ಕಲಬುರಗಿ ಬಳಿ ಆರು ಎಕರೆ ಪ್ರದೇಶದಲ್ಲಿ ಆಧುನಿಕ ವಚನ ಮಂಟಪ: ಖರ್ಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:

ನಗರಕ್ಕೆ ಸಮೀಪವಿರುವ ಕಪನೂರು ಗ್ರಾಮದ ಬಳಿ 6.06 ಎಕರೆ ಪ್ರದೇಶದಲ್ಲಿ ಶರಣ-ಶರಣೆಯರ ಕುರಿತು ಮಾಹಿತಿ ನೀಡುವ ನೂತನ ವಚನಮಂಟಪವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ, ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ಈ ಸಂಬಂಧ  ನಗರದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಉದ್ಧೇಶಿತ ವಚನಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳು ಸೇರಿದಂತೆ, ವಚನಕ್ರಾಂತಿಯಲ್ಲಿ ಭಾಗಿಯಾಗಿರುವ ಎಲ್ಲ ಶರಣ-ಶರಣೆಯರ ಚಿತ್ರಗಳು ಹಾಗೂ ಅವರ ವಚನಗಳನ್ನು ಹೊಂದಿರುತ್ತದೆ. ತೆರೆದ ಸಭಾಂಗಣವನ್ನು ಚರ್ಚೆ, ಉಪನ್ಯಾಸ, ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗುವುದು.

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ಕಾಳಗಿ ಸೂರ್ಯನಾರಾಯಣ ದೇವಾಲಯ ಸಂರಕ್ಷಣಾ ಕಾಮಗಾರಿ, ಸೇಡಂ ತಾಲ್ಲೂಕಿನಲ್ಲಿನ ಪಾರಂಪರಿಕ ತಾಣವಾದ ಮಳಖೇಡ ಕೋಟೆಯ ಅಭಿವೃದ್ಧಿ ಕಾಮಗಾರಿ, ಚಿತ್ತಾಪುರ ತಾಲ್ಲೂಕಿನ ನಾಗಾವಿ ಪಾರಂಪರಿಕ ಪ್ರದೇಶದಲ್ಲಿರುವ ಪ್ರಾಚ್ಯ ಕುರುಹುಗಳ ಅಭಿವೃದ್ಧಿ, ಸಂರಕ್ಷಣಾ ಕಾಮಗಾರಿಗಳು ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗಿದ್ದು, ಈ ಕಾಮಗಾರಿಗಳ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿಯಲ್ಲಿನ ಐತಿಹಾಸಿಕ ಬೌದ್ಧನೆಲೆ ಮತ್ತು ಪ್ರಾಚ್ಯ ಕುರುಹುಗಳ ಅಭಿವೃದ್ಧಿ ಸಂರಕ್ಷಣಾ ಕಾಮಗಾರಿಯ ಕುರಿತು ಕೆಲವು ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *