ವಿಜಯಪುರ
ಬಸವನಗೌಡ ಪಾಟೀಲ ಯತ್ನಾಳರಂತಹ ನಾಯಕರು ಲಿಂಗಾಯತ ಧರ್ಮವನ್ನು ಅಪೋಷನ ತೆಗೆದುಕೊಳ್ಳಲು ಬಂದಿರುವ ಸಂಸ್ಥೆ, ಪಕ್ಷಗಳಿಗಾಗಿ ಕೆಲಸ ಮಾಡುತ್ತಿದ್ದಾರೆ.
ಆರ್.ಎಸ್.ಎಸ್ ಸಿದ್ಧಾಂತದ ನೆಲೆಯಲ್ಲಿ ವಚನ ದರ್ಶನ ಕೃತಿಯನ್ನು ರಚಿಸಲಾಗಿದ್ದು, ಆ ಮೂಲಕ ಬಸವಾದಿ ಶರಣರ ವಿಚಾರಧಾರೆಯನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆದಿದೆ ಎಂದು ಸಾಹಿತಿ ಮತ್ತು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಆರೋಪಿಸಿದರು. ರಾಜ್ಯ ಸರಕಾರ ಕೂಡಲೇ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತ ಅವರು ವಚನ ದರ್ಶನ ಕೃತಿಯ ಹಿಂದಿನ ಸಂಚನ್ನು ವಿಶ್ಲೇಷಿಸಿದರು.
ಇವತ್ತಿನ ಲಿಂಗಾಯತ ಸಮುದಾಯಕ್ಕೆ ಹೊರಗಿನ ಶತ್ರುಗಳು ಎಷ್ಟು ಅಪಾಯಕಾರಿಯೋ, ಅಷ್ಟೇ ಅಪಾಯಕಾರಿ ಒಳಗಿನ ಶತ್ರುಗಳು. ಲಿಂಗಾಯತರನ್ನು ದಾರಿ ತಪ್ಪಿಸುವಲ್ಲಿ ರಾಜಕೀಯ ನಾಯಕರ ಮತ್ತು ಧಾರ್ಮಿಕ ಗುರುಗಳ ಸಮಾನ ಪಾಲಿದೆ.
ಬಸವನಗೌಡ ಪಾಟೀಲ ಯತ್ನಾಳರಂತಹ ನಾಯಕರು ಲಿಂಗಾಯತ ಧರ್ಮವನ್ನು ಅಪೋಷನ ತೆಗೆದುಕೊಳ್ಲು ಯತ್ನಿಸುತ್ತಿರುವ ಸಂಸ್ಥೆ, ಪಕ್ಷಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಲಿಂಗಾಯತ ಧರ್ಮದ ಶತ್ರುಗಳೇ ಅನ್ನೋದನ್ನು ಲಿಂಗಾಯತ ಸಮುದಾಯ ಗ್ರಹಿಸಿಕೊಂಡು ಮುಂದೆ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡಬೇಕಾಗಿದೆ ಎಂದು ಬಸವರಾಜ ಸೂಳಿಬಾವಿ ಕಳಕಳಿ ವ್ಯಕ್ತಪಡಿಸಿದರು.
ಶರಣಾಗತಿಯ ಸ್ಥಿತಿಗೆ ಬಂದಿರುವ ಲಿಂಗಾಯತರು
ಲಿಂಗಾಯತ ಸಮುದಾಯ ಅಶಕ್ತ ಮತ್ತು ತತ್ವ ಬದ್ಧವಿಲ್ಲದ ರಾಜಕೀಯ ಮತ್ತು ಧಾರ್ಮಿಕ ನಾಯಕತ್ವದಿಂದಾಗಿ ಶರಣಾಗತಿಯ ಸ್ಥಿತಿಗೆ ತಲುಪಿದೆ. ಈ ನಾಯಕರು ಸಮುದಾಯವನ್ನು ಸ್ವತಂತ್ರಗೊಳಿಸುವ ಬದಲಾಗಿ, ಅದು ಇಡೀ ಒಂದು ವ್ಯವಸ್ಥೆಗೆ ಶರಣಾಗತಿಯಾಗುವ ರೀತಿ ಅದನ್ನು ಒಳಗಡೆಯಿಂದ ಮಾರ್ಪಡಿಸುವಂತಹ ಕೆಲಸದಲ್ಲಿ ತೊಡಗಿಕೊಂಡಿದೆ.
ಇಂಥ ರಾಜಕೀಯ ನಾಯಕತ್ವ ಮತ್ತು ಧಾರ್ಮಿಕ ನಾಯಕತ್ವದಿಂದ ಹೊರಬರುವಂತಹ ಕೆಲಸವನ್ನು ಲಿಂಗಾಯತ ಸಮುದಾಯ ಮಾಡಬೇಕು. ಮಾಡದೇ ಹೋದರೆ ಅದು ಆತ್ಮಹತ್ಯಾಕಾರಕ ನೆಲೆಯೊಳಗೆ ಸಾಗುತ್ತಿದೆ ಅಂತ ನನಗೆ ಅನಿಸುತ್ತಿದೆ.
ಲಿಂಗಾಯತ ಸಮಾಜ ಒಡೆಯುವ ಸಂಚು
ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮಾಜ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆ ನೋಡುತ್ತಿರುವುದರಿಂದ ಆ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರದ ಒಂದು ಭಾಗ ವಚನ ದರ್ಶನ ಕೃತಿಯದ್ದಾಗಿದೆ. ಧಾರ್ಮಿಕ ಕಾರಣಕ್ಕಾಗಿ ಅಲ್ಲ ರಾಜಕೀಯ ಮೇಲುಗೈ ಸಾಧಿಸುವ ಉದ್ದೇಶ ಇದರಲ್ಲಿ ಅಡಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಬಸವರಾಜ ವಿಶ್ಲೇಷಿಸಿದರು.
ಮಠಾಧೀಶರ ಮೌನ ಸಲ್ಲ
ಬಸವಣ್ಣನವರ ಅಂಕಿತನಾಮವನ್ನು ಈ ಹಿಂದೆ ಮಾತೆ ಮಹಾದೇವಿಯವರು ತಿರುಚಿದಾಗ ಲಿಂಗಾಯತ ಸಮಾಜದಲ್ಲಿ ವಿರೋಧ ವ್ಯಕ್ತವಾಗಿತ್ತು. ಅದೇ ಪ್ರತಿರೋಧವನ್ನು ವಚನ ದರ್ಶನ ಕೃತಿಗೆ ತೋರಿಸಬೇಕಾಗಿತ್ತು. ಆದರೆ, ಲಿಂಗಾಯತ ಮಠಗಳು, ಮಠಾಧೀಶರು, ಲಿಂಗಾಯತ ಸಮಾಜದ ಪ್ರಜ್ಞಾವಂತರು ಈ ವಿಷಯದಲ್ಲಿ ಮೌನವಹಿಸಿರುವುದು ಖಂಡನೀಯ ಎಂದರು.
ಲಿಂಗಾಯತ ಅಸ್ಮಿತೆ ಉಳಿಸಿಕೊಳ್ಳಲು ನಾಡಿನ ಪ್ರಜ್ಞಾವಂತ ಮಠಾಧೀಶರು, ಲಿಂಗಾಯತ ಸಂಘ, ಸಂಸ್ಥೆಗಳು ವಚನ ದರ್ಶನ ಕೃತಿಯ ವಿರುದ್ಧ ಧ್ವನಿ ಎತ್ತಬೇಕಿದೆ, ಪ್ರತಿಭಟನೆ ನಡೆಸಬೇಕಿದೆ ಎಂದು ಹೇಳಿದರು.
ಹಿಂದೂ ಧರ್ಮದಲ್ಲಿ ಲೀನವಾಗಿಸುವ ಯತ್ನ
ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದಲ್ಲಿ ಲೀನವಾಗಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಹಿಂದೂ ಧರ್ಮಕ್ಕೆ ಪ್ರತಿರೋಧ ಮತ್ತು ಪರ್ಯಾಯಗಳನ್ನು ತೋರುವವರನ್ನು ಹಿಂದೂ ಧರ್ಮದಲ್ಲಿ ಲೀನವಾಗಿಸಿಕೊಳ್ಳುವ ಪ್ರಯತ್ನಗಳು ಈ ಮೊದಲಿನಿಂದಲೂ ನಡೆದಿವೆ. ಉದಾಹರಣೆಗೆ ಹಿಂದೂ ಧರ್ಮಕ್ಕೆ ಪ್ರತಿರೋಧ ತೋರಿದ ಬುದ್ಧನನ್ನು ವಿಷ್ಣುವಿನ ಹನ್ನೊಂದನೇ ಅವತಾರ ಎಂದು ಬಿಂಬಿಸಲಾಗಿದೆ. ಅದೇ ರೀತಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳನ್ನು ತಿರುಚಿ, ಅಂಬೇಡ್ಕರ್ ಹಿಂದೂ ಧರ್ಮದ ಪರವಾಗಿದ್ದರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ, ಪ್ರಭುದೇವ ಪಾಟೀಲ, ರಾಜೇಶ್ವರಿ ಯರನಾಳ, ನಾಗರಾಜ ಲಂಬು, ಮೋಹನ ಕಟ್ಟಿಮನಿ, ಡಾ. ರವೀಂದ್ರ ಬೆಳ್ಳಿ ಉಪಸ್ಥಿತರಿದ್ದರು.
Sir. You are absolutely right. Lingsyars (some not all) have become slaves of Hinduthwa. Mr. Yadiyurappa must bearb the responsibility of destruction of Lingayatism and making lingayats along with him the slaves of Brahaminism. Have any body heard him quoting a vachans in any of the public function or in assembly session? He is the strong supporter of SHARANA SHAKHTHI film and also the book VACHANA DARSHANA. He sis the main villian of destruction of lingatarism.