ಬಸವತತ್ವವನ್ನು ಯುವಕರು ಕಡ್ಡಾಯವಾಗಿ ಪಾಲಿಸಬೇಕು: ಸುತ್ತೂರು ಸ್ವಾಮೀಜಿ

ರಾವಂದೂರು:

ಜಗತ್ತಿನ ಮಹಾನ್ ಮಾನವತಾವಾದಿಗಳಲ್ಲಿ ಅಗ್ರಗಣ್ಯರಾಗಿರುವ ಬಸವಣ್ಣನವರ ತತ್ವ–ಆದರ್ಶಗಳು ಇಂದಿನ ಯುವಜನಾಂಗದ ಜೀವನದಲ್ಲಿ ಕಡ್ಡಾಯವಾಗಿ ಅಳವಡಿಕೆಯಾಗಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ಕೊಟ್ಟರು..

ಮೈಸೂರು ಜಿಲ್ಲೆಯ ರಾವಂದೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾದ ಶರಣ ಸಂಸ್ಕೃತಿ ಉತ್ಸವ, ಬಸವತತ್ವ ಸಮಾವೇಶ ಹಾಗೂ ಜಯದೇವ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.

ವ್ಯಕ್ತಿಯ ಆಂತರಿಕ ಶುದ್ಧತೆ, ಸಮಾಜದ ಸಮಾನತೆ ಮತ್ತು ನೈತಿಕ ಜಾಗೃತಿಯೇ ನಿಜವಾದ ಪ್ರಗತಿಯ ಮೂಲವೆಂದು ಬಸವಣ್ಣನವರು ಸಾರಿದ ಸಂದೇಶವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಕಾರ್ಯಕ್ರಮವು ಭಕ್ತಿ, ಚಿಂತನೆ ಮತ್ತು ಸಂಸ್ಕೃತಿ ಸಂಗಮವಾದ ಮಹತ್ವದ ವೇದಿಕೆಯಾಗಿತ್ತು. ತಮ್ಮ ಭಾಷಣದಲ್ಲಿ ಅವರು, ಬಸವಣ್ಣನವರ ವಚನ ಸಾಹಿತ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ; ಅದು ಜೀವನ ಮಾರ್ಗದರ್ಶಕವೆಂದು ಹೇಳಿದರು.

ಸಮಾನತೆ, ಶ್ರಮಗೌರವ, ದಾಸೋಹ, ಸತ್ಯನಿಷ್ಠೆ ಮತ್ತು ಕಾಯಕ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಯುವಜನರು ಕೇವಲ ಉದ್ಯೋಗ ಸಾಧನೆಗೆ ಸೀಮಿತರಾಗದೆ, ಮಾನವೀಯ ಮೌಲ್ಯಗಳನ್ನು ಜೀವನದ ಆಧಾರವಾಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಚನ ಸಾಹಿತ್ಯವು ಜಗತ್ತಿನ ಸಾಹಿತ್ಯ ಭಂಡಾರಕ್ಕೆ ನೀಡಿದ ಅಪೂರ್ವ ಕೊಡುಗೆಯಾಗಿದೆ. ಸರಳ ಭಾಷೆಯಲ್ಲಿ ಆಳವಾದ ತತ್ತ್ವವನ್ನು ಹೇಳುವ ಶಕ್ತಿ ಬಸವಣ್ಣನವರ ವಚನಗಳಿಗೆ ಇದೆ. ಅದು ಮನುಷ್ಯನ ಮನಸ್ಸನ್ನು ಶುದ್ಧಗೊಳಿಸಿ, ಸಮಾಜವನ್ನು ಸಮತೆಯ ದಾರಿಯಲ್ಲಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ರಾವಂದೂರು ಶ್ರೀ ಮುರುಘಾಮಠದ ಪೂಜ್ಯ ಮೋಕ್ಷಪತಿ ಸ್ವಾಮಿಗಳು ಪ್ರಸ್ತಾವಿಕವಾಗಿ ಮಾತನಾಡಿ, ಬಸವತತ್ವ ಸಮಾವೇಶ ಮತ್ತು ಶರಣ ಸಂಸ್ಕೃತಿ ಉತ್ಸವವು ಭಕ್ತರ ಸಹಕಾರ, ದಾನಶೀಲತೆ ಮತ್ತು ನಿಷ್ಠೆಯಿಂದಲೇ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಶರಣರ ಸಂಸ್ಕೃತಿಯನ್ನು ಗ್ರಾಮೀಣ ಮಟ್ಟದಲ್ಲಿ ಬೆಳೆಸುವುದು ಮತ್ತು ಬಸವ ತತ್ವವನ್ನು ಜನಮನಗಳಲ್ಲಿ ಬಿತ್ತುವುದು ಈ ಉತ್ಸವದ ಮುಖ್ಯ ಉದ್ದೇಶವೆಂದು ಅವರು ತಿಳಿಸಿದರು.

ಹೊಳಲ್ಕೆರೆ ತಾಲ್ಲೂಕಿನ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಭಾರತದ ಆಧ್ಯಾತ್ಮಿಕ ಚರಿತ್ರೆಯಲ್ಲಿ ಹಲವಾರು ಧಾರ್ಮಿಕ ಚಳವಳಿಗಳು ಅಥವಾ ಕ್ರಾಂತಿಗಳು ಜನ್ಮ ತಾಳಿರುವುದನ್ನು ನಾವು ಗಮನಿಸಬಹುದು. ಆದರೆ ಮಾನವನ ಆತ್ಮವನ್ನು ಕೇಂದ್ರೀಕರಿಸಿಕೊಂಡು ನಡೆದಂತಹ ಚಳವಳಿ ಒಂದೇ ಒಂದು. ಅದೇ ಶರಣ ಚಳವಳಿ. 12ನೇ ಶತಮಾನದ ಕಲ್ಯಾಣದ ಪವಿತ್ರ ಭೂಮಿಯಲ್ಲಿ ರೂಪುಗೊಂಡ ಅನುಭವ ಮಂಟಪ ಈ ಕ್ರಾಂತಿಯ ಕಣಿವೆ. ಇದು ಕೇವಲ ಒಂದು ಧಾರ್ಮಿಕ ಸಭೆಯಾಗಿರಲಿಲ್ಲ ಬದಲಾಗಿ ಅನುಭವದ ಸಂವಾದದಿಂದ ರೂಪುಗೊಂಡ ಮಾನವ ಧರ್ಮದ ವಿಶ್ವ ಮಂಟಪವಾಗಿತ್ತು.

ಈ ಮಂಟಪದಲ್ಲಿ ಶರಣರು  ಧರ್ಮವನ್ನು ಗ್ರಂಥಗಳಿಂದ ಹುಡುಕಲಿಲ್ಲ, ಬದಲಾಗಿ ತಮ್ಮ ಹೃದಯದ ನಾಡಿಯಿಂದ, ಬದುಕಿನ ಅನುಭವದಿಂದ, ಕಾಯಕದ ಪರಿಶುದ್ಧತೆಯಿಂದ ಹುಡುಕಿದರು. ಅವರ ಮಾತುಗಳಲ್ಲಿ ದೇವರ ಧ್ವನಿ ಇತ್ತು ಅವರ ಬದುಕಿನಲ್ಲಿ ಭಕ್ತಿಯ ದೃಷ್ಟಾಂತ ಇತ್ತು, ಅವರ ವಚನಗಳಲ್ಲಿ ತತ್ವದ ಪ್ರತ್ಯಕ್ಷ ಅನುಭವ ವ್ಯಕ್ತವಾಯಿತು.

ಈ ಅನುಭವ ಮಂಟಪದ ಸಂವಾದದ ಗೋಷ್ಠಿಯಲ್ಲಿ ಹೊರಹೊಮ್ಮಿದ ಸಾಹಿತ್ಯವೇ ಕನ್ನಡ ಸಾಹಿತ್ಯದ ಅನರ್ಘ್ಯರತ್ನ ವಚನ ಸಾಹಿತ್ಯ. ಈ ವಚನ ಸಾಹಿತ್ಯದಲ್ಲಿ ಕಾಯಕವೇ ಕೈಲಾಸ ಎಂಬ ನುಡಿಯನ್ನು ಶರಣರು ಜಗತ್ತಿಗೆ ಕೊಡುಗೆಯಾಗಿ ಕೊಟ್ಟರು.

ಸತ್ಯಶುದ್ಧ ಕಾಯಕವನ್ನು ಮಾಡುವಾಗ ಗುರು – ಲಿಂಗ – ಜಂಗಮರು ಮುಂದೆ ಬಂದರೂ ಅವರನ್ನು ಉಪೇಕ್ಷಿಸಿ ಸತ್ಯಶುದ್ಧ ಕಾಯಕವನ್ನು ಮುಂದುವರಿಸಿದಾಗ ಮಾತ್ರ ಆ ಕಾಯಕ ಕೈಲಾಸವಾಗುತ್ತದೆ ಎಂದರು.

ಶರಣರ ದೃಷ್ಟಿಯಲ್ಲಿ ಕೈಲಾಸ ಎಂದರೆ ಅದು ಪೌರಾಣಿಕ ಕೈಲಾಸವಾಗಿರದೆ ಶುಭ ಅಥವಾ ಮಂಗಳಕರವಾದದ್ದು ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿ ಕೈಲಾಸ ಎಂಬ ಪದದ ಅರ್ಥ ಶರಣರು ನಡೆಸುವ ಸತ್ಯ ಶುದ್ಧ ಕಾಯಕಕ್ಕೆ ಮಂಗಳಕರವಾಗಲಿ ಎಂಬುದೇ ಕೈಲಾಸ ಎಂಬ ಪದದ ಅರ್ಥ ಎಂದು ಪರಿಭಾವಿಸಬಹುದು ಎಂದು ತಮ್ಮ ಸುದೀರ್ಘ ಉಪನ್ಯಾಸದ ಮೂಲಕ ಶರಣರ ವಿಚಾರಧಾರೆಗಳನ್ನು ಮೆಲುಕು ಹಾಕಿದರು.

ಅರಕೆರೆಯ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ಮಂಡ್ಯದ ಬಸವರಾಜ ಸ್ವಾಮೀಜಿ, ಚಿತ್ರದುರ್ಗ ಮುರುಘಾ ಮಠದ ಮುರುಘೇಂದ್ರ ಸ್ವಾಮೀಜಿ, ಹೊಳಲ್ಕೆರೆಯ ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ, ಉಳುವಿಯ ಚನ್ನಬಸವೇಶ್ವರ ಮಠದ ಬಸವಲಿಂಗಮೂರ್ತಿ ಸ್ವಾಮೀಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪಿರಿಯಾಪಟ್ಟಣ ತಾಲೂಕು ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಪರಮೇಶ, ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಆರ್.ಎಸ್. ಕುಮಾರ್, ಆರ್.ಆರ್. ಶಶಿಧರ್, ಮೂಲತಃ ರಾವಂದೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಡಿ. ಸತೀಶ್, ಜಿಪಂ ಮಾಜಿ ಸದಸ್ಯ ಆರ್. ಎಸ್. ಚಿಕ್ಕವೀರಪ್ಪ, ಮೈಸೂರಿನ ಬಸವ ಬಳಗಗಳು ಮತ್ತು ವೀರಶೈವ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಶರಣ ಪ್ರದೀಪಕುಮಾರ, ಆರ್.ಎಸ್. ವಿಜಯಕುಮಾರ ಮತ್ತು ಆರ್.ಎಸ್. ಸತೀಶ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ದಿನವೇ ಪ್ರಾತಃಕಾಲ 5.30ರಿಂದ ನಡೆದ ಗೋಷ್ಠಿಯಲ್ಲಿ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ 26ನೆಯ ಜಗದ್ಗುರುಗಳಾದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವ ನಡೆಸಲಾಯಿತು. ಈ ಕಾರ್ಯಕ್ರಮದ ಸಾನಿಧ್ಯವನ್ನು ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮಿಗಳವರು ವಹಿಸಿದ್ದರು.

ಪಿರಿಯಾಪಟ್ಟಣದ ಜನಪ್ರಿಯ ಮಾಜಿ ಶಾಸಕ ಕೆ.ಮಹದೇವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ. ಜಿ.ವಿ. ಮಂಜುನಾಥ ಲಿಂಗೈಕ್ಯ ಜಗದ್ಗುರುಗಳನ್ನು ಕುರಿತು ನುಡಿ ನಮನ ಸಲ್ಲಿಸಿದರು. ಮೈಸೂರಿನ ಬಸವ ಕೇಂದ್ರದ ಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಗೆ ಸಂಜೆ  ಕಾರ್ಯಕ್ರಮದೊಂದಿಗೆ ಸಮಾವೇಶ ಮುಕ್ತಾಯವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *