ಮೂರ್ಖ ಧಾರ್ಮಿಕತೆಯಿಂದ ಸಮಾಜದಲ್ಲಿ ತಿಳುವಳಿಕೆ ಕಡಿಮೆಯಾಗಿದೆ
ಹಾವೇರಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಬಂಕಾಪುರದ ನ್ಯಾಯಾಂಗ ಇಲಾಖೆಯ ನಿವೃತ್ತ ಪ್ರಥಮದರ್ಜೆ ಸಹಾಯಕ ಎಸ್. ವೈ. ಮುಳಗುಂದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ಧರ್ಮದ ಹೋರಾಟ ಬಲವಾಗುತ್ತದೆಯೇ?
ಅವಶ್ಯವಾಗಿ ಬೆಳೆಸಿಕೊಳ್ಳಬೇಕು. ಏಕೆಂದರೆ ಮೂರ್ಖ ಧಾರ್ಮಿಕತೆಯಿಂದ ಸಮಾಜದಲ್ಲಿ ತಿಳುವಳಿಕೆ ಕಡಿಮೆಯಾಗುತ್ತದೆ. ಜನರಿಗೆ ಹಣದ ಆಮಿಷ ಒಡ್ಡಿ ಗೆದ್ದಂತಹ ರಾಜಕೀಯ ನಾಯಕರಿಗೆ ಮೊದಲು ಧರ್ಮಸಂಸ್ಕಾರ ಕೊಡಬೇಕು. ಸಂಸ್ಕಾರ ಇರುತ್ತಿದ್ದರೆ ಕೆಲವು ರಾಜಕಾರಣಿಗಳು ಬಸವ ತತ್ವದಡಿ ಇರುವರಿಗೆ ಇಷ್ಟು ಅವಹೇಳನಕಾರಿಯಾಗಿ ಮಾತನಾಡುತ್ತಿರಲಿಲ್ಲ.
ಯಾರನ್ನು ಆಯ್ಕೆ ಮಾಡಬೇಕು ಎನ್ನುವ ರಾಜಕೀಯ ಪ್ರಜ್ಞೆ ಕೂಡ ಸಮಾಜಕ್ಕೆ ಕೊಡುವುದು ಅಗತ್ಯವಿದೆ. ಬಸವ ಶಕ್ತಿ ಶಿಬಿರಗಳಿಂದ ಬಸವ ಧರ್ಮೀಯರು ಒಗ್ಗಟ್ಟಾಗಿ, ಬಲಗೊಳ್ಳುತ್ತಾರೆ.
2) ಬಸವ ಸಂಘಟನೆಗಳಿಗೆ ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡಬೇಕೆ?
ಹೌದು ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡಬೇಕು. ಜೊತೆಗೆ ಲಿಂಗಾಯತ ಧರ್ಮದ ಬಗ್ಗೆ ಅರಿವನ್ನೂ ಮೂಡಿಸಬೇಕು.
ಎಲ್ಲಾ ಧರ್ಮಕ್ಕಿಂತ ವಿಶೇಷವಾದ ಮತ್ತು ನೈತಿಕತೆಯ ಧರ್ಮವೆಂದರೆ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ. ಇದನ್ನು ಪ್ರಾಥಮಿಕ ಹಂತದಲ್ಲಿಯೇ ವಚನ ಸಾಹಿತ್ಯದ ಮೂಲಕ ಮಕ್ಕಳಿಗೆ ಪರಿಚಯ ಮಾಡಿಕೊಡಬೇಕು. ನಂತರದಲ್ಲಿ ವಚನಕಾರರ ಚರಿತ್ರೆಯನ್ನು ತಿಳಿಸಬೇಕು. ಇದರಿಂದ ಜಾತಿ ವ್ಯವಸ್ಥೆ ಹಾಗೂ ಮೂಢನಂಬಿಕೆಯನ್ನು ತೊಲಗಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.
3) ಈ ನಿಟ್ಟಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?
ಶಕ್ತಿ ಶಿಬಿರ, ಸಮಾವೇಶಗಳಲ್ಲಿ ಒಂದು ಲಕ್ಷ ಜನ ಸೇರಿದರೆ ಅದರಲ್ಲಿ ಐದು ಸಾವಿರ ಜನ ಪ್ರೇರಿತರಾಗಿ ಮತ್ತೆ ಇನ್ನೂ ಐದು ಸಾವಿರ ಜನರನ್ನು ಪ್ರೇರೆಪಿಸುತ್ತಾರೆ.
ಕೆಲವು ವಿರೋಧಗಳೂ ಬರಬಹುದು. ಆದರೆ ಸರಿಯಾದ ನಿಲುವು ಇದ್ದರೆ ಯಾವುದು ಕಷ್ಟಕರವಲ್ಲ ಎಂಬುದು ನನ್ನ ನಂಬಿಕೆ.
“ಬಿತ್ತಿದ ಬೀಜಗಳೆಲ್ಲಾ ಮೊಳಕೆ ಒಡೆಯುತ್ತವೆ” ಎಂಬುದು ಹೇಳಲು ಸಾಧ್ಯವಿಲ್ಲ. ತಾಳ್ಮೆಯಿಂದ ಕೆಲಸ ಮಾಡುವುದು ಮುಖ್ಯ.
4) ನಿಮ್ಮ ಜಿಲ್ಲೆ, ತಾಲೂಕಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ? ಹೇಗೆ ಕೈ ಜೋಡಿಸುತ್ತೀರಿ?
ಖಂಡಿತ ನೇರವಾಗುತ್ತೇನೆ. ಈ ಸಮಾವೇಶಕ್ಕೆ ಏನೆಲ್ಲಾ ನೆರವು ಕೊಡಲು ನನ್ನಿಂದ ಸಾಧ್ಯವೊ ಅದನ್ನು ಮಾಡುತ್ತೇನೆ.
