ಬಸವ ಸಂಸ್ಕೃತಿ ಅಭಿಯಾನ: ಉತ್ಸಾಹದ ಕೊರತೆ ನೀಗಿಸಿ ಮುನ್ನಡೆಯಲಿ

ಶರಣರ ತತ್ವ, ಬಲಿದಾನ, ಲಿಂಗಾಯತ ಧರ್ಮ ಮತ್ತು ಇತಿಹಾಸವನ್ನು ಜನರಿಗೆ ತಲುಪಿಸಲು ದುಡಿಯೋಣ

ಸಿಂಧನೂರು

ಸೆಪ್ಟೆಂಬರ್ ತಿಂಗಳಿನಲ್ಲಿ ಹಮ್ಮಿಕೊಂಡ ಬಸವ ಜಾಗೃತಿ ಅಭಿಯಾನಕ್ಕೆ ಇಷ್ಟೊತ್ತಿಗೆ ಮೂರ್ನಾಲ್ಕು ಸಭೆಗಳು ಆಗಬೇಕಾಗಿತ್ತು, ಆದರೆ ಈಗ ಕಾಣುತ್ತಿರುವ ಉತ್ಸಾಹದ ಕೊರತೆ ನಮ್ಮನ್ನು ಹಿಮ್ಮುಖಗೊಳಿಸಬಾರದು.

ಮಠಾಧೀಶರಾಗಲಿ, ಬಸವ ಸಂಘಟನೆಗಳಾಗಲಿ, ಬಸವ ಭಕ್ತರಾಗಲಿ ಇದು ಶರಣರು ತಮ್ಮ ರಕ್ತ ಹರಿಸಿ ಕೊಡಮಾಡಿದಂಥ ತತ್ವಗಳಿಗಾಗಿ ದುಡಿಯುವ ಅವಕಾಶವೆಂದು ತಿಳಿದು ತನು ಮನ ಧನ ಸಮರ್ಪಿಸಿ ದುಡಿಯಬೇಕು.‌ ಈಗಲಾದರೂ ಸಕ್ರಿಯರಾಗಿ ಪಾಲ್ಗೊಂಡರೆ ಎಲ್ಲವನ್ನು ಸಾಧಿಸಬಹುದು.

ಈ ಅಭಿಯಾನದಲ್ಲಿ ಪ್ರಮುಖವಾಗಿ ಶರಣರ ತ್ಯಾಗ ಬಲಿದಾನದಂಥ ವಿಷಯಗಳು ಪ್ರಚುರಪಡಿಸಬೇಕು. ಎಳೆಹೂಟೆಯಂಥ ಘಟನೆಗಳನ್ನು ಜನರ ಭಾವನೆಗಳಿಗೆ ಮುಟ್ಟುವಂತೆ ಮಾತನಾಡುವ ಕಲೆ ಉಳ್ಳವರಿಗೆ ಅವಕಾಶ ಕೊಡಬೇಕು.

ವಿವಿಧ ಧರ್ಮ, ತತ್ವ, ಆಚರಣೆಗಳನ್ನು ಹೊಂದಿದ್ದ ಅನೇಕ ಸಾಧಕರು, ಜಿಜ್ಞಾಸುಗಳು ಬಸವಣ್ಣನವರ ಪ್ರವಾಹದಲ್ಲಿ ಜೊತೆಗೂಡಿದಕ್ಕೆ ಕಾರಣಗಳೇನು ಎಂದು ತಿಳಿಸುವ ಕೆಲಸವಾದರೆ ಬಹುಷಃ ಬಸವ ಸಿದ್ಧಾಂತ ಎದುರಿಸುತ್ತಿರುವ ವಿರೋಧ, ತಪ್ಪು ತಿಳುವಳಿಕೆಗಳಿಗೆ ಪರಿಹಾರ ಸಿಗಬಹುದು. ಬಸವ ಧರ್ಮದ ವಿಶೇಷ ಆರಾಧನ ಮಾರ್ಗ ಹೇಗೆ ಬಹುಜನರನ್ನ ಆಕರ್ಷಸಿತು ಎನ್ನುವುದನ್ನು ತಿಳಿಸಬೇಕು.

ಎರಡನೆಯದಾಗಿ, ಕರ್ಕಶವಾಗಿ ಟೀಕೆ ಮಾಡುವುದರ ಬದಲು ಬಸವ ತತ್ವಕ್ಕೆ ಇಲ್ಲಿಯವರೆಗೆ ಆದ ಅನ್ಯಾಯಗಳ ಬಗ್ಗೆಯೂ ಜನಮಾನಸಕ್ಕೆ ಮುಟ್ಟಿಸಬೇಕಾಗಿದೆ. ನಂಜನಗೂಡಿನ ಲಿಂಗಾಯತ ಮಠಾಧೀಶರ ಹತ್ಯಾಕಾಂಡ, ಲಿಂಗಾಯತ ಸಂಗಮ ವಂಶದ ರಾಜನನ್ನು ಕೊಲೆಮಾಡಿಸಿ ಮತ್ತೆ ವೈಷ್ಣವ ಸಿಂದ್ಧಾಂತವನ್ನು, ಫುರೋಹಿತಶಾಹಿ ಆಚರಣೆಗಳನ್ನು ತೋರಿಸಿದ್ದರ ಬಗ್ಗೆ ಜನರಿಗೆ ಮನಮುಟ್ಟುವಂತೆ ವಿವರಣೆ ಕೊಡಬೇಕು.

ಬಹಳಷ್ಟು ಜನರು ಮೌಢ್ಯಾಚರಣೆಗಳಲ್ಲೇ ಇರುವದರಿಂದ ಅವುಗಳನ್ನು ನೇರವಾಗಿ ಅಲ್ಲಗಳೆದರೆ ಅವರು ಬಸವತತ್ವಗಳನ್ನು ನೇರವಾಗಿ ನಿರಾಕರಿಸಬಹುದು, ಹಾಗಾಗಿ ಸೂಕ್ಷ್ಮವಾಗಿ ನಿಜತತ್ವ ತಿಳಿಸಿ, ಮೂಢ ಆಚರಣೆಗಳ ಬಗ್ಗೆ ಅವರೇ ವಿಚಾರ ಮಾಡುವಂತೆ ಪ್ರೇರೇಪಿಸುವ ಅವಶ್ಯಕತೆ ಇದೆ. ಈ ಸೂಕ್ಷ್ಮತೆಯನ್ನು ಮಾತನಾಡುವವರು ಅರಿಯಬೇಕು.

ಈ ಸಿದ್ದಾಂತ ಸರ್ವಜನಾಂಗದ ಏಳಿಗೆಗಾಗಿ ರೂಪಿತವಾಗಿದ್ದು ಅದು ನಂತರ ಜಾತಿ ವ್ಯವಸ್ಥೆಯಾಗಿ ರೂಪಗೊಂಡುದುದರ ಬಗ್ಗೆ ವಿವರಿಸಿ, ಎಲ್ಲಾ ಕಾಯಕ ವರ್ಗದವರ ಮನಮುಟ್ಟುವಂತೆ ವಿವರಣೆ ಕೊಡುವ ಅಗತ್ಯವಿದೆ.

ಜೊತೆಗೆ ಈಗ ಲಿಂಗಾಯತರೆನಿಸಿಕೊಂಡವರಿಗೆ ಅವರ ಇತಿಹಾಸದ ನೆನಪು ಕೊಟ್ಟು, ಅವರು ಎಲ್ಲರನ್ನು ಒಳಗೊಳ್ಳುವಂತ ವಿಶಾಲ ಮನಸ್ಸು ಹೊಂದಲು ಪ್ರೆರೇಪಿಸಬೇಕು.

ಮುಖ್ಯವಾಗಿ ವೀರಶೈವ ಜಂಗಮರ ಮನಸ್ಸಿನಲ್ಲಿ ಬಸವಣ್ಣನವರ ಬಗ್ಗೆ ವಿಷಬೀಜ ಮೊಳಕೆಯಾಗಿದೆ, ಹಳ್ಳಿಗಳಲ್ಲಿನ ಹಿರೇಮಠಗಳು ಬಸವಣ್ಣನವರ ಲಕ್ಷದ ತೊಂಬತ್ತಾರು ಸಾವಿರ ಚರ ಜಂಗಮರ ವಾರಸುದಾರರು ಎಂಬ ಸತ್ಯವನ್ನು ಪ್ರಸ್ತಾಪಿಸಬೇಕು. ಅವರನ್ನು ಹೊರಗಿಟ್ಟು ಮಾತನಾಡಬಾರದು.

ಹಿಂದುತ್ವದ ಆಧಾರದ ಮೇಲೆ ಕೆಲವು ಸಂಘಟನೆಗಳು ಜನರನ್ನು ಹುರಿದುಂಬಿಸಿ, ಶೂದ್ರ ಯುವಕರನ್ನೇ ತಮ್ಮ ದಾಳಗಳಾಗಿ ಬಳಸುತ್ತಿದ್ದಾರೆ, ನಾವು ಹಿಂದೂಗಳಲ್ಲ ಎನ್ನುವುದರ ಜಾಗದಲ್ಲಿ, ನಾವು ಜೈನ, ಸಿಖ್ಖರಂತೆ ಭೌಗೋಳಿಕವಾಗಿ ಹಿಂದೂಗಳು, ಆದರೆ ಧಾರ್ಮಿಕವಾಗಿ ಸ್ವತಂತ್ರರು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.

ಆದಷ್ಟು ಟೀಕೆಗಳಿಗೆ ಅವಕಾಶವಾಗದಂತೆ ಚಿಂತನೆ ಚರ್ಚೆಗಳು ನಡೆಯಬೇಕು ಆಗ ಮಾತ್ರ ಜನರ ಮನಸ್ಸನ್ನು ತಲುಪುತ್ತದೆ, ಇದರ ಕಡೆ ಗಮನ ಹರಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
1 Comment
  • ತುಂಬಾ ಒಳ್ಳೆಯ ಬರಹ. ನಿಜಕ್ಕೂ ಚಿಂತನಾರ್ಹ ಹಾಗೂ ಈ ಅಂಶಗಳು ಹೆಚ್ಚೆಚ್ಚು ಚರ್ಚೆಗೆ ಒಳಗಾಗಿ ಎಲ್ಲರನ್ನೂ ತಲುಪಬೇಕು. ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ದುಡಿಯೋಣ. 🙏

Leave a Reply

Your email address will not be published. Required fields are marked *