ಜಮಖಂಡಿ
ಪೌಷ್ಟಿಕ ಆಹಾರವಾದ ಹಾಲನ್ನು ಚೆಲ್ಲದೆ, ಅದೇ ಹಾಲನ್ನು ಮಕ್ಕಳಿಗೆ ಕುಡಿಸಬೇಕು. ಕಲ್ಲು-ಮಣ್ಣನ್ನು ದೇವರೆಂದು ತಿಳಿದು ಅದರ ಮೇಲೆ ಸುರಿದು ಹಾಳು ಮಾಡುವ ಮೌಢ್ಯ ನಂಬಿಕೆ ಹೊಗಲಾಡಿಸುವುದೇ ಬಸವ ಕೆಂದ್ರದ ಉದ್ದೇಶವಾಗಿದೆ ಎಂದು ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ ಹೇಳಿದರು.

ಬಸವ ಕೆಂದ್ರದ ವತಿಯಿಂದ, ಸ್ಥಳೀಯ ಡಾ ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಗುರುವಾರ ಆಚರಿಸಲಾದ ‘ಹಾಲು ಕುಡಿಸುವ ಹಬ್ಬ ಬಸವ ಪಂಚಮಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಓಲೆಮಠದ ಪೂಜ್ಯ ಆನಂದ ದೇವರು ವಹಿಸಿ ಮಾತನಾಡುತ್ತ, ಹಾಲನ್ನು ಹಾಳು ಮಾಡದೇ ಅದರ ಅವಶ್ಯಕತೆ ಇರುವ ದೀನ ದಲಿತರಿಗೆ ಕುಡಿಸಬೇಕು. ಮೌಢ್ಯ, ಕಂದಾಚಾರಗಳನ್ನು ಬಿಡಬೇಕು, ಮಾನವೀಯ ಮೌಲ್ಯದ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಅಧ್ಯಕ್ಷ್ಯತೆಯನ್ನು ನಿಲಯ ಪಾಲಕರಾದ ಶರಣೆ ಸವಿತಾ ತುಂಗಳ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಬಸವಸ್ವರೂಪ ಯಡಹಳ್ಳಿ ಬೋಧಿಸಿದರು. ಎಲ್ಲರೂ ಕೈ ಮುಂದೆ ಮಾಡಿ ಪ್ರಮಾಣ ಸ್ವೀಕರಿಸಿದರು.


ಸ್ವಾಗತವನ್ನು ಅಕ್ಕಮಹಾದೇವಿ ವಾಜಂತ್ರಿ, ನಿರೂಪಣೆ ಅಣ್ಣಾಸಾಬ ಜಗದೇವ, ವಚನ ಗಾಯನವನ್ನು ಬಸವ ಕೆಂದ್ರದ ಶರಣೆಯರು ನಡೆಸಿಕೊಟ್ಟರು. ಕೇಂದ್ರದ ಇತರೆ ಸದಸ್ಯರು ಉಪಸ್ಥಿತರಿದ್ದರು.