ಅಭಿಯಾನ 2025: ಜಿಲ್ಲಾ ಮಟ್ಟದಲ್ಲಿ ಬಸವ ನಿಷ್ಟರ ಪಟ್ಟಿ ಮಾಡಿ

(ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಶರಣ ತತ್ವ ಚಿಂತಕ ನಿಂಗನಗೌಡ ಹ. ಹಿರೇಸಕ್ಕರಗೌಡರ ಅವರ ಚಿಂತನೆ. ಕಾರ್ಯಕ್ರಮ ಬಸವ ರೇಡಿಯೋದಲ್ಲಿ ಏಪ್ರಿಲ್ 9 ನಡೆಯಿತು.)

ಬೆಂಗಳೂರು

ಪ್ರತಿ ಜಿಲ್ಲೆಯಲ್ಲಿ ಬಸವ ಬೆಳಕನ್ನು ಬೆಳಗಿಸುತ್ತಿರುವವರನ್ನು ಈ ಅಭಿಯಾನಕ್ಕೆ ಸೇರಿಸಿಕೊಂಡು ಅಭಿಯಾನವನ್ನು ಮಾಡಬೇಕು.

ಜಿಲ್ಲಾ ಮಟ್ಟದಲ್ಲಿ ಬಸವ ನಿಷ್ಟರ ಪಟ್ಟಿ ಮಾಡಬೇಕು. ಅವರಿಗೆ ಅಭಿಯಾನದ ಜವಾಬ್ದಾರಿಗಳನ್ನು ಹಂಚಬೇಕು. ಜಿಲ್ಲೆಗಳಲ್ಲಿ ಯೋಗ್ಯ ಮಠಾಧೀಶರನ್ನೂ ಆರಿಸಿಕೊಂಡು ಅವರ ಮುಖಂಡತ್ವದಲ್ಲಿ ಅಭಿಯಾನ ಮುಂದುವರಿಯಬೇಕು.

ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ತಯಾರಿಗಾಗಿ ಎಲ್ಲರಿಗೂ ಒಪ್ಪಿಗೆಯಾಗುವ ಒಬ್ಬ ಮುಖ್ಯಸ್ಥರನ್ನು ನೇಮಿಸಬೇಕು, ಆ ಮುಖ್ಯಸ್ಥರು ಒಕ್ಕೂಟದ ನಿರ್ಧಾರಗಳನ್ನು ಸಮಗ್ರವಾಗಿ ಅನುಷ್ಠಾನ ಮಾಡಬೇಕು.

ಅಭಿಯಾನದುದ್ದಕ್ಕೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು ಮತ್ತು ಬಹುಮಾನಗಳನ್ನು ಕೊಡಬೇಕು. ಲಿಂಗಾಯತರು ಲಿಂಗ ಕಟ್ಟಿಕೊಳ್ಳುವ ಮತ್ತು ಪೂಜೆ ಮಾಡುವ ಅಭ್ಯಾಸವನ್ನು ಈ ಅಭಿಯಾನ ಮನವರಿಕೆ ಮಾಡಿಕೊಡಬೇಕು.

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 500 ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ಮತ್ತು ಬಸವತತ್ವದ ಸಂಸ್ಕಾರಗಳನ್ನು ಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಈ ಕಾರ್ಯದಲ್ಲಿ ಸಾರ್ವಜನಿಕರೂ ಭಾಗವಹಿಸಬಹುದು.

ಮಹಾಮನೆಯ 770 ಅಮರಗಣಂಗಳ ಹೆಸರುಗಳನ್ನು ಬರೆಯುವ ಸ್ಪರ್ಧೆಯನ್ನೂ ಏರ್ಪಡಿಸಬೇಕು. ಯಾವ ಧರ್ಮವನ್ನೂ ದ್ವೇಷ ಮಾಡದೆ ಎಲ್ಲರನ್ನೂ ಅಪ್ಪಿಕೊಂಡು ಒಗ್ಗೂಡಿಸುವ ಕೆಲಸ ಆಗಬೇಕು. ಬಸವ ಧರ್ಮ/ಲಿಂಗಾಯತ ಧರ್ಮ ಅಚ್ಚ ಕನ್ನಡದ ಧರ್ಮ.

ಲಿಂಗಾಯತರ ಮೂಲಭೂತ ತಳಪಾಯವಾದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಳಗಳನ್ನು ಮಕ್ಕಳಿಂದ ಹೇಳಿಸುವ ಸ್ಪರ್ಧೆಯನ್ನು ಮಾಡಬೇಕು. ಗಣಾಚಾರದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಬೇಕು. ಶರಣರ ಭಾವಚಿತ್ರ ಸ್ಪರ್ಧೆ, ಸಂವಿಧಾನ ಮತ್ತು ವಚನದ ಆಶಯಗಳ ಬಗ್ಗೆ ಚರ್ಚಾಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವುದು ಸೂಕ್ತ.

ಇದಕ್ಕೆಲ್ಲಾ ಬೇಕಿರುವ ಆರ್ಥಿಕ ವ್ಯವಸ್ಥೆಯನ್ನು ದಾಸೋಹದ ತತ್ವದಡಿಯಲ್ಲಿ ಭರಿಸುವ ಯೋಜನೆಯನ್ನು ಹಾಕಿಕೊಳ್ಳಬೇಕು. ಶರಣ ಧರ್ಮ, ವಚನ ಧರ್ಮ, ಲಿಂಗಾಯತ ಧರ್ಮ ಇವುಗಳನ್ನು ಅಭಿಯಾನಕ್ಕೆ ಹೆಸರಿಡಲು ಉಪಯೋಗಿಸಿಕೊಳ್ಳಬಹುದು.

ಇದರಲ್ಲಿ ಇರುವ ಎಲ್ಲಾ ಉಪಪಂಗಡಗಳನ್ನು ಒಗ್ಗೂಡಿಸಬೇಕು.

—————

ಶರಣ ನಿಂಗನಗೌಡ ಹ. ಹಿರೇಸಕ್ಕರಗೌಡರ
ಇವರು ಸ್ನಾತಕೋತ್ತರ ಪದವಿ MA BEd ಮತ್ತು ಕನ್ನಡ ಪಂಡಿತ ಪದವಿಯನ್ನೂ ಮಾಡಿದ್ದಾರೆ. ಪ್ರೌಢಶಾಲಾ ಶಿಕ್ಷಕರಾಗಿ ಈಗ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಗದಗ – ಬೆಟಗೇರಿ ನಗರಗಳ ಬಸವದಳದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಭಾನುವಾರ “ವಚನ ಸಂಗಮ” ಮತ್ತು ಪ್ರತಿ ಗುರುವಾರ “ಮನೆಯಲ್ಲಿ ಮಹಾಮನೆ” ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸುವ ಕೆಲಸ ಮಾಡುತ್ತಾರೆ. ಇವರ ಮತ್ತೊಂದು ಹವ್ಯಾಸವೆಂದರೆ ಬಸವಾದಿ ಶರಣರ ವಚನಗಳ ಕುರಿತು ಜಿಜ್ಞಾಸೆ ನಡೆಸುವುದು. ಶರಣರಾದ ಹರ್ಡೇಕರ್ ಮಂಜಪ್ಪ, ಮತ್ತು ಫ. ಗು. ಹಳಕಟ್ಟಿ ಇವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಡಾ. ತೋಂಟದ ಸಿದ್ಧಲಿಂಗ ಶಿವಯೋಗಿಗಳ ಆದೇಶದಂತೆ ರಚಿಸಿದ್ದಾರೆ. “ಶರಣ ಸಂಗಮ” ಸ್ಮರಣ ಸಂಚಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *