾಸ ಮಾಡಿದಲ್ಲಿ ಪ್ರಯೋಜನವಿಲ್ಲ.
ಅದೆಂತೆಂದಡೆ: ಉಂಡುಟ್ಟು ಲಿಂಗವ ಪೂಜಿಸಬೇಕು.
ಉಣಿಸಿ ಉಡಿಸಿ ಜಂಗಮವನರ್ಚಿಸಬೇಕು.
ಕೊಟ್ಟು ಕೊಂಡು ಗುರುವನರ್ಚಿಸಬೇಕು.
ಇಂತೀ ತ್ರಿವಿಧದ ಭೇದ ಬಲ್ಲರೆ
ಉಪವಾಸವ ಮಾಡಬಲ್ಲರೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ದೇವರ ಹುಡುಕಬೇಡಿ, ದೇವರು ನಮ್ಮೊಳಗೇ ಇದ್ದಾನೆ

ದೇವರು ದೇವರು ಎಂದು ಬಳಲುತ್ತಿರ್ಪರು
ಬ್ರಹ್ಮಾಂಡದ ಜನರೆಲ್ಲರು.
ಅದೇನು ಕಾರಣವೆಂದಡೆ-
ತಾವೇ ದೇವರೆಂಬ ನಿಲುಕಡೆಯನರಿಯದೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ದ್ವಾದಶಿ, ಚತುರ್ದಶಿ, ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ಎಂದು ಉಪವಾಸ ಮಾಡುವವರು ಮೂಢರು

ದ್ವಾದಶಮಾಸ, ಚತುದರ್ಶಿ,
ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ
ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ,
ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭಿಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ
ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ
ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ
ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ
ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ
ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಕಲ್ಲು, ಕಟ್ಟಿಗೆ ದೇವರುಗಳು ನಾಶವಾಗುತ್ತವೆ

ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ?
ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ?
ಎಲಾ ಮರುಳಗಳಿರಾ, ಕಲ್ಲು ದೇವರೆಂಬಿರಿ,
ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ?
ಕಟ್ಟಿಗೆ ದೇವರೆಂಬಿರಿ,
ಕಟ್ಟಿಗೆ ದೇವರೆಂದರೆ ಅಗ್ನಿಯಿಂದ ಪ್ರಳಯವಾಗದೆ ?
ಮಣ್ಣು ದೇವರೆಂಬಿರಿ,
ಮಣ್ಣು ದೇವರಾದಡೆ ಜಲದಿಂದ ಪ್ರಳಯವಾಗದೆ ?
ನೀರು ದೇವರೆಂಬಿರಿ,
ನೀರು ದೇವರಾದಡೆ ಅಗ್ನಿಯಿಂದ ಅರತುಹೋಗದೆ ?
ಅಗ್ನಿ ದೇವರೆಂಬಿರಿ,
ಅಗ್ನಿ ದೇವರಾದಡೆ ಜಲದಿಂದ ಪ್ರಳಯವಾಗದೆ ?
ಇಂತೀ ದೇವರೆಂದು ನಂಬಿ ಪೂಜಿಸಿದ ಜೀವಾತ್ಮರು
ಇರುವೆ ಮೊದಲು ಆನೆ ಕಡೆ
ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ
ರಾಟಾಳ ತಿರುಗಿದಂತೆ
ಜನನಮರಣಗಳಿಂದ
ಎಡೆಯಾಡುತಿಪ್ಪರು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಕಲ್ಲು ಮಣ್ಣು ಕಟ್ಟಿಗೆಗಳ ವಿಗ್ರಹಗಳನ್ನು ಪೂಜಿಸುವವರು ಹುಟ್ಟು ಕುರುಡರು

ಕಲ್ಲು ದೇವರೆಂದು ಪೂಜಿಸುವರೆಲ್ಲ
ಕಲ್ಲಾಗಿ ಪುಟ್ಟುವರು.
ಕಟ್ಟಿಗೆ ದೇವರೆಂದು ಪೂಜಿಸುವರೆಲ್ಲ
ಕಟ್ಟಿಗೆಯಾಗಿ ಪುಟ್ಟುವರು.
ಮಣ್ಣುದೇವರೆಂದು ಪೂಜಿಸುವರೆಲ್ಲ
ಮಣ್ಣಾಗಿ ಪುಟ್ಟುವರು.
ನೀರು ದೇವರೆಂದು ಪೂಜಿಸುವರೆಲ್ಲ
ನೀರಾಗಿ ಪುಟ್ಟುವರು.
ಅಗ್ನಿದೇವರೆಂದು ಪೂಜಿಸುವರೆಲ್ಲರು
ಅಗ್ನಿಯಾಗಿ ಪುಟ್ಟುವರು.
ಇದಕ್ಕೆ ದೃಷ್ಟಾಂತ:
‘ಯದ್ದೃಷ್ಟಂ ತನ್ನಷ್ಟಂ ಯಥಾಭಾವಸ್ತಥಾ ಸಿದ್ಧಿಃ’
ಎಂದುದಾಗಿ,
ಇಂತಿವರೆಲ್ಲರು ದೇವರೆಂದು ಪೂಜಿಸುವರು
ಹುಟ್ಟುಕುರುಡನು ಬೆಣ್ಣೆಯೆಂದು
ನರಕವ ಭುಂಜಿಸಿದಂತಾಯಿತ್ತಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು