ಗಂಗಾವತಿ:
“ತತ್ವ ನುಡಿಯುವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ ಅಚ್ಚಗಪಡುತ್ತಿದ್ದರು ನೋಡಾ
ನಿತ್ಯಾ ನಿತ್ಯಾವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ
ಭಕ್ತಿಯ ಹೊಲಬನರಿಯದ ಜಡಜೀವ ಮಾನವರ ಇಚ್ಛೆಯ ನುಡಿದು ಹಲುಬುತ್ತಿಪ್ಪರು ನೋಡಾ
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ”
ಅಲ್ಲಮರ ಈ ವಚನ ಇಂದಿನ ಸಂಘ ಪರಿವಾರದ ಪ್ರಾಯೋಜಕತ್ವದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಹೊರಟ, ತತ್ವದ ಗಂಧ ಗಾಳಿ ಗೊತ್ತಿಲ್ಲದಂತವರ ನೋಡಿಯೆ ಅಲ್ಲಮ ಬರೆದರೇನೊ ಅನಿಸಿತು.
“ಕಾಣುವ ಜಗವೆಲ್ಲ ಕೂಡಲಸಂಗ” ಎಂದು ಒಪ್ಪಿದ ಧರ್ಮ ಎಂದಾದರೂ ಚಾತುರ್ವರ್ಣವನ್ನು ಜೀವಾಳವಾಗಿಸಿಕೊಂಡ ಹಿಂದೂ ಧರ್ಮದ ಭಾಗವಾಗಲು ಸಾಧ್ಯವೆ?
ಇಂದು ಕೆಲವರು ಸಂಘ ಪರಿವಾರದಿಂದ ಪ್ರಾಯೋಜಕತ್ವ ಪಡೆದು ಬಸವಾದಿ ಶರಣ ಹಿಂದೂ ಸಮಾವೇಶ ಮಾಡಲು ಹೊರಟಿರುವುದು ನೋಡಿದರೆ “ಕತ್ತೆಗೆ ಕರ್ಪೂರವ ಹೇರಿದಂತೆ” ಅಲ್ಲಮರ ವಚನದ ಸಾಲು ಸೂಕ್ತ ಎನಿಸುತ್ತಿದೆ.
ಬಸವಾದಿ ಶರಣರಿಗೆ ಮತ್ತು ಅವರು ಕೊಟ್ಟಂತ ತತ್ವಕ್ಕೆ ಇಂತಹ ಸಂಘರ್ಷಗಳು ಹೊಸತೇನೂ ಅಲ್ಲ. ಈ ಧರ್ಮವು ಹೊರ ವೈರಿಗಳಿಂದಲೂ ಮತ್ತು ಒಳ ವೈರಿಗಳಿಂದಲೂ 900 ವರ್ಷಗಳ ಕಾಲ ಸಂಘರ್ಷ ಮಾಡುತ್ತಲೇ ಬಂದಿದೆ. ಆದಕ್ಕೆ ಅಂದೆ ಬಸವಣ್ಣ ಹೇಳಿದ್ದು, ಭಕ್ತಿಯೆಂಬುದು ಗರಗಸದಂತೆ ಹೋಗುತ್ತಾ ಕೊಯ್ಯುವುದು ಬರುತ್ತಾ ಕೊಯ್ಯುವುದು ಎನ್ನುವ ಸಂಘರ್ಷದ ಹಾದಿಗೆ ಬಸವ ಧರ್ಮದ ಜೀವಾಳ.
ಬಸವತತ್ವ ಯಾವಾಗ ಯಾವಾಗ ಮುನ್ನಲೆಗೆ ಬರುವಾಗ ಕುತಂತ್ರಿಗಳ ಜಾಲವೊಂದು ಅದನ್ನು ವಿರೋಧಿಸಲು ಹುಟ್ಟುತ್ತೆ. ಇಂದು ಲಿಂಗಾಯತ ಮತ್ತೆ ಅಂತಹದೆ ಒಂದು ಪರ್ವಕಾಲದಲ್ಲಿದೆ. ಲಿಂಗಾಯತ ಹಿಂದೂಗಳಿಗಿಂತ ಭಿನ್ನ ಎಂದೂ ಹೇಳುವಾಗ ಒಂದು ಗುಂಪು ಲಿಂಗಾಯತದೊಳಗೆ ಇದ್ದಂತವರಿಂದ ವೀರಶೈವ ಲಿಂಗಾಯತ ಎಂದು ಹೇಳುತ್ತಾ ಹಿಂಬಾಗಿಲಿನಿಂದ ವೈದಿಕದ ವ್ಯವಸ್ಥೆಯನ್ನು ಜೀವಂತವಾಗಿಡಿಸುವ ಪ್ರಯತ್ನ ಮಾಡುತ್ತಲೇ ಇರುತ್ತೆ.
ಆದರೆ ಇತ್ತೀಚಿಗೆ ವೀರಶೈವ ಲಿಂಗಾಯತ ಮುಖಂಡರಾದ ಲಿಂಗೈಕ್ಯ ಡಾ. ಶಾಮನೂರು ಶಿವಶಂಕ್ರಪ್ಪನವರು ತಮ್ಮ ಕೊನೆಯ ಗಳಿಗೆಯಲ್ಲಿ ಲಿಂಗಾಯತರು ಹಿಂದೂಗಳಲ್ಲ ಅವರು ಸ್ವತಂತ್ರರು ಎಂದೂ ಗೂಟ ಬಡಿದಾಗ ಮೀಸುಕಲಾಡದೆ ಇದ್ದವರು ಈಗ ಅವರಿಲ್ಲದ ಗಳಿಗೆಯಲ್ಲಿ ಸಮಾವೇಶ ಮಾಡುತ್ತಿರುವುದು ನೋಡಿದರೆ ಅವರ ಅಸಹಾಯಕತೆ ಗೊತ್ತಾಗುತ್ತೆ.
ಅದೇ ರೀತಿಯಾಗಿ ಲಿಂಗಾಯತದ ಬಗ್ಗೆ ಸ್ಪಷ್ಟತೆ ಇರುವ ಎಂ.ಬಿ. ಪಾಟೀಲರ ಮಾತುಗಳು ಸಹ ಅರಗಿಸಿಕೊಳ್ಳಲಾರದವರು ಅವರ ಕ್ಷೇತ್ರದಿಂದ ಸಮಾವೇಶ ಮಾಡುವುದಾಗಿ ಕೇಕೆ ಹಾಕುತ್ತಿದ್ದಾರೆ.
ಆದರೆ ಇಂದು ಲಿಂಗಾಯತರು ಜಾಗೃತಗೊಂಡಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆಗಳು ಎಂದರೆ ಬಸವ ಸಂಸ್ಕೃತಿ ಅಭಿಯಾನದ ಅಭೂತಪೂರ್ವ ಯಶಸ್ಸು, ಮತ್ತೆ ಕಲ್ಯಾಣದ ಯಶಸ್ಸು ಲಿಂಗಾಯತ ಸ್ವತಂತ್ರ ಧರ್ಮವೆಂಬ ಸಮಾವೇಶಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿವೆ. ಇಂದಿನ ಇವರ ಬಸವಾದಿ ಶರಣರ ಹಿಂದೂ ಸಮಾವೇಶ ಹೇಗಿದೆ ಅಂದ್ರೆ “ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕೋರರಂತೆ”. ಇಂತಹ ಒಡೆದಾಳುವ ನೀತಿಯನ್ನು ಇಂದಿನ ಜಾಗೃತ ಲಿಂಗಾಯತರು ಬಲ್ಲವರಾಗಿದ್ದಾರೆ.
ಈ ಸಮಾವೇಶದ ಜವಾಬ್ದಾರಿ ಹೊತ್ತಂತಹ ಒಬ್ಬರಿಗೂ ಆ ತತ್ವದ ಅರಿವೆ ಇಲ್ಲ. “ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ ಭಕ್ತರೊಳ ಕ್ರೋಧ ಭ್ರಷ್ಟರೊಳು ಮೇಳ” ಅಕ್ಕಮ್ಮನ ಮಾತು ನೆನಪಿಗೆ ಬರುತ್ತದೆ. ಇದೊಂದು ಭ್ರಷ್ಟರ ಮೇಳ. ಇಂತಹ ಕುತಂತ್ರದ ಸಮಾವೇಶಗಳು ಎಷ್ಟೆ ನಡೆಯಲ್ಲಿ, ಆದರೆ ತತ್ವ ಹೇಳುವವರು ಬುಡದಿಂದ ಈ ತತ್ವವನ್ನು ಜನಸಾಮಾನ್ಯನ ಮನೆಗೆ ಮುಟ್ಟಿಸಬೇಕಿದೆ. ಆ ತತ್ವದ ಸರಳತೆಯನ್ನು ಮನಸ್ಸಿಗೆ ನಾಟಿಸಬೇಕಿದೆ. ಶ್ರೇಷ್ಠತೆಯ ವ್ಯಸನದಿಂದ ಬಿಡಿಸಿ ಸಮಾನತೆಯ ಕಡೆ ಸಮುದಾಯವನ್ನು ತರಬೇಕಿದೆ.
ಬಸವತತ್ವದ ಬಗ್ಗೆ ಎಷ್ಟೇ ಜಾಗೃತಿಯಾಗಿದ್ದರೂ ಸುಪ್ತ ಮನಸ್ಸಿನಲ್ಲಿರುವ ಆ ವಿರೋಧಿ ಭಾವವನ್ನು ನಾಶ ಮಾಡಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ‘ಕಲ್ಲಿಯ ಹಾಕಿ ನೆಲ್ಲವ ತುಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ ವಾಗದ್ವೈತವ ಕಲಿತು ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು ಮತ್ಸ್ಯದ ವಕ್ರದಲ್ಲಿ ಗ್ರಾಸವ ಹಾಕುವನಂತೆ’ ಈ ಭ್ರಷ್ಟರಕೂಟ ಲಿಂಗಾಯತರ ತಲೆಕೆಡಿಸುವ ತಂತ್ರ ಮಾಡುತ್ತಲೇ ಇರುತ್ತದೆ. ಹಾಗಾಗಿ ಲಿಂಗಾಯತರೂ ಹಿಂದಿಗಿಂತಲೂ ಇಂದು ಜಾಗೃತಿಯಾಗುವುದು ಮುಖ್ಯ.

ಎಂಜಲು (ಅಧಿಕಾರ, ಹಣ, ಬಿರದು,)ಆಸೆಗಾಗಿ ಮಾಡುವ ಈ ಜನ ಬಸವಣ್ಣನ ವಿರೋಧಿಗಳು, ಇವರ ಬಗ್ಗೆ ತಲೆ ಕೆಡಸಿಕೊಳ್ಳುವದು ಬೇಡ, ಏಕೆಂದರೆ ಇಂತವರಿಂದಲೆ ನಮ್ಮವರು ಹೆಚ್ಚೆದ್ದುಕೊಳ್ಳಲು ಸಹಯವಾಗುತಲಿದೆ.
🌹ಗುರು ಬಸವ ಲಿಂಗಾಯ ನಮಃ 🙏
ಇದರಲ್ಲಿ ವಿರೋಧ ಏನಿದೆ, ಬಸವ ತತ್ವ ಸಂಸ್ಕೃತಿ ಏನು ಮಾಡಿದ್ದೀರಿ, ಹಾಗೆ ಅವರು ಮಾಡುತ್ತಿದ್ದಾರೆ, ನೀವು ಮಾಡಿದರೆ ಸರಿ ಅವರು ಮಾಡಿದ್ದಾರೆ ತಪ್ಪು ಇದು ಯಾವ ನ್ಯಾಯ?????