ಚಿಂಚೋಳಿ
12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮತ್ತು ವಿಶ್ವದ ಜಾಗತಿಕ ಶಾಂತಿ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶರಣೆ ಇಂದುಮತಿ ಚಿಟಗುಪ್ಪ ಅಕ್ಕ ಹೇಳಿದರು.
ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ಉದಯ ಕೋಚಿಂಗ್ ಸೆಂಟರ್ ಏರ್ಪಡಿಸಿದ ಮಕ್ಕಳ ಬೇಸಿಗೆ ಶಿಬಿರದಲ್ಲಿ, ಬೀದರ ನಗರದ ಬಸವ ಮಿಶನ್ ಪೂರೈಕೆಯ ಪುಸ್ತಕ ಹಂಚುವ ‘ವಚನಾಭಿಷೇಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬಸವ ಮಿಶನ್ ವಚನಾಭಿಷೇಕ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳಲ್ಲಿ ವಚನ ಸಾಹಿತ್ಯ ಹಂಚಿ, ವಚನಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ವಿಶೇಷವಾದ ಕಾರ್ಯಕ್ರಮ. ಪ್ರತಿಯೊಬ್ಬರು ಬಸವಾದಿ ಶರಣರು ವಚನಗಳಲ್ಲಿ ಹೇಳಿಕೊಟ್ಟದ್ದನ್ನು ಅರಿತುಕೊಂಡು ಶರಣರ ಮಾರ್ಗದಲ್ಲಿ ಸಾಗಬೇಕೆಂದು ಇಂದುಮತಿ ತಿಳಿಸಿದರು.

ಕೋಚಿಂಗ್ ಸೆಂಟರ್ ಸಂಸ್ಥಾಪಕರಾದ ಶರಣ ವೀರಶೆಟ್ಟಿ ಹಳ್ಳಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಜೊತೆಗೆ ಮೌಲ್ಯಯುತ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದೆ.
ಇಂದಿನ ಮಕ್ಕಳಿಗೆ ವಚನ ಸಾಹಿತ್ಯದ ಮೂಲಕ ಅಂಥ ಶಿಕ್ಷಣ ನೀಡುವದು ಅತ್ಯಂತ ಅವಶ್ಯವಾಗಿದೆ. ವಚನ ಸಾಹಿತ್ಯದಲ್ಲಿ ಜೀವನದ ಎಲ್ಲಾ ಮೌಲ್ಯಗಳು ಅಡಗಿವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಶರಣರಾದ ನಾಗಶೆಟ್ಟಿ ಕಾಳಗಿ, ಮಹಾಂತಪ್ಪ ಪಾಟೀಲ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಚನ ಪಾರಾಯಣ ಮಾಡಿಸಲಾಯಿತು. ನಂತರ ಎಲ್ಲ ಮಕ್ಕಳಿಗೆ ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಪುಸ್ತಕ ನೀಡಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕ ದಂಪತಿ ಸ್ವಪ್ನ-ವೀರಶೆಟ್ಟಿ ಅವರ 12ನೇ ವಾರ್ಷಿಕೋತ್ಸವದಂಗವಾಗಿ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ವಪ್ನ ವೀರಶೆಟ್ಟಿ ವಂದಿಸಿದರು.