ಒಮ್ಮೆ ವೀರಶೈವ ಮಹಾಸಭಾ ಬಸವ ಜಯಂತಿಯನ್ನು ‘ಎತ್ತಿನ ಜಯಂತಿ’ ಎಂದು ಅಪಹಾಸ್ಯ ಮಾಡಿತ್ತು. ಶಂಕರ ಬಿದರಿ ಈಗ ಮತ್ತೆ ಅದೇ ಸಾಹಸಕ್ಕೆ ಕೈಹಾಕಿದ್ದಾರೆ.
ಬಹಿರಂಗ ಪತ್ರ
ಶಂಕರ ಮಹಾದೇವ ಬಿದರಿ (ನಿವೃತ್ತ ಐಪಿಎಸ್)
ಅಧ್ಯಕ್ಷರು,
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ,
ಕರ್ನಾಟಕ ರಾಜ್ಯ ಘಟಕ, ಬೆಂಗಳೂರು
ಮಾನ್ಯರೆ,
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷರಾದ ತಾವು ತಮ್ಮ ಸಂಸ್ಥೆಯ ಸಭೆಯನ್ನು ದಿನಾಂಕ ೧೮.೦೩.೨೦೨೫ರಂದು ನಡೆಸಿ ಬರುವ ಏಪ್ರಿಲ್ ೩೦ ರಂದು ರಾಜ್ಯದಾದ್ಯಂತ ಶ್ರೀ ರೇಣುಕಾಚಾರ್ಯ, ಬಸವೇಶ್ವರ ಮತ್ತು ೭೭೦ ಅಮರ ಗಣಂಗಳ ಜಯಂತಿಯನ್ನು ನಡೆಸಬೇಕೆಂಬ ನಿರ್ಣಯಕ್ಕೆ ಸಂಬಂದಿಸಿದ ಸುತ್ತೋಲೆಯನ್ನು ದಿನಾಂಕ ೦೨.೦೪.೨೦೨೫ರಂದು ಹೊರಡಿಸಿದ್ದೀರ, ಈ ಬಗ್ಗೆ ನನ್ನ ಅಭಿಪ್ರಾಯ ಹಾಗೂ ಭಿನ್ನಮತ.
೧) ಒಮ್ಮೆ ತಮ್ಮ ಸಂಸ್ಥೆಯು ಬಸವ ಜಯಂತಿಯನ್ನು “ಎತ್ತಿನ ಜಯಂತಿ” ಎಂದು ಬಸವಣ್ಣನವರನ್ನು ಅಪಹಾಸ್ಯಮಾಡುವ ಕೆಲಸ ಮಾಡಿತ್ತು. ಅದು ಹೆಚ್ಚು ಕಾಲ ನಡೆಯಲಿಲ್ಲ. ಈಗ ತಾವು ಮತ್ತೊಂದು ‘ಸಾಹಸ’ಕ್ಕೆ ಕೈಹಾಕಿದ್ದೀರಿ. ನಿಮಗೆ ಮಹಾಗುರು ಬಸವಣ್ಣ ಬುದ್ಧಿ ನೀಡಲಿ. ಎಲ್ಲವೂ ಕೈತಪ್ಪಿ ಹೋಗುವ ಮುನ್ನ ಸದರಿ ನಿರ್ಣಯವನ್ನು ಹಿಂತೆಗೆದುಕೊಳ್ಳಿ.
ಕರ್ನಾಟಕ ಸರ್ಕಾರವೇ ನಮ್ಮ ಧರ್ಮಕ್ಷೇತ್ರವಾದ ಕೂಡಲಸಂಗಮದಲ್ಲಿ ಮುಂದಿನ ೨೦೨೫ರ ಬಸವ ಜಯಂತಿಯಂದು “ಸರ್ವ ಧರ್ಮ ಸಂಸದ್” ಮಹಾಮನೆ-ಅನುಭವ ಮಂಟಪ ಕಾರ್ಯಕ್ರಮ ನಡೆಸುತ್ತಿದೆ. ಇದನ್ನೂ ಗಮನದಲ್ಲಿಟ್ಟುಕೊಂಡು ಮಿಶ್ರಣ ದೋಷದ ಜಯಂತಿಯನ್ನು ನಿಲ್ಲಿಸಿ ಎಂದು ಮನವಿ ಮತ್ತೆ ಮಾಡಿಕೊಳ್ಳಿತ್ತಿದ್ದೇನೆ.
೨) ಈ ಸುತ್ತೋಲೆ ಮತ್ತು ಅದಕ್ಕೆ ಸಂಬಂದಿಸಿದ ಮಹಾಸಭೆಯ ೧೮ ಮಾರ್ಚ್ ೨೦೨೫ರ ನಿರ್ಣಯದಲ್ಲಿ “ಚಾರಿತ್ರಿಕ ದೋಷ” ಎದ್ದು ಕಾಣುತ್ತದೆ.
ರೇಣುಕಾಚಾರ್ಯ ಜಯಂತಿ ಯಾವಾಗ (ಅಂದಾಜು ಜನನದ ವರ್ಷವೇನಾದರು ತಿಳಿದಿದೆಯೇ) ಮತ್ತು ಶ್ರೀ ಬಸವಣ್ಣನವರ ಜಯಂತಿ ಯಾವಾಗ ಎಂಬುದರ ಬಗ್ಗೆ ಅಧ್ಯಕ್ಷರಿಗೆ ಗೊತ್ತಿರಬೇಕಿತ್ತು. ಹೇಗೆ ಪುರಾಣ ಪುರುಷರನ್ನು, ಲಿಂಗದಿಂದ ಉದ್ಭವಿಸಿದವರನ್ನು ಚಾರಿತ್ರಿಕ ವ್ಯಕ್ತಿಯ ಜೊತೆಯಲ್ಲಿ ಸೇರಿಸುತ್ತೀರಿ? ಒಂದು ಚಾರಿತ್ರಿಕ ದೋಷ, ಎರಡನೆಯದು ಪುರಾಣ-ಚರಿತ್ರ‍್ರೆ ಸೇರಿಸಿದ ಮಿಶ್ರಣದ ದೋಷ. ಈ ನಿರ್ಣಯವು ದೋಷಪೂರ್ಣವಾಗಿದೆ.
೩) ಸುತ್ತೋಲೆಯ ಮೊದಲ ಭಾಗದಲ್ಲಿ ರೇಣುಕಾಚಾರ್ಯರ ಹೆಸರಿನ ನಂತರ ಶ್ರೀ ಬಸವೇಶ್ವರರ ಹೆಸರನ್ನು ಬರೆದಿದ್ದಾರೆ (ನೋಡಿ: ವಿಷಯ, ಪ್ಯಾರ ೨.೧, ಪ್ಯಾರ ೨.೨).
ನಂತರ ಸುತ್ತೋಲೆಯ ಕೆಲವು ಭಾಗಗಳಲ್ಲಿ ಬಸವ ಜಯಂತಿ ಎಂಬುದನ್ನು ರೇಣುಕಾಚಾರ್ಯರನ್ನು ಬಿಟ್ಟು ಬಳಸಿದ್ದಾರೆ (ನೋಡಿ: ಪ್ಯಾರ ೨.೩. ಪ್ಯಾರ ೩.೪. ಮತ್ತು ಪ್ಯಾರ ೪). ಇದೂ ಕೂಡ ಮಹನೀಯರು ಅತ್ಯಂತ ಗೊಂದಲ, ಅಭದ್ರತೆಯಿಂದ ಸುತ್ತೋಲೆಯನ್ನು ಸಿದ್ಧಪಡಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.
೪) ಶ್ರೀ ಬಸವಣ್ಣನವರ ಮತ್ತು ಶ್ರೀ ರೇಣುಕರ ಜಯಂತಿ ಮಾತ್ರ ಎಂದರೆ ಬರಬಹುದಾದ ಟೀಕೆಗಳನ್ನು ಮೊದಲೇ ಮನಗಂಡು ಇವೆರಡಕ್ಕೂ ೭೭೦ ಅಮರ ಗಣಂಗಳ ಜಯಂತಿಯನ್ನು ಇಲ್ಲಿ ಸೇರಿಸಿದ್ದಾರೆ. ಇದೂ ಕೂಡ ಅಧ್ಯಕ್ಷರು ಸದರಿ ನಿರ್ಣಯದ ಬಗ್ಗೆ ಗೊಂದಲ, ಅಭದ್ರತೆಯ ಮನಸ್ಸಿನಲ್ಲಿದ್ದಾರೆ ಎಂಬುದು ತಿಳಿಯುತ್ತದೆ.
೫) ಬಸವ ಜಯಂತಿಯನ್ನು ”ಗೌಣ”ಗೊಳಿಸುವ “ನಗಣ್ಯ”ಗೊಳಿಸುವ ವೀರಶೈವದ ಮತ್ತು ತಮ್ಮ ತಂತ್ರ ರಹಸ್ಯವಾಗೇನಿಲ್ಲ. ತಾವು ದೊಡ್ಡ ತಪ್ಪು ಮಾಡುತ್ತಿದ್ದೀರಿ. ಏನೋ ಕ್ರಾಂತಿಕಾರಕವಾದ ಬದಲಾವಣೆಯನ್ನು ‘ಕಾಯಕ ಜೀವಿ’ಗಳು ಎಂಬುದನ್ನು ಬಳಸಿ, ಲಿಂಗಾಯತದ ಸಣ್ಣ-ಪುಟ್ಟ ಪಂಗಡಗಳ ಬಗ್ಗೆ ಮಾತನಾಡುವುದರ ಮೂಲಕ ದೊಡವರಾಗುತ್ತೇವೆ ಎಂದು ತಾವು ಭಾವಿಸಿದಂತಿದೆ. ಈ ಎಲ್ಲ “ಸುತ್ತಿ-ಬಳಸಿ” ನಡೆಸುವ ಕಾರ್ಯತಂತ್ರ ಇಂದು ನಡೆಯುವುದಿಲ್ಲ. ಲಿಂಗಾಯತದ ಸಣ್ಣ-ಪುಟ್ಟ ಪಂಗಡಗಳ ಬಗ್ಗೆ ಕಳೆದ ೧೨೧ ವರ್ಷಗಳಿಂದ ಅಖಿಲ ಭಾರತ ವೀರಶೈವ ಮಹಾಸಭೆಯು ಏನು ಮಾಡಿದೆ ಎಂಬುದು ತಮಗೂ ಗೊತ್ತಿದೆ ಮತ್ತು ಜನರಿಗೂ ಗೊತ್ತಿದೆ.
೬) ಈ ಸುತ್ತೋಲೆಯಲ್ಲಿ ಆರು ಪ್ಯಾರಗಳಿವೆ. ಇದರಲ್ಲಿ ಕೊನೆಯ ಮೂರು ಪ್ಯಾರಾಗಳು ಹಣ ಸಂಗ್ರಹಕ್ಕೆ ಮೀಸಲಾಗಿವೆ. ಈ ದೇಣಿಗೆಯನ್ನು ಶ್ರೀ ಬಿದರಿ ಅವರು ‘ಸಮಾಜ ಸೇವಾ ಕಾಣಿಕೆ’ ಎಂದು ಕರೆದಿದ್ದಾರೆ. ಹೆಚ್ಚ ಹಣ ಸಂಗ್ರಹಕರಿಗೆ ಸಮಾಜ ಸೇವಾ ದುರೀಣ ಮತ್ತು ಸಮಾಜ ಸೇವಾರತ್ನ ಪ್ರಶಸ್ತಿ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸುತ್ತೋಲೆ ಮತ್ತು ಸಮಾಜ ಸೇವಾ ಕಾಣಿಕೆ ಮುಂತಾದ ನುಡಿಗಳನ್ನು ನೋಡಿದರೆ ಇವರಿಗೆ ಬಸವ – ವಚನ ಪರಿಭಾಷೆಯ ಪರಿಚಯವಿದ್ದಂತೆ ಕಾಣುವುದಿಲ್ಲ. ದಾಸೋಹ ಎಂಬ ತತ್ವದ ಬಗ್ಗೆ ಸುತ್ತೋಲೆಯಲ್ಲಿ ಎಲ್ಲೆಲ್ಲಿಯೂ ಉಲ್ಲೇಖವಿಲ್ಲ.
೭) ಈಗಾಗಲೆ ನಾನು ಮತ್ತೆ ಮತ್ತೆ ಹೇಳುತ್ತಿರುವಂತೆ ಇಂದಿನ ಬಸವಾನುಯಾಯಿಗಳು – ಲಿಂಗಾಯತರು ೨೦೧೭ರ ಪೂರ್ವದ ಲಿಂಗಾಯತರಲ್ಲ. ಇಂದು ಲಿಂಗಾಯತವು ಪುನರುತ್ಥಾನ ಪ್ರಕ್ರಿಯೆಯಲ್ಲಿ ಹಾದು ಹೋಗುತ್ತಿದೆ. ಚರಿತ್ರೆ ಮತ್ತು ಪುರಾಣಗಳ ನಡುವಿನ ಕಂದಾಚಾರ ಅವರಿಗೆ ತಿಳಿದಿದೆ. ಉನ್ನತ ಶಿಕ್ಷಣ-ಪದವಿ ಪಡೆದಿರುವ ಶ್ರೀ ಬಿದರಿ ಅವರಿಗೆ ಪುರಾಣ ಯಾವುದು, ಚರಿತ್ರೆ ಯಾವುದು, ಕಂದಾಚಾರ ಯಾವುದು-ವೈಚಾರಿಕತೆ ಯಾವುದು ಎಂಬುದೆಲ್ಲ ತಿಳಿಯುತ್ತದೆ ಎಂದು ನಾನು ಭಾವಿಸುತ್ತೇನೆ.
೮) ಈ ಚಾರಿತ್ರಿಕ ದೋಷ಼ ಮತ್ತು ಪುರಾಣ-ಚರಿತ್ರೆ ಮಿಶಣದ ದೋಷಗಳಿಂದಾಗಿ ತಾವು ಭಾರಿ ವಿರೋಧವನ್ನು ಎದುರಿಸಬೇಕಾಗುತ್ತದೆ. ಬಸವಣ್ಣ ಲಿಂಗಾಯತರಿಗೆ ಮಾತ್ರವಲ್ಲ, ಕನ್ನಡ ನಾಡಿನ ಸಕಲ ಸಮುದಾಯಗಳಿಗೂ ಪೂಜ್ಯ್ಯ-ಗೌರವದ ಮಹಾಗುರು. ಶ್ರೀ ರೇಣುಕರು ವೀರಶೈವರಿಗೆ ಮಾತ್ರ ಗುರು. ಇದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಇಂದು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ. ಶ್ರೀ ರೇಣುಕಾಚಾರ್ಯರು ಯಾರು? ಬಸವಣ್ಣ “ಆಚಾರ್ಯ”ರಲ್ಲ.
ಆದ್ದರಿಂದ ಮಹಾದೋಷದಿಂದ ಕೂಡಿರುವ ತಮ್ಮ ಬಸವ ಜಯಂತಿಯನ್ನು ಗೌಣಗೊಳಿಸುವ, ಹತ್ತರಲ್ಲಿ ಹನ್ನೊಂದನಯದನ್ನಾಗಿ ಮಾಡುವ, ಬೆರಕೆ ಮಾಡುವ, ಪುರಾಣವನ್ನು ಚರಿತ್ರೆಯ ಜೊತೆ ಕಲಬೆರಕೆ ಮಾಡುವ ಪ್ರಯತ್ನವನ್ನು – ಸಾಹಸವನ್ನು ಕೈಬಿಡಿ. ಇದು ಅಖಿಲ ಭಾರತ ವೀರಶೈವ ಮಹಾಸಭೆಗೂ ಗೌರವ.
ಶರಣಾರ್ಥಿಗಳು
ಟಿ. ಆರ್. ಚಂದ್ರಶೇಖರ
ಬೆಂಗಳೂರು
ಜಯಂತಿ ಅಂದ್ರೆ ಬಸವ ಜಯಂತಿ ಬೇರೆ ಯಾರ್ನೋ ತಂದು ಕೂರಿಸಿ ಅಪವಿತ್ರ ಗೊಳಿಸಬೇಡಿ ಪವಿತ್ರ ವಾಗಿ ನಡೆಯುವ ಜಯಂತಿಯನು ಹಾಳು ಮಾಡಬೇಡಿ ನಿಮಂತರು ಮಹಾ ಸಬಾದ ಅಧ್ಯಕ್ಷರು ಹಾಗಿರೋದು ಮದಲೇ ತಪ್ಪು ದುಡ್ಡಿದೆ ಅಂತ ಮೇರಿಯಾ ಬೇಡಿ ಶಂಕರ ಬಿದ್ರಿಯವರೇ ಮಾತನಾಡವಾಗ ಎಚ್ಚರ ವಯಿಸಿ ಮತ್ತಾ ನಾಡಿ
ಅ.ಭಾ.ವೀ.ಮಹಾಸಭೆ ಬಸವಾದಿಶರಣರಿಗೆ ಸಂಭದಪಡದ ಹಾಗು ಬಸವತತ್ವ ಒಪ್ಪದ, ಪಾಲಿಸದ, ಬಸವಣ್ಣ ನವರ ವಿಚಾರಗಳಿಗೆ ತದ್ವಿರುದ್ದವಾಗಿ ನಡೆದುಕೊಳ್ಳುವ, ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪದ ಕಾಲ್ಪನಿಕ ರೇಣುಕರ ಭಾವಚಿತ್ರ ಚಿತ್ರ ದೊಂದಿಗೆ ಬಸವಜಯಂತಿ ಕಾರ್ಯಕ್ರಮ ನಿಯೋಜಿಸಿ ನಡೆಸುವುದನ್ನು ಎಲ್ಲ ಬಸವಪರ ಸಂಘಟನೆ ಗಳು ಖಂಡಿಸುವುದಲ್ಲದೆ ಅಂತಹ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತದೆ.
ಶಂಕರ್ ಬಿದರಿ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ರೇಣುಕಾಚಾರ್ಯರ ಇತಿಹಾಸದ ಬಗ್ಗೆ ಯಾವ ದಾಖಲೆ ಕೂಡ ಇಲ್ಲ ಬಿದರಿವರು ಬೇಕಾದರೆ ಅವರ ಅಡ್ಡ ಪಲ್ಲಕ್ಕಿ ಹೋರಲಿ, ಆದರೆ ಬಸವಣ್ಣನವರ ಜಯಂತಿಯಲ್ಲಿ ಯಾಕೆ ಮೂಗು ತುರಿಸುತ್ತಿದ್ದಾರೆ..
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯು 08-04-2025 ರಂದು ಹೊರಡಿಸಿರುವ “ಸುತ್ತೋಲೆ”ಯು ಯಾರನ್ನು ಉದ್ದೇಶಿಸಿದ್ದು ಎಂತಲೇ ತಿಳಿಯುತ್ತಿಲ್ಲ. ಇದು ಸಭೆಯ ಅಧಿಕಾರಿ ವರ್ಗದವರನ್ನೋ, ಭಕ್ತವೃಂದವನ್ನೋ ಅಥವಾ ಸುತ್ತೋಲೆಯಲ್ಲೇ ಹೇಳಿರುವಂತೆ ಉದರ ನಿರ್ವಾಹಕರನ್ನೋ? ಶರಣರು ಹೇಳಿಹೋದ ಕಾಯಕ ಸಿದ್ದಾoತ ಉದರ ನಿರ್ವಹಣೆಯ ಉದ್ದೇಶ ಹೊಂದಿದ್ದು ಎಂದು ಸಭೆಯು ತಿಳಿದುಕೊಂಡಿರುವುದು ಸುತ್ತೋಲೆಯಲ್ಲಿ ವ್ಯಕ್ತವಾಗಿದೆ. ಉದರ ನಿರ್ವಹಣೆ ಎಂಬ ಪದ ಬಳಕೆಯೇ ಶರಣರು ಪ್ರತಿಪಾದಿಸಿ ಹೋದ ಕಾಯಕ ಸಿದ್ದಾoತಕ್ಕೆ ಸಭೆಯು ಬಗೆದ ಸ್ವಯಂ ದ್ರೋಹ. ಜಯಂತಿಗಳ ಆಚರಣೆ ಸ್ವಾಭಿಮಾನಿ ಜೀವನಕ್ಕೆ ಅಡ್ಡ ಬರಬಹುದಾದರೆ ಅಂತಹ ಜಯಂತಿಗಳೇ ಬೇಕಿಲ್ಲ. ಬರೀ ಆಚರಣೆ, ಮೆರವಣಿಗೆ, ಪ್ರದರ್ಶನ, ಹಣ ಸಂಗ್ರಹಣೆ, ಮಾನ ಸನ್ಮಾನಗಳ ಸುತ್ತ ಸುತ್ತುವ ಸುತ್ತೋಲೆ ಬಸವಾದಿ ಶರಣರ ವಚನ ನುಡಿಮುತ್ತುಗಳ ಪ್ರಚಾರ ಮತ್ತು ಅನುಷ್ಠಾನಕ್ಕೆ ಕರೆ ಕೊಡದೆ ಇರುವುದು ಶೋಚನೀಯ. ಅಧಿಕಾರದಲ್ಲಿದ್ದು ಅದ ನಂತರವೂ ಅಧಿಕಾರಕ್ಕೆ ಅಂಟಿಕೊಳ್ಳುವ ನಂಟಿನ ನಂಜಿನ ಮನೋಧರ್ಮದವರು ಸಮಾಜದ ಎಲ್ಲಾ ರಂಗಗಳ ಮುಂಚೂಣಿಯಲ್ಲಿ ಪ್ರಾಣ ಪ್ರತಿಷ್ಟಾಪನೆ ಮಾಡಿ ಕುಳಿತುಕೊಂಡಿರುವಾಗ ಇಂತಹ ಅವಘಡಗಳು ಆಗುತ್ತವೆ. ಇದಕ್ಕೆ ಕರ್ನಾಟಕದ ಸಂಸ್ಕೃತಿಕ ನಾಯಕನ ಜಯಂತಿಯು ಗುರಿಯಾಗುತ್ತಿರುವುದು ವಿಷಾದಕರ.
ಎಚ್ ಶಿವಕುಮಾರ ಬೆಂಗಳೂರು
ದಾಳಿ ೧- ೧೫ ನೇ ಶತಮಾನದಲ್ಲಿ ಸಿಧ್ದಾಂತ ಶೀಖಾಮಣಿ, ಕಾಲ್ಪನಿಕ ರೇಣುಕಾಚಾರ್ಯರನ್ಬು ಹುಟ್ಟಿ ಹಾಕಿ ಲಿಂಗಾಯತ ಅಸ್ಮಿತೆಯ ಮೇಲೆ ದಾಳಿ ಮಾಡಿದ್ದು
ದಾಳಿ೨- ೧೯೦೦ ರಲ್ಲಿ ಲಿಂಗಾಯತರನ್ನು ವರ್ಣಾಶ್ರಮದ ಅಡಿಯಲ್ಲಿ ತರುವ ಪ್ರಯತ್ನ ಮಾಡಿ ,ಜಾತಿ ಜಂಗಮರು ತಮ್ಮನ್ನು ತಾವು ಲಿಂಗಿ ಬ್ರಾಹ್ಮಣ ಎಂದು ಕರೆದುಕೊಂಡು, ವೀರಶೈವ ಹೆಸರು ಬಳಸಿ ಬಸವಣ್ಣನವರನ್ನು ಭಕ್ತ ಎಂದು ಸಮಾಜದಲ್ಲಿ ಹರಡಿದ್ದು , ಇವರ ಅಡ್ಡಪಲ್ಲಕ್ಕಿಗಳು ಮತ್ತು ಪಂಚಾಚಾರ್ಯ ಮಠಗಳು ಅಸಂಖ್ಯಾತ ಪುಸ್ತಕಗಳಲ್ಲಿ ಬಸವಣ್ಣನವರ ಶರಣರ ಕುರಿತು ಕೀಳಾಗಿ ಬರೆದು ಅಪಪ್ರಚಾರ ಮಾಡಿದ್ದು, ಹೀಗಾಗಿ ಇವತ್ರು ಬಹುತೇಕ ಜಾತಿ ಜಂಗಮ ಸಮಾಜ ಬಸವಣ್ಣನಚರಿಂದ ದೂರ ಉಳಿದು ವೈದಿಕ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳುತ್ತಾರೆ, ಬಸವ ತತ್ವವನ್ನು ವಿರೋದಿಸುವ ಮುಂಚೂಣಿಯಲ್ಕಿರುವವರು ಬಹುತೇಕ ಜಾತಿ ಜಂಗಮರೇ- ಇದು ಇವರ ಎರಡನೇ ಯಶಸ್ವಿ ದಾಳಿ.
ದಾಳಿ ೩- ೨೦೨೫ ರಲ್ಲಿ ಹೆಚ್ಚುತ್ರಿರುವ ಲಿಂಗಾಯತ ಅಸ್ಮಿತೆ ,ಸಾಂಸ್ಕ್ರತಿಕ ನಾಯಕ ಎಂದು ಬಸವಣ್ಣನವರು ಗುರುತಿಸಲ್ಪಟ್ಟದ್ದನ್ನು ಸಹಿಸಿಕೊಳ್ಳಲಾರದೇ ಲಿಂಗಾಯತರ ಮೇಲೆ ಕಾಲ್ಪನಿಕ ರೇಣುಕಾಚಾರ್ಯರನ್ನು ಹೇರುವ ಪ್ರಯತ್ನ, ಇದನ್ನು ಹೀಗೆ ಬಿಟ್ಟರೆ ಮುಂದಿನ ನೂರು ವರ್ಷದಲ್ಲಿ ಬಸವಣ್ಣನವರ ಜಾಗದಲ್ಲಿ ಈಕಾಲ್ಪನಿಕ ರೇಣುಕಾಚಾರ್ಯನನ್ನೇ ಕುಳ್ಳಿಸಿ ,ಲಿಂಗಾಯತರ ಮೇಲೆ ಸವಾರಿ ನಡೆಸುವ ಸ್ಪಷ್ಟ ಹುನ್ನಾರ, ಶಂಕರ ಬಿದರಿಯವರಿಗೆ ಸೈದ್ಧಾಂತಿಕ ಸ್ಥಷ್ಟತೆ ಇದೆಯೇ ? ಇವರು ಟಿಕೇಟಿಗಾಗಿ ಎರಡು ಮೂರು ಪಕ್ಷದ ಬಾಗಿಲು ಬಡಿದು ಬಂದು ಇವರ ರಾಜಕೀಯ ಭವಿಷ್ಯಕ್ಕೆ ಲಿಂಗಾಯತ ಅಸ್ಮಿತೆ ಬಲಿ ಕೊಡುವುದಾದರೆ,ಶಂಕರ ಬಿದರಿಯವರಿಗೆ ನಮ್ಮ ಪ್ರತಿಭಟನೆಯ ಬಿಸಿ ತಗುಲಲಿದೆ ,ಇವರು ವೀರಶೈವ ಪಂಚಾಚಾರ್ಯರ ಗುಪ್ತ ಸೂಚಿಯ ಕಾರ್ಯವಾಗಿ ಈ ರೀತಿ ನಿರ್ದಾರ ತೆಗೆದುಕೊಂಡರೆ ನಮ್ಮ ಅಸ್ಮುತೆಗಾಗಿ ನಾವು ಶಂಕರ ಬಿದರಿಯವರ ಮತ್ತು ರಾಜಕಾರಣಿಗಳ ಅಸ್ತಿತ್ವಕ್ಕಾಗಿ ಇರುವ ವೀರಶೈವ ಮಹಾಸಭಾದ ವಿರುದ್ದ ಪ್ರತಿಭಟನೆ ಮಾಡಿಯೇ ತೀರುತ್ತೇವೆ.
ಮೂರನೇ ದಾಳಿ-
ಇವೆಲ್ಲಾ ಗೊಂದಲ ಬೇಡ, ಮಾಮೂಲಿನಂತೆ ಬಸವಜಯಂತಿ ಆಚರಣೆ ಮಾಡೋಣ. ಸುಖಾಸುಮ್ಮನೆ ಜನರನ್ನು ದಿಕ್ಕು ಕೆಡಿಸಬೇಡಿ, ರೇಣುಕಾಚಾರ್ಯ ಜಯಂತಿ ಮಾಡಿ ಆಗಿದೆ. ಈಗ ಬಂದಿರೋದು ಬಸವಜಯಂತಿ. ಅದನ್ನ ಮಾಡಿ, ಬೇರೆ ಬೇರೆ ಗೊಂದಲ ಮಾಡ್ಕೋಬೇಡಿ 🙏
ಬಸವ ಜಯಂತಿಯನ್ನು ಅಪವಿತ್ರಗೊಳಿಸುವ ಇಂದು ನಿನ್ನೆಯದಲ್ಲ ಬಸವಣ್ಣನವರ ಕಾಲದಿಂದನೇ ಇದೆ ಅದರ ವಿರುದ್ಧ ಹೋರಾಟ ಮಾಡುವ ಅಗತ್ಯ ತುಂಬಾ ಇದೆ
ರೇಣುಕಾ ಮಹಾಸಭಾ ಎಂದು ಕಟ್ಟಿ ಅದರಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಿ ನಮಗೇನು ಅಭ್ಯಂತರವಿಲ್ಲ ಆದರೆ ಬಸವಣ್ಣನವರ ಜೊತೆ ಸೇರಿಸಿ ಮಾಡುವುದು ಒಳ್ಳೆಯದಲ್ಲ.
ಶ್ರೀಯುತ ಶಂಕರ ಮಹಾದೇವ ಬಿದರಿ ಅವರು ಇದೇ 8.4.25 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯದ ಅಧ್ಯಕ್ಷರಾಗಿ ಈ ವರ್ಷದ ಬಸವ ಜಯಂತಿಯನ್ನು ಆಚರಿಸಲು ಒಂದು ಸುತ್ತೋಲೆ ಹೊರಡಿಸಿದ್ದಾರೆ .ಅದಕ್ಕೆ ನಾವು ಸಂತೋಷ ಪಡೋಣ. ಶ್ರೀಯುತ ಶಂಕರ ಬಿದರಿ ಬಗ್ಗೆ ಇದುವರೆಗೂ ನಾಡಿನ ಎಲ್ಲ ಬಸವ ತತ್ವದ ಅನುಯಾಯಿಗಳು ಒಳ್ಳೆ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಅದು ಹಾಗೆಯೇ ಉಳಿಯಲಿ ಎಂಬುದು ನನ್ನ ಅಭಿಪ್ರಾಯ. ಆದರೆ ಶ್ರೀಯುತರು ಇದೇ ತಿಂಗಳ 30 ರಂದು ರಾಜ್ಯದಾದ್ಯಂತ ಬಸವ ಜಯಂತಿ ಆಚರಣೆಗೆ ಅವರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಘಟಕಗಳಿಗೆ ದಿನಾಂಕ 8.4.25 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಲಿಂಗಾಯತ ಧರ್ಮದ ಸ್ಥಾಪಕ, ಇಷ್ಟ ಲಿಂಗ ಆವಿಷ್ಕಾರ ಮಾಡಿದ ಸಮಸಮಾಜ ನಿರ್ಮಾಣ ಮಾಡಲು ಬಂದಿದ್ದ ಮಹಾ ಮಾನವತಾವಾದಿ , ವಿಚಾರವಾದಿ., ಮತ್ತು ಐತಿಹಾಸಿಕ ಮಹಾನ್ ಚೇತನ ವಿಶ್ವಗುರು ಬಸವಣ್ಣನವರ ಜೊತೆಗೆ ಅಪ್ಪ ಅಮ್ಮ ಇಬ್ಬರೂ ಇಲ್ಲದೆ ಕೈಲಾಸದಿಂದ ನೇರವಾಗಿ ಕೊಲ್ಲಿಪಾಕಿಗೆ ಬಂದು ಅಲ್ಲಿ 11 ನೆಯ ಶತಮಾನದಲ್ಲಿ ಕಾಕತೀಯ ಸಾಮ್ರಾಟರು ಕಟ್ಟಿದ ಶ್ರೀ ಸೋಮೇಶ್ವರ ದೇವಾಲಯದ ಕಲ್ಲಿನ ಲಿಂಗವನ್ನು ಒಡೆದುಕೊಂಡು ಹೊರಗೆ ಬಂದರು ಎಂದು ಹೇಳುವ, ಹುಟ್ಟಿದ್ದಕ್ಕೂ ಮತ್ತು ಸತ್ತಿದ್ದಕ್ಕೂ ದಾಖಲೆ ಇಲ್ಲದ ರೇಣುಕಾಚಾರ್ಯ ಎಂಬ ಕಾಲ್ಪನಿಕ ವ್ಯಕ್ತಿಯ ಜಯಂತಿಯನ್ನು ಆಚರಿಸಬೇಕೆಂದು ಸೂಚನೆ ನೀಡಿರುವುದು ಸರ್ವಥಾ ಸರಿಯಲ್ಲ ಎಂದು ಸರಿಯಲ್ಲ. ಈಗಾಗಲೇ ಕರ್ನಾಟಕ ಬಿಜೆಪಿ ಸರ್ಕಾರ ಪ್ರತಿ ವರ್ಷ ಮಾರ್ಚ್ ತಿಂಗಳ 12 ರಂದು ರೇಣುಕಾಚಾರ್ಯರ ಜಯಂತಿ ಆಚರಣೆ ರಾಜ್ಯ ಸರ್ಕಾರದ ವತಿಯಿಂದ ಆಚರಿಸುತ್ತಿದೆ. ಅಂದರೆ ಮಾರ್ಚ್ ತಿಂಗಳಲ್ಲಿ ರೇಣುಕಾಚಾರ್ಯರ ಜಯಂತಿ ಇದ್ದೋ ಬಸವ ಜಯಂತಿ ಆಚರಣೆ ಯಲ್ಲಿ ಅವರನ್ನು ತರುತ್ತಿರುವುದು ನೈಜ ಲಿಂಗಾಯತರ ಭಾವನೆಗೆ ಘಾಸಿ ಉಂಟುಮಾಡಿದೆ. ಆದ್ದರಿಂದ ಈಗಲೋ ಸಮಯ ಇದೆ ಶ್ರೀಯುತ ಶಂಕರ ಬಿದರಿ ಅವರು ಆಗಿರುವ ತಪ್ಪನ್ನು ಒಪ್ಪಿಕೊಂಡು ಬಸವ ಜಯಂತಿ ದಿನ ಬಸವಣ್ಣ ಜೊತೆ 770 ಅಮರ ಗಣಂಗಳ ಫೋಟೋ ಮಾತ್ರ ಇಟ್ಟು ಕಾರ್ಯಕ್ರಮ ಮಾಡಲು ಮುಂದಾಗಲಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶರಣು ಶರಣಾರ್ಥಿ.
ಬಿದರಿಯವರು ಮೊದಲು ವಚನ ಸಾಹಿತ್ಯವನ್ನು ಮೊದಲು ಆಳವಾಗಿ ಅಧ್ಯಯನ ಮಾಡಲಿ. ಇವರು ಯಾವುದೋ ಬಾಹ್ಯ ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದೆ. ಇಂತಹ ಬಾಹ್ಯ ಒತ್ತಡಕ್ಕೆ ಒಳಗಾಗಿ ಲಿಂಗಾಯತ ಪದದ ಜಾಗದಲ್ಲಿ ವೀರಶೈವ ಪದ ಬಂದು ಕುಳಿತಿದೆ. ಮೊದಲು ಸರಕಾರಿ ದಾಖಲೆಗಳಲ್ಲಿ , ಶಾಲಾ ರಜಿಸ್ಟರ್ ಗಳಲ್ಲಿ ವೀರಶೈವ ಪದ ಇರಲಿಲ್ಲ. ಅದೇ ಮಾದರಿಯಲ್ಲಿ ಬಸವ ತಂದೆಯ ಜಾಗದಲ್ಲಿ ರೇಣುಕ ಬಂದರೆ ನಮ್ಮ ಜನ ಅದನ್ನು ಸಹಜವಾಗಿ ತಗೋತಾರೆ. ಈಗಲೇ ಪ್ರತಿರೋಧ ಆಗಬೇಕು ಸರ್.
ದಯವಿಟ್ಟು ನಮಗೆ ಬಸವ ಜಯಂತಿ ಮಾತ್ರ ಬೇಕು. ಯಾವ ಆರಾಧ್ಯರ ಅವಶ್ಯಕತೆ ನಮಗಿಲ್ಲ. ಇದನ್ನು ದಯವಿಟ್ಟು ಬಿದರಿಯವರು ಅರ್ಥ ಮಾಡಿಕೊಂಡು ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಪೂರ್ವಕ ಕೋರಿಕೆ
ಶ್ರೀ ರೇಣುಕಾಚಾರ್ಯಮತ್ತು 770 ಅಮರ ಗಣಂಗಳ ಜಯಂತಿಯನ್ನು ನಡೆಸಬೇಕೆಂಬ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನಿರ್ಣಯ ಖಂಡಿತವಾಗಿಯೂ ಬಸವ ಜಯಂತಿಯನ್ನು ಗೌಣಗೊಳಿಸುವ ಪ್ರಯತ್ನವೇ.
ಬಸವಣ್ಣ ಹುಟ್ಟಿದ ದಿನ, ನಕ್ಷತ್ರ, ಸ್ಥಳಗಳ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಕರಾರುವಾಕ್ ಮಾಹಿತಿ ಇದೆ.
ಶ್ರೀ ರೇಣುಕಾಚಾರ್ಯಮತ್ತು 770 ಅಮರ ಗಣಂಗಳ ಜಯಂತಿಯನ್ನು ಯಾವ ಆಧಾರದ ಮೇಲೆ ಬಸವ ಜಯಂತಿಯ ಜೊತೆ ಸೇರ್ಪಡೆ ಮಾಡಲಾಗುತ್ತಿದೆ?
ಇದರಿಂದ ಬಸವ ಜಯಂತಿಯ ಮೌಲ್ಯ ಮತ್ತು ಮಹತ್ವ ಎರಡೂ ದುರ್ಬಲಗೊಳ್ಳುತ್ತವೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಬಸವಣ್ಣನವರ ಘನತೆಗೆ ಮತ್ತು ವೀರಶೈವ-ಲಿಂಗಾಯತರ ಹಿತಾಸಕ್ತಿಗೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು.