ರಾಯಚೂರು
ನಾಗರ ಪಂಚಮಿ ಹಬ್ಬದ ಹೆಸರಿನಲ್ಲಿ ಪೌಷ್ಟಿಕವಾದ ಹಾಲು ಹಾಳು ಮಾಡದೆ ಅಗತ್ಯವಿದ್ದವರಿಗೆ ಹಂಚಿದಾಗ ಮಾತ್ರ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ, ಎಂದು ನಗರದ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಗುರವಾರ ಹೇಳಿದರು.
ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯ ಸಮುದಾಯ ಭವನದಲ್ಲಿ ಬಸವ ಪಂಚಮಿ ಆಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಹಾಲು ಮತ್ತು ಹಣ್ಣು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಬಸವ ಕೇಂದ್ರ, ಅಕ್ಕನ ಬಳಗ ಮತ್ತು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಬಸವ ಕೇಂದ್ರದ ಕಾರ್ಯದರ್ಶಿಗಳಾದ ಶಿವಕುಮಾರ್ ಮಾಟೂರ್ ಅವರು ಮಾತನಾಡುತ್ತಾ, ಪ್ರತಿವರ್ಷ ಬಸವ ಕೇಂದ್ರದ ವತಿಯಿಂದ ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ ಅರ್ಥಪೂರ್ಣವಾಗಿ ವೈಚಾರಿಕವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ದಿನ ಲಕ್ಷಾಂತರ ಲೀಟರ್ ಹಾಲು ಮತ್ತು ತುಪ್ಪವನ್ನು ಕಲ್ಲು ಮತ್ತು ಹುತ್ತದ ನಾಗರಕ್ಕೆ ಸುರಿದು ವೃಥಾ ಹಾಳು ಮಾಡುತ್ತಿದ್ದಾರೆ. ಹಾವು ಸಸ್ಯಹಾರಿ ಪ್ರಾಣಿಯಲ್ಲ, ಅದು ಒಂದು ಮಾಂಸಾಹಾರಿ ಪ್ರಾಣಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದ್ದರೂ ಜನರು ಹಾಲನ್ನು ಹಾವಿಗೆ ಎರೆಯುವ ಪದ್ದತಿ ಬಿಟ್ಟಿಲ್ಲ. ಒಂದು ವೇಳೆ ಹಾಲು ಹಾಲು ಕುಡಿದರೂ ಅದರ ಆರೋಗ್ಯ ಹಾನಿಯುಂಟಾಗುತ್ತದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತಿದೆ, ಎಂದು ಹೇಳಿದರು.
ಸಮಾಜದಲ್ಲಿ ಜನರಿಗೆ ದೈವದ ಮೇಲೆ ನಂಬಿಕೆ ಮತ್ತು ಭಕ್ತಿ ಇರಬೇಕು ವಿನಹ ಮೂಢನಂಬಿಕೆ ಇರಬಾರದು. ಇಂತಹ ಕಂದಾಚಾರಗಳಲ್ಲಿ ತೊಡಗಬಾರದು ಎಂದು 12ನೇ ಶತಮಾನದಲ್ಲಿ ಬಸವಾದಿ ಶರಣರು ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗ, ಜಿಲ್ಲಾ ಆರೋಗ್ಯ ಅಧಿಕಾರಿ, ತಾಲೂಕ ಆರೋಗ್ಯ ಅಧಿಕಾರಿ, ಅಕ್ಕನ ಬಳಗದ ಅಧ್ಯಕ್ಷರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ಮಲ್ಲೇಶಪ್ಪ, ಮಕ್ಕಳ ತಜ್ಞರು, ಗರ್ಭಿಣಿಯರಿಗೆ ಸ್ಥನಪಾನದ ಮಹತ್ವ ಕುರಿತು ಸುಧೀರ್ಘವಾಗಿ ವಿವರಣೆ ನೀಡಿ, ತಾಯಿಯ ಹಾಲು ಅಮೃತಕ್ಕೆ ಸಮಾನ ಎಂದು ತಿಳಿಸುತ್ತಾ ಎಲ್ಲಾ ತಾಯಂದಿರು ತಪ್ಪದೆ ತಮ್ಮ ಮಕ್ಕಳಿಗೆ ಎದೆ ಹಾಲನ್ನು ಕುಡಿಸಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ, ಜನತಾ ಕಾಲೋನಿಯ ಎಲ್ಲಾ ಗರ್ಭಿಣಿಯರು ಬಾಣಂತಿಯರು , ಮಹಿಳೆಯರು, ವಯೋವೃದ್ಧರು ಮತ್ತು ಮಕ್ಕಳು ಭಾಗವಹಿಸಿ ಹಾಲು ಮತ್ತು ಹಣ್ಣನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಮೂಹಿಕ ಬಸವ ಪ್ರಾರ್ಥನೆ ಮತ್ತು ವಚನ ಗಾಯನವನ್ನು, ಪಾರ್ವತಿ ಪಾಟೀಲ್ ನಡೆಸಿಕೊಟ್ಟರು. ನವೋದಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
