ದಾವಣಗೆರೆ
ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.
ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.
ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.
ಇಂದು ಸನಾತನ ಧರ್ಮವನ್ನು ನಿರಾಕರಿಸುವ ಜೇಡರ ದಾಸಿಮಯ್ಯನವರ ಕೆಲವು ವಚನಗಳು:
ಸನಾತನ ಧರ್ಮದಲ್ಲಿ ದೇವಸ್ಥಾನದ ಪೂಜಾರಿಗಳು ಕೊಡುವ ನೀರು ಪವಿತ್ರ ತೀರ್ಥ ಎಂಬ ನಂಬಿಕೆಯಿದೆ.
ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ,
ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ,
ಹರಿವ ನದಿ ಎತ್ತಣಾ ತೀರ್ಥ! ರಾಮನಾಥ.
ಸನಾತನ ಧರ್ಮದಲ್ಲಿ ಗಂಡು, ಹೆಣ್ಣು ಸಮಾನರಲ್ಲ. ಅದನ್ನು ವಿರೋದಿಸುವ ದಾಸಿಮಯ್ಯನವರ ಪ್ರಸಿದ್ಧ ವಚನ.
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ.
ಸನಾತನ ಧರ್ಮದಲ್ಲಿ ನೂರಾರು ದೇವರುಗಳಿದ್ದಾರೆ.
ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ.
ಆಸೆ ಮಾಡ, ನೋಡ ಅನ್ಯದೈವಂಗಳಿಗೆ.
ದೇಶದ ಪಿಶಾಚಿಗಳಿಗೆ ಆಶೆ ಮಾಡ ನೋಡ!
ಆಶೆ ಮಾಡಿದನಾದಡೆ ಅವ ದಾಸನ ಕುಲವಲ್ಲ
ಅವ ಅನ್ಯಕುಲ ಕಾಣಾ! ರಾಮನಾಥ.
ಸನಾತನ ಧರ್ಮದಲ್ಲಿ ಹುಣ್ಣಿಮೆ ಅಮಾವಾಸ್ಯೆ ಬಗ್ಗೆ ಭಯ ಇದೆ.
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ;
ಮಟ್ಟ ಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾನ ಪೌರ್ಣಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ!
ರಾಮನಾಥ.
