ಸುಳ್ಳು ಬೇಡ ಜಂಗಮರಿಗೆ ಪ್ರೋತ್ಸಾಹ ನೀಡುತ್ತಿರುವ ವೀರಶೈವ ಮಠಾಧೀಶರ ವಿರುದ್ಧ ಹೋರಾಟ
ಹುಬ್ಬಳ್ಳಿ
ಭಾರತೀಯ ಮೂಲನಿವಾಸಿ ದ್ರಾವಿಡ ಒಕ್ಕೂಟದ ಸದಸ್ಯರು ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನು ತೆಗೆದು ಬುಡ್ಗ ಜಂಗಮ ಪದ ಮಾತ್ರ ಬಳಸಬೇಕೆಂದು ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ಮಂಜುನಾಥ್ ಗುಡಿಮನಿ ಮಾತನಾಡುತ್ತ ಬೇಡ ಜಂಗಮ ಸಂವಿಧಾನ ಒಪ್ಪಿದ ಪದವಲ್ಲ. ಅದು ಅಸಂವಿಧಾನಿಕ ಶಬ್ದ. ಬೇಡುವವರು ಎಂದೂ ಜಂಗಮ ಆಗೋದಿಲ್ಲ. ಜಂಗಮ ಅಂದರೆ ಬೇಡುವುದಲ್ಲ. ಯಾರು ಬಸವಣ್ಣನವರನ್ನು ಒಪ್ಪಿಕೊಂಡಿದ್ದಾರೋ ಅವರು ಜಂಗಮರು. ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಅನ್ಯಾಯ ಮಾಡಿದ ಲಿಂಗಿಬ್ರಾಹ್ಮಣರು ಎಲ್ಲ ದಲಿತರಿಗೂ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಒಕ್ಕೂಟದ ರಾಜ್ಯ ಸಂಚಾಲಕ ಶಂಕರ ಅಜಮನಿ ಮಾತನಾಡುತ್ತಾ ಬೇಡ ಜಂಗಮ, ಬುಡ್ಗ ಜಂಗಮ, ಮತ್ತು ಬೇಡುವ ಜಂಗಮ ಎಂಬ ಹೆಸರುಗಳ ಮುಂದೆ ಜಂಗಮ ಪದ ಬಂದಿರುವುದೇ ಇಷ್ಟಕ್ಕೆಲ್ಲಾ ಕಾರಣ. ವೀರಶೈವರಲ್ಲಿ ಮನೆ ಮನೆಗೆ ಹೋಗಿ ಬೇಡುವ ಜಂಗಮ ಎಂಬ ಪಂಗಡದವರು ಇರುವುದರಿಂದ ಇದರ ಫಲವನ್ನು ವೀರಶೈವರು ಪಡೆಯಲು ಯತ್ನಿಸುತ್ತಿರುವುದು ದುರಂತವೇ ಸರಿ ಎಂದರು.

ಇದಕ್ಕೆ ಕೆಲವು ವೀರಶೈವ ಮಠಾಧೀಶರು ಪ್ರೋತ್ಸಾಹ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಮಠಾಧೀಶರ ವಿರುದ್ದವೂ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.
12ನೇ ಶತಮಾನದಲ್ಲಿ ಆಂಧ್ರದಿಂದ ವಲಸೆ ಬಂದ ಇವರು, ಲಿಂಗಿ ಬ್ರಾಹ್ಮಣರಾಗಿ ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ಜನ ಲಿಂಗಾಯತರು ಅಂತಾ ಗುರುತಿಸಿಕೊಂಡಿರಬಹುದಾದ ಅನುಮಾನ ಇದೆ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿ ಸತ್ಯವನ್ನು ಬಹಿರಂಗಪಡಿಸಲು ನಾವು ಒತ್ತಾಯಿಸುತ್ತೇವೆ, ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದ ತೆಗೆದುಹಾಕಲು ನಾವು ಒತ್ತಾಯಪೂರ್ವಕ ಮನವಿ ಮಾಡುತ್ತೇವೆ ಎಂದರು.
ಬೇಡ ಜಂಗಮರ ಭಾಷೆ ತೆಲಗು. ಇವರು ಕಾಡುಬೆಕ್ಕು, ಉಡ, ಆಮೆ, ಅಳಿಲು, ಮುಂಗುಸಿ, ಇಲಿಗಳನ್ನು ಬೇಟೆಯಾಡಿ ಮಾಂಸಾಹಾರ ತಿನ್ನುವರು. ಹೊಲೆಮಾದಿಗರ ಮನೆಗಳಲ್ಲಿ ಭಿಕ್ಷೆ ಬೇಡಿ ತಿನ್ನುವುದರಿಂದ ಇವರಿಗೆ ಬೇಡ ಜಂಗಮರೆಂದು ಕರೆಯುತ್ತಾರೆ ಎಂದರು.
ಬುಡ್ಗ ಎಂಬ ತಂಬೂರಿ ವಾದ್ಯ ನುಡಿಸುವುದರಿಂದ ಇವರಿಗೆ ಬುಡ್ಗ ಜಂಗಮ ಎಂದು ಹೆಸರು ಬಂದಿದೆ, ಇವರು ಅಸ್ಪಶ್ಯರು. ಇವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಎಸ್.ಸಿ. ಜಾತಿ ಪಟ್ಟಿಯಲ್ಲಿ ಸೇರಿಸಿದೆ.
ಈ ವೀರಶೈವರಿಗೆ ಎಸ್ಸಿ ಮೀಸಲಾತಿ ಬೇಕಾದರೆ ನಮ್ಮ ಜೊತೆ ಬರಲಿ ನಮ್ಮಂತೆ ಮಾಂಸಾಹಾರ ಸೇವಿಸಲಿ. ನಮ್ಮಂತೆ ಕಸ ಹೊಡೆಯುವುದು, ಶೌಚ ಸ್ವಚ್ಛ ಮಾಡುವುದು ಮಾಡಲಿ ಎಂದರು.
ಪ್ರತಿಭಟನೆಯಲ್ಲಿ ಗಣೇಶ ದೊಡ್ಡಮನಿ, ಇಂದುಮತಿ ಸಿರಗಾವಿ, ಸಂಧ್ಯಾ ನಾಯ್ಡು, ಚಂದ್ರಶೇಖರ್ ಹೊಸಮನಿ, ಶ್ರೀನಿವಾಸ್, ಗಿರೀಶ್, ಫಕೀರಮ್ಮ, ಉಮೇಶ್ ಚಲವಾದಿ, ಹನುಮಂತ ನವಲೂರ, ಬಸವಲಿಂಗಪ್ಪ, ದುರ್ಗಪ್ಪ ಪೂಜಾರ್, ಶಿವಾನಂದ ಅಸೂಟಿ ಹನುಮಂತ ಗಾಯಕವಾಡ ಇದ್ದರು.
ಈ ದೇಶದಲ್ಲಿ ಬಸವ ತತ್ವ ಉಳಿಯಬೇಕಂದ್ರೆ ನಾವೆಲ್ಲ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ. ನಾವು ಹೋರಾಟಕ್ಕೆ ಸದಾ ಸಿದ್ಧ. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ನೂರಾ ಒಂದು ಜಾತಿಗಳನ್ನು ಮಾಡಿದ್ದಾರೆ. ಅದರಲ್ಲಿಲ್ಲದ ಈ ಬೇಡ ಜಂಗಮರು ಎಲ್ಲಿಂದ ಬಂದ್ರು ಎಂದು ಆಕ್ರೋಶ ಹೊರ ಹಾಕಿದರು.
ಯಾವುದೇ ಸರ್ಕಾರ ಇರಲಿ ಆ ಶಬ್ದವನ್ನು ಯಾಕೆ ತಂದು ಸೇರಿಸಿದರೆಂದು ಪ್ರಶ್ನೆ ಮಾಡುತ್ತೇವೆ. 400 ಜನ ಇದ್ದವರು 40,000 ಜನ ಹೇಗಾದರು? ನಮ್ಮ ಉದ್ಯೋಗಗಳ ಪರಿಸ್ಥಿತಿ ಏನಾಗಬೇಕು. ಹುಬ್ಬಳ್ಳಿಯಿಂದ ಹೋರಾಟವನ್ನು ಆರಂಭಿಸಿದ್ದೇವೆ ಇದು ಕರ್ನಾಟಕದಾದ್ಯಂತ ಹಬ್ಬುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಇಂತಹ ಹೋರಾಟ ಅವಶ್ಯವಾಗಿತ್ತು, ಇಂದು ಬೇಡ ಜಂಗಮರು ಎಂದು ಬರೆಸಿಕೊಂಡು ಹಿಂಬಾಗಿಲಿನ ಮೂಲಕ ದಲಿತರ ಮೀಸಲಾತಿಗೆ ಲಗ್ಗೆ ಇಡುತ್ತಿರುವ ವೀರಶೈವ ಜಂಗಮರು ಅತ್ತ ಲಿಂಗಾಯತ ಸ್ವತಂತ್ರ ಧರ್ಮ ಅಸ್ಮಿತೆಗೂ ಇವರೇ ತೊಡಕು. ಏಕಕಾಲಕ್ಕೆ ಲಿಂಗಾಯತರಿಗೂ ಹಾಗೂ ದಲಿತರಿಗೂ ಚಳ್ಳೆ ಹಳ್ಳು ತಿನಿಸುತ್ತಿರುವ ಇವರ ಚಾಣಾಕ್ಷ ನಡೆಗೆ ಸಂಘ ಪರಿವಾರದ ಪಯರೋಹಿತಶಾಹಿಯೂ ಬೆಚ್ಚಿ ಬಿದ್ದಿದೆ ಅಷ್ಟರಮಟ್ಟಿಗೆ ವೀರಶೈವ ಜಂಗಮರು ಚಾಣಾಕ್ಷ ವಂಚನೆ ನಡೆದಿದೆ.