ಬೆಂಗಳೂರು
ವಿವಿಧ ಜಿಲ್ಲೆಗಳಲ್ಲಿ ಉತ್ಸವ ಸಮಿತಿಗಳ, ಬಸವ ಸಂಘಟನೆಗಳ ಹಾಗೂ ಸರಕಾರದ ಸಹಯೋಗದಲ್ಲಿ ಬಸವ ಜಯಂತಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ.
ರಾಯಚೂರಿನಲ್ಲಿ ಏಪ್ರಿಲ್ 20 ಸಂಭ್ರಮದ ಬಸವ ಜಯಂತಿ
ಜಿಲ್ಲಾಡಳಿತದಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಏಪ್ರಿಲ್ 20ರಂದು ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಅವರು ತಿಳಿಸಿದ್ದಾರೆ.
ಎ.9ರ ಗುರುವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಸವಣ್ಣ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ನಡೆಯಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬೀದರ್: ಬಸವ ಜಯಂತಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಬಸವ ಜಯಂತಿಯ ಉತ್ಸವ ಸಮಿತಿಯ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ.ರಜನೀಶ ವಾಲಿ ಹಾಗೂ ಬೀದರ್ ಮಹಾನಗರ ಪಾಲಿಕೆಯ ಸದಸ್ಯ ಶಶಿಧರ ಹೊಸಳ್ಳಿ ಅವರನ್ನು ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಮಾಡಲಾಗಿದೆ.
ಕೋಶಾಧ್ಯಕ್ಷರಾಗಿ ಸಿದ್ರಾಮಯ್ಯ ಸ್ವಾಮಿ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಧನರಾಜ ಹಂಗರಗಿ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಮ ಮುದಾಳೆ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಡಾ. ದೇವಕಿ ಅಶೋಕ ನಾಗೋರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಡಾ.ರಜನೀಶ ವಾಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಬಸವ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗದಗದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ವಚನ ಪಾಠಶಾಲೆ, ಜಗದ್ಗುರು ತೋಂಟದಾರ್ಯಮಠದ ವತಿಯಿಂದ ಬಸವ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ವಚನಾಧಾರಿತ ಚಿತ್ರರಚನೆ, ಪ್ರಬಂಧ ಹಾಗೂ ವಚನ ಸಮೂಹ ನೃತ್ಯ ಸ್ಪರ್ಧೆಗಳನ್ನು ತೋಂಟದಾರ್ಯ ಮಠದಲ್ಲಿ ಆಯೋಜಿಸಲಾಗಿದೆ.
ಏ.19ರಂದು ಮಧ್ಯಾಹ್ನ 3ಕ್ಕೆ ವಚನ ಕಂಠಪಾಠ ಸ್ಪರ್ಧೆ 1ರಿಂದ 4ನೇ ತರಗತಿ ಹಾಗೂ 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ನಡೆಯಲಿದೆ. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ವಿಶ್ವಗುರು ಬಸವಣ್ಣ: ಕರ್ನಾಟಕದ ಸಾಂಸ್ಕೃತಿಕ ನಾಯಕ’ ಈ ವಿಷಯವಾಗಿ ಪ್ರಬಂಧ ಸ್ಪರ್ಧೆ ಜರುಗಲಿದೆ.
ಏ.20ರಂದು ಮಧ್ಯಾಹ್ನ 3ಕ್ಕೆ ವಚನಾಧಾರಿತ ಚಿತ್ರರಚನಾ ಸ್ಪರ್ಧೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ನಡೆಯಲಿದೆ. ವಚನ ಸಮೂಹ ನೃತ್ಯ ಸ್ಪರ್ಧೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜರುಗಲಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಭಾಗವಹಿಸಲಿಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆಯ ನಿಯಮ ಹಾಗೂ ನೋಂದಣಿಗಾಗಿ 94499 72988, 92415 85423ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.
ಚಾಮರಾಜನಗರದಲ್ಲಿ ವೈಚಾರಿಕ, ಅದ್ದೂರಿ ಬಸವ ಜಯಂತಿ

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ ಸಂಬಂಧ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು.
ಜಿಲ್ಲಾಡಳಿತ, ಸಮುದಾಯಗಳ ಸಹಕಾರದೊಂದಿಗೆ ಏ.20ರಂದು ವಿಚಾರ ಸಂಕಿರಣ ಆಯೋಜಿಸುವ ಮೂಲಕ ಸಾಂಕೇತಿಕವಾಗಿ ಬಸವ ಜಯಂತಿ ಆಚರಣೆ ಮಾಡಲಾಗುವುದು. ನಂತರ ಅದ್ದೂರಿಯಾಗಿ ಬಸವಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
‘ಏ.20ರಂದು ಬಸವೇಶ್ವರರ ವಿಚಾರಧಾರೆಗಳನ್ನು ತಲುಪಿಸಲು ವಿಚಾರ ಸಂಕಿರಣ, ವಚನ ಗಾಯನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶೀಘ್ರ ಮತ್ತೊಂದು ದಿನಾಂಕ ನಿಗದಿಪಡಿಸಿ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ ಮಾಡಬೇಕು’ ಎಂದು ಮುಖಂಡರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಎಲ್ಲ ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಸವ ಜಯಂತಿ ಆಚರಣೆ ಆಗಬೇಕು. ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಬೇಕು. ಸರ್ಕಾರದ ಆದೇಶದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಬೇಕು. ಮಹಾನ್ ನಾಯಕರ ಜಯಂತಿಗಳ ಆಚರಣೆ ಮಾಡುವಂತೆ ಬಸವೇಶ್ವರರ ಜಯಂತಿಯೂ ನಡೆಯಬೇಕು ಎಂದು ಮುಖಂಡರು ಸಲಹೆ ನೀಡಿದರು.
ಬಸವ ಜಯಂತಿ ಕಾರ್ಯಕ್ರಮದ ದಿನ ಬಸವೇಶ್ವರರ ಕುರಿತು ಪ್ರಕಟವಾಗಿರುವ ಪುಸ್ತಕ ಮಳಿಗೆ ತೆರೆಯಬೇಕು. ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಷ್ಠಾಪಿಸಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
