ಬಸವತತ್ವ ದರ್ಶನ ಪ್ರವಚನ: ಮೂಢ ನಂಬಿಕೆಗಳನ್ನು ತಳ್ಳಿ ಹಾಕಬೇಕು

ಶರಣು ಶಿಣ್ಣೂರ್
ಶರಣು ಶಿಣ್ಣೂರ್

(ಕಲಬುರ್ಗಿಲ್ಲಿ ನಡೆಯುತ್ತಿರುವ  893ನೇ ಬಸವ ಜಯಂತಿ ಅಂಗವಾಗಿ ‘ಬಸವತತ್ವ ದರ್ಶನ ಪ್ರವಚನ’ ಮುಖ್ಯಾಂಶಗಳು)

ದಿನಾಂಕ: 11 ಏಪ್ರಿಲ್ 2026

ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ, ಅತ್ತಿವೇರಿ

ಸ್ಥಳ: ಬಸವ ಮಂಟಪ, ಮಾಕಾ ಲೇಔಟ್‌, ಕಲಬುರಗಿ

ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ, ಕಲಬುರಗಿ

ಬಸವಣ್ಣನವರ ತತ್ವಶಾಸ್ತ್ರ, ಸಮಾಜ ಸುಧಾರಣಾ ಚಿಂತನೆಗಳು, ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವನ್ನು ಮಾತಾಜಿ ವಿವರಿಸಿದರು.

ಪ್ರವಚನದಲ್ಲಿ ಅವರು, ಬಸವಣ್ಣನವರು ಕೂಡಲಸಂಗಮದಲ್ಲಿ ತಮ್ಮ ಯೌವನದಲ್ಲಿಯೇ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಕಂದಾಚಾರಗಳು, ಜಾತಿ ಭೇದ ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕುವ ಮಹತ್ವದ ಕಾರ್ಯ ಆರಂಭಿಸಿದ ಬಗ್ಗೆ ತಿಳಿಸಿದರು. ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಮಕರ ಸಂಕ್ರಾಂತಿಯಂದು ಇಷ್ಟಲಿಂಗದ ಆವಿಷ್ಕಾರವನ್ನು ಪರಿಚಯಿಸಿದ ಬಸವಣ್ಣನವರ ಸಾಧನೆ ಮಹತ್ತರವಾದದ್ದು ಎಂದು ಹೇಳಿದರು.

“ಸಕಲ ವಿಸ್ತಾರದ ರುಹೂ ನೀನೇ ದೇವಾ”ಎಂಬ ವಚನವನ್ನು ಉಲ್ಲೇಖಿಸಿ, ಪರಮಾತ್ಮನು ಎಲ್ಲೆಡೆ ವ್ಯಾಪಿಸಿದ್ದಾನೆ ಎಂಬ ಸಂದೇಶವನ್ನು ಅವರು ವಿವರಿಸಿದರು. ಇಷ್ಟಲಿಂಗದ ಮಹತ್ವವನ್ನು ತಿಳಿಸುವ ಜೊತೆಗೆ, ಸ್ಥಾವರಲಿಂಗ ಮತ್ತು ಇಷ್ಟಲಿಂಗದ ವ್ಯತ್ಯಾಸವನ್ನು ಐತಿಹಾಸಿಕವಾಗಿ ಸಂಕ್ಷಿಪ್ತವಾಗಿ ವಿಶ್ಲೇಷಿಸಿದರು.

ಜಾತಿ ವ್ಯವಸ್ಥೆಯ ವಿರುದ್ಧ ಬಸವಣ್ಣನವರ ಹೋರಾಟವನ್ನು ವಿವರಿಸುತ್ತಾ, ಸಮಾಜದಲ್ಲಿನ ಯಾವ ಜಾತಿಯ ಜನರನ್ನು ಕಂಡರೆ ಹೀನವಾಗಿ ಕಂಡು ಅನಿಷ್ಟ ಎಂದು ಭಾವಿಸಲಾಗಿತ್ತು ಅಂತಹ ಜಾತಿಗೆ ಸೇರಿದ ಮಹಾನ್ ಶರಣ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿಸಿಕೊಂಡು ಅವರನ್ನು ಉನ್ನತ ಸ್ಥಾನಕ್ಕೆ ನೇಮಕ ಮಾಡಿರುವುದು ಸಮಾನತೆಯ ಸಂದೇಶವೆಂದು ಹೇಳಿದರು.

ಮೂಢನಂಬಿಕೆಗಳ ಬಗ್ಗೆ ಕಟುವಾಗಿ ಮಾತನಾಡಿದ ಅವರು, ರಾಹುಕಾಲ, ಯಮಗಂಡ, ಶಕುನ-ಅಪಶಕುನಗಳಂತಹ ಅನಾವಶ್ಯಕ ನಂಬಿಕೆಗಳನ್ನು ತಳ್ಳಿಹಾಕಬೇಕು ಎಂದು ಕರೆ ನೀಡಿದರು. “ಪಾದದಲ್ಲಿ ಹುಟ್ಟಿದವರು ಹೀನ, ತಲೆಯಲ್ಲಿ ಹುಟ್ಟಿದವರು ಶ್ರೇಷ್ಠ”ಎಂಬ ಪುರಾಣ ಕಥನಗಳನ್ನು ಬಸವಣ್ಣನವರು ತೀವ್ರವಾಗಿ ವಿರೋಧಿಸಿದ್ದನ್ನು ಉಲ್ಲೇಖಿಸಿದರು.

ಜ್ಯೋತಿಷ್ಯ ಮತ್ತು ಕುಂಡಲಿ ಆಧಾರಿತ ನಿರ್ಧಾರಗಳ ಕುರಿತು ಪ್ರಶ್ನೆ ಎತ್ತಿದ ಅವರು, ರಾಮ-ಸೀತೆಯ ವಿವಾಹ ಉದಾಹರಣೆ ನೀಡಿ, ಕುಂಡಲಿಯ ಮೇರೆಗೆ ಜೀವನವನ್ನು ನಿರ್ಧರಿಸುವುದು ತಪ್ಪು ಎಂಬ ಸಂದೇಶ ನೀಡಿದರು. ಮೂಢನಂಬಿಕೆಗಳಿಂದ ಸಮಾಜ ಹಿನ್ನಡೆಯತ್ತ ಸಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ದಾಸೋಹ ತತ್ವವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ, ಯಾರೂ ಬೇಡಿಕೊಳ್ಳದ ಸಮಾಜ ನಿರ್ಮಾಣವೇ ಬಸವಣ್ಣನವರ ಕನಸಾಗಿತ್ತು. ದುಡಿದು ತಿನ್ನುವ ಅನ್ನ ಬಿಸಿ ಅನ್ನ, ತಂದೆ ತಾಯಿಯವರಿಂದ ಬಂದ ಅನ್ನ ತಂಗಳು ಅನ್ನವೆಂದೂ, ಲಂಚ ವಂಚನೆಯಿಂದ ಬಂದ ಅನ್ನವು ಹಳಿಸಿದ ಅನ್ನವೆಂದೂ ತಿಳಿಸಿ, ಸತ್ಯಸಂಧ ಬದುಕಿನ ಮಹತ್ವವನ್ನು ತಿಳಿಸಿದರು.

ಸನ್ಯಾಸ ಮತ್ತು ಸಂಸಾರ ಇವುಗಳ ಶ್ರೇಷ್ಠತೆ ಬಗ್ಗೆ ತಿಳಿಸುತ್ತಾ, ಸಂಸಾರ ಜೀವನದ ಮಹತ್ವವನ್ನು ಒತ್ತಿಹೇಳಿದ ಅವರು, ಸತಿ-ಪತಿ ಇಬ್ಬರೂ ಸಮಾನ ಮನೋಭಾವದಿಂದ ಜೀವನ ನಡೆಸಿದರೆ ಅದೇ ಶಿವಯೋಗ ಎಂದು ವಿವರಿಸಿದರು. ಜೇಡರ ದಾಸಿಮಯ್ಯನವರ ಉದಾಹರಣೆ ನೀಡಿ, ಸಂಸಾರವೇ ಸನ್ಯಾಸಕ್ಕಿಂತ ಶ್ರೇಷ್ಠ ಮಾರ್ಗ ಎಂದೂ ಸಂಸಾರದಲ್ಲಿದ್ದುಕೊಂಡೇ ಹೇಗೆ ಮುಕ್ತಿ ಹೊಂದಬೇಕು ಎಂದು ತಿಳಿಸಿದರು.

ಅನುಭವ ಮಂಟಪದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ, ಅದು ಜಗತ್ತಿನ ಮೊದಲ ಪ್ರಜಾಪ್ರಭುತ್ವ ವೇದಿಕೆ ಆಗಿತ್ತು ಎಂದು ಹೇಳಿದರು. ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ನೀಡಿದ ಈ ವ್ಯವಸ್ಥೆ ಅನುಭಾವಿಕ ನೆಲೆಗಟ್ಟಿನಲ್ಲಿ ಬಸವಣ್ಣನವರ ಆಧ್ಯಾತ್ಮಿಕ ಮತ್ತು ಸಮಾನತೆಯ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಒಟ್ಟಾರೆ, ಬಸವ ತತ್ವವನ್ನು ಮನೆಮನೆಗೆ ತಲುಪಿಸಿ, ವೈಚಾರಿಕತೆ, ಸಮಾನತೆ ಮತ್ತು ನೈಜ ಭಕ್ತಿಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕೆಂಬ ಸಂದೇಶವನ್ನು ಪ್ರವಚನದ ಮೂಲಕ ನೀಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.