ಅಣ್ಣಿಗೇರಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ಅಣ್ಣಿಗೇರಿಯ ಶರಣತತ್ವ ಚಿಂತಕ ಪ್ರೊ. ಎಸ್.ಎಸ್. ಹರ್ಲಾಪೂರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಈಗಿರುವ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಬಸವಶಕ್ತಿ ಶಿಬಿರ, ಸಮಾವೇಶ ಬಹಳ ಅವಶ್ಯಕವಿದೆ. ಏಕೆಂದರೆ ಚುನಾಯಿತರಿಗೆ ಲಿಂಗಾಯತ ಧರ್ಮ ಮತ್ತು ಬಸವತತ್ವ ವೋಟ್ ಕಾರ್ಡ್ ಆಗಿವೆ. ಬರಿ ಚುನಾವಣೆ ಬಂದಾಗ ಲಿಂಗಾಯತರು ಎಂದು ಬಿಂಬಿಸುವರು. ಚುನಾವಣೆಯಲ್ಲಿ ಗೆದ್ದನಂತರ ಅವರಿಗೂ ಲಿಂಗಾಯತ ಧರ್ಮಕ್ಕೂ ಸಂಬಂಧ ಇಲ್ಲದಂತೆ ಕೆಲವರು ನಟಿಸುತ್ತಾರೆ. ಇನ್ನು ಕೆಲವು ಲಿಂಗಾಯತ ರಾಜಕಾರಣಿಗಳು ರಾಜಕೀಯಕ್ಕೆ ಬೆನ್ನತ್ತಿ ಬಸವ ತತ್ವದ ಮೂಲ ಸಿದ್ಧಾಂತವನ್ನು ಮರೆತಿದ್ದಾರೆ. ಹೀಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವುದು ಜರೂರು ಇದೆ.
2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಅಗತ್ಯವಿದೆ. ಮೊದಲು ಜಿಲ್ಲಾವಾರುಗಳಲ್ಲಿ ತರಬೇತಿಯನ್ನು ನೀಡಬೇಕು. ತರಬೇತಿಯಲ್ಲಿ ಸೈದ್ಧಾಂತಿಕವಾಗಿ ಬಸವತತ್ವದ ಮೂಲ ಸಿದ್ದಾಂತದ ಬಗ್ಗೆ ತಿಳಿಸಬೇಕು. ಇವತ್ತಿನ ದಿನಮಾನದ ರಾಜಕೀಯ ಸಂಗತಿಗಳನ್ನು ತಿಳಿಸಬೇಕು. ಒಂದೇ ಸಮಾಜದ ಜನರನ್ನು ಅವರ ಸಮಾಜದ ವಿರುದ್ಧವೇ ಎತ್ತಿಕಟ್ಟುವಂತಹ ಷಡ್ಯಂತ್ರಗಳು ನಡೆಯುತ್ತಿದೆ. ಇದರ ಬಗ್ಗೆ ಬಸವ ಸಮಾಜಕ್ಕೆ ಎಚ್ಚರಿಕೆಯ ತಿಳುವಳಿಕೆಯನ್ನು ನೀಡಬೇಕು.
3) ಬಸವಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಬಸವತತ್ವದ ಕಟ್ಟಾ ಅಭಿಮಾನಿಗಳನ್ನು ಒಂದುಗೂಡಿಸಬೇಕು. ಮತ್ತು ಬಸವತತ್ವದ ತಪ್ಪು ಕಲ್ಪನೆಯನ್ನು ಹೊಂದಿರುವವರಿಗೆ ನುರಿತವರಿಂದ ಚರ್ಚೆಗೆ ಅನುವು ಮಾಡಿ ಅವರ ತಪ್ಪು ಮಾಹಿತಿಗೆ ಕಡಿವಾಣ ಹಾಕಬೇಕು. ಲಿಂಗಾಯತರಿಗೆ ಈ ಹಿಂದೆ ಚುನಾವಣೆಯಲ್ಲಿ ಆಗಿರುವ ತಪ್ಪುಗಳನ್ನು ಮತ್ತೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆ ಹಾಗೂ ಮುಂದೆ ಬರುವ ಚುನಾವಣೆಗೆ ಲಿಂಗಾಯತರು ಏನು ಮಾಡಬೇಕು? ಈ ಹಿಂದಿನ ಚುನಾವಣೆಯಲ್ಲಿ ಏನು ಮಾಡಿದ್ದೇವೆ? ಎಂದು ಎಲ್ಲವನ್ನು ಕಲೆಹಾಕಿ, ಮುಂದೆ ಇಂತಹ ಅವ್ಯವಸ್ಥೆ ಆಗದಂತೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು.
4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತೀರಿ?
ನಮ್ಮಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಲ್ಲಿರುವ ಎಲ್ಲರೂ ಈ ಸಂಘಟನೆಯಲ್ಲಿ ಭಾಗವಹಿಸುತ್ತೇವೆ.
5) ಸಮಾವೇಶ ಸಂಘಟಿಸಲು, ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಇಂತಹ ಸಂಘಟನೆಗಳಿಗೆ ನೆರವಾಗುವುದು ಲಿಂಗಾಯತರ ನೆಲೆಗೋಸ್ಕರ. ಹೀಗಾಗಿ ಈ ಸಂಘಟನೆಗೆ ನಮ್ಮಿಂದ ಸಂಪೂರ್ಣ ಬೆಂಬಲ ಮತ್ತು ನೆರವು ಕೊಡಲು ಸದಾ ಸಿದ್ಧ.
