ಬಸವ ಭಾಷೆ: ಭಕ್ತರ ನಚ್ಚ ಶಿವನೆಂದಿಪ್ಪ ಭಾಷೆ

(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)

08.04.2026

ಕೊಪ್ಪಳ :

ಶರಣರ ದೃಷ್ಟಿಯಲ್ಲಿ ಭಕ್ತ ಬೇರೆಯಲ್ಲ. ಭಗವಂತ ಬೇರೆಯಲ್ಲ. ಮೂಲದಲ್ಲಿ ಒಂದೇ ಪರವಸ್ತುವಾಗಿದ್ದ ನಿರಾಕಾರ ಪರಿಪೂರ್ಣ ಶಿವತತ್ವವು ಲಿಂಗ ಮತ್ತು ಅಂಗವೆಂದು ಎರಡಾಗಿ ಪರಿಣಮಿಸಿ, ಪರಮಾತ್ಮ ಮತ್ತು ಜೀವಾತ್ಮವೆನಿಸಿತು.

“ಭಕ್ತ ದೇಹಿಕನಾದ ದೇವನು ಕರಿಯು ಕನ್ನಡಿಯೊಳಡಗಿದಂತೆ. ಭಗವಂತ ಭಕ್ತನ ದೇಹವೆಂಬ ದೇವಾಲಯದಲ್ಲಿರುವ ನಿಜವಡಗಿದ ರೂಪು ನಿರ್ವಯಲ ಸ್ಥಾನ ನಡೆಲಿಂಗ ಜಂಗಮ ಕೂಡಲಸಂಗಮದೇವ” ಎಂಬ ಬಸವಣ್ಣನವರ ವಚನದಂತೆ ; ಪ್ರತಿಯೊಬ್ಬ ಭಕ್ತ ರೂಪವಾದರೆ ದೇವರು ನಿರಾಕಾರ. ಆ ನಿರಾಕಾರವನ್ನು ಅಡಗಿಸಿಕೊಂಡು ನಡೆದಾಡುವ ಕಾರಣ ಭಕ್ತ ನಡೆದಾಡುವ ದೇವರೆನಿಸುತ್ತಾನೆ.

ಬಸವಣ್ಣನವರಿಗೆ ಭಕ್ತರು ಪರಮಾತ್ಮನ ಪ್ರತಿಬಿಂಬವೇ ಆಗಿದ್ದಾರೆ. ‘ಭಕ್ತನಿಗಾಗುವ ಸುಖ-ದುಃಖಗಳೆಲ್ಲ ದೇವನಿಗೆ ಆಗುವುದು ಜೀವಾತ್ಮನ ಅಂದರೆ ಭಕ್ತನ ಮುಖದಲ್ಲಿ’ ಎಂಬುದು ಬಸವ ಸಿದ್ಧಾಂತ. ಮರದ ಬಾಯಿ ಬೇರಾಗಿರುವಂತೆ ದೇವರ ಬಾಯಿ ಭಕ್ತ ಅಥವಾ ಜಂಗಮ, ನಿರಾಕಾರ ದೇವ ಸಾಕಾರ ಭಕ್ತನ ಮೂಲಕ ಭಕ್ತಿಯನ್ನು ಸ್ವೀಕರಿಸುತ್ತಾನೆ.

ಲಿಂಗ ಪೂಜೆಯ ಮಾಡಿ ಭಕ್ತ-ಜಂಗಮರನ್ನು ಉದಾಸೀನವ ಮಾಡಿದರೆ, ತಾಯಿಯನ್ನು ಸತ್ಕರಿಸಿ ಮಕ್ಕಳನ್ನು ತಿರಸ್ಕರಿಸಿದಂತೆ. ಶಿವಭಕ್ತರು ನೊಂದಡೆ ಶಿವನು ನೋಯುವನೆಂದು ಅಕ್ಕಮಹಾದೇವಿ ಸ್ಪಷ್ಟಪಡಿಸಿದ್ದಾಳೆ. ಭಕ್ತರ ಕುರಿತು ಇಲ್ಲಸಲ್ಲದ ಮಾತುಗಳನ್ನಾಡಿ ಕೇವಲವಾಗಿ ವರ್ತಿಸುವವರ ಕಂಡರೆ ಬಸವಣ್ಣನವರಿಗೆ ಸಹಿಸಲಾಗದು. ‘ಬಂಜೆ ಬೇನೆಯರಿಯದಂತೆ ಒಬ್ಬರೊಂದ ನುಡಿವಿರಿ, ಎನಗೆ ಎನ್ನ ಆಯುಷ್ಯ ಭವಿಷ್ಯ ಭಕ್ತರು ನೋಡಯ್ಯಾ’ ಎಂದಿದ್ದಾರೆ.

ಶರಣರೆಲ್ಲರ ಅವರ ಅಗಲಿಕೆ ನೋವು ಅಪಮಾನಗಳನ್ನು ಎಳ್ಳನಿತು ಸೈರಿಸರು. ಶರಣರೆ ಬಸವಣ್ಣನವರ ಉಸಿರು, ಶರಣರಿಗಾಗಿ ಹಗಲಿರುಳು ಹಂಬಲಿಸುವರು. ಮನೆ ಹೊರಗೆ ಬೀಸುವ ಗಾಳಿಯಿಂದ ಒಂದು ತರಗೆಲೆ ಗಿರುಕ್ಕೆಂದಡೂ ಹೊರಗೋಡಿ ಬರುವರು. ಕರೆಯಲು ತಡವಾದುದಕ್ಕೆ ಶರಣರು ಹೋದರೇನೋ ಎಂದು ಕೊರಗುವರು. ಮನೆಯ ಮುಂದೆ ಶಿವಾ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು, ಓಡೋಡಿ ಬಂದು ಕೈವಿಡಿದು ಕರೆದೊಯ್ದು ಆದರಿಸಿ, ಉಣಿಸಿ-ಉಡಿಸಿ ಆನಂದಿಸುವರು. ಭಕ್ತರೇ ಬಸವಣ್ಣನವರ ಪ್ರಾಣವಾಗಿದ್ದರು.

ಭಕ್ತರಲ್ಲಿ ಬಡವ-ಬಲ್ಲಿದ, ದೂರದಿಂದ ಬಂದವರು, ಸಾರಿರ್ದವರು. ಅಂಗಹೀನರು, ಸಕಲಾಂಗ ಸುಂದರರು ಮುಂತಾದ ಭೇದಗಳನ್ನು ಬಸವಣ್ಣ ಸೈರಿಸುವುದಿಲ್ಲ. ದೇವನನ್ನು ಹಿಡಿವ ಸಾಧನ ಭಕ್ತ. ಭಕ್ತನ ಮೂಲಕವೇ ದೇವನನ್ನು ಕಾಣಬೇಕು. ಅದಕ್ಕೆ ಅನ್ಯ ದಾರಿಯಿಲ್ಲ. ಬಾಯಿಗೆ ತಾಗಿದ ರುಚಿ ಉದರ ತಾಗಿದ ಸುಖ ಭಕ್ತನ ಮುಖದಿಂದಲೇ ದೇವರಿಗೆ ಅರ್ಪಿಸಬೇಕು. ನಿಜಭಕ್ತರೆಲ್ಲರೂ ಭೌತಿಕ ಜಗತ್ತಿನಲ್ಲಿ ಪರಮಾತ್ಮನ ಸ್ವರೂಪದಂತೆ ದೇವರನ್ನು ಪ್ರತಿನಿಧಿಸುತ್ತಾರೆ.

“ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು ಭಕ್ತ ದೇಹಿಕ ದೇವ ಅನಿಮಿಷನಾಗಿ ಕೂಡಲಸಂಗಮದೇವ ಭಕ್ತನ ನುಡಿಯ ನಡುವೆ ರಾಶಿಯಾಗಿಪ್ಪನು”. ಲಿಂಗದ ಕಾಯ ಭಕ್ತನಾದರೆ, ಭಕ್ತನ ಪ್ರಾಣ ಲಿಂಗ, ಭಕ್ತಂಗೂ ಲಿಂಗಕ್ಕೂ ಭೇದವಿಲ್ಲ. ಇಂತಹ ವಿನೂತನ ವಿಶಿಷ್ಟವಾದ ಭಕ್ತಿಯನ್ನು ಬಸವಣ್ಣನವರು ಪ್ರತಿಪಾದಿಸಿದರು. ಬಸವಣ್ಣನವರ ದೇವರು ನೈವೇದ್ಯ ಮುಂದಿಟ್ಟುಕೊಂಡು ಮೌನವಾಗಿರುವ ನಿಷ್ಕ್ರೀಯ ಮೂರ್ತಿಯಲ್ಲ, ಉಣ್ಣುವ ಉಡುವ ಭವನಾಸ್ತಿಗೈವ ಕ್ರಿಯಾಶೀಲ ಭಕ್ತ. ನಿಷ್ಕ್ರೀಯನಾದ ಗುಡಿ ಗುಂಡಾರದ ದೇವರುಗಳ ಬದಲು ಹಸಿದವರು, ಸದ್ಭಕ್ತರರಿಗೆ ಉಣಿಸುವುದೇ ನಿಜವಾದ ನೈವೇದ್ಯವಾಗಿದೆ ಎಂದು ಬಸವಣ್ಣನವರು ಪ್ರತಿಪಾದಿಸುತ್ತಾರೆ.

ಬಸವಣ್ಣನವರ ಜಂಗಮದ ಅರ್ಥ ವಿಶಾಲವಾದುದು. ದೇವರ ಪ್ರತಿರೂಪವಾದ ಇಡೀ ವಿಶ್ವವೇ ಜಂಗಮ, ಸಕಲ ಜೀವರಾಶಿಗಳಲ್ಲಿ ದೈವತ್ವವನ್ನೇ ಕಾಣಬೇಕು. ಪ್ರಪಂಚದಲ್ಲಿಯ ರೋಗಿ, ದೀನ-ದುಃಖಿ ದುರ್ಬಲರೆಲ್ಲರೂ ದೇವ ಸ್ವರೂಪವೇ. ಹೀಗಾಗಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಬೇಕು. ದಯೆಯೆ ನಮ್ಮ ಮೂಲ ಧರ್ಮವಾಗಬೇಕು. ಈ ಭಾವಕ್ಕೆ ಚ್ಯುತಿ ಬಾರದಂತೆ ಸದ್ಭಕ್ತರೇ ದೇವರೆಂದು ಖಚಿತವಾಗಿ ನಂಬಿ ಅಂತೆಯೇ ಪ್ರತಿಜ್ಞಾಪೂರ್ವಕವಾಗಿ ಆಚರಿಸಬೇಕೆಂಬುದು ಗುರು ಬಸವಣ್ಣನವರ ಆಶಯವಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *