ಜನಸಾಗರದ ನಡುವೆ ಶತಾಯುಷಿ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್:

ಕಲ್ಯಾಣ ಕರ್ನಾಟಕದ ಧೀಮಂತ ನಾಯಕ ಡಾ.ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾಲ್ಕಿಯ ಶಾಂತಿ ಧಾಮದಲ್ಲಿ ಶನಿವಾರ ನೆರವೇರಿಸಲಾಯಿತು.

ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಅವರ ಪತ್ನಿ ಲಕ್ಷ್ಮಿಬಾಯಿ ಅವರ ಸಮಾಧಿ ಸ್ಥಳದ ಸನಿಹದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು.

ಶುಕ್ರವಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್​ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಪ್ರೀತಿಯ ನಾಯಕನ ಕೊನೆಯ ದರ್ಶನ ಪಡೆದರು.

ಬಳಿಕ ಭೀಮಣ್ಣ ಖಂಡ್ರೆಯವರ ನಿವಾಸದಿಂದ ಶಾಂತಿಧಾಮಕ್ಕೆ ತರಲಾಯಿತು. ಸಂಜೆ 4 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಂತಿಮ ಯಾತ್ರೆ ಆರಂಭಿಸಲಾಯಿತು.

ಡಾ. ಭೀಮಣ್ಣ ಖಂಡ್ರೆ ಅವರ ಮೃತದೇಹವನ್ನು ನಗರದ ಪ್ರಮುಖ ರಸ್ತೆಗಳು, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಶಾಂತಿ ಧಾಮದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಅಭಿಮಾನಿಗಳು ನೆಚ್ಚಿನ ನಾಯಕನ ಪರವಾಗಿ ಜೈ ಘೋಷಗಳನ್ನು ಕೂಗಿದರು. ಶಾಂತಿ ಧಾಮಕ್ಕೆ ಪಾರ್ಥಿವ ಶರೀರ ತಲುಪುತ್ತಿದ್ದಂತೆಯೇ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು.

ಶತಾಯುಷಿ ಭೀಮಣ್ಣ ಖಂಡ್ರೆಯವರ ಅಂತಿಮಯಾತ್ರೆಯಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಭಾಗಿಯಾಗಿದ್ದರು.

ಬಳಿಕ ಸಕಲ ಸರ್ಕಾರಿ ಗೌರವದೊಂದಿದೆ ಸ್ವಾತಂತ್ರ್ಯ ಹೋರಾಟಗಾರ ಭೀಮಣ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಸಚಿವ ಈಶ್ವರ್​ ಖಂಡ್ರೆ ಅವರಿಗೆ ಸಿಎಂ ಸಿದ್ದರಾಮಯ್ಯ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.

ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭೀಮಣ್ಣ ಖಂಡ್ರೆ ಸಮಾಜವಾದಿ ತತ್ವದಲ್ಲಿ ಅವರು ಪ್ರೇರೇಪಿತರಾಗಿದ್ದರು, ಇಡೀ ಜೀವನದಲ್ಲಿ ಸರಳವಾಗಿ ಸ್ವಾಭಿಮಾನಿಯಾಗಿ ಜೀವನ ಮಾಡಿದಂತವರು. ನಿಷ್ಟುರವಾದಿ, ಪ್ರಮಾಣಿಕವಾದ ರಾಜಕಾರಣ ಮಾಡಿದವರು, ಕನ್ನಡಕ್ಕಾಗಿ ಏಕೀಕರಣಕ್ಕಾಗಿ ಹೋರಾಡಿದ್ದರು, ಬೀದರ್ ಕರ್ನಾಟಕದಲ್ಲಿ ಉಳಿಬೇಕು ಅಂದ್ರೆ ಭೀಮಣ್ಣ ಖಂಡ್ರೆ ಕೊಡುಗೆ ಇದೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಲಕ್ಷ್ಮೀ ಹೆಬ್ಬಾಳಕರ್, ಹೆಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಇತರರು ಅಗಲಿದ ಚೇತನಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ಗೌರವ ಸಲ್ಲಿಸಿದರು.

ಅಗಲಿದ ನಾಯಕನ ಸ್ಮರಣೆ

ಇಂದು ಅವರು ನಮ್ಮಿಂದ ಅಗಲಿ ಹೋಗಿದ್ದಾರೆ. ಸಾರ್ಥಕವಾದ ಬದುಕು ಬದುಕಿದ್ದಾರೆ. ಬಾಲ್ಯದಿಂದಲೇ ಸಂಘರ್ಷದ ಬದುಕು ಸವೆಸಿದ್ದರು. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಹೋರಾಟ ನಡೆಸಿದ್ದರು. ಅದರ ಪ್ರತಿಫಲವಾಗಿ ಬೀದರ್ ಜಿಲ್ಲೆ ಕರ್ನಾಟಕದಲ್ಲಿ ಉಳಿಯುವಂತೆ ಮಾಡಿದರು.
-ಈಶ್ವರ ಬಿ. ಖಂಡ್ರೆ, ಪರಿಸರ-ಅರಣ್ಯ ಸಚಿವ

ಭೀಮಣ್ಣ ಖಂಡ್ರೆ ಅವರದ್ದು ಶಿಸ್ತಿನ ಬದುಕಾಗಿತ್ತು. ಮಾತು ಸ್ಫೂಟ, ಹೃದಯ ಬಹಳ ಸ್ವಚ್ಛವಾದುದು. ನುಡಿದಂತೆ ನಡೆದುಕೊಳ್ಳುತ್ತಿದ್ದರು.
ಇಳಕಲ್ ಮಹಾಂತ ಸ್ವಾಮೀಜಿ

ಭೀಮಣ್ಣ ಖಂಡ್ರೆಯವರು ನೈತಿಕ ರಾಜಕಾರಣಿಯಾಗಿದ್ದರು. ಅವರು ಬಹಳ ಶುದ್ಧ ಹಸ್ತದಿಂದ ರಾಜಕಾರಣ ಮಾಡಿದ್ದರು. ಇಂದಿನ ರಾಜಕಾರಣಿಗಳಿಗೆ ಅವರು ಮಾದರಿ.
-ನಿಜಗುಣಪ್ರಭು ಸ್ವಾಮೀಜಿ, ಬೈಲೂರು ನಿಷ್ಕಲಮಂಟಪ

ಬಸವಾದಿ ಪರಂಪರೆಯ ಅನುಯಾಯಿಯಾಗಿದ್ದ ಭೀಮಣ್ಣ ಖಂಡ್ರೆಯವರು ಸಾತ್ವಿಕ ಜೀವನ ಸವೆಸಿದ್ದರು. ಬಸವತತ್ವ ಪ್ರಚಾರಕ್ಕಾಗಿ ಶ್ರಮಿಸಿದ್ದ ಅವರ ಅಗಲಿಕೆ ದೊಡ್ಡ ನಷ್ಟ.
-ಮಾತೆ ಗಂಗಾದೇವಿ, ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ

ಹಿರಿಯ ನಾಯಕ ಭೀಮಣ್ಣ ಖಂಡ್ರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ತಂದೆ ಹಾಗು ಭೀಮಣ್ಣ ಖಂಡ್ರೆ ಬಹಳ ಆತ್ಮೀಯ ಸ್ನೇಹಿತರು. ಹಿರಿಯ ಜೀವಿಯನ್ನ ಕಳೆದುಕೊಂಡು ನಾವೆಲ್ಲ ಬಡವಾಗಿದ್ದೇವೆ.
-ಎಂ.ಬಿ.ಪಾಟೀಲ್, ಸಚಿವ

ರಾಜಕಾರಣಿ ಭೀಮಣ್ಣ ಖಂಡ್ರೆ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ರಾಜಕಾರಣಿಗಳು ಸರಳವಾಗಿರಬೇಕು. ಸರಳತೆಯೇ ರಾಜಕಾರಣಿಗಳ ಕೈ ಹಿಡಿಯುತ್ತೆ ಎಂದು ಅವರು ಹೇಳಿದ್ದರು. ಅವರಿಂದ ನಾನು ಸರಳತೆ ಕಲಿತಿದ್ದೇನೆ. ಭೀಮಣ್ಣ ಖಂಡ್ರೆ ಅವರ ದಾರಿಯಲ್ಲೇ ನಾವೆಲ್ಲ ನಡೆಯುತ್ತಿದ್ದೇವೆ.
-ಪ್ರಿಯಾಂಕ್ ಖರ್ಗೆ, ಸಚಿವ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮೂಲಕ ಸಮಾಜವನ್ನು ಕಟ್ಟಿದವರು ಭೀಮಣ್ಣ ಖಂಡ್ರೆ. ಅವರ ಅಗಲಿಕೆಯಿಂದ ವೀರಶೈವ ಲಿಂಗಾಯತ ಸಮಾಜದ ದೊಡ್ಡ ಕೊಂಡಿ ಕಳಚಿದೆ.
-ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ

ಶಾಮನೂರು ಶಿವಶಂಕರಪ್ಪ ಅವರ ನಿಧನದ ಕೆಲವೇ ದಿನಗಳ ನಂತರ ಭೀಮಣ್ಣ ಖಂಡ್ರೆ ಅವರ ಅಗಲಿಕೆ ಲಿಂಗಾಯತ ಸಮಾಜಕ್ಕಾದ ದೊಡ್ಡ ಆಘಾತ. ಸಜ್ಜನ, ಧೀಮಂತ ರಾಜಕಾರಣಿಯಾಗಿ ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಬಹಳ ದೊಡ್ಡದು.
ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಬಡವರ ಬಗ್ಗೆ ವಿಶೇಷ ಕಾಳಜಿ, ತತ್ವನಿಷ್ಠೆ ಹೊಂದಿ ಈ ನಾಡಿಗೆ ದೊಡ್ಡ ಸೇವೆ ಸಲ್ಲಿಸಿದ್ದಾರೆ. ಶತಾಯುಷಿಗಳಾಗಿ ಆದರ್ಶ ಬದುಕು ಬದುಕಿದವರು ಭೀಮಣ್ಣ ಖಂಡ್ರೆ ಅವರು. ಶಾಸಕ, ಸಚಿವರಾಗಿ ಹಾಗೂ ಪಕ್ಷ ರಾಜಕಾರಣ, ಶಿಕ್ಷಣ, ಸಹಕಾರ ರಂಗಕ್ಕೆ ದೊಡ್ಡ ನಾಯಕತ್ಬ ಕೊಟ್ಟವರು ಭೀಮಣ್ಣ ಖಂಡ್ರೆ
-ಎಚ್.ಕೆ. ಪಾಟೀಲ್, ಸಂಸದೀಯ ಮತ್ತು ಕಾನೂನು ಸಚಿವ

ಸಮಾಜ ಸೇವೆಯ ಜೊತೆ ಅನೇಕ ಸಾಮಾಜಿಕ ಕೆಲಸ ಮಾಡಿದ್ದಾರೆ. ರಜಾಕಾರರ ವಿರುದ್ಧ ಹೋರಾಡಿದ ಅವರು ಕರ್ನಾಟಕ ಏಕೀಕರಣಕ್ಕೂ ಶ್ರಮಿಸಿದ್ದರು.
-ಶಶೀಲ್ ನಮೋಶಿ, ವಿಧಾನ ಪರಿಷತ್ ಸದಸ್ಯ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *