ಬಳ್ಳಾರಿಯ ಸಿರಿಗೆರೆ ಗ್ರಾಮದಲ್ಲಿ ಸಂಭ್ರಮದ ಬಸವ ಜಯಂತಿ, ಭರ್ಜರಿ ಮೆರವಣಿಗೆ

ಸಿರಗುಪ್ಪ

ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು.

ಶಂಭುಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಬಸವಣ್ಣನವರ ಭವ್ಯ ಭಾವಚಿತ್ರದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ನಾಗನಾಥೇಶ್ವರ ದೇವಸ್ಥಾನದವರೆಗೆ ಸಾಗಿಬಂದಿತು. ಮೆರವಣಿಗೆಯಲ್ಲಿ ಧಾತ್ರಿ ರಂಗಸಂಸ್ಥೆ ಕಲಾವಿದರ ಡೊಳ್ಳು ಕುಣಿತ, ಜಾನಪದಕಲಾ ಕುಣಿತ, ಬಸವೇಶ್ವರ ಮತ್ತು ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿದ್ದ ಯುವಜನರು ನೋಡುಗರ ಗಮನ ಸೆಳೆದರು.

ವೇದಿಕೆ ಕಾರ್ಯಕ್ರಮದಲ್ಲಿ ಬಳ್ಳಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಚಾರ್ಯ‌ ಡಾ. ಟಿ.ಎಚ್. ಬಸವರಾಜ ಉಪನ್ಯಾಸ ನೀಡುತ್ತಾ, 12ನೇ ಶತಮಾನದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ದಮನಿತರನ್ನು ಮೇಲೆತ್ತುವ ಕ್ರಾಂತಿಕಾರ್ಯ ಮಾಡಿದ ಬಸವಣ್ಣನವರ ವಚನಗಳ ಅರಿವು ಎಲ್ಲರಲ್ಲಿ ಬರಬೇಕು ಎಂದರು.

ಸಾನಿಧ್ಯ ವಹಿಸಿದ್ದ ಶ್ರೀ ಮರಿಕೊಟ್ಟೂರು ಶ್ರೀಗಳು ಮಾತನಾಡುತ್ತಾ, ಬಸವಣ್ಣನವರ ಭಾವಚಿತ್ರ ಪೂಜೆಯಿಂದ ಧರ್ಮ ಉಳಿಯದು. ಅವರ ತತ್ವ ಆಚರಣೆಗೆ ಬರಬೇಕು. ಮಕ್ಕಳಿಗೆ ಶರಣು ಶರಣಾರ್ಥಿ ಎಂಬ ಸಂಸ್ಕೃತಿ ಕಲಿಸಬೇಕು ಎಂದರು.

ಎದ್ದಲದೊಡ್ಡಿ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡುತ್ತಾ, ಮನುಕುಲದ ಕಷ್ಟಗಳನ್ನು ಕಳೆಯಲು ತಮ್ಮ ಜೀವನ ಮುಡಿಪಾಗಿಟ್ಟವರು 12ನೇ ಶತಮಾನದ ಬಸವಣ್ಣ ಮತ್ತು ಬಸವಾದಿ ಶರಣರು ಎಂದು ಹೇಳಿದರು.

ಲೆಕ್ಕಪರಿಶೋಧಕ, ಸರ್ವಧರ್ಮ ಸಮಿತಿಯ ಎಸ್. ಎನ್. ಪನ್ನರಾಜ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಜೆ. ಬಸವರಾಜಪ್ಪ, ಉಪಾಧ್ಯಕ್ಷ ಹೇಮಯ್ಯಸ್ವಾಮಿ, ಸರ್ವಮಂಗಳಮ್ಮ, ಧರ್ಮದರ್ಶಿ ಬಿ. ಮಹಾರುದ್ರ ಗೌಡ, ರಾಷ್ಟ್ರೀಯ ಬಸವ ದಳದ ರವಿಶಂಕರ, ಎಸ್. ಎಂ. ಅಡಿವೆಯ್ಯಸ್ವಾಮಿ ಅವರುಗಳು ಬಸವಣ್ಣನವರ ಕುರಿತು ಮಾತನಾಡಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ರಾಜಮ್ಮ, ಡ್ರೈವರ್ ಹುಲಗಪ್ಪ, ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಶಿವಕುಮಾರ ಬಸವ ಘೋಷಣೆ ಹಾಡಿದರು. ಗಣೇಶಪ್ಪ ಪ್ರಾರ್ಥನೆ ಮಾಡಿದರು. ಶಿಕ್ಷಕ ಎಸ್.ಎನ್. ಪಂಪಾಪತಿ ಸ್ವಾಗತಿಸಿದರು. ಎಸ್.ಎಂ. ನಾಗರಾಜಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಕೊನೆಗೆ ಅಂದ್ರಾಳು ರಾಷ್ಟ್ರೀಯ ಬಸವದಳದ ಶರಣರಿಂದ ಕ್ರಾಂತಿಯೋಗಿ ಬಸವೇಶ್ವರ ನಾಟಕ ಪ್ರದರ್ಶನಗೊಂಡಿತು. ಗ್ರಾಮದ, ಸುತ್ತಮುತ್ತಲ ಗ್ರಾಮಗಳ ನೂರಾರು ಶರಣ ಶರಣೆಯರು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *