ಧಾರವಾಡ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಧಾರವಾಡ ಬಸವಕೇಂದ್ರದ ಬಸವಂತಪ್ಪ ತೋಟದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
- ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಖಂಡಿತ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಯುವ ಪೀಳಿಗೆಯನ್ನು ಸಂಘಟನೆಗೆ ಸೇರಿಸಿ ಅವರಿಗೆ ರಾಜಕೀಯ ಪ್ರಜ್ಞೆಯನ್ನು ಮೂಡಿಸಬೇಕು.
ಕೆಲವು ರಾಜಕಾರಣಿಗಳು ತಾವು ಲಿಂಗಾಯತರು ಎಂದು ಹೇಳಿ ಲಿಂಗಾಯತ ಕೋಟಾದಲ್ಲಿನ ಎಲ್ಲ ಸವಲತ್ತನ್ನು ಬಳಸಿಕೊಳ್ಳುತ್ತಾರೆ. ವಿಧಾನಸಭೆಯಲ್ಲಿ ನಾವು ಲಿಂಗಾಯತರು ಎಂದು ಹೇಳುವವರು ಸಾಕಷ್ಟು ಜನ.
ಆದರೆ ಲಿಂಗಾಯತರ ಅವಹೇಳನವಾದಾಗ, ಲಿಂಗಾಯತ ಧರ್ಮದ ಮೇಲೆ ದಾಳಿಯಾದಾಗ ಅವರ ಪ್ರತಿಕ್ರಿಯೆ ಶೂನ್ಯ. ಹಾಗಾದರೆ ಬರೀ ಚುನಾವಣೆಯಲ್ಲಿ ಗೆಲ್ಲವುದಕ್ಕೆ ಮಾತ್ರ ಇವರೆಲ್ಲ ಲಿಂಗಾಯತರಾ? ಅದು ಬಿಟ್ಟು ನೀವು ಏನು ಮಾಡಿದ್ದೀರಿ, ಎಂಬುದು ನನ್ನ ಪ್ರಶ್ನೆ.
ಲಿಂಗಾಯತ ಧರ್ಮ ಉಳಿವಿಗೆ ಏನು ಮಾಡಬೇಕು ಎನ್ನುವ ಅರಿವೂ ಕೂಡ ಅವರಲ್ಲಿ ಕಾಣುತಿಲ್ಲ.
ಅದಕ್ಕಾಗಿ ಬಸವ ಶಕ್ತಿ ಶಿಬಿರ, ಸಮಾವೇಶಗಳು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಲಿ ಎನ್ನುವುದು ನನ್ನ ಆಶಯ.
- ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಸಂಘಟನೆಯ ಧ್ವನಿ ಒಂದೇ ಆಗಬೇಕಾದರೆ ತರಬೇತಿ ಕೊಡಲೇಬೇಕು. ಮೊದಲು ಬಸವಪ್ರಜ್ಞೆಯನ್ನು ಯುವಕರಲ್ಲಿ ಬಿತ್ತಿ, ನಂತರ ರಾಜಕೀಯ ಪ್ರಜ್ಞೆಯನ್ನು ಮೊಳಗಿಸಬೇಕು.
- ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ತರಬೇತಿಯು ಮೊದಲು ಪಾಲಕರಿಂದ ಪ್ರಾರಂಭಿಸಬೇಕು. ಏಕೆಂದರೆ “ಮನೆಯೇ ಮೊದಲ ಪಾಠಶಾಲೆ” ಹಾಗಾಗಿ ಪಾಲಕರು ತಮ್ಮ ಮಕ್ಕಳನ್ನು ಬಸವತತ್ವದ ಅರಿವು ಮತ್ತು ಸಂಘಟನೆಗೆ ತೊಡಗಿಸಲು ಸಾಧ್ಯವಾಗಬೇಕು. ಇದರ ಮೂಲಕ ರಾಜಕೀಯ ಪ್ರಜ್ಞೆ ಬೆಳೆಸಬಹುದು.
- ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಿರಾ?
ನಮ್ಮಲ್ಲಿ ಬಸವ ತತ್ವದ ಅರಿವಿನ ಅನೇಕ ಕಾರ್ಯಕ್ರಮಗಳು ಮತ್ತು ಸಂಘಟನೆಗಳು ಇವೆ. ಹೀಗಾಗಿ 200-300 ಜನ ಭಾಗವಹಿಸಬಹುದು.
- ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಖಂಡಿತ ನೆರವಾಗುತ್ತೇನೆ.

💐
ಹೌದು ರಾಜಕಾರಿಣಿಗಳಿಗೆ ಲಿಂಗಾಯತರ ಓಟು ಬೇಕು ಆದರೆ ಲಿಂಗಾಯತರ ಧರ್ಮ ಬೇಡ, ಬಸವಣ್ಣ ಬೇಡ