ಕಲೆ, ಸಾಹಿತ್ಯದಿಂದ ಸುಸಂಸ್ಕೃತ ಸಮುದಾಯ: ಬಸವ ಮರುಳಸಿದ್ಧ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಕ್ಕಮಗಳೂರು :

ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಇದರ ಹೊರತಾಗಿ ಅದು ಕಷ್ಟಸಾಧ್ಯ ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಪೂಜ್ಯ ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.

ದೊಡ್ಡ ಕುರುಬರಹಳ್ಳಿಯ ಬಸವತತ್ವ ಪೀಠದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗು ಬಸವತತ್ವ ಪೀಠದ ನೇತೃತ್ವದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ನಾಟಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ದೂರದರ್ಶನ ಮನುಷ್ಯನನ್ನು ಇರುವುದಕ್ಕಿಂತ ಬಹಳ ಚಿಕ್ಕದಾಗಿ ತೋರಿಸುತ್ತದೆ. ಸಿನಿಮಾ ಬಹಳ ದೊಡ್ಡದಾಗಿ ತೋರಿಸುತ್ತದೆ. ಆದರೆ, ರಂಗಭೂಮಿ ಮಾತ್ರ ಮನುಷ್ಯನನ್ನು ಮನುಷ್ಯನನ್ನಾಗಿ ತೋರಿಸುವ ಒಂದು ಕಲೆ ನಾಟಕ ಎಂದರು.

ಇವತ್ತು ಕೆಲ ಧಾರವಾಹಿಗಳು ಮನುಷ್ಯನ ವ್ಯಕ್ತಿತ್ವವನ್ನು ಬಹಳ ಸಣ್ಣತನದಲ್ಲಿ ತೋರ್ಪಡಿಸುವ ಕೆಲಸ ಮಾಡುತ್ತಿವೆ. ಮನುಷ್ಯನ ಉದಾತ್ತತೆಯನ್ನು ಮರೆಸಿ ಅವನ ಸಣ್ಣತನಗಳು ವಿಜೃಂಭಿಸುವ ಹಾಗೆ ಮಾಡುವ ಕೆಟ್ಟ ಕೆಲಸಗಳು ದೂರದರ್ಶನದ ಮೂಲಕ ಅಲ್ಲಲ್ಲಿ ನಡೆಯುತ್ತಿವೆ. ಕೆಟ್ಟ ಧಾರವಾಹಿಗಳನ್ನು ನೋಡುವ ಬದಲು ಒಂದು ಒಳ್ಳೆಯ ಪುಸ್ತಕ ಓದಿದರೆ ಮನೆತನಗಳು ಉದ್ಧಾರವಾಗುತ್ತವೆ ಎಂದು ಕಿವಿಮಾತು ಹೇಳಿದರು.

ದೂರದರ್ಶನ, ಸಿನಿಮಾಗಳು ಮನುಷ್ಯನಲ್ಲಿ ಇಲ್ಲದ  ಭ್ರಮೆಗಳನ್ನು ನಿರ್ಮಿಸಿ ಯುವಕರನ್ನು ದಾರಿ ತಪ್ಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಂಗಭೂಮಿ ಭರವಸೆ ಹುಟ್ಟಿಸುವ ಕೆಲಸ ಮಾಡುತ್ತಿರುವುದು ಸಂತಸ ವಿಷಯ ಎಂದರು.

ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುಳಾ ಹುಲ್ಲಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆದಿ ಮಾನವನ ಕಾಲದಿಂದಲೇ ನಾಟಕದ ಸ್ವರೂಪಗಳು ಹುಟ್ಟಿಕೊಂಡಿವೆ. ನಾಟಕ ಜಗತ್ತಿಗೆ ಒಳ್ಳೇಯ ಆಯಾಮಗಳನ್ನು ನೀಡಿದೆ. ನಾಟಕ ಅಥವಾ ಆಂಗಿಕ ಅಭಿನಯಗಳು ಜನರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮನ್ವಯಗಳನ್ನು ನೀಡುತ್ತಿದ್ದವು ಎಂಬುದನ್ನು ಇತಿಹಾಸದಿಂದ ತಿಳಿಯುತ್ತದೆ ಎಂದರು.

ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಬಯಲಾಟ ಮತ್ತು ನಾಟಕ ಸ್ವರೂಪಗಳು ಜನರಿಗೆ ಸ್ವತಂತ್ರದ ಬಗೆಗಿನ ಕಾಳಜಿಯನ್ನು ಹುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದ ಅವರು, ಚಿಕ್ಕಮಗಳೂರಿನಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಿದ ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಜನರನ್ನು ಮುಟ್ಟಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ರಂಗಭೂಮಿ ಒಬ್ಬ ವ್ಯಕ್ತಿಯನ್ನು ಸರ್ವೋತೋಮುಖ ಕಲಾವಿದನಾಗಿ ಸೃಷ್ಟಿಸುತ್ತದೆ. ರಂಗಭೂಮಿಯ ಕಲಾವಿದ ಗಾಯಕ, ನಟ, ಸಂಘಟಕ, ಸಂಗೀತಗಾರನಾಗಿರುತ್ತಾನೆ. ರಂಗ ಪೂಜೆ ಮಾಡಿದರೆ ಸರ್ವೋತೋಮುಖ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.

ಮತೀಯ ವ್ಯವಸ್ಥೆಯ ನಡುವೆ ಧಾರ್ಮಿಕತೆಯ ಜತೆ ಜತೆಯಲ್ಲಿ ಸಾಂಸ್ಕೃತಿಕತೆಯನ್ನು ರೂಪಿಸಿಸಿದಾಗ ಮಾತ್ರ ಮನುಷ್ಯ ನಿಜವಾದ ಸುಸಂಸ್ಕೃತನಾಗುತ್ತಾನೆ. ಆ ನಿಟ್ಟಿನಲ್ಲಿ ಬಸವತತ್ವ ಪೀಠ ಪೂಜ್ಯರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧಕ್ಷೆ ಮಮತಾ ಅರಸೀಕೆರೆ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶಪ್ಪ, ಬಸವತತ್ವ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಮಹಡಿಮನೆ ಸತೀಶ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *