ಬಸವಣ್ಣ, ಅಂಬೇಡ್ಕರ್ ನಿಂದನೆ: ಆರೋಪಿ ವೇದಮೂರ್ತಿ ಬಂಧನ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಸಾಮಾಜಿಕ ಜಾಲತಾಣದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿಂದಿಸಿದ್ದ ಆರೋಪಿಯನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ದೊಡ್ಡ ಯಾಚೇನಹಳ್ಳಿ ಗ್ರಾಮದ ನಿವಾಸಿ ವೇದಮೂರ್ತಿ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆರೋಪಿ ವೇದಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಬಸವಣ್ಣ, ಅಂಬೇಡ್ಕರ್, ಪರಿಶಿಷ್ಟ ಸಮುದಾಯದ ಕುರಿತು ಮಾಡಿದ್ದ ಅವಹೇಳನಕಾರಿ ವಿಡಿಯೋ ವೈರಲ್ ಆಗಿದೆ.

ಇದರಿಂದ ರಾಜ್ಯಾದ್ಯಂತ ತೀವ್ರ ಆಕ್ರೋಶ ಸ್ಪೋಟಗೊಂಡು, ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿವೆ.

ಪ್ರಕರಣದ ಗಂಭೀರತೆಯನ್ನು ಅರಿತ ಕೆ.ಆರ್.ಪೇಟೆ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ವೇದಮೂರ್ತಿಯನ್ನು ವಶಕ್ಕೆ ಪಡೆದಿದ್ದರು.

ಈ ಬಗ್ಗೆ ಬೆಂಗಳೂರಿನ ಹೆಬ್ಬಗೋಡಿ, ಜಯನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಲಿತ ಸಂಘಟನೆಗಳು ದೂರು ದಾಖಲಿಸಿದ್ದು, ಠಾಣೆಗಳಲ್ಲಿ ಎಫ್ಐಆರ್ ಕೂಡ ದಾಖಲಾಗಿವೆ.

ಪರಿಶಿಷ್ಟ ಜಾತಿ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವುದರಿಂದ ಸಮಾಜದಲ್ಲಿ ಜಾತಿ ಆಧಾರಿತ ದ್ವೇಷ, ವೈಮನಸ್ಸು ಮತ್ತು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಭೀಮ್ ಆರ್ಮಿ ಸಂಘಟನೆಯು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.

ಮೂಲನಿವಾಸಿ ಅಂಬೇಡ್ಕರ್ ಸಂಘಟನೆಯು ಹೆಬ್ಬಗೋಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವೇದಮೂರ್ತಿ ಅಂಬೇಡ್ಕರ್ ಅವರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದಾನೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.

ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಸಂವಿಧಾನ ಒದಗಿಸಿರುವ ಮೀಸಲಾತಿ ಬಗ್ಗೆಯೂ ವ್ಯಂಗ್ಯವಾಗಿ ಮಾತನಾಡಿದ್ದಾನೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ಠಾಣೆ ಎದುರು ಆಕ್ರೋಶ

ಆರೋಪಿ ವೇದಮೂರ್ತಿಯನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿಟ್ಟಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ವಿವಿಧ ದಲಿತಪರ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು.

ಠಾಣೆಯ ಮುಂಭಾಗದಲ್ಲಿ ನೆರೆದ ಕಾರ್ಯಕರ್ತರು ಆರೋಪಿಯ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.

ಇದರಿಂದಾಗಿ ಪೊಲೀಸ್ ಠಾಣೆಯ ಆವರಣದಲ್ಲಿ ತೀವ್ರ ಗೊಂದಲ ಹಾಗೂ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಆಕ್ರೋಶಿತ ಕಾರ್ಯಕರ್ತರನ್ನು ಸಮಾಧಾನಪಡಿಸಿ ಕೆ.ಆರ್.ಪೇಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಪೊಲೀಸರು, ಆರೋಪಿ ವೇದಮೂರ್ತಿಯನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ವೇದಮೂರ್ತಿ ವಿರುದ್ಧ ಬಸವ ಸೇನೆ ಆಕ್ರೋಶ

ಆರೋಪಿ ವೇದಮೂರ್ತಿ ಖಂಡಿಸಿ ಆತನ ಬಂಧನದ ಮುಂಚೆ ರಾಷ್ಟ್ರೀಯ ಬಸವ ಸೇನಾ ಸಮಿತಿ ಸೋಮವಾರ ವಿಜಯಪುರದಲ್ಲಿ ಪತ್ರಿಕಾ ಹೇಳಿಕೆ ನೀಡಿತ್ತು.

“ಸಾಮಾಜಿಕ ಜಾಲತಾಣದಲ್ಲಿ ವೇದಮೂರ್ತಿ ಎಂಬ ಜಾತಿವಾದಿ ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಹಾಗೂ ದಲಿತ ಸಮುದಾಯದ ಬಗ್ಗೆ ಅವಮಾನಕಾರ ರೀತಿಯಲ್ಲಿ ಮಾತನಾಡಿ, ನಿಂದಿಸಿದ್ದಾನೆ. ಅವನ ಕೆಟ್ಟ ಮಾತುಗಳನ್ನು ರಾಷ್ಟ್ರೀಯ ಬಸವ ಸೇನಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಗತಿಸಿದರೂ ಅಸ್ಪೃಶ್ಯತೆಯನ್ನು ಜೀವಂತವಾಗಿ ಇಟ್ಟು, ಇನ್ನೂ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.

ಇಂಥ ಸಂದರ್ಭದಲ್ಲಿ ಸಂವಿಧಾನವನ್ನು ಅವಮಾನಿಸುತ್ತಿರುವ, ಮಹಾತ್ಮರನ್ನು ನಿಂದಿಸಿರುವ ಮನುವಾದಿ ಮನಸ್ಥಿತಿಯ ದುಷ್ಟ ವೇದಮೂರ್ತಿ ಎಂಬುವವನನ್ನು ಸರಕಾರ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯ ಮಾಡಿದೆ.

ಪತ್ರಿಕಾ ಪ್ರಕಟಣೆಯಲ್ಲಿ ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ ಡಾ. ರವಿಕುಮಾರ ಬಿರಾದಾರ, ಪಧಾಧಿಕಾರಿಗಳಾದ ಶಾಂತವೀರ ತಾಲಭಾವಡಿ, ನಿಂಗಪ್ಪ ಸಂಗಾಪುರ, ಮಾತೋಶ್ರೀ ಚಂದ್ರಕಲಾ ಗುಣದಾಳ ಅವರು ಆಗ್ರಹಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಈ ಕತ್ತಿ ಮಗನಿಗೆ ಮನುಷ್ಯತ್ವ ಅಂದರೆ ನು ಗೊತ್ತಿಲ್ಲ ಇನ್ನು ಅಂಬೇಡ್ಕರ ಬಸವ ಬುದ್ಧ ರ ಬಗ್ಗೆ ಏನು ತಿಳಿದುಕೊಳ್ಳಲಾರದ ಮತಿಗೇಡಿ. ಇಂಥ ದುರಹಂಕಾರಿ ಕತ್ತಿ ಮಗನಿಗೆ ಕಾನೂನಿನ ಶಿಕ್ಷೆ ಗಿಂತ ಸಾರ್ವಜನಿಕರಿಂದ ಚಪ್ಪಲಿ ಏಟು ಗಳ ಸನ್ಮಾನ ಆಗಬೇಕು.

Leave a Reply

Your email address will not be published. Required fields are marked *