ಬಸವ ಜಯಂತಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರ ಸೇರಿಸಲು ಶಂಕರ ಬಿದರಿ ಆದೇಶ

ಎಂ. ಎ. ಅರುಣ್
ಎಂ. ಎ. ಅರುಣ್

ಕಳೆದ ಒಂದು ವರ್ಷದಿಂದ ವಿಶ್ವಗುರು ಬಸವಣ್ಣನವರ ಹೆಗಲ ಮೇಲೆ ಪುರಾಣದ ರೇಣುಕಾಚಾರ್ಯರನ್ನ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಬಿದರಿ ಸುತ್ತೋಲೆ ಇದರ ಮುಂದುವರೆದ ಭಾಗವಷ್ಟೇ.

ಬೆಂಗಳೂರು

ಬಸವ ಜಯಂತಿಯ ಸಂಭ್ರಮ ರಾಜ್ಯದಲ್ಲಿ ಹರಡುತ್ತಿರುವಂತೆಯೇ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಶರಣ ಸಮಾಜದಲ್ಲಿ ದೊಡ್ಡ ಬಿರುಕು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಈ ವರ್ಷದಿಂದ ಬಸವ ಜಯಂತಿ ಮೆರವಣಿಗೆಯಲ್ಲಿ ರೇಣುಕಾಚಾರ್ಯರ ಭಾವಚಿತ್ರ ಸೇರಿಸಬೇಕೆಂದು ಬಿದರಿ ಏಪ್ರಿಲ್ 2ರಂದು ಸುತ್ತೋಲೆ ಹೊರಡಿಸಿದ್ದಾರೆ.

ಮಹಾಸಭಾದ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿರುವ ಮುಖ್ಯವಾದ ನಿರ್ದೇಶನಗಳು:

1) ಏಪ್ರಿಲ್ 30 ಎಲ್ಲಾ ಜಿಲ್ಲೆಗಳಲ್ಲಿ ಮತ್ತು ರಾಜಧಾನಿಯಲ್ಲಿ ಹೊರಡುವ ಬಸವ ಜಯಂತಿ ಮೆರವಣಿಗೆಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ ರೇಣುಕಾಚಾರ್ಯರ ಹಾಗೂ ಪ್ರಮುಖ ಶರಣರ ಭಾವಚಿತ್ರಗಳನ್ನು ಪ್ರದರ್ಶಿಸಬೇಕು.

2) ಇದಕ್ಕಾಗಿ ಮಹಾಸಭಾದ ರಾಜ್ಯ ಘಟಕದ ವತಿಯಿಂದ ಬಸವೇಶ್ವರರ, ರೇಣುಕಾಚಾರ್ಯರ ಹಾಗೂ ಪ್ರಮುಖ ಶರಣರ ಭಾವಚಿತ್ರಗಳ ಮೂರು ಪ್ರತಿಗಳನ್ನು ಪ್ರತಿ ತಾಲೂಕಿನ ಘಟಕಕ್ಕೆ ನೀಡಲಾಗುವುದು.

ಬಿದರಿಯವರು ಸಹಿ ಮಾಡಿರುವ ಈ ನಿರ್ದೇಶನ 18 ಮಾರ್ಚ ಸಭೆಯಲ್ಲಿ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು ತೆಗೆದುಕೊಂಡ ನಿರ್ಣಯವೆಂದು ಸುತ್ತೋಲೆ ತಿಳಿಸುತ್ತದೆ.

ಬಸವ ಜಯಂತಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರ ಸೇರಿಸುವ ಆಲೋಚನೆಯನ್ನು ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ನಡೆದ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮೊದಲ ಬಾರಿಗೆ ಬಿದರಿ ಪ್ರಸ್ತಾಪಿಸಿದರು. ಅದಕ್ಕೆ ತಕ್ಷಣ ಸಭಿಕರು ಎದ್ದು ಪ್ರತಿಭಟಿಸಿದ ಮೇಲೆ ಅವರು ಕೆಲವು ನಿಮಿಷಗಳು ಭಾಷಣ ನಿಲ್ಲಿಸಬೇಕಾಯಿತು.

ಕಳೆದ ಒಂದು ವರ್ಷದಿಂದ ರೇಣುಕಾಚಾರ್ಯರನ್ನು ಮುನ್ನೆಲೆಗೆ ತರುವ, ಬಸವಣ್ಣನವರ ಹೆಗಲ ಮೇಲೆ ಅವರನ್ನು ಕೂರಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಾ ಬಂದಿವೆ.

ಈ ಘಟನೆಗಳನ್ನು ಗಮನಿಸಿ:

ಮಂಡ್ಯ, ನವೆಂಬರ್ 2024

ವೀರಶೈವ ಸಂಘಟನೆಗಳು ರೇಣುಕಾಚಾರ್ಯರ ಮತ್ತು ಬಸವಣ್ಣನವರ ಜಯಂತೋತ್ಸವವನ್ನು ನವಂಬರ್ 19 ಆಚರಿಸಿದವು. ಇದನ್ನು ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಮಹಾಸಭಾ ಮುಂತಾದ ಬಸವ ಪರ ಸಂಘಟನೆಗಳು ನೇರವಾಗಿ ವಿರೋಧಿಸಿದ್ದವು.

ಅಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿದ್ದ ಮೂರು ವಿರಕ್ತ ಮಠಗಳ ಸ್ವಾಮೀಜಿಗಳೂ ಜಂಟಿ ಜಯಂತೋತ್ಸವಕ್ಕೆ ಹೋಗಲು ನಿರಾಕರಿಸಿದರು.

ಗಜೇಂದ್ರಗಡ, ಡಿಸೆಂಬರ್ 2024

ಪಟ್ಟಣದಲ್ಲಿ ನಡೆಯುತ್ತಿದ್ದ ಬಸವ ಪುರಾಣದ ಪ್ರವಚನದಲ್ಲಿ ಕಾಣಿಸಿಕೊಂಡ ಶ್ರೀಶೈಲ ಪಂಚಪೀಠದ ಡಾ. ಚನ್ನಸಿದ್ದರಾಮ ಶಿವಾಚಾರ್ಯರು ಬಸವಣ್ಣನವರು, ಪಂಚಪೀಠಗಳು ಶತ್ರುಗಳಲ್ಲ ಎಂದು ಹೇಳಿದರು.

ಬಸಣ್ಣನವರಿಗೂ ಪಂಚಪೀಠಗಳು ಬೇಕು, ಪಂಚಪೀಠಗಳಿಗೆ ಬಸವಣ್ಣನವರೂ ಬೇಕು ಎನ್ನುವದಕ್ಕೆ ಈ ಕಾರ್ಯಕ್ರಮಕ್ಕೆ ನಾವು ದಯಮಾಡಿಸಿರುವುದು ಪ್ರತ್ಯಕ್ಷ ಸಾಕ್ಷಿ, ಎಂದು ಹೇಳಿದರು.

ನಂತರ ತೇರದಾಳದಲ್ಲಿ ನಡೆದ ಇನ್ನೊಂದು ಕಾರ್ಯಕ್ರಮದಲ್ಲಿ ಲಿಂಗಾಯತರು ವೀರಶೈವರು, ಬಸವಣ್ಣ ಪಂಚಪೀಠಗಳು ಒಂದೇ ಎಂದೂ ಹೇಳಿದರು.

ಜಮಖಂಡಿ, ಜನವರಿ 2025

ಜಮಖಂಡಿ ಬಳಿಯ ತುಂಗಳ ಗ್ರಾಮದಲ್ಲಿ ಬಸವೇಶ್ವರರ ಪುತ್ಥಳಿಯನ್ನು ಶ್ರೀಶೈಲ ಪಂಚಾಚಾರ್ಯ ಪೀಠದ ಚನ್ನಸಿದ್ಧರಾಮ ಶ್ರೀಗಳು ಅನಾವರಣಗೊಳಿಸಿದರು. ಜತೆಗೆ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆಯೂ ಗ್ರಾಮದಲ್ಲಿ ನಡೆಯಿತು. ಶ್ರೀಗಳ ಅಡ್ಡಪಲ್ಲಕ್ಕಿ ಮುಂದೆ ಹೋದಂತೆ ಅವರ ಹಿಂದೆ ಸ್ವಲ್ಪ ದೂರದಲ್ಲಿ ಬಸವಣ್ಣನವರ ಭಾವಚಿತ್ರವನ್ನೂ ಕೂಡ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು.

ಆಶೀರ್ವಚನ ನೀಡಿದ ಶ್ರೀಗಳು ಪಂಚ ಪೀಠದ ಜಗದ್ಗುರುಗಳೊಬ್ಬರ ಮೂಲಕವೇ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿದೆ. ಇದು ಬಸವ ತತ್ವದ ಮತ್ತು ಪಂಚ ಪೀಠಗಳ ನಡುವೆ ಯಾವುದೇ ಕಂದಕವಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿದರು. ಬಸವಣ್ಣನವರು ಎಲ್ಲರನ್ನು ಸೇರಿಸಿ ಒಂದು ಸಮಾಜವನ್ನು ಕಟ್ಟಿದರು, ಇಂದು ಅವರ ಹೆಸರಿನಲ್ಲಿಯೇ ಅದನ್ನು ಒಡೆಯುವ ಕೆಲಸವಾಗುತ್ತಿದೆ ಎಂದೂ ಹೇಳಿದರು.

ಮಾರ್ಚ್ 2025

ರಾಜ್ಯ ಸರಕಾರದ ವತಿಯಿಂದ ನಡೆದ ರೇಣುಕಾಚಾರ್ಯ ಜಯಂತಿಯ ಜತೆಗೆ ಹಲವಾರು ಜಿಲ್ಲೆಗಳಲ್ಲಿ ವೀರಶೈವ ಮತ್ತು ಸಂಘ ಪರಿವಾರದ ಸಂಘಟನೆಗಳಿಂದಲೂ ಜಯಂತೋತ್ಸವವನ್ನು ಆಚರಿಸಲಾಯಿತು. ಬಹಳಷ್ಟು ಕಡೆ ರೇಣುಕಾಚಾರ್ಯರ ಚಿತ್ರದೊಂದಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನೂ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು.

ಬೆಳಗಾವಿಯಲ್ಲಿ ತಮ್ಮನ್ನು ಕೇಳದೇ ರೇಣುಕಾ ಜಯಂತಿ ಪ್ರಚಾರಕ್ಕೆ ತಮ್ಮ ಹೆಸರು ಭಾವಚಿತ್ರ ಹಾಕಿದ್ದಾರೆಂದು ನಾಗನೂರು ಶ್ರೀಗಳು ಹೇಳಿಕೆ ನೀಡಿದರು.

ರೇಣುಕಾ ಜಯಂತಿಯ ಅಬ್ಬರ ಹೆಚ್ಚಿದಂತೆ, ಪಂಚಪೀಠಗಳು ವೀರಶೈವರು ಲಿಂಗಾಯತರು ಒಂದೇ ಎಂದು ಒತ್ತಿ ಹೇಳಿದಷ್ಟೂ ಎರಡು ಸಮುದಾಯಗಳ ನಡುವೆ ಘರ್ಷಣೆ ಹೆಚ್ಚಾಗಿದೆ ಎನ್ನುವುದೂ ಇಲ್ಲಿ ಗಮನಿಸಬೇಕು.

ಮಿಥ್ಯ ಸತ್ಯ ಬಿಡುಗಡೆಯಲ್ಲಿ ಬಿದರಿ ಭಾಷಣಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ “ಇನ್ನು ಮೂರು ನಾಲ್ಕು ವರ್ಷಗಳಲ್ಲಿ ‘ವೀರಶೈವ’ ಅನ್ನೋ ಪದ ಹೋಗಿ, ‘ಲಿಂಗಾಯತ’ ಅನ್ನೋ ಒಂದೇ ಪದ ಉಳಿಯಬೇಕು,” ಎಂದು ನೇರವಾಗಿ ಹೇಳಿದರು.

ರಾಯಚೂರಿನಲ್ಲಿ ಕಳೆದ ತಿಂಗಳು ನಡೆದ ನಿಜಾಚರಣೆ ಕಮ್ಮಟದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ವಿಷಯದಲ್ಲಿ ದೊಡ್ಡ ಒಡಕು ಮೂಡಿತು. ಕೊನೆ ಗಳಿಗೆಯಲ್ಲಿ ಕಮ್ಮಟದ ಸ್ಥಳ ಬದಲಾಯಿತು, ವೀರಶೈವ ಸಂಘಟನೆಗಳು ಕಾರ್ಯಕ್ರಮದಿಂದ ದೂರವುಳಿದವು.

ಈ ವಿಷಯದ ಮೇಲೆ ಬಸವ ಮೀಡಿಯಾದ ಓದುಗರ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಹಲವಾರು ಚಿಂತಕರು ಬಸವಣ್ಣನವರ ಪ್ರಭಾವ ಬೆಳೆಯುತ್ತಿರುವುದರಿಂದ ಪರ್ಯಾಯವಾಗಿ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.

ಬಸವಣ್ಣನವರ ಅನುಯಾಯಿಗಳನ್ನು ಆಕರ್ಷಿಸಲು ಜಯಂತಿಯ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಎಂದು ನ್ಯಾಯವಾದಿ ಬಸವರಾಜ ರೊಟ್ಟಿ ಹೇಳಿದರೆ, ಪಂಚಾಚಾರ್ಯರಿಗೆ ತಮಗೆ ಭಕ್ತರೇ ಇಲ್ಲದ ಕಾಲ ಬಂದಿತೇನೋ ಎಂಬ ಆತಂಕ ಕಾಡತೊಡಗಿದೆ ಎಂದು ಶರಣ ತತ್ವ ಚಿಂತಕ ನಿಂಗನಗೌಡ ಹಿರೇಸಕ್ಕರಗೌಡ್ರ ಹೇಳಿದರು.

ಈಗ ಬಿದರಿಯವರು ಹೊರಡಿಸಿರುವ ಸುತ್ತೋಲೆ ಬಸವಣ್ಣನವರ ಹೆಗಲಮೇಲೆ ರೇಣುಕಾಚಾರ್ಯರನ್ನು ಕೂರಿಸುವ ಪ್ರಯತ್ನಗಳ ಮುಂದುವರೆದ ಭಾಗವಷ್ಟೇ.

ಇದರ ಬಗ್ಗೆ ಮಾತನಾಡುತ್ತ ಉತ್ತರ ಕರ್ನಾಟಕದ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರೊಬ್ಬರು ಪಂಚಪೀಠಗಳು ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವಲ್ಲಿ ಅವರ ಅಸ್ತಿತ್ವದ ಪ್ರಶ್ನೆಯಿದೆ. ಆದರೆ ಬಿದರಿಯವರಿಗೆ ಈ ಸೂಕ್ಷ್ಮ ಸನ್ನಿವೇಶದಲ್ಲಿ ಇಂತಹ ಸುತ್ತೋಲೆ ಹೊರಡಿಸುವ ಒತ್ತಡವೇನಿತ್ತು ಅರ್ಥವಾಗುತ್ತಿಲ್ಲ. ವೀರಶೈವ ಮಹಾಸಭಾದಲ್ಲಿಯೂ ಬಹಳಷ್ಟು ಜನ ಬಸವ ಭಕ್ತರೇ ಆಗಿದ್ದಾರೆಂಬುದು ಅವರು ಮರೆಯಬಾರದು ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
19 Comments
  • ಈಗಾಗಲೇ ಸರಕಾರದವತಿಯಿಂದ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಾಗಿದೆ. ಏಪ್ರಿಲ್ 30 ರಂದು ಬಸವ ಜಯಂತಿ ಉತ್ಸವದಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವ, ಬಿದರಿಯವರ ಆದೇಶ ಅಸಂಭದ್ದ, ಆತಾರ್ಕಿಕವಾಗಿದೆ.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ says:

    ಇದೊಂದು ಗೋಜಲುಗೋಜಲಾದ ಜಾತಿಜಂಗಮರ ಒಂದುರೀತಿಯ ಕುತ್ಸಿತ ನಡೆ ರೇಣುಕಾಚಾರ್ಯನ ಜಯಂತಿಯೆಂಬುದು. ಅರ್ಥಹೀನ ಕೆಲಸ ಬರೀಯ ಹೊಟ್ಟೆಕಿಚ್ಚಿನ ನಡೆ.

    • ಶರಣು ಶರಣಾರ್ಥಿ

      ಈ ಹಿಂದೆ ಪಂಚ ಪೀಠದಲ್ಲಿ ಬಸವ ಜಯಂತಿ ಆಚರಣೆ ಮಾಡಲಾಯಿತೇ…? ಇಲ್ಲಿ!

      ‘ಪಂಪಿ’ ಗಳಲ್ಲಿ ರೇಣುಕಾಚಾರ್ಯ ಜಯಂತಿ ವೇಳೆ ಬಸವಣ್ಣನವರ ಭಾವಚಿತ್ರ ಇಟ್ಟಿದ್ದರೆ…..
      ಹಾಗೆಯೇ ವೀರಶೈವರು ರೇಣುಕಾ ಜಯಂತಿ ವೇಳೆ ಬಸವಣ್ಣನವರ ಭಾವಚಿತ್ರ ಇರಿಸಿಲ್ಲ…

      ಬಿದರಿಅವರು ಐಪಿಎಸ್ ಪಾಸಾಗಿದ್ದಾರೆಯೇ

      ಇವರಿಗೆ ಇತಿಹಾಸ ಪುರುಷ, ಕಾಲ್ಪನಿಕ ಪುರುಷರ ಬಗೆಗೆ ಒಂಚೂರು ಕಲ್ಪನೆನೆ ಇಲ್ಲ ಎಂದರೆ ಹೇಗೆ?

      ಬಿದರಿಯವರ ಬಿದಿರು ಪಂಚ ಪೀಠದ ಪಂಚ ಹಸ್ತದ ಶಾಪಕ್ಕೆ ಸುಟ್ಟಿತೆಂದು ಭಯ ಇರಬೇಕು.

      ಕಾಲ್ಪನಿಕವಾದ ವ್ಯಕ್ತಿ, ಕಾಲ್ಪನಿಕ ಕಥೆ,ಕಲ್ಲಲ್ಲಿ ಜನಿಸಿದ ಕಥೆ, ಇಂತಹ ವಿಜ್ಞಾನ ಯುಗದಲ್ಲಿ ನಂಬುತ್ತಾರೆ ಎಂದರೆ ಇವರು ಐಪಿಎಸ್ ಹೇಗೆ ಪಾರಾದರು ಎಂಬುದೇ ಸಂಶಯಕ್ಕೆ ದಾರಿ ಮಾಡಿಕೊಡುತ್ತದೆ
      .

  • ಉಗ್ರ ಹೋರಾಟ ಮಾಡಲೇ ಬೇಕಾದ ಅನಿವಾರ್ಯತೆ ಇದೆ

  • ಶಂಕರ ಬಿದರಿರವರು ಮೊದಲಿಗೆ ಲಿಂಗಾಯತ ಧರ್ಮದ ಬಗ್ಗೆ ಒಲವು ತೋರುತ್ತಿದ್ದರು. ಆದರೆ ಈಗ ವೀರಶೈವ ಮತ್ತು ರೇಣುಕಾಚಾರ್ಯಕ್ಕೆ ಕಟ್ಟುಬಿದ್ದಿರುವುದು ಆಶ್ಚರ್ಯ ತಂದಿದೆ. ಮೊದಲು ಇಂತಹ ವಿಚಾರಗಳನ್ನ ಖಂಡಿಸಬೇಕಿದೆ.
    ವೀರಶೈವರು ಪ್ರತ್ಯೇಕವಾಗಿ ರೇಣುಕಾಚಾರ್ಯರನ್ನ ಆಚರಣೆ ಮಾಡಿಕೊಳ್ಳಲಿ ಬಸವಣ್ಣನವರ ಜೊತೆ ಬೇಕಿಲ್ಲ.
    ವೀರಶೈವವಾದಿಗಳನ್ನ ಬಿಟ್ಟು ಬಸವಣ್ಣನವರ ಅನುಯಾಯಿಗಳೆಲ್ಲಾ ಲಿಂಗಾಯತ ಧರ್ಮದ ತತ್ವಸಿದ್ದಾಂತಗಳಿಗಾಗಿ ಹೋರಾಟ ಮಾಡೋಣ. ರೇಣುಕಾಚಾರ್ಯರ ಅನುಯಾಯಿಗಳ ಅವಶ್ಯಕತೆ ನಮಗೆ ಬೇಕಿಲ್ಲ.ಇದರ ಬಗ್ಗೆ ಸಭೆಗಳನ್ನ ಮಾಡಬೇಕಿದೆ

    • ಅ.ಭಾ. ವಿ.ಮಹಾಸಭೆ ದಾವಣಗೆರೆ ಮಹಾಧಿವೇಶನದ ನಿರ್ಣಯಗಳಿಗಾನುಸಾರ ಅವರ ಮುಂದಿನ ತೀರ್ಮಾನಗಳು ಇರಬೇಕು. ಅಲ್ಲಿ ಹಿಂದೂ‌ಧರ್ಮಿಯರಲ್ಲ ಎಂದು ನಿರ್ಣಯಿಸಿ, ಇಂದು ಅದಕ್ಕೆ ವಿರುದ್ದವಾಗಿ ಹಿಂದೂ ಧರ್ಮಿಯರೆನ್ನುವುವರ ಮಾತಿಗೆ ಮನ್ನಣೆ ನೀಡಿ ಯಾವ ಬಸವಣ್ಣನವರು ವೈದಿಕ ಪದ್ದತಿ ನಿರಾಕರಿಸಿ ಅವೈದಿಕ ಸಂಸ್ಕೃತಿ ಹುಟ್ಟುಹಾಕಿದವರು. ಅವರ ಜಯಂತಿಯನ್ನು ಬಸವಣ್ಣನವರ ವಿಚಾರದಾರೆಗಳನ್ನು ಒಪ್ಪದವರಜೊತೆ ಸೇರಿಸಿ ಮಾಡುವುದು ಎಷ್ಟು ಸಮಂಜಸ?

      • ಶಂಕರ್ ಬಿದರಿಯವರು ವೀರಶೈವ ಮಹಾಸಭಾಗೆ ಅಧ್ಯಕ್ಷರು
        ಲಿಂಗಾಯತ ಮಹಾಸಬೇಗೆ ಅಲ್ಲಾ
        ನೀವು ರೇಣುಕಾ ಜಯಂತಿಗೆ ಬಸವಣ್ಣನವರ ಪೋಟೋ ಹಾಕಬೇಡಿ
        ನಾವು ಬಸವಜಯಂತಿಗೆ ರೇಣುಕಾರ
        ಪೋಟೋ ಹಾಕಲ್ಲ
        ನಿಮ್ಮಗೋಡುವೆಗೆ ನಾವು ಬರಲ್ಲ
        ನಮ್ಮ ಗೋಡುವೆಗೆ ನೀವು ಬರಬೇಡಿ

  • ನಡೆ-ನುಡಿ ಶುದ್ಧವಿಲ್ಲದವರ ಸಂಘ-ಸಂಗಗಳನ್ನು ಬಸವಾದಿ ಶರಣರ ಸಂಘಟನೆಗಳು ಒಪ್ಪಲಾರವು. ಈ ಬಿದರಿಯವರೇನು ಲಿಂಗಾಯತರ ಆಡಳಿತಾಧಿಕಾರಿಯೇ ? ಇವರು ಪಲ್ಲಕ್ಕಿ ಹೊರಲಿ-ನಮ್ಮ ಅಭ್ಯಂತರ ಇಲ್ಲ. ಆದರೆ ಚಲಾವಣೆಯಲ್ಲಿ ಇರುವ ನಾಣ್ಯದೊಡನೆ ಖೊಟ್ಟಿ ನೋಟು ಬೇಡ. ಲಿಂಗಾಯತರಿಗೆ ಗೊತ್ತು ಈ ನೀರು ಮತ್ತು ಎಣ್ಣೆ ಎಂದೂ ಕೂಡಿರಲಾರವು. ಚತುರಾರ್ಯರ ಅಕಲು ಬಿದರಿಯವರಿಗೆ ಗೊತ್ತಾಗುತ್ತಿಲ್ಲ. ನೀವು ಅಲ್ಲೇ-ವೀರಶೈವದಲ್ಲಿರಿ. ಲಿಂಗಾಯತರಿಗೂ(ಬಸವಾದಿ ಶರಣರ ವಾರಸುದಾರರು) ಚತುರಾರ್ಯರಿಗೂ ಆಗಿ-ಬರುವುದಿಲ್ಲ. ಬಸವಣ್ಣನವರ ಜಯಂತಿಯಂದು ಬಸವೇಶ್ವರರ ಭಾವಚಿತ್ರದ/ಉಳಿದ ಶರಣರ ಭಾವಚಿತ್ರಗಳು ಇರಬೇಕೇ ವಿನಾ ರೇಣುಕರದಲ್ಲ. ಬೇಕಾದರೆ ಮತ್ತೊಂದು ದಿನ ವೀರಶೈವರು ರೇಣುಕರ ಮೆರವಣಿಗೆ ಮಾಡಿರಿ. ಈಗಾಗಲೇ ಅವರ ಜಯಂತಿ ಮುಗಿದಿದೆ. ಮತ್ತೇಕೆ ಬಸವಣ್ಣನವರ ಜಯಂತಿಯಂದು ಮಾಡಬೇಕು. ಬೆಂಗಳೂರಿನ ಸಭೆಗೆ ಇವರು ಬರಬಾರದಿತ್ತು. ಇವರನ್ನು ‘ಲಿಂಗಾಯತ’ದಿಂದ ದೂರ ಇಡಬೇಕು.ಲಿಂಗಾಯತ ಮಹಾ ಸಭಾದ ಜನರಲ್ ಸೆಕ್ರೆಟರಿಯವರಾದ ಶರಣರಾದ ಜಾಮದಾರ ಸಾಹೇಬರು ಇವರಿಗೆ ತಿಳಿ ಹೇಳಬೇಕು. ಶರಣಾರ್ಥಿಗಳು.

  • ಶಂಕರ್ ಬಿದರಿಯವರು ಉದ್ದೇಶಪೂರ್ವಕವಾಗಿ ಬಸವಣ್ಣವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಈ ಬೆಳವಣಿಗೆಯನ್ನು ಬಸವ ಭಕ್ತರು ಖಂಡಿಸುತ್ತಾರೆ

  • ಬಸವ ಜಯಂತಿಯಂದು ರೇಣುಕ ಜಯಂತಿ ಸೇರಿಸುವದು ತಪ್ಪು. ಪ್ರತ್ಯೇಕವಾಗಿ ಆಚರಿಸಿಕೊಳ್ಳಲಿ. ತಪ್ಪು ಸಂದೇಶ ರವಾನೆ ಯಾಗುವದು ಬೇಡ.

  • ತಪ್ಪು ನಾವು ಮಾಡುತ್ತಿರುವದು ಬಸವ ಜಯಂತಿ ರೇಣುಕ ಜಯಂತಿ ಅಲ್ಲ ಯಾರು ಹಾಕಕೂಡದು

  • ಬಸವ ಜಯಂತಿಯ ಸಂದರ್ಭದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಪ್ರದರ್ಶನವಾಗಲೀ, ಮೆರವಣಿಗೆಯಾಗಲೀ ಜೊತೆಯಲ್ಲಿ ಮಾಡಬಾರದು. ರೇಣುಕಾಚಾರ್ಯರ ಮೆರವಣಿಗೆ ಮಾಡಲು ಸಂಭ್ರಮಾಚರಣೆ ಮಾಡಲು ಯಾರದ್ದೂ ಅಡಚಣೆ ಇರುವುದಿಲ್ಲ. ಆದರೆ ಕಲ್ಪಿತ ಗುರುಗಳ ಭಾವಚಿತ್ರವನ್ನು ಏನೇನೂ ಸಂಬಂಧವಿಲ್ಲದ ಐತಿಹಾಸಿಕ ಪುರುಷ ಬಸವಣ್ಣನವರ ಜೊತೆ ಜೋಡಿಸಲು ಬಸವಾನುಯಾಯಿಗಳು ಮತ್ತು ಲಿಂಗಾಯತರು ಅವಕಾಶ ಕೊಡಬಾರದು. ಇದರ ಹಿಂದೆ ದೊಡ್ಡ ಕುತಂತ್ರವಿದೆ .

  • !!ಗುರ ಬಸವಲಿಂಗ ಶರಣ!!
    [ಅ.ಸ.ಷ.]
    ===============
    ಖಾನೆಸುಮಾರಿ ಲಿಂಗಾಯತರು ಹಾಗು ವೀರಶೈವರು ದಯವಿಟ್ಟು ಅಲಿಂಗಿಗಳಾದ ಶ್ರೀರೇಣುಕಾಚಾರ್ಯ ಅವರನ್ನು ಕೂಡಲೆ ತೊರೆದು ಬಸವಾದಿ ಶರಣ ಪರಂಪರೆಯ ಲಿಂಗ ಧರ್ಮದ ಲಿಂಗವಂತರಾಗಿ ಬದಲಾಗಿ. ಪೂಜ್ಯ ರೇವಣಸಿದ್ಧರೆಂಬ ಬಸವಾದಿ ಶರಣರಲ್ಲಿ ಅಮರಗಣಂಗಳಾಗಿದ್ದು ಚಿಕ್ಕ ಪ್ಪ ಐನ್ನಬಸವಣ್ಣ ಅವರು ವಚನದಂತೆ ಅವರಾರು ಸ್ಥಾವರಲಿಂಗದ ಉಪಾಸಕ ಯಾ ಪೂಜಕರಲ್ಲ. ಸನ್ಮಾನ್ಯ ಶಂಕರ್ ಬಿದರಿಯವರು ಈಗಲಾದರು ಬಸವ ಜಯಂತಿಯಲ್ಲಿ ಅಲಿಂಗಿ ಶ್ರೀರೇಣುಕಾಚಾರ್ಯರ ಹೆಸರನ್ನಾಗಲಿ ಯಾ ಅವರ ಬಗ್ಗೆ ಫೋಟೋ ಆಗಲಿ ಹಾಕುವುದು ಬೇಡ. ನಿಧಾನವಾಗಿಯಾದರೂ ಲಿಂಗತತ್ವಗಳನ್ನು ಕುರ್ಜಿಯ ಆಶೆಬಿಟ್ಟು ತಿಳಿದುಕೊಂಡು ದೇಶದಲ್ಲಿ ಲಿಂಗ ಧರ್ಮ ದಂಡಯಾತ್ರೆ ಕೈಕೊಳ್ಳಲು ಯೋಜನೆರೂಪಿಸಿ ಅಣ್ಣ, ಶರಣಾರ್ಥಿ.

  • ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿಯನ್ನುಬಹಳ ಅದ್ದೂರಿಯಾಗಿ ಮಾಡಬೇಕಾಗಿ ವಿನಂತಿ. ಇಡೀ ವಿಶ್ವಕ್ಕೆ ಮಾದರಿಯದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ತಲೆಯ ಮೇಲೆ ವಚನ ಸಾಹಿತ್ಯದ ಪುಸ್ತಕವನ್ನು ಇಟ್ಟುಕೊಂಡು ಪಥ ಸಂಚಲನ ದೊಂದಿಗೆ ನಿಜವಾದ ಆಚರಣೆ ಮಾಡಿದ ಶರಣರ ಭಾವಚಿತ್ರಗಳನ್ನುಹಾಕಿ ಈ ಜಯಂತಿಯಲ್ಲಿ ಬೇರೆಯವರ ವಿಚಾರವನ್ನು ಹಾಕಿಕೊಳ್ಳಬಾರದು.

  • ಬಸವ ಜಯಂತಿ ಆಚರಣೆ ಮಾಡುವಾಗ ಯಾರು ರೇಣುಕಾಚಾರ್ಯರ ಭಾವಚಿತ್ರ ಇಡಬಾರದು, ಶಂಕರ್ ಬಿದರಿ ಅವರಿಗೆ ಆ ಬಸವಣ್ಣ ಒಳ್ಳೆಯ ಬುದ್ದಿ ಕೊಡಲಿ.ಅತಂತ್ರ ನಿರ್ಧಾರ ಮಾಡಬೇಡಿ ಬಿದರಿಯವರೇ…..

  • ದಯವಿಟ್ಟುಬಿದರಿಯವರೇ ನೀವು ದ್ವಂದ್ವನಿಲುವಿನಿಂದ ಹೊರಬನ್ನಿ . ರೇಣುಕಾಚಾರ್ಯರ ತಂದೆ ತಾಯಿಯ ಹೆಸರೇನು ? ಯಾವ ದಿನ ಯಾವ ಗಳಿಗೆಯಲ್ಲಿ ಜನಿಸಿದರು ? ಅವರು ಸಮಾಜಕ್ಕೆ ನೀಡಿದ ಕೊಡುಗೆ ಏನು ? ಅವರು ಯಾವ ಕಾಲದವರು? ಅವರು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡವರೇ ? ಇಲ್ಲ ಹಾಗಾದರೆ ಬಸವ ಜಯಂತಿಯ ಸಂದರ್ಭದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಅವಶ್ಯಕತೆ ಏನು ? ಬಸವ ಭಕ್ತರಿಗೆ ಅವಶ್ಯಕತೆ ಇಲ್ಲ . ನಮಗೆ ನಿಮ್ಮ ವೀರಶೈವ
    ಸಂಘಟನೆಯ ಅವಶ್ಯಕತೆಯೂ ಇಲ್ಲ . ದಯವಿಟ್ಟು ಲಿಂಗಾಯತ ಧರ್ಮೀಯರನ್ನು ದಾರಿ ತಪ್ಪಿಸುವ ಕೆಲಸ ಮಾಡದಿರಿ . ವೀರಶೈವ ಎಂಬ ಪದವೇ ಪ್ರಕ್ಷಿಪ್ತ ಎಂಬುದುಸಂಶೋಧಕರ ಅಭಿಮತವಾಗಿರುವಾಗ … ಮೊದಲು ನೀವು ವೀರಶೈವ ಪದವನ್ನು ತೆಗೆದುಹಾಕಿ ಅಖಂಡ ಲಿಂಗಾಯುತ ಮಹಾಸಭಾ ಎಂದು ಹೆಸರನ್ನು ಇಡಿ . ಆಗ ನೀವು ಈ ಮಹಾಸಭೆಯ ಅಧ್ಯಕ್ಷರಾಗಿದ್ದಕ್ಕೂ ಸಾರ್ಥಕವಾಗುತ್ತದೆ . ಇಲ್ಲವಾದರೆ ಬಸವ ಧರ್ಮಿಯರನ್ನು ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ .

  • ಶಂಕರ ಬಿದರಿಯವರು ರೇಣುಕಾಚಾರ್ಯರ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಇಂದು ರಾಜ್ಯದಲ್ಲಿ ರೇಣುಕಾಚಾರ್ಯ ಎನ್ನುವವರೆ ಇಲ್ಲ ಹಾಲುಮತದ ರೇವಣಸಿದ್ದರನ್ನು ರೇಣುಕಾಚಾರ್ಯ ಎಂದು ಕಲ್ಲಿನ ಹುಟ್ಟಿದರೆಂದು ಸುಳ್ಳು ಹೇಳುತ್ತಾರೆ ಎಂದು ನೇರವಾಗಿ ಪ್ರಶ್ನಿಸುತ್ತಿದ್ದಾರೆ ಮೊದಲು ಅವರಿಗೆ ಉತ್ತರಿಸಲು ಮುಂದಾಗಲಿ.ಅದು ಬಿಟ್ಟು ಬಸವಣ್ಣನವರ ಜೊತೆ ರೇಣುಕಾಚಾರ್ಯರನ್ನು ಸೇರಿಸಿ ಬಸವಧರ್ಮವನ್ನು ಕಲುಷಿತಗೊಳಿಸುವ ಕೆಲಸ ಮಾಡುವುದು ಸರಿಯಲ್ಲ.ಪಂಚಪೀಠಗಳು ರೇಣುಕಾಚಾರ್ಯರ ಕುರಿತು ಮಾತನಾಡುತ್ತಾರೆ, ರೇಣುಕಾಚಾರ್ಯ ಎಂಬುವವರೆ ಇರಲಿಲ್ಲ ಅದೆಲ್ಲ ಶುದ್ಧ ಸುಳ್ಳು ಎನ್ನುವ ಮಠಾಧೀಶರು,ಒಂದು ಸಮುದಾಯದ ಜನರು ಪ್ರಶ್ನೆ ಮಾಡುತ್ತಿದ್ದಾರೆ ಅವರಿಗೆ ಉತ್ತರಿಸಬೇಕು ಅದು ಬಿಟ್ಟು ಬಸವ ಜಯಂತಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರವನ್ನು ಸೇರಿಸಿ ಆಚರಣೆ ಮಾಡಿ ಎನ್ನುವ ಫರ್ಮಾನು ಹೊರಡಿಸಿ ಶಂಕರ್ ಬಿದರಿಯವರು ನಾಳೆ ರಾಜ್ಯದ ಹೋದ ಕಡೆಗಳಲ್ಲಿ ಘನತೆ ಕಡಿಮೆಗೊಳಿಸಿಕೊಳ್ಳುವ ಸ್ಥಿತಿ ತಂದುಕೊಳ್ಳದಿರಲಿ.

  • ಬಸವ ಜಯಂತಿಯಂದು ರೇಣುಕಾಚಾರ್ಯರ ಭಾವಚಿತ್ರವನ್ನು ಸೇರಿಸುವುದು ತಪ್ಪು

Leave a Reply

Your email address will not be published. Required fields are marked *