ಗದಗ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಕದಳಿ ಮಹಿಳಾ ವೇದಿಕೆ ತಾಲೂಕ ಅಧ್ಯಕ್ಷೆ ಸುಲೋಚನಾ ಐಹೊಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಎಲ್ಲಾ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ ಅವಶ್ಯ. ಆಗ ಮಾತ್ರ ಅವು ಒಗ್ಗಟ್ಟಾಗಿ, ಬಲಿಷ್ಠವಾಗಿ ಬೆಳೆಯಲು, ಅಗತ್ಯವಿದ್ದಾಗ ಪ್ರತಿಭಟಿಸಲು ಸಾಧ್ಯ.
ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಬಸವಾಧಿ ಶರಣರ ಇತಿಹಾಸ ಕೇವಲ 50-100 ವರ್ಷದ್ದಲ್ಲಾ. ಇದು 850 ವರ್ಷಗಳ ಹಿಂದಿನದು. ವಚನಗಳು ಸಾರ್ವಕಾಲಿಕ ಸತ್ಯ ಮತ್ತು ನೀತಿ ಪಾಠಗಳು.
ಬಸವತತ್ವದ ನಿಜಾಂಶವನ್ನು ಬಿತ್ತಿ ಜನಸಾಮಾನ್ಯರಲ್ಲಿ ಬಿತ್ತಿ ಗಟ್ಟಿಗೊಳಿಸಬೇಕು. ಅಂದಾಗ ಮಾತ್ರ ರಾಜಕೀಯದ ಅರಿವು ಮೂಡಿಸಬಹುದು.
ಬಸವ ಶಕ್ತಿ ಶಿಬಿರ, ಸಮಾವೇಶಗಳ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಈ ಕಾರ್ಯಕ್ರಮಗಳಿಗೆ ಬಸವತತ್ವದ ಬಗ್ಗೆ ತಿಳಿದಿರುವವರು ಮಾತ್ರವಲ್ಲದೆ ಬಸವಣ್ಣನವರ ಎಲ್ಲಾ ಅಭಿಮಾನಿಗಳು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
ಬಸವಣ್ಣ ಎಲ್ಲರೂ ಒಂದೇ ಎಂದು ಪರಿಗಣಿಸಿ ಜಾತಿ, ಭೇದವನ್ನು ಅಳಿಸಿ ಹಾಕಿದ್ದಾರೆ. ಉತ್ತಮ ಜೀವನ ಎಲ್ಲರ ಸ್ವತ್ತಾಗಲು ಸಾಧ್ಯ ಎಂದಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲಾ ಜನಾಂಗದವರು ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಬೇಕು.
ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ನಮ್ಮಲ್ಲಿ ಅನೇಕ ಸಂಘಟನೆಗಳು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಮತ್ತು ಬಸವಪರ ಚಟುವಟಿಕೆಗಳಿಗೆ ಸಕಾರಾತ್ಮಕ ಬೆಂಬಲ ನಮ್ಮಿಂದ ಯಾವಾಗಲೂ ಇರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಎಲ್ಲಾ ಒಕ್ಕೂಟದ ಸದಸ್ಯರು ಸೇರಿದರೆ 50-100 ಜನ ಈ ಕಾರ್ಯಕ್ರಮಕ್ಕೆ ಬರಬಹುದು.
ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಬಸವಶಕ್ತಿಯಂತಹ ಕಾರ್ಯಕ್ರಮಗಳು ಅವಶ್ಯವಾಗಿದೆ. ಬಸವಣ್ಣನವರು ಕೊಟ್ಟ ಸಂದೇಶವನ್ನು ಸಮಾಜಕ್ಕೆ ತಲುಪಿಸಲು e ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ಈ ಕಾರ್ಯಕ್ರಮಗಳಿಗೆ ನನ್ನ ಕೈಲಾದಷ್ಟು ಖಂಡಿತ ನೆರವಾಗುತ್ತೇನೆ.
