ಅಜ್ಞಾನಮುಕ್ತ ಭಾರತಕ್ಕೆ ಬಸವ ಶಕ್ತಿ ಸಮಾವೇಶ ನಡೆಯಲಿ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ನಂಜನಗೂಡು ವಿಶ್ವ ಬಸವಸೇನೆಯ ಬಿ. ಚನ್ನಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೆ? ಯಾಕೆ?

ಬಸವ ಸಂಘಟನೆಗಳು ಖಂಡಿತವಾಗಿಯೂ ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲೇಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ಯಾವುದೇ ಕ್ಷೇತ್ರದ ಕಾರ್ಯಸಾಧನೆಯಲ್ಲಿ ರಾಜಕೀಯ ಪ್ರಭಾವ ಎದ್ದು ಕಾಣುತ್ತಿದೆ. ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕವಾದ ಮನ್ನಣೆ ಪಡೆಯಬೇಕಾದರೆ ರಾಜಕೀಯ ವಲಯದಲ್ಲಿ ಹಿಡಿತ ಮತ್ತು ಪ್ರಭಾವ ಇರಲೇಬೇಕಿದೆ.

ಲಿಂಗಾಯತ ಧರ್ಮದ ತತ್ವ-ಸಿದ್ದಾಂತಗಳನ್ನು, ಶರಣರ ಚಿಂತನೆಗಳನ್ನು, ಧಾರ್ಮಿಕ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟವನ್ನು ಜನ ಸಾಮಾನ್ಯರಿಗೆ ಮುಟ್ಟಿಸಿ ಅವರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಆದರೆ ಲಿಂಗಾಯತರಲ್ಲೇ ಕೆಲವು ರಾಜಕಾರಣಿಗಳು, ಉದ್ಯಮಿಗಳು ಅಪಸ್ವರ ಎತ್ತುವುದರಿಂದ ಅಂತವರಿಗೆ ಬುದ್ದಿಕಲಿಸುವ ಸಲುವಾಗಿಯಾದರೂ ರಾಜಕೀಯ ಪ್ರಜ್ಞೆ, ಪ್ರಭಾವ ಬೇಕು.

2) ಇದಕ್ಕೆ ತರಬೇತಿಯ ಅಗತ್ಯವಿದೆಯೆ?

ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವುದು, ರಾಜಕಾರಣಿಗಳ ಮೇಲೆ ಒತ್ತಡ ತರುವುದು, ಮಾಧ್ಯಮಗಳೊಂದಿಗೆ ಕೆಲಸ ಮಾಡುವುದು, ಚುನಾವಣೆ ಸಂದರ್ಭದಲ್ಲಿ ಸಕ್ರಿಯವಾಗುವುದು ಇವೆಲ್ಲಾ ಬಹಳಷ್ಟು ಬಸವ ಸಂಘಟನೆಗಳಿಗೆ ಹೊಸ ವಿಷಯಗಳು. ಅದಕ್ಕೆ ತರಬೇತಿ ಇಲ್ಲದೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತವಲ್ಲ.

ವಿರೋಧಿಗಳ ಮಾತಿಗೆ, ಕುತಂತ್ರಕ್ಕೆ ಪ್ರತಿಯಾಗಿ ಮುನ್ನಡೆಯಲು ತರಬೇತಿ ಬಹಳ ಅವಶ್ಯಕ.

3) ಬಸವಶಕ್ತಿ ಸಮಾವೇಶದ ರೂಪು಼ರೇಷೆಯ ಬಗ್ಗೆ ನಿಮ್ಮ ಸಲಹೆ?

ಬಸವ ಶಕ್ತಿ ಸಮಾವೇಶದ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುವುದರ ಜೊತೆಗೆ ಇದು ಯಾವುದೇ ರಾಜಕೀಯ ಪಕ್ಷದ ಓಲೈಕೆಗಾಗಿ ಅಥವಾ ವಿರುದ್ಧವಲ್ಲ ಎಂಬುದನ್ನ ಮನದಟ್ಟು ಮಾಡಬೇಕಿದೆ.

ಸಮುದಾಯದ ಉಳಿವಿನ ಪ್ರಶ್ನೆಯೊಂದಿಗೆ ಇದು ಸಧೃಡ ಭಾರತ ನಿರ್ಮಾಣದ ಕಾರ್ಯಕ್ರಮವೆಂದು ಜನಸಾಮಾನ್ಯರಿಗೆ ತಿಳಿಸಬೇಕು.

ಬಸವಶಕ್ತಿ ಸಮಾವೇಶ ದೇಶದ ಏಕತೆ ಹಾಗೂ ರಾಷ್ಟ್ರ ನಿರ್ಮಾಣದ ಭಾಗವೆನ್ನುವುದು ಮತ್ತು ಹಿಂದೂ ಸಂಪ್ರದಾಯದ ವಿರುದ್ಧವಲ್ಲ ಎಂದು ತಿಳುವಳಿಕೆ ನೀಡಬೇಕು.

ಬಸವ ಶಕ್ತಿ ಸಮಾವೇಶದಲ್ಲಿ ಮಿಗಿಲಾಗಿ ಲಿಂಗಾಯತ ತತ್ವ-ಸಿದ್ದಾಂತದ ಜೊತೆಗೆ ಕೃಷಿಕರು, ಮಹಿಳೆಯರ ಅಭಿವೃದ್ಧಿಯ ವಿಚಾರಗಳ ಬಗ್ಗೆಯೂ ಚರ್ಚೆಯಾಗಬೇಕು.

ಈ ಸಮಾವೇಶವು ಲಿಂಗಾಯತ ಧರ್ಮದ ವಿಚಾರವಾಗಿ ಇರಬೇಕೆ ಹೊರತು ಅನ್ಯರನ್ನ ಹೊಗಳುವುದು ಅಥವಾ ತೆಗಳುವ ಕಾರ್ಯಕ್ರಮವಾಗಬಾರದು.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುವಿರಿ?

ನಾವು ಸುಮಾರು ನೂರಕ್ಕೂ ಹೆಚ್ಚಿನ ಜನ ಭಾಗವಹಿಸುತ್ತೇವೆ.

5) ಈ ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿವಿದೆಯೇ?

ಖಂಡಿತಾ ಆಸಕ್ತಿ ಇದೆ. ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗಾಗಿ, ಅಜ್ಞಾನಮುಕ್ತ ಬಸವ ಭಾರತ ಕಟ್ಟುವ
ಸಲುವಾಗಿ ಈ ಸಮಾವೇಶದ ಅಗತ್ಯವಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *