ಬೆಳಗಾವಿ:
ಹಸುವಿನ ಹಾಲಿನೊಳಗೆ ತುಪ್ಪ ಅಡಗಿರುವಂತೆ, ಕಲ್ಲುಮಣ್ಣಿನೊಳಗೆ ಬಂಗಾರ ಇರುವಂತೆ ಭಗವಂತ ನಮ್ಮ ಅಂತರಾತ್ಮದೊಳಗೆ ಇದ್ದು, ಬಹಿರಂಗದಲ್ಲಿ ಅವನ ಹುಡುಕಾಟ ಮಾಡಬಾರದು ಎಂದು ಗುಳೇದಗುಡ್ಡ ಗುರುಸಿದ್ದೇಶ್ವರ ಬ್ರಹನ್ಮಠದ ಪೂಜ್ಯ ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಇಲ್ಲಿನ ಶಿವಬಸವ ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ನಾಗನೂರು ರುದ್ರಾಕ್ಷಿಮಠದ ವತಿಯಿಂದ ಆಯೋಜಿಸಿದ್ದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ 136 ನೇ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ‘ವಚನದರ್ಶನ ಪ್ರವಚನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ನಾಗನೂರು ಗ್ರಾಮದಲ್ಲಿದ್ದ ಡಾ. ಶಿವಬಸವ ಮಹಾಸ್ವಾಮಿಗಳು ಬೆಳಗಾವಿಗೆ ಬಂದು ಉಚಿತ ಪ್ರಸಾದ ನಿಲಯ ತೆರೆಯದೆ ಇದ್ದಿದ್ದರೆ ಇಂದು ಲಕ್ಷಾಂತರ ಜನ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಬಡ ಮಕ್ಕಳಿಗೆ ಅನ್ನ, ಅರಿವು, ಆಶ್ರಯ ಹಾಗೂ ಶಿಕ್ಷಣ ನೀಡಿದ್ದಲ್ಲದೆ ಸ್ವಾತಂತ್ರ ಹೋರಾಟ, ಕನ್ನಡ ಚಳುವಳಿಗಳಲ್ಲೂ ಡಾ. ಶಿವಬಸವ ಮಹಾಸ್ವಾಮಿಗಳು ಸಕ್ರಿಯರಾಗಿದ್ದರು ಎಂದರು.
ಸಮಾರಂಭದಲ್ಲಿ ಪ್ರವಚನ ನೀಡಿದ ಮುಮ್ಮಿಗಟ್ಟಿ ಬಸವ ಯೋಗಾಶ್ರಮದ ಬಸವಾನಂದ ಮಹಾಸ್ವಾಮಿಗಳು ಮಾತನಾಡಿ, ಅನುಭಾವದ ಮೇರು ಪರ್ವತವಾಗಿರುವ ವಚನಗಳಲ್ಲಿ ಜ್ಞಾನದ ಬೆಳಕಿದೆ. ಬದಕಲು ದಾರಿಯಿದೆ ಹಾಗೂ ಸಮಾಜದ ಜಟಿಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಿದೆ. ಕಾರಣ ವಚನಗಳನ್ನು ನೈಜರೂಪದಲ್ಲಿ ಅರ್ಥೈಸಿಕೊಂಡು ಜೀವನ ಸಾಗಿಸಬೇಕು ಎಂದರು.

ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಕೌಲಗಾದ ವೀರಸಿದ್ದ ದೇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ಎಲ್. ಪಾಟೀಲ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ನಿರೂಪಿಸಿದರು. ಕೊನೆಗೆ ಪ್ರಾಧ್ಯಾಪಕ ಎ.ಕೆ. ಪಾಟೀಲ ವಂದಿಸಿದರು.
ವಚನ ಕಟ್ಟುಗಳ ಮೆರವಣಿಗೆ :
ಸಮಾರಂಭಕ್ಕೂ ಮುಂಚೆ ಡಾ. ಶಿವಬಸವ ಮಹಾಸ್ವಾಮಿಗಳ 136ನೇ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀನಗರ ಉದ್ಯಾನವನದಿಂದ ಭವ್ಯ ಮೆರವಣಿಗೆಗೆ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಚಾಲನೆ ನೀಡಿದರು.

ಬಸವಾದಿ ಶರಣರ ವಚನಕಟ್ಟುಗಳು ಮೆರವಣಿಗೆಯ ಮೆರಗು ಹೆಚ್ಚಿಸಿದರೆ, ಡೊಳ್ಳು ಸೇರಿದಂತೆ ಜಾನಪದ ಕಲಾ ತಂಡಗಳ ಪ್ರದರ್ಶನಗಳು ಜನರ ಗಮನ ಸೆಳೆದವು.
ಮೆರವಣಿಗೆಯಲ್ಲಿ 20 ಕ್ಕೂ ಹೆಚ್ಚು ಸ್ವಾಮೀಜಿಗಳು, ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಮಾತೃ ಮಂಡಳಿ ಹಾಗೂ ಮಹಿಳಾ ಮಂಡಳಿಗಳ ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
