ಬೇಡ ಜಂಗಮ ವಿವಾದ: ವೀರಶೈವರ ವಿರುದ್ಧ ನಾಗಮೋಹನದಾಸ್‌ ಆಯೋಗಕ್ಕೆ ದೂರು

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಒಳಮೀಸಲಾತಿ ಸಮೀಕ್ಷೆಯಲ್ಲಿ ‘ಬೇಡ ಜಂಗಮ’ ಎಂದು ಬರೆಸಲು ‘ಜಂಗಮ ಬಂಧುಗಳಿಗೆ’ ಕರೆ ನೀಡಿರುವ ಪ್ರಕಟಣೆಯೊಂದು ಪರಿಶಿಷ್ಟ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದೆ.

“ವೀರಶೈವ ಲಿಂಗಾಯತರು ‘ಜಂಗಮ’ ಹೆಸರನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆಯಲು ಹುನ್ನಾರ ನಡೆಸಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಈ ಕುರಿತು ನ್ಯಾ.ಎಚ್‌.ಎನ್‌. ನಾಗಮೋಹನದಾಸ್‌ ಆಯೋಗಕ್ಕೆ ದೂರು ನೀಡಲಿದ್ದೇವೆ” ಎಂದು ಎಂದು ಮಾದಿಗ ಸಮುದಾಯದ ಮುಖಂಡ, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಣಿ ಬೇಟೆಯಾಡಿ ತಿನ್ನುವ ಬೇಡ ಜಂಗಮ/ ಬುಡ್ಗ ಜಂಗಮ ಸಮುದಾಯದ 150 ಕುಟುಂಬಗಳಷ್ಟೇ ಇರಬಹುದು. ಆದರೆ, ವೀರಶೈವ ಲಿಂಗಾಯತರು ತಮ್ಮ ಪಂಗಡದಲ್ಲಿರುವ ಜಂಗಮ ಪದವನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಸಮುದಾಯಗಳ ಹಕ್ಕು ಕಸಿಯುವ ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಎಂದು ಎಚ್‌.ಆಂಜನೇಯ ಹೇಳಿದ್ದಾರೆ ಎಂದು ವರದಿಯಾಗಿದೆ.

ಚಿತ್ರದುರ್ಗದ ಬೇಡ ಜಂಗಮ ಸಂಘವೊಂದು ಹೊರಡಿಸಿದೆ ಎನ್ನಲಾಗುತ್ತಿರುವ ಪ್ರಕಟಣೆಯಲ್ಲಿ ಜಾತಿಗಣತಿಯಲ್ಲಿ ಹೇಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಗಣತಿದಾರರು ‘ನೀವು ಪರಿಶಿಷ್ಟ ಜಾತಿಯವರೇ’ ಎಂದು ಕೇಳಿದಾಗ, ‘ಹೌದು’ ಎಂದು ಉತ್ತರಿಸಬೇಕು. ಮೂಲ ಜಾತಿ ಕಾಲಂನಲ್ಲಿ ‘ಬೇಡ ಜಂಗಮ’ ಮತ್ತು ಕಸುಬು ಕಾಲಂನಲ್ಲಿ ‘ಧಾರ್ಮಿಕ ಭಿಕ್ಷುಗಳು’ ಅಥವಾ ‘ಧಾರ್ಮಿಕ ಪಂಥ ಪ್ರಚಾರಕರು’ ಎಂದು ಬರೆಸಬೇಕು ಎಂದು ಪ್ರಕರಣೆಯಲ್ಲಿ ಹೇಳಲಾಗಿದೆ.

ಸಮೀಕ್ಷೆ ಮಾಡುವವರು ಜಾತಿ ಪ್ರಮಾಣಪತ್ರ ಕೇಳಿದರೆ, ‘ಗಣತಿಗೆ ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ’ ಎಂದು ಹೇಳಬೇಕು. ಆ ಮಾಹಿತಿ ಪರಿಗಣಿಸದಿದ್ದರೆ ಗಣತಿಯ ಹಸ್ತಪ್ರತಿಗೆ ಸಹಿ ಮಾಡಬೇಡಿ ಎಂದು ಸೂಚಿಸಿದೆ. ಅಲ್ಲದೆ, ಗಣತಿದಾರರ ಗುರುತಿನ ಚೀಟಿ, ಫೋಟೊ ಹಾಗೂ ಸಂಪರ್ಕ ಸಂಖ್ಯೆಯನ್ನು ತೆಗೆದುಕೊಳ್ಳಿ ಎಂದೂ ನಿರ್ದೇಶನ ನೀಡಲಾಗಿದೆ.

ವೀರಶೈವ ಲಿಂಗಾಯತ ಜಂಗಮ ಪಂಗಡದವರು ಪರಿಶಿಷ್ಟ ಜಾತಿ ದೃಢೀಕರಣ ಪತ್ರ ಪಡೆದಿರುವ ವಿವಾದದ ವಿಚಾರಣೆ ನ್ಯಾಯಾಲಯಗಳಲ್ಲಿದೆ. ಈಗ ಒಳಮೀಸಲಾತಿ ಸಮೀಕ್ಷೆಯ ಸಂದರ್ಭದಲ್ಲಿ ಬೇಡ ಜಂಗಮ ಸಮಾಜ ಸಂಸ್ಥೆ ಹೊರಡಿಸಿರುವ ಪ್ರಕಟಣೆ ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *