ಬಸವ ಶಕ್ತಿ ಸಮಾವೇಶ: ಕನಿಷ್ಠ ‘ಬುಸ್’ ಎನ್ನಲು ಕಲಿಯೋಣ

ಬಸವ ಮೀಡಿಯಾ
ಬಸವ ಮೀಡಿಯಾ

ಬಾಗಲಕೋಟೆ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಇಂದು ಗುಳೇದಗುಡ್ಡ ಬಸವಕೇಂದ್ರದ ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿ, ತಮ್ಮ ಅಭಿಪ್ರಾಯ ನೀಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೆ? ಯಾಕೆ?

ಇಂದಿನ ದಿನಮಾನಗಳಲ್ಲಿ ರಾಜಕೀಯ ಪ್ರಭಾವ ಬಹು ಮುಖ್ಯವೆನಿಸುತ್ತದೆ, ಅದಕ್ಕೆ ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲೇಬೇಕು.

ಕೇವಲ ಬಸವತತ್ವಗಳನ್ನು ಬಿತ್ತರಿಸುವ, ಅರ್ಥೈಸುವ ಹಾಗೂ ಅನ್ವಯಿಸಿಕೊಳ್ಳುವುದಕ್ಕಷ್ಟೇ ಸೀಮಿತವಾದರೆ ನಮ್ಮನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರರು. ‘ಕಚ್ಚುವುದು ಬೇಡ ಕನಿಷ್ಠ ಬುಸ್’ ಎನ್ನುವದನ್ನಾದರೂ ನಾವು ಕಲಿಯಬೇಕಾಗಿದೆ.

ಇತ್ತೀಚೆಗೆ ಜರುಗಿದ ನಮ್ಮ ಸಂಘಟನೆಗಳನ್ನು, ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಒಬ್ಬ ಸ್ವಾಮೀಜಿ ಮತ್ತು ಪುಂಡುಪೋಕರಿ ರಾಜಕಾರಣಿಗಳ ಹಿಂದೆ ಕೊಳಕು ರಾಜಕೀಯ ಬಲವಿರಲಿಲ್ಲವೆ?

ಬಸವಪರ ಸಂಘಟನೆಗಳು ತಮ್ಮ ತಮ್ಮ ಕಾರ್ಯಗಳನ್ನು ಸುಸೂತ್ರವಾಗಿ ಸಂಘಟಿಸಿಕೊಂಡು ಹೋಗಲು ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವದು ಅತ್ಯಂತ ಅವಶ್ಯವಿದೆ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೆ?

ತರಬೇತಿಯ ಅವಶ್ಯಕತೆ ಖಂಡಿತಕ್ಕೂ ಇದೆ. ಏಕೆಂದರೆ ನಮ್ಮ ಬಸವಪರ ಸಂಘಟನೆಯ ಸದಸ್ಯರು ಮೂಲತಃ ಸಾತ್ವಿಕರು, ಬಸವಣ್ಣನವರ ಹೆಸರಿಗೆ, ತತ್ವಕ್ಕೆ ಧಕ್ಕೆ ಬಂದರೆ ಅವರು ಭಾವಾವೇಶಕ್ಕೆ ಒಳಗಾಗಬಲ್ಲರೇ ವಿನಃ ಹೇಗೆ ಮುಂದುವರೆಯಬೇಕೆಂಬುದನ್ನು ಅರಿಯರು. ಎಂಥವನೂ ನೇರವಾಗಿ ರಾಜಕೀಯಕ್ಕೆ ಇಳಿಯಲಾರ. ಹಾಗೆ ಪ್ರವೇಶಿಸಿದರೂ ಬೇರೆಯವರ ಕೈಯ ಕಲ್ಲಾಗಬಲ್ಲನೇ ವಿನಃ ಸ್ವಂತ ಶೂರನಾಗಲಾರ. ನಮ್ಮವರನ್ನು ದುರಂತ ನಾಯಕರನ್ನಾಗಿ ಬಿಡಬಾರದೆಂದರೆ ಅವರಿಗೆ ತರಬೇತಿಯ ಅವಶ್ಯಕತೆ ಇರಬೇಕು.

3) ಬಸವಶಕ್ತಿ ಸಮಾವೇಶದ ರೂಪು಼ರೇಷೆಯ ಬಗ್ಗೆ ನಿಮ್ಮ ಸಲಹೆ?

ಬಸವಶಕ್ತಿ ಸಮಾವೇಶವು ಕೇವಲ ಒಂದು ಗುಂಪನ್ನು ಸೃಷ್ಠಿಸಲು ಕಾರಣವಾಗದೆ, ಬಸವತತ್ವ ವಿರೋಧಿಗಳನ್ನು ವಿರೋಧಿಸಿ ಅವರಿಗೆ ಅವರ ರೀತಿಯಲ್ಲಿಯೇ ಅವರ ಭಾಷೆಯಲ್ಲಿಯೇ ಉತ್ತರಿಸುವ ಕಾರ್ಯಪಡೆಯನ್ನು ತಯಾರಿಸುವಂತಹ ಸಮಾವೇಶವಾಗಬೇಕು.

ಈ ಸಮಾವೇಶವು ವಿರೋಧಿಗಳಿಗೆ ಸ್ಪಷ್ಟವಾಗಿ ಉತ್ತರಿಸುವಂತಾಗಲು, ವಿದ್ವಾಂಸರನ್ನು, ತತ್ವವೇತ್ತರನ್ನು, ಒಳ್ಳೆ ಮಾತುಗಾರರನ್ನು ಹಾಗೂ ಉತ್ಸಾಹಿ ತರುಣರನ್ನು ಗುರುತಿಸುವ ಸಮಾವೇಶವಾಗಬೇಕು.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುವಿರಿ?

ನಿಖರವಾಗಿ ಹೇಳುವದು ಕಷ್ಟ. ಸಮಾವೇಶದ ದಿನ ಸಮೀಪಕ್ಕೆ ಬಂದಂತೆ ಜನರು ಹೆಚ್ಚಾಗಬಹುದು. ಹಾಗೂ ಸಮಾವೇಶ ನಡೆಯುವ ದೂರವೂ ಕಾರಣವಾಗಬಹುದು.

5) ಈ ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿವಿದೆಯೇ?

ಈ ಸಮಾವೇಶಕ್ಕೆ ನೆರವಾಗಲು ನಮಗೆ ಖಂಡಿತವಾಗಿಯೂ ಆಸಕ್ತಿಯಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಯುಕ್ತಿ ಮಾಡಿ ಶಕ್ತಿ ಬಳಸಿ ಒಳ್ಳೇದು ಮಾಡೋಣ ಗುರಿಯನ್ನು ಮುಟ್ಟೋನ ನಮ್ಮ ಗುರಿ ಬಸವ ಧರ್ಮ ನಿಮ್ಮ ನಡೆ ನಮ್ಮ ಬೆಂಬಲ ಜಯ್ ಬಸವ ಜೈ ಲಿಂಗಾಯತ 🌹👏🏻ಶರಣು 🙏🏻

Leave a Reply

Your email address will not be published. Required fields are marked *